ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಮೇ.12ರಂದು ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

0

ವಿವಿಧ ಸಮುದಾಯ, ಸಂಘಟನೆಗಳ ವತಿಯಿಂದ ಚಾರಿತ್ರಿಕ ಕಾರ್ಯಕ್ರಮ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ಅನ್ಯಾನ್ಯ ಸಂಘಟನೆಗಳ ಆಶ್ರಯದಲ್ಲಿ ಮೇ.12ರಂದು ಬೆಳಗ್ಗೆ 10.30ಕ್ಕೆ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಜಗದ್ಗುರು ಆದಿಶಂಕರಾಚಾರ್ಯರ ಜನ್ಮಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆಯ ವ್ಯಾಕರಣ ಶಾಸ್ತ್ರ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಭಟ್ ಶಂಕರಾಚಾರ್ಯರ ಬಗೆಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.


ಆದಿ ಶಂಕರಾಚಾರ್ಯರು ಜಗದ್ಗುರುಗಳಾಗಿ ಹಿಂದೂ ಸಮಾಜದ ವೈವಿಧ್ಯಮಯ ಜಾತಿ, ಸಮುದಾಯಗಳಿಗೆ ಹೊಸ ದಿಕ್ಕನ್ನು ತೋರಿಸಿದವರು. ಪಂಚಾಯತನ ಪೂಜೆಯ ಆಚರಣೆಯನ್ನು ಜಾರಿಗೆ ತಂದು ಹಿಂದೂ ಮನಸ್ಸುಗಳನ್ನು ಒಂದುಗೂಡಿಸಿದ ಮಹಾನ್ ಗುರುವೆನಿಸಿದವರು. ಸಾಂಸಾರಿಕ ಬಂಧನದಿಂದ ಆಧ್ಯಾತ್ಮದ ದಿಕ್ಕಿನೆಡೆಗೆ ಅಡಿಯಿಡುವ ಮಾರ್ಗವನ್ನು ಕಾಣಿಸಿದವರು. ಈ ಹಿನ್ನೆಲೆಯಲ್ಲಿ ಶ್ರೀ ಆದಿಶಂಕರಾಚಾರ್ಯರ ಬಗೆಗೆ ಮುಂದಿನ ಜನಾಂಗಕ್ಕೆ ಅರಿವು ಮೂಡಿಸುವ ಕಾರ್ಯಕ್ಕೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

ಶಂಕರಾಚಾರ್ಯರು ಸಮಾಜದ ಬಹುತೇಕ ಎಲ್ಲಾ ಪಂಗಡದವರಿಗೂ ಜಗದ್ಗುರುವಾಗಿರುವುದರಿಂದ ಎಲ್ಲರೂ ಜತೆಗೂಡಿ ಶಂಕರಾಚಾರ್ಯ ಜಯಂತಿ ಆಚರಣೆ ಆಗಬೇಕೆಂಬುದನ್ನು ನಿರ್ಣಯಿಸಲಾಗಿದೆ. ಹಾಗಾಗಿ ಇದೇ ಮೊದಲ ಬಾರಿಗೆ ಪುತ್ತೂರಿನ ಬೇರೆ ಬೇರೆ ಸಂಘಟನೆಗಳು ಶ್ರೀ ಶಂಕರಾಚಾರ್ಯ ಜನ್ಮಜಯಂತಿ ಆಚರಣೆಗಾಗಿ ಅಂಬಿಕಾ ಸಂಸ್ಥೆಗಳೊಂದಿಗೆ ಕೈಜೋಡಿಸಿವೆ. ನಾನಾ ಜಾತಿ ಸಮುದಾಯಗಳು ಒಂದಾಗಿ ಕಾರ್ಯಕ್ರಮ ಆಯೋಜನೆಗೊಂಡಿವೆ. ಆದ್ದರಿಂದ ಪುತ್ತೂರಿನ ನೆಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಮಾಜದ ನಾನಾ ಜಾತಿ ಸಮುದಾಯಗಳು ಸೇರಿಕೊಂಡು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆಯಾಗುತ್ತಿದೆ ಎಂಬುದು ಗಮನಾರ್ಹ ಮಾತ್ತು ಚಾರಿತ್ರಿಕವೂ ಹೌದು.

ಇತ್ತೀಚೆಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷದ ಸಂಭ್ರಮಾಚರಣೆ – ದಶಾಂಬಿಕೋತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಮಾಜದ ಎಲ್ಲಾ ಸಮುದಾಯಗಳೂ ಸೇರಿಕೊಂಡು ಶ್ರೀ ಗುರುವಂದನಾ ಸಮಿತಿ ಎಂಬ ತಂಡವೊಂದನ್ನು ರಚನೆ ಮಾಡಿದ್ದರು. ಸಮಿತಿಯು ಜಗದ್ಗುರುಗಳಿಗೆ ಪುತ್ತೂರಿನ ಸಮಸ್ತ ಹಿಂದೂ ನಾಗರಿಕರ ಪರವಾಗಿ ಅಭಿವಂದನಾ ಕಾರ್ಯಕ್ರಮವನ್ನೂ ಆಯೋಜಿಸಿತ್ತು. ಈಗ ಅದೇ ಶ್ರೀ ಗುರುವಂದನಾ ಸಮಿತಿ ಮಾತ್ರವಲ್ಲದೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಿತ್ರ ಸಮಾಜ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಶಂಕರ ಪ್ರತಿಷ್ಠಾನ ಹಾಗೂ ಬ್ರಹ್ಮಶ್ರೀ ಮಿತ್ತೂರುಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವೇ ಮೊದಲಾದ ಹಲವಾರು ಸಂಘಟನೆಗಳ ನೇತೃತ್ವದಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.

ಎಳೆಯ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಗಳ ಅರಿವಿನ ದರ್ಶನ ಮಾಡಿಸುವುದು ಹೆತ್ತವರ ಜವಾಬ್ದಾರಿ. ಈ ನೆಲೆಯಲ್ಲಿ ಭಾರತದ ಧರ್ಮಧ್ವಜವನ್ನು ಗಗನದೆತ್ತರಕ್ಕೆ ವಿಜೃಂಭಿಸಿದ ಆದಿ ಶಂಕರಾಚಾರ್ಯರ ಬಗೆಗೆ ಮಕ್ಕಳಿಗೆ ತಿಳಿಹೇಳುವುದಕ್ಕೆ ಈ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಲಿದೆ. ನಿತ್ಯಬದುಕಿನ ಜಂಜಾಟದಲ್ಲಿರುವವರಿಗೂ, ಸಂಸಾರಬದ್ಧ ಬದುಕಿನಲ್ಲಿ ಮಿಂದೇಳುತ್ತಿರುವವರಿಗೆ ಆತ್ಮಸಂಸ್ಕಾರದ ನೆಲೆಯಲ್ಲಿಯೂ ಈ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದ್ದು, ಕಾರ್ಯಕ್ರಮದ ತರುವಾಯ ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಆದಿ ಶಂಕರಾಚಾರ್ಯರ ಶಿಷ್ಯಗಡಣ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here