‘ನಾವು ಗುಲಾಮರಲ್ಲ ರಾಜರು, ನಮ್ಮಿಂದ ಆರಿಸಿ ಹೋದವರು ನಮ್ಮ ಸೇವಕರು’-ಸುದ್ದಿ ಜನಾಂದೋಲನದ ವತಿಯಿಂದ ಮತದಾರರ ಜಾಗೃತಿಗೆ ಡಾ.ಯು.ಪಿ.ಶಿವಾನಂದ ಕರೆ

0

ಪುತ್ತೂರು: ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮತದಾರರ ಜಾಗೃತಿ ಕಾರ್ಯಕ್ರಮದ ಕುರಿತ ವಿವರವನ್ನು ನೀಡುವುದಕ್ಕಾಗಿ ಸುದ್ದಿ ಜನಾಂದೋಲನ ವೇದಿಕೆಯ ಮುಖ್ಯಸ್ಥರಾದ ಡಾ.ಯು.ಪಿ ಶಿವಾನಂದ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ಸುದ್ದಿಗೋಷ್ಠಿಯಲ್ಲಿ ಡಾ.ಯು ಪಿ ಶಿವಾನಂದ ಅವರು ಮತದಾರರ ಜಾಗೃತಿ ಆಂದೋಲನದ ಕುರಿತು ವಿವರವಾಗಿ ಮಾತನಾಡಿದರು.

ಐದು ವರ್ಷಗಳ ಹಿಂದೆ ಪ್ರಾರಂಭಗೊಂಡ ಮತದಾರರ ಜಾಗೃತಿ ಆಂದೋಲನ ಹಿಂದಿನ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಉತ್ತರಪ್ರದೇಶದ ಅಮೇಥಿ ಮತ್ತು ವಾರಣಾಶಿ ಲೋಕಸಭಾ ಕ್ಷೇತ್ರಗಳಲ್ಲೂ ನಡೆದಿತ್ತು. ಅಮೇಥಿಯಲ್ಲಿ ತಾನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪಕ್ಷೇತರನಾಗಿ ಸ್ಪರ್ದಿಸಿದ್ದೆ. ಆದರೆ ವಾರಣಾಶಿಯಲ್ಲಿ ನನ್ನ ನಾಮಪತ್ರ ತಿರಸ್ಕೃತಗೊಂಡರೂ ನಮ್ಮ ವೇದಿಕೆಯ ಉದ್ದೇಶಗಳನ್ನು ಪತ್ರಕರ್ತರಿಗೆ ಮತ್ತು ಮತದಾರರಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡಲಾಗಿತ್ತು ಎಂಬ ವಿಚಾರವನ್ನು ಡಾ. ಶಿವಾನಂದ ಅವರು ನೆನಪಿಸಿಕೊಂಡರು. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದಲ್ಲಿ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರದಲ್ಲಿ ಜನಾಂದೋಲನ ವೇದಿಕೆ ವತಿಯಿಂದ ‘ನಾವೇ ರಾಜರು-ಜನಪ್ರತಿನಿಧಿಗಳು ಸೇವಕರು’ ಎಂಬ ಜಾಗೃತಿ -ಲಕದ ಮೂಲಕ ಆ ಭಾಗದ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ ಎಂದರು.

