ಉಪ್ಪಿನಂಗಡಿ: ಕೇನ್ಯ ರಘುನಾಥ ರೈ ಮತ್ತು ಶ್ರೀಮತಿ ಹರಿಣಾಕ್ಷಿ ಆರ್. ರೈ ಆರುವಾರ ಅವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಮೇ 12ರಂದು ಸಂಜೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆಯಿತು.
ಕೇನ್ಯ ರಘುನಾಥ ರೈಯವರ ಭಾವ ಸುರೇಶ್ ಕುಮಾರ್ ಶೆಟ್ಟಿಯವರು ದಂಪತಿಗಳ ಬಗ್ಗೆ ಶುಭಾಶಂಸನಾ ನುಡಿಗಳನ್ನಾಡಿ, ಓರ್ವ ಶಿಕ್ಷಕನಾಗಿ ಅದೆಷ್ಟೋ ಶಿಷ್ಯಂದಿರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿಸಿ ನನ್ನ ಭಾವನವರು ಈ ಸಮಾಜಕ್ಕೆ ನೀಡಿದ್ದಾರೆ. ಇವರದ್ದು ಸದಾ ಚಟುವಟಿಕೆಯಿಂದ ಕೂಡಿದ ಕ್ರಿಯಾಶೀಲ ಬದುಕಾಗಿದ್ದು, ಇಂದು ಕೂಡಾ ಪ್ರತಿಯೊಂದು ಕೆಲಸವನ್ನು ಆಸಕ್ತಿಯಿಂದ ಮಾಡುತ್ತಾರೆ. ಉತ್ತಮ ಕ್ರೀಡಾಪಟುವಾಗಿರುವ ಇವರು ರಾಷ್ಟ್ರ ಮಟ್ಟದಲ್ಲೂ ಪದಕಗಳನ್ನು ಗೆದ್ದವರು. ಶಿಕ್ಷಕನಿಗೆ ಇರಬೇಕಾದ ಮುತ್ತಿನಂತಹ ಕೈಬರಹವನ್ನು ಮೈಗೂಡಿಸಿಕೊಂಡವರು. ಯಕ್ಷಗಾನದಲ್ಲೂ ಕಲಾವಿದನಾಗಿ ಇವರು ಮಿಂಚಿದ್ದು, ನನ್ನಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿದ್ದಲ್ಲದೆ, ನನ್ನಲ್ಲಿದ್ದ ಸಭಾ ಕಂಪನವನ್ನು ದೂರ ಮಾಡಿದವರು. ನನ್ನ ಸಹೋದರಿಯಾದ ಹರಿಣಾಕ್ಷಿ ರೈಯವರು ಕೂಡಾ ಇವರ ಎಲ್ಲಾ ಕೆಲಸ- ಕಾರ್ಯಗಳಲ್ಲಿ ಯಶಸ್ವಿನ ಶಕ್ತಿಯಾಗಿ ಇವರ ಬೆನ್ನ ಹಿಂದೆ ನಿಂತವರು. ಇವರಿಗೆ ಆ ಭಗವಂತ ಸದಾ ಆಯುರಾರೋಗ್ಯ ಭಾಗ್ಯ, ನೆಮ್ಮದಿ ಕರುಣಿಸಲಿ ಎಂದರು.
ನಿವೃತ್ತ ಪ್ರಾಂಶುಪಾಲರಾದ ಎ. ಕೃಷ್ಣಪ್ಪ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಕಲಿತು ವಿದೇಶದಲ್ಲಿದ್ದರೆ, ಹಿರಿಯ ತಂದೆ- ತಾಯಿಗಳು ವೃದ್ದಾಶ್ರಮದಲ್ಲಿರುವುದೇ ಹೆಚ್ಚು. ಆದರೆ ಇಲ್ಲಿ ಮಕ್ಕಳು ಮುಂದೆ ನಿಂತು ಇಂದು ತಮ್ಮ ತಂದೆ- ತಾಯಿಯ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಆಚರಿಸುತ್ತಿದ್ದಾರೆಂದರೆ ಇದಕ್ಕಿಂತ ತಂದೆ- ತಾಯಿಗಳಿಗೆ ದೊಡ್ಡ ಭಾಗ್ಯ ಬೇಕಿಲ್ಲ. ಆ ಭಾಗ್ಯ ಇಂದು ಕೇನ್ಯ ರಘುನಾಥ ರೈ ದಂಪತಿಗೆ ಸಿಕ್ಕಿದ್ದು, ಅವರ ಮಕ್ಕಳಿಗೆ ಅವರು ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ ಅನ್ನುವುದಕ್ಕೆ ಇದು ಉದಾಹರಣೆಯಾಗಿದೆ. ನಾನು ಮತ್ತು ಕೇನ್ಯ ರಘುನಾಥ ರೈಯವರು ಒಟ್ಟಾಗಿ ಕೆಲಸ ಮಾಡಿದ್ದು, ಇವರು ಓರ್ವ ಅಧ್ಯಾಪಕನಾಗಿ ವೃತ್ತಿ ಧರ್ಮ ಪಾಲಿಸಿದ್ದರೆ ಹೊರತು ಸಂಬಳದ ಆಸೆಗಾಗಿ ಕೆಲಸ ಮಾಡಿದವರಲ್ಲ. ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ಸ್ವಾರ್ಥ ರಹಿತವಾಗಿ ಕೆಲಸ ಮಾಡಿದವರು. ಉತ್ತಮ ಕೃಷಿಕನಾಗಿ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆದವರು. ನನ್ನನ್ನು ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಸಿದವರು. ಸಾಮರಸ್ಯದ ಬದುಕು. ಬತ್ತದ ಜೀವನೋತ್ಸವ ಈ ದಂಪತಿಗಳದ್ದಾಗಿದ್ದು, ಇವರು ಶತಾಯುಷಿಗಳಾಗಿ ಬಾಳಿ ಬದುಕಬೇಕು. ಇವರಿಗೆ ಉತ್ತಮ ಆರೋಗ್ಯ- ನೆಮ್ಮದಿ ಆ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಜೆಕಾರು ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ ಕಾರ್ಕಳ ಇದರ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು, ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೇನ್ಯ ರಘುನಾಥ ರೈ ಯವರು ಓರ್ವ ಸವ್ಯಸಾಚಿ. ಇವರ ಯಶಸ್ವಿನ ಹಿಂದೆ ಇವರ ಪತ್ನಿಯ ಕೊಡುಗೆಯೂ ಇದೆ. ಈ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿದ್ದು, ಹಿರಿಯರನ್ನು ವೃದ್ಧಾಶ್ರಮಕ್ಕೆ ಅಟ್ಟುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಬಹಳ ದೊಡ್ಡ ಸಂದೇಶಗಳನ್ನು ನೀಡುತ್ತದೆ. ಕೇನ್ಯ ರಘುನಾಥ ರೈ ದಂಪತಿ ತಮ್ಮ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಬೆಳೆಸಿದ್ದು, ಸಮಾಜದ ಅಸ್ತಿಗಳನ್ನಾಗಿ ಮಾಡಿದ್ದಾರೆ. ಈ ದಂಪತಿಗಳಿಗೆ ಇನ್ನಷ್ಟು ಸುಖ- ನೆಮ್ಮದಿ, ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.
ಮೊಮ್ಮಗಳಾದ ರಿಷಾ ಡಿ. ರೈ ತನ್ನೊಂದಿಗಿನ ಅಜ್ಜ- ಅಜ್ಜಿಯ ಒಡನಾಟವನ್ನು ನೆನಪಿಸಿಕೊಂಡರು.
ವೇದಿಕೆಯಲ್ಲಿ ಕೇನ್ಯ ರಘುನಾಥ ರೈಯವರ ಸಹೋದರ ಸೀತಾರಾಮ ರೈ, ಕೇನ್ಯ ರಘುನಾಥ ರೈ ಮತ್ತು ಹರಿಣಾಕ್ಷಿ ಆರ್. ರೈ ಆರುವಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ,ಮಾಜಿ ಶಾಸಕ ಸಂಜೀವ ಮಠಂದೂರು, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು, ಜೇಸಿಐನ ಪ್ರಶಾಂತ್ ಕುಮಾರ್ ರೈ, ಡಾ. ರಘು ಬೆಳ್ಳಿಪ್ಪಾಡಿ,ಶ್ರೀ ರಾಮಕುಂಜೇಶ್ವರ ಆ.ಮಾ ಶಾಲಾ ಕಾರ್ಯದರ್ಶಿ ಕೆ ಸೇಸಪ್ಪ, ಶ್ರೀ ರಾಮಕುಂಜೇಶ್ವರ ವಿಧ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ರೋಟರಿ ಜಿಲ್ಲೆ 3181ರ ಪೂರ್ವ ರಾಜ್ಯಪಾಲ ಪ್ರಕಾಶ್ ಕಾರಂತ್, ದಯಾನಂದ ರೈ ಮನವಳಿಕೆಗುತ್ತು, ಜಯರಾಮ ಸುವರ್ಣ ಉಡುಪಿ, ಶ್ರೀಕಾಂತ್ ಭಟ್ ನಂದಳಿಕೆ,ಪಿ.ಡಿ ಪೂಜಾರಿ ಮಣಿಪಾಲ, ಡಾ ರಾಜಾರಾಮ್ ಕೆ.ಬಿ, ಚಂದಪ್ಪ ಮೂಲ್ಯ,ಸಚಿನ್ ಸುಂದರ ಗೌಡ, ಯು.ಜಿ ರಾಧಾ, ಕರುಣಾಕರ ಸುವರ್ಣ, ಡಾ ಧರ್ಮಪಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೇನ್ಯ ರಘುನಾಥ ರೈ ಹಾಗೂ ಹರಿಣಾಕ್ಷಿ ಆರ್ ರೈ ಅವರ ಹಿರಿಯ ಪುತ್ರ ಎ .ದಿನೇಶ್ ಕುಮಾರ್ ರೈ ಸ್ವಾಗತಿಸಿ, ಕಿರಿಯ ಪುತ್ರ ನೀರಜ್ ಕುಮಾರ್ ರೈ ವಂದಿಸಿ, ಸೊಸೆಯಂದಿರಾದ ಸಾರಿಕ ಡಿ. ರೈ, ರಂಜಿತಾ ಎನ್ ರೈ, ಮೊಮ್ಮಕ್ಕಳಾದ ಹೃಷಿಕಾ ಡಿ.ರೈ, ರಿಷಾ ಡಿ ರೈ, ಮೇಧ ಎಲ್ ರೈ, ನೀರ್ವಿ ಎನ್ ರೈ, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಪುಷ್ಪಾ ತಿಲಕ್ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ರಸಮಂಜರಿ
ಕಾರ್ಯಕ್ರಮದಲ್ಲಿ ಜಗದೀಶ್ ಆಚಾರ್ಯ ಪುತ್ತೂರು ಇವರ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.