ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್-71 ಕಿ.ಮೀ ಉದ್ದದ ಚತುಷ್ಪಥಕ್ಕೆ ಸಿದ್ದವಾಗಲಿದೆ ಸಮಗ್ರ ಯೋಜನಾ ವರದಿ

0

ಪುತ್ತೂರು: ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಮಂಗಳೂರು ವಿಭಾಗ ವ್ಯಾಪ್ತಿಯ ಮಂಗಳೂರು ಉಪವಿಭಾಗದಲ್ಲಿ ಬರುವ ಮಾಣಿ-ಸಂಪಾಜೆ ನಡುವಿನ 71 ಕಿ.ಮೀ. ಉದ್ದದ ದ್ವಿಪಥ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸಲು ಮುಂದಿನ 6 ತಿಂಗಳ ಒಳಗೆ ಡಿಪಿಆರ್ (ಸಮಗ್ರ ಯೋಜನಾ ವರದಿ) ಸಿದ್ಧವಾಗಲಿದೆ. ಅಂತೂ ಹಲವು ವರ್ಷಗಳಿಂದ ಕಾಯುತ್ತಿದ್ದ ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.


ಡಿಪಿಆರ್ ತಯಾರಿಸಲು 3 ತಿಂಗಳ ಹಿಂದೆ ಕೇಂದ್ರ ಭೂಸಾರಿಗೆ ಇಲಾಖೆ ಹಸಿರು ನಿಶಾನೆ ತೋರಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಕಾರಣ ಡಿಪಿಆರ್ ತಯಾರಿಕೆಗೆ ಟೆಂಡರ್ ನಡೆದಿರಲಿಲ್ಲ. ಜೂ.4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆದ ಬಳಿಕ ನೀತಿ ಸಂಹಿತೆ ರದ್ದಾಗಲಿದ್ದು, ಇದರ ಬೆನ್ನಲ್ಲೇ ಟೆಂಡರ್ ತೆರೆದುಕೊಳ್ಳಲಿದೆ. ಟೆಂಡರ್ ಅನುಮೋದನೆ ಬೆನ್ನಲ್ಲೇ ವಹಿಸಿಕೊಂಡ ಕಂಪನಿಯು 71 ಕಿ.ಮೀ. ಉದ್ದದ ಚತುಷ್ಪಥ ಯೋಜನೆಗೆ ಡಿಪಿಆರ್ ತಯಾರಿಸಿ ಕೇಂದ್ರ ಭೂಸಾರಿಗೆ ಇಲಾಖೆಗೆ ಸಲ್ಲಿಸಲಿದೆ. ಮುಂದಿನ ಕೇಂದ್ರ ಬಜೆಟ್‌ನಲ್ಲಿ ಕಾಮಗಾರಿಗೆ ಬೇಕಾದ ಮೊತ್ತ ಮಂಜೂರಾಗುವುದು ಬಹುತೇಕ ಖಚಿತವಾಗಿದ್ದು, ೨೦೨೫ರ ಕೊನೆಯಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಡಿಪಿಆರ್‌ನಲ್ಲಿ ಏನೇನಿದೆ…?:
ಮಾಣಿ- ಸಂಪಾಜೆ ನಡುವೆ ಈಗಿರುವ ದ್ವಿಪಥ ರಸ್ತೆಯನ್ನು ಚತುಷ್ಪಥವನ್ನಾಗಿಸಲು ಬೇಕಾದ ಮೊತ್ತ, ನಿರ್ಮಾಣವಾಗಲಿರುವ ಮೇಲ್ಸೇತುವೆ (ಫ್ಲೈ ಓವರ್), ಆರ್‌ಇ ವಾಲ್ (ರಿ ಇನ್ ಫೋರ್ಸ್‌ಡ್ ಅರ್ತ್ ವಾಲ್- ಎಲೆವೇಟೆಡ್ ರೋಡ್), ವಿಯುಪಿ (ವೆಹಿಕಲ್ ಅಂಡರ್‌ಪಾಸ್), ಸೇತುವೆ, ಮೋರಿ ಇತ್ಯಾದಿಗಳ ಸಂಖ್ಯೆ, ಭೂ ಸ್ವಾಧೀನತೆಯ ವಿವರ ಮತ್ತು ಅದಕ್ಕೆ ತಗುಲುವ ವೆಚ್ಚ ಇತ್ಯಾದಿ ಸಮಗ್ರ ವಿವರನ್ನು ಡಿಪಿಆರ್ ಹೊಂದಿರಲಿದೆ.