ನಮ್ಮ ಆಂದೋಲನಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ:
ಈ ರೀತಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಮತ್ತು ಶಿಗ್ಗಾಂವಿ ಮತಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಸಿದಾಗ, ಮೇಲೆ ಹೇಳಿದ ವಿಚಾರವನ್ನು ಅಲ್ಲಿನ ಜನರ ಬಳಿ ನಾವು ಹೇಳಿಕೊಂಡಾಗ ಜನ ಪಕ್ಷಾತೀತವಾಗಿ ನಮ್ಮನ್ನು ಬೆಂಬಲಿಸಿ ಈ ಜಾಗೃತಿ ಫಲಕವನ್ನು ಅಂಟಿಸುವ ಕಾರ್ಯವನ್ನು ಮಾಡಿದ್ದಾರೆ. ಭಾಷಾ ಸಮಸ್ಯೆಯಿಂದಾಗಿ ನಮ್ಮ ಅಭಿಯಾನವನ್ನು ರಾಷ್ಟ್ರಮಟ್ಟದಲ್ಲಿ ನಡೆಸುವ ನಮ್ಮ ಕಾರ್ಯಕ್ಕೆ ಕಳೆದ ಬಾರಿ ಸ್ವಲ್ಪ ಹಿನ್ನಡೆಯಾದರೂ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪ್ರಯತ್ನಕ್ಕೆ ಉತ್ತಮ ಜನ ಬೆಂಬಲ ವ್ಯಕ್ತವಾಯಿತು ಎಂದು ಡಾ. ಶಿವಾನಂದ ಅವರು ಹೇಳಿದರು.

ನಿಮ್ಮ ಓಟು ಮೋದಿಗಾಗಿ, ರಾಹುಲ್ ಗಾಂಧಿಗಾಗಿ ಅಲ್ಲ..:
ನಮ್ಮ ಈ ಅಭಿಯಾನಕ್ಕೆ ಮತದಾರರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ನಾವು ಹಂಚುತ್ತಿರುವ ಫಲಕ ಮತ್ತು ಕರಪತ್ರಗಳಲ್ಲಿ ಎಲ್ಲೂ ಯಾವುದೇ ಪಕ್ಷದ ಬಗ್ಗೆಯಾಗಲಿ ಅಥವಾ ಯಾವುದೇ ರಾಜಕೀಯ ನಾಯಕರ ಬಗ್ಗೆಯಾಗಲಿ ಉಲ್ಲೇಖವಿಲ್ಲ. ಇಲ್ಲಿ ಕೇವಲ ಮತದಾರರನ್ನು ಜಾಗೃತಿಗೊಳಿಸುವ ಉದ್ದೇಶವಿದೆ. ‘ನಿಮ್ಮ ಊರು, ನಿಮ್ಮ ಆಡಳಿತ ನಿಮ್ಮ ಸ್ವಾತಂತ್ರ್ಯ. ಈ ಊರು, ಇಲ್ಲಿರುವ ಇಲಾಖೆಗಳು ಎಲ್ಲವೂ ನಿಮ್ಮದೇ, ಬಿಜೆಪಿಯದ್ದು, ಕಾಂಗ್ರೆಸ್ಸಿನದ್ದೂ ಅಲ್ಲ, ರಾಜ್ಯ ಸರಕಾರ, ಕೇಂದ್ರ ಸರಕಾರದ್ದೂ ಅಲ್ಲ, ಬದಲಾಗಿ ಇದು ನಿಮ್ಮ ಸ್ವತ್ತು. ನೀವು ಯಾರಿಗೆ ಓಟು ಕೊಡ್ತೀರೋ ಅವರು ನಿಮ್ಮ ಜನಪ್ರತಿನಿಧಿಗಳಾಗಿ ಕೆಲಸ ಮಾಡ್ತಾರೆ, ಮೋದಿಗಾಗಲಿ ಅಥವಾ ರಾಹುಲ್ ಗಾಂಧಿಗಾಗಲಿ ಓಟು ಕೊಡುವುದಲ್ಲ, ಬದಲಾಗಿ ನಿಮ್ಮ ಜನಪ್ರತಿನಿಽಗಾಗಿ ಓಟು ಕೊಡುವುದು, ಇದು ಮಹಾತ್ಮ ಗಾಂಽಜಿಯವರ ಗ್ರಾಮ ಸ್ವರಾಜ್ಯದ ಆಡಳಿತವಾಗಬೇಕು..’ ಎಂಬ ವಿಚಾರವನ್ನು ಇಟ್ಟುಕೊಂಡು ನಮ್ಮ ಆಂದೋಲನವನ್ನು ಪ್ರಾರಂಭ ಮಾಡಿದೆವು ಎಂದು ಅವರು ಮಾಹಿತಿ ನೀಡಿದರು.

