ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ನಗರ ಸಭೆಯ ಬಿಜೆಪಿ ಆಡಳಿತದ ಎಡವಟ್ಟಿನಿಂದಾಗಿ ಪುತ್ತೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ನಗರ ಸಭೆಯ ಮಾಜಿ ವಿಪಕ್ಷ ನಾಯಕ ಹೆಚ್ ಮಹಮ್ಮದ್ ಆಲಿ ಹೇಳಿದ್ದಾರೆ.
ಬಿಜೆಪಿ ಶಾಸಕರು ಮತ್ತು ಬಿಜೆಪಿ ನಗರಸಭಾ ಆಡಳಿತ ಜಲಸಿರಿ ಕುಡಿಯುವ ನೀರು ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ನಿಗಾ ವಹಿಸದೆ ನಿರ್ಲಕ್ಷ್ಯ ಮಾಡಿರುವುದು, ಸಂಬಂಧಪಟ್ಟ ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ಮಾಡಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು, 113 ಕೋಟಿ ರೂ. ವೆಚ್ಚದ ಜಲಸಿರಿ ಕುಡಿಯುವ ನೀರು ಯೋಜನೆಯನ್ನು ತರಾತುರಿಯಲ್ಲಿ ಚುನಾವಣೆಗೂ ಮುನ್ನ ಉದ್ಘಾಟನೆ ಮಾಡಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಹಸ್ತಾಂತರಿಸುವಂತೆ ಒತ್ತಡ ತಂದಿರುವುದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟ್ರಯಲ್ ನಡೆಸಲು ನೀಡಿರುವುದು ಮುಂತಾದ ಕಾರಣದಿಂದಾಗಿ ಪುತ್ತೂರು ನಗರದ ಜನತೆಗೆ ಈಗ ಕುಡಿಯುವ ನೀರಿಗೆ ತೊಂದರೆ ಬಂದೊದಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿಂದೆ ಎಡಿಬಿ ಅನುದಾನದ ಕುಡಿಯುವ ನೀರಿನ ಯೋಜನೆ ವಿಫಲಗೊಂಡಾಗ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಮುಂಜಾಗ್ರತೆ ವಹಿಸಿ ಕೊಳವೆಬಾವಿ ಕೊರೆದು ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ನಗರಸಭೆ ವತಿಯಿಂದ ಮಾಡಿದ್ದೆವು. ಜಲಸಿರಿಯವರು 174 ಬೋರ್ ವೆಲ್ ಗಳನ್ನು ನಿರ್ವಹಣೆ ಮಾಡುತ್ತಿದ್ದ 31 ಪಂಪ್ ಆಪರೇಟರ್ ಗಳನ್ನು ಕೈಬಿಟ್ಟು ಕೆಲವು ಪಂಪ್ ಆಪರೇಟರ್ ಮೂಲಕ ಕೊಳವೆಬಾವಿಯನ್ನು ನಿರ್ವಹಣೆ ಮಾಡುತ್ತಿರುವುದರಿಂದ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಇತ್ತ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ ಎಂದು ಅವರು ದೂರಿದ್ದು ದಿನಕ್ಕೆ ಒಂದು ಗಂಟೆಯಾದರೂ ನೀರು ಕೊಡಿ ಎಂದು ಜನರು ಅವಲತ್ತುಕೊಳ್ಳುವಂತಾಗಿದೆ ಎಂದರು.
ಜಲಸಿರಿ ಯೋಜನೆ ಪೂರ್ಣಗೊಂಡಿದ್ದು ಏ.30ರ ಒಳಗೆ 24*7 ನೀರು ಸರಬರಾಜು ಮಾಡುತ್ತೇವೆ ಎಂದು ಪೌರಾಯುಕ್ತರು ಹೇಳಿದ್ದರೆ, ಇನ್ನೊಂದೆಡೆ ಜಲಸಿರಿ ಅಧಿಕಾರಿಗಳು ನೀರು ಸರಬರಾಜು ಮಾಡಲು ಇನ್ನೂ 43ಕಿ.ಮೀ ಉದ್ದಕ್ಕೆ ಪೈಪ್ ಲೈನ್ ಅಳವಡಿಸಬೇಕಾಗಿದೆ, ಮನೆ ಸಂಪರ್ಕ ಕಲ್ಪಿಸಲು ಅನುದಾನ ಮಂಜೂರು ಮಾಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿರುತ್ತಾರೆ. ಈ ಹಿಂದೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್ ನಲ್ಲಿ ನೀರು ವಿತರಣೆ ಮಾಡುತ್ತಿದ್ದೆವು. ಟ್ಯಾಂಕರ್ ವ್ಯವಸ್ಥೆ ಇದ್ದರೂ ಈಗ ಬೇಕಾದೆಡೆಗೆ ನೀರು ವಿತರಣೆ ಆಗುತ್ತಿಲ್ಲ. ನಗರಸಭೆಯಲ್ಲಿ ಕೇಳಿದರೆ ಜಲಸಿರಿ ಕಡೆ ಬೆರಳು ಮಾಡುತ್ತಾರೆ. ಜಲಸಿರಿಯವರನ್ನು ಕೇಳಿದರೆ ನಗರ ಸಭೆ ಕಡೆ ಬೆರಳು ಮಾಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ ಎಂದ ಮಹಮ್ಮದ್ ಆಲಿ ಪುತ್ತೂರಿಗೆ ಯೋಜನೆಗಳನ್ನು ಕಾಂಗ್ರೆಸ್ ತರುತ್ತಿದ್ದರೆ ಬಿಜೆಪಿ ಹಾಳು ಮಾಡುತ್ತಿದೆ ಅನ್ನುವಂತಾಗಿದೆ. 133 ಕೋಟಿ ರೂಪಾಯಿಯ ಈ ಯೋಜನೆ ವಿಫಲಗೊಂಡರೆ ಅದರ ಸಂಪೂರ್ಣ ಹೊಣೆ ಬಿಜೆಪಿಯದ್ದಾಗಿರುತ್ತದೆ ಎಂದ ಅವರು ಜಲಸಿರಿ ಯೋಜನೆ ಪೂರ್ಣಗೊಳ್ಳುವವರೆಗೆ ಈ ಹಿಂದಿನಂತೆ ಪಂಪ್ ಆಪರೇಟರ್ ಗಳನ್ನು ಪುನರ್ ನೇಮಿಸಿ ಕೊಳವೆಬಾವಿ ಮೂಲಕ ನಗರದ ಜನರಿಗೆ ನೀರು ಸರಬರಾಜು ಮಾಡಬೇಕು. ನೀರು ಕಡಿಮೆ ಇರುವಲ್ಲಿ ಹೊಸದಾಗಿ ಕೊಳವೆಬಾವಿ ಕೊರೆದು, ಆ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶಾಸಕ ಅಶೋಕ್ ಕುಮಾರ್ ರೈ ಕೋರಿಕೆಯಂತೆ ಮುಖ್ಯಮಂತ್ರಿಗಳು ಒಂದೂವರೆ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ತುರ್ತಾಗಿ ಈ ಅನುದಾನ ಬಳಸಿ ಟ್ಯಾಂಕರ್ ಗಳ ಮೂಲಕ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ನಗರಸಭೆ ಮತ್ತು ಜಲಸಿರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ. ನೀರಿನ ಸಮಸ್ಯೆ ಶಾಸಕರ ಗಮನಕ್ಕೂ ಬಂದಿದ್ದು, ಪರಿಹಾರಕ್ಕಾಗಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಮಹಮ್ಮದ್ ಆಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾೖಸ್ ಉಪಸ್ಥಿತರಿದ್ದರು.