ಭೂಸ್ವಾಧೀನ ಯೋಜನೆ
ಸಲ್ಲಿಕೆಯಾಗುವ ಡಿಪಿಆರ್‌ನಲ್ಲಿ ಸಂಭಾವ್ಯ ಭೂಸ್ವಾಧೀನತೆಯ ವಿವರ ಇರಲಿದ್ದರೂ, ಒಮ್ಮೆ ಯೋಜನೆ ಮಂಜೂರಾದ ಬಳಿಕ ಭೂಸ್ವಾಽನಾಽಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗುತ್ತದೆ. ಈ ತಂಡ ಭೂ ಸ್ವಾಧೀನ ವಿವರಗಳ ಮೇಲೆ ಮರು ಪರಿಶೀಲನೆ ನಡೆಸಿ ಅಂತಿಮ ವರದಿ ಸಲ್ಲಿಸುತ್ತದೆ. ಮಂಗಳೂರಿನಿಂದ ಮಾಣಿ, ಉಪ್ಪಿನಂಗಡಿ, ಶಿರಾಡಿ ಮೂಲಕ ರಾ.ಹೆ.75 ಬೆಂಗಳೂರಿಗೆ ಸೇರುತ್ತದೆ. ಬಂಟ್ವಾಳದ ಮಾಣಿಯಲ್ಲಿ ಕವಲೊಡೆಯುವ ರಾ.ಹೆ. 275 ಮಡಿಕೇರಿ, ಮೈಸೂರು ಮೂಲಕ ಬೆಂಗಳೂರು ತಲುಪುತ್ತದೆ. ಮಂಗಳೂರು-ಮಡಿಕೇರಿ ಮಧ್ಯೆ ವರ್ಷದಿಂದ ವರ್ಷಕ್ಕೆ ಟ್ರಾಫಿಕ್ ಹೆಚ್ಚಾಗುತ್ತಿರುವ ಕಾರಣ ಚತುಷ್ಪಥ ನಿರ್ಮಾಣದ ತುರ್ತು ಅಗತ್ಯ ತಲೆದೋರಿದೆ.

ಹಂತ ಹಂತದ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೆಂಗಳೂರು – ಮೈಸೂರು ನಡುವೆ ಎಕ್ಸ್‌ಪ್ರೆಸ್ ಹೈವೆ ನಿರ್ಮಾಣಗೊಂಡಿದ್ದು, ಮೈಸೂರು- ಪಿರಿಯಾಪಟ್ಟಣ- ಕುಶಾಲನಗರ ಮಧ್ಯೆ ಷಟ್ಪಥ ಯೋಜನೆಯಿದೆ. ಕುಶಾಲನಗರ- ಸಂಪಾಜೆ- ಮಾಣಿಯವರೆಗೆ ಚತುಷ್ಪಥ ಯೋಜನೆಯಿದೆ. ಮಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಮಡಿಕೇರಿ ಮತ್ತು ಮಂಗಳೂರು ಉಪ ವಿಭಾಗಗಳಿದ್ದು, ಸಂಪಾಜೆ ಘಾಟಿ ರಸ್ತೆಯು ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿದೆ. ಒಟ್ಟಿನಲ್ಲಿ ಹಂತ ಹಂತದಲ್ಲಿ ಕಾಮಗಾರಿ ನಡೆಯಲಿದೆ.

LEAVE A REPLY

Please enter your comment!
Please enter your name here