ವಾರಣಾಶಿಯಲ್ಲಿ ಜನರ ಮನ್ ಕಿ ಬಾತ್‌ಗೆ ಕಿವಿಯಾಗಿದ್ದೇವೆ:
ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಪ್ರದೇಶದ ವಾರಣಾಶಿ ಕ್ಷೇತ್ರದಲ್ಲಿ ಒಂದು ವಾರಗಳ ಕಾಲ ತಿರುಗಾಡಿ ಅಲ್ಲಿನ ಜನರ ಮನ್ ಕಿ ಬಾತ್ (ಮನಸ್ಸಿನ ಮಾತು) ಆಲಿಸುವ ಕೆಲಸವನ್ನು ಈ ಜನಾಂದೋಲನದ ಭಾಗವಾಗಿ ಮಾಡಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಅಲ್ಲಿನ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ವ್ಯಕ್ತಿಯ ಮುಖ ನೋಡಿ ಅಲ್ಲ, ಬದಲಿಗೆ ನಮ್ಮ ಕ್ಷೇತ್ರದಲ್ಲಿ ನಮ್ಮ ಸಂಸದರು ಮಾಡಿರುವ ಉತ್ತಮ ಕೆಲಸಗಳಿಗಾಗಿ ನಾವು ಮತ ಚಲಾಯಿಸುತ್ತೇವೆ ಎಂಬ ಅಭಿಪ್ರಾಯ ವಾರಣಾಶಿ ಕ್ಷೇತ್ರದ ಮತದಾರರಲ್ಲಿ ವ್ಯಕ್ತವಾಯಿತು. ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳಿಗಾಗಿ ನರೇಂದ್ರ ಮೋದಿಯವರಿಗೆ ನಮ್ಮ ಮತ ಎಂಬ ಮಾತು ಅಲ್ಲಿನ ಮತದಾರರಿಂದ ವ್ಯಕ್ತವಾಯಿತು. ಇದು ನಾವು ಸಾಮಾನ್ಯವಾಗಿ ನೋಡುವಂತೆ ಒಬ್ಬ ವ್ಯಕ್ತಿಯ ಹೆಸರಲ್ಲಿ ಓಟು ಕೇಳುವುದಕ್ಕಿಂತ ಭಿನ್ನವಾಗಿರುವುದು ಗಮನಿಸಬೇಕಾದ ವಿಚಾರ ಎಂದು ಡಾ. ಶಿವಾನಂದ ಅವರು ಹೇಳಿದರು.

ಊರು ಅಂದ್ರೆ ದೇಶ ಎಂದು ಲೆಕ್ಕ ? ಊರು ಉದ್ದಾರವಾದ್ರೆ ದೇಶ ಉದ್ದಾರವಾಗ್ತದೆ:
ವಾರಣಾಶಿಯ ಮತದಾರರು ಹೇಳಿದಂತೆ, ‘ನಮ್ಮೂರಿನ ಅಭಿವೃದ್ಧಿ ಮಾಡಿದವರಿಗೆ ನಮ್ಮ ಮತ’ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಊರು ಅಂದ್ರೆ ದೇಶ ಎಂದುಕೊಂಡಾಗ, ಊರುಗಳ ಉದ್ದಾರದಲ್ಲಿ ದೇಶದ ಉದ್ಧಾರವಿದೆ ಎನ್ನುವುದು ಕೂಡ ಅಷ್ಟೇ ಸತ್ಯ. ಇದನ್ನೇ ತನ್ನ ಗ್ರಾಮ ಸ್ವರಾಜ್ಯ ಕಲ್ಪನೆಯಲ್ಲಿ ಮಹಾತ್ಮ ಗಾಂಽಜಿಯವರು ಹೇಳಿದ್ದು. ಹಾಗಾಗಿ ನಾವಿಲ್ಲಿ ಕೂತು ನಮ್ಮ ಊರು-ಹಳ್ಳಿಗಳ ಬಗ್ಗೆ ಚಿಂತನೆ ಮಾಡದೆ ದೇಶದ ಬಗ್ಗೆ ಚಿಂತನೆ ಮಾಡುವುದು ಏನೂ ಇರುವುದಿಲ್ಲ ಎಂದು ಅವರು ಹೇಳಿದರು. ಹಾಗಾಗಿ ನಮ್ಮ ಯೋಚನೆಗಳು ನಮ್ಮ ಹಳ್ಳಿ, ಊರು, ಗ್ರಾಮಗಳ ಕಡೆ ಕೇಂದ್ರೀಕೃತವಾಗ್ಬೇಕು, ಇದನ್ನು ಉದ್ಧಾರ ಮಾಡ್ತಾ ಹೋದ ಹಾಗೆ ದೇಶ ಉದ್ದಾರವಾಗ್ತದೆ ಎನ್ನುವ ಯೋಚನೆಯಲ್ಲಿ ನಾವು ಅಲ್ಲಿ ಮಾತನಾಡಿದ್ದೇವೆ. ಇದಕ್ಕೆ ವಾರಣಾಶಿಯಲ್ಲಿ ಉತ್ತಮ ಪ್ರತಿಕ್ರಿಯೆ ನಮಗೆ ಸಿಕ್ಕಿದೆ. ಮುಂದೆ ನಮ್ಮ ಈ ಆಂದೋಲನವನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ವಿಸ್ತರಿಸಿದೆವು. ಅಲ್ಲಿ ಒಂದು ವಾರ ಇದ್ದು ಅಲ್ಲಿ ಜನರ ಬಳಿ ನಮ್ಮ ವಿಚಾರವನ್ನು ಹಂಚಿಕೊಂಡೆವು. ಅಲ್ಲಿ ನಮಗೆ ಎಲ್ಲಾ ರಾಜ್ಯಗಳ ಜನರೂ ಸಿಕ್ಕಿದ್ರು. ಅಲ್ಲೂ ನಾವು ನಡೆಸಿದ ಜನರ ಮನ್ ಕಿ ಬಾತ್ ತುಂಬಾ ಯಶಸ್ವಿಯಾಯ್ತು.

ನೀವು ರಾಜರಂತೆ ಯೋಚಿಸಿ ಮತ ಚಲಾಯಿಸಿ..:
ನಮ್ಮ ಜನಾಂದೋಲನದಡಿಯಲ್ಲಿ ನಾವು ಈ ಬಾರಿ ನಡೆಸಿದ ಜನರ ಮನ್ ಕಿ ಬಾತ್ ಗೂ ಮುಂಚೆ ನಾವು ಅವರಿಗೆ ತಿಳಿಸುತ್ತಿದ್ದ ವಿಚಾರವೇನಂದ್ರೆ, ‘ನಿಮ್ಮ ಒಂದು ಓಟು ಅಭ್ಯರ್ಥಿಯ ಸೋಲು ಗೆಲುವನ್ನು ನಿರ್ಧರಿಸುತ್ತದೆ, ಹಾಗಾಗಿ ನೀವು ಮತ ಚಲಾಯಿಸುವ ಮೊದಲು ನಿಮ್ಮ ಯೋಚನೆ ರಾಜರಂತೆ ಇರಬೇಕೋ ಅಥವಾ ಗುಲಾಮರಂತೆ ಇರಬೇಕೋ ಎಂಬುದನ್ನು ನೀವೇ ನಿರ್ಧರಿಸಿಕೊಂಡು ಮತ ಚಲಾಯಿಸಿ..’ ಎಂದು ಹೇಳಿತ್ತಿದ್ದೆವು. ಈ ವಿಚಾರ ಅವರಿಗೆ ಮನದಟ್ಟಾದ ಮೇಲೆ ಅವರ ಮನ್ ಕಿ ಬಾತ್ ಅನ್ನು ನಾವು ಕೇಳಿ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.

ನಮ್ಮ ಮಾತು ಯಾರು ಕೇಳ್ತಾರೆ ಅಂದವರು ‘ನಮ್ಮದು ದಿಲ್ ಕಿ ಬಾತ್’ ಅಂದರು! :
ದೆಹಲಿಯಲ್ಲಿ ನಾವು ರಸ್ತೆ ಬದಿಗಳಲ್ಲಿ ಎಲ್ಲಾ ವರ್ಗದ ಜನರನ್ನೂ ಮಾತನಾಡಿಸುತ್ತಿದ್ದೆವು. ಆದರೆ ಮೊದಲಿಗೆ ಎಲ್ಲರೂ ಹೇಳ್ತಿದ್ದ ಮಾತಂದ್ರೆ, ‘ನಮ್ಮ ಮಾತು ಯಾರು ಕೇಳ್ತಾರೆ..’ ಎಂದು. ಆದರೆ ನಾವು ಅವರಿಗೆ ‘ನೀವು ರಾಜರು, ನಿಮ್ಮಿಂದ ಆರಿಸಿ ಬರುವವರು ನಿಮ್ಮ ಸೇವಕರು’ ಎಂದು ಹೇಳಿ ಅವರ ಒಂದು ಮತಕ್ಕೆ ಎಷ್ಟು ಶಕ್ತಿಯಿದೆ ಎಂಬ ವಿಚಾರವನ್ನು ಅವರಿಗೆ ಮನದಟ್ಟು ಮಾಡಿದ ಮೇಲೆ, ಈಗ ನಿಮ್ಮ ಮನ್ ಕಿ ಬಾತ್ ಹೇಳಿ ಎಂದಾಗ, ಒಬ್ಬಾಕೆ ಹೇಳಿದ್ದು ‘ಇದು ಮನ್ ಕಿ ಬಾತ್ ಅಲ್ಲ ನನ್ನ ದಿಲ್ ಕಿ ಬಾತ್..’ ಎಂದು. ಅಷ್ಟರಮಟ್ಟಿಗೆ ನಮ್ಮ ಈ ಜನಾಂದೋಲನದ ಉದ್ದೇಶ ಸಾರ್ಥಕವಾಯಿತು ಎಂಬ ಭಾವನೆ ನಮ್ಮಲ್ಲಿ ಮೂಡಿದೆ ಎಂದರು.

ರಾಜರಿಗಾಗಿ ಓಟು ಮಾಡುವುದು ಬ್ರಿಟಿಷರ ಗುಲಾಮಗಿರಿ ಸಂಸ್ಕೃತಿ..:
ನಮ್ಮಲ್ಲಿ ಬಹಳಷ್ಟು ಜನರು ತಮ್ಮನ್ನು ಒಂದು ಪಕ್ಷದ ಪರವಾಗಿ ಗುರುತಿಸಿಕೊಂಡಿರ್ತಾರೆ ಮಾತ್ರವಲ್ಲದೇ ‘ನನ್ನ ಮತ ಎಂದೆಂದೂ ಈ ಪಕ್ಷಕ್ಕೇ..’ ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ನಾವು ಒಂದು ಕಡೆ ಸೇರಿ ಗುಂಪಿನಲ್ಲಿ ಮಾತನಾಡುವ ಸಂದರ್ಭದಲ್ಲೂ ಮೇಲಿರುವ ರಾಜಕೀಯ ನಾಯಕರ ಬಗ್ಗೆ ಟೀಕೆ-ಟಿಪ್ಪಣಿ ಮಾಡಿಕೊಂಡು ಮಾತನಾಡುತ್ತೇವೆಯೇ ಹೊರತು ನಮ್ಮನ್ನು ಪ್ರತಿನಿಽಸುವ ಜನಪ್ರತಿನಿಽಯ ಬಗ್ಗೆ ಮಾತನಾಡುವುದಿಲ್ಲ. ಮತ್ತು ಪ್ರತೀ ಬಾರಿಯೂ ನನ್ನ ಓಟು ಇದೇ ಪಕ್ಷಕ್ಕೆ ಎಂದು ಮೊದಲೇ ನಿರ್ಧರಿಸುವುದೂ ಸಹ ಬ್ರಿಟಿಷರ ಗುಲಾಮಿ ಸಂಸ್ಕೃತಿಯ ಮನಃಸ್ಥಿತಿಯಾಗಿದೆ. ಈ ಮನಸ್ಥಿತಿ ನಮ್ಮಿಂದ ದೂರವಾದಾಗ ಮಾತ್ರ, ‘ನಾವು ರಾಜರು ಅವರು ನಮ್ಮ ಸೇವಕರು..’ ಎಂಬ ಭಾವನೆ ಮತದಾರರಲ್ಲಿ ಮೂಡಲು ಸಾಧ್ಯ ಎನ್ನುವುದು ಡಾ. ಶಿವಾನಂದ ಅವರ ಸ್ಪಷ್ಟ ಅಭಿಪ್ರಾಯ.

ನಾವು ಗುಲಾಮರಾಗಿ ಅವರು ರಾಜರಾದಾಗ:
ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ.‘ಜನಪ್ರತಿನಿಽಗಳು ಮತ್ತು ಅಽಕಾರಿಗಳು ನಮ್ಮ ಕೆಲಸಗಳನ್ನು ಕಾನೂನುಬದ್ಧವಾಗಿ ಮಾಡಿಕೊಡಲು ಇರುವವರು ಎಂಬ ಭಾವನೆ ನಮ್ಮಲ್ಲಿ ಬಂದೇ ಇಲ್ಲ. ಎಷ್ಟೇ ವಿದ್ಯಾವಂತರಾಗಿದ್ದರೂ ಈ ವಿಚಾರದಲ್ಲಿ ನಮ್ಮ ಮನಃಸ್ಥಿತಿ ಬದಲಾಗದಿರುವುದು ಖೇದಕರ. ಕಳೆದ 40 ವರ್ಷಗಳಲ್ಲಿ ನನ್ನ ಪತ್ರಿಕೆಯ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಅದರಲ್ಲಿ ಸಂಪೂರ್ಣ ಯಶಸ್ಸು ಸಿಗದೇ ಇರುವ ಕಾರಣ ಇದೀಗ ಪೂರ್ಣಾವಧಿಗೆ ಈ ಆಂದೋಲನದಲ್ಲೇ ನನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಡಾ ಶಿವಾನಂದ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಬಲತ್ಕಾರದ ಬಂದ್‌ಗೆ ವಿರೋಧ:
ನಾವು ಜನಾಂದೋಲನದ ಜೊತೆಗೆ ಬಲತ್ಕಾರದ ಬಂದ್ ವಿರುದ್ಧವೂ ಹೋರಾಟ ಮಾಡಿದ್ದೇವೆ. ಅದರಿಂದ ಪುತ್ತೂರು ಸುಳ್ಯದಲ್ಲಿ ಈ ಬಲಾತ್ಕಾರದ ಬಂದ್ ನಿಂತಿದೆ. ಈಗ ಪುನಃ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿಷಯದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಬಂದ್ ಎಂದು ಕರೆ ಕೊಟ್ಟಿದ್ದರು. ನಾವು ಅದಕ್ಕೆ ವಿರೋಧ ಮಾಡಿದ್ದೇವೆ. ಪುತ್ತೂರು ಸುಳ್ಯದಲ್ಲಿ ಖಂಡಿತಾ ಬಂದ್ ಆಗುವುದಿಲ್ಲ. ಯಾರಿಗೆ ಏನು ಕರೆ ಕೊಟ್ಟರು ಜನರು ಬಲತ್ಕಾರದ ಬಂದ್‌ಗೆ ವಿರೋಧ ಮಾಡುತ್ತಾರೆ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಬಂದ್ ಅತ್ಯಾಚಾರಕ್ಕೆ ಸಮಾನ. ಯಾರು ಬಂದ್‌ಗೆ ಕರೆ ಕೊಟ್ಟವರು ಪರಿಹಾರ ಕೊಡಬೇಕು ಮತ್ತು ಅವರು ಶಿಕ್ಷಾರ್ಹರು ಎಂದು ಡಾ.ಯು.ಪಿ ಶಿವಾನಂದ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಡಾ.ಯು.ಪಿ.ಶಿವಾನಂದ ಅವರ ಸಹೋದರಿ ಸರೋಜ ಮಾಧವ ಮತ್ತು ಬಾವ ಇಂಜಿನಿಯರ್ ಮಾಧವ ಅವರು ಉಪಸ್ಥಿತರಿದ್ದರು.

‘ನನ್ನ ಮೂಲ ಹೋರಾಟ ಜನಾಂದೋಲನ ಮತ್ತೀಗ ಅದಕ್ಕೇ ಮರಳಿದ್ದೇನೆ’
ನಾನು ಪತ್ರಿಕೆ ಆರಂಭ ಮಾಡಿದ್ದು 40 ವರ್ಷದ ಹಿಂದೆ ಬಳಕೆದಾರರ ವೇದಿಕೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ. ಅಲ್ಲಿ ಕಾಂಬ್ಲಿ ಎಂಬ ಇನ್‌ಸ್ಪೆಕ್ಟರ್ ಅವರು ಭ್ರಷ್ಟಾಚಾರಿ ಎಂದು ಜನರ ಮತದ ಮೂಲಕ ಆಯ್ಕೆ ಮಾಡಿ ಅವರ ಪ್ರತಿಕೃತಿ ದಹನ ಮಾಡಿದ ಪರಿಣಾಮ ನನ್ನ ಮೇಲೆ ಕೇಸ್ ಆಗಿ. ಅದರಿಂದ ಹೊರಗೆ ಬರಲು ಆಗಿನ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿದ್ದ ರಾಮಕೃಷ್ಣ ಹೆಗಡೆ, ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿ ವಿರುದ್ಧ ಚುನಾವಣೆಗೆ ನಿಂತಿದ್ದೆ. ಅವರು ಸಂಭಾವ್ಯ ಮುಖ್ಯಮಂತ್ರಿಗಳಾದ್ದರಿಂದ ನನಗೆ ರಕ್ಷಣೆ ದೊರೆಯಿತು. ಅದೇ ಸಂದರ್ಭ ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭ ಆಯಿತು. ಹೀಗೆ ನಾನು ವೈದ್ಯಕೀಯ ವೃತ್ತಿಯಿಂದ ಪತ್ರಿಕೆಗೆ ಬಂದೆ. ಈಗ 40 ವರ್ಷಗಳ ಬಳಿಕ ಪತ್ರಿಕೆಯಿಂದ ಹೊರಗೆ ಬಂದು ಸಂಪೂರ್ಣವಾಗಿ ಈ ಜನಾಂದೋಲನದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಹಾಗಾಗಿ ನನ್ನ ಮೂಲ ಹೋರಾಟ ಜನಾಂದೋಲನದಿಂದ ಆರಂಭವಾಗಿದ್ದು, ಅದು ಪತ್ರಿಕಾ ರಂಗದ ಮೂಲಕ ಸಾಗಿ ಇದೀಗ ಮತದಾರರ ಜಾಗೃತಿ ಮೂಲಕ ಮತ್ತೆ ಜನಾಂದೋಲನಕ್ಕೆ ಮರಳಿದಂತಾಗಿದೆ, ಎಂದು ಡಾ. ಯು.ಪಿ.ಶಿವಾನಂದ ಅವರು ತಮ್ಮ ಹೋರಾಟದ ಹೆಜ್ಜೆಗಳನ್ನು ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here