ದ.ಕ ಲೋಕಸಭಾ ಕ್ಷೇತ್ರ-ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ ಗೆಲುವಿನ ಓಟ

0

ಮಂಗಳೂರು/ಪುತ್ತೂರು: ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಏ.19ರಿಂದ ಜೂ.1ರವರೆಗೆ 7 ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದಿದೆ. ಪೂರ್ವ ಸಮೀಕ್ಷೆಗಳನ್ನು ದಿಕ್ಕರಿಸುವ ರೀತಿಯಲ್ಲಿ ಫಲಿತಾಂಶಗಳು ಹೊರಬಿದ್ದಿದೆ. ರಾಜ್ಯದ 28ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 09 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ತನ್ನ ಬಲವನ್ನು ಎರಡಂಕಿಗಳಿಗೆ ಏರಿಸಿಕೊಂಡಿದೆ. ಜೆಡಿಎಸ್‌ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿ ತೃಪ್ತಿಪಡೆದುಕೊಂಡಿದೆ.

ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‌ ಚೌಟ 7,64,132 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಆರ್‌ ಪದ್ಮರಾಜ್‌ ಅವರನ್ನು 1,49,208 ಮತಗಳ ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ ನ ಅಭ್ಯರ್ಥಿ ಆರ್‌ ಪದ್ಮರಾಜ್‌ 6,14,924 ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಬಿ ಎಸ್‌ ಪಿ ಯ ಕಾಂತಪ್ಪ ಆಲಂಗಾರು 4232, ಕೆ ಎಸ್‌ ಪಿ ಯ ದುರ್ಗಾಪ್ರಸಾದ್‌ 2592, ಪ್ರಜಾಕೀಯದ ಮನೋಹರ್‌ 971,ಮತಗಳನ್ನು ಪಡೆದುಕೊಂಡಿದ್ದಾರೆ.ಕೆ ಆರ್‌ ಎಸ್‌ ನಿಂದ ಸ್ಪರ್ಧಿಸಿದ್ದ ರಂಜಿನಿ ಎಂ 776 ಮತಗಳನ್ನು ಪಡೆದುಕೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ್‌ ರಾಜೇಶ್ ಕುವೆಲ್ಲೋ‌ 976, ಮ್ಯಾಕ್ಸಿಮ್‌ ಪಿಂಟೋ 1690 ಮತ್ತು ಸುಪ್ರಿತ್‌ ಕುಮಾರ್‌ ಪೂಜಾರಿ 1901 ಮತಗಳನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14,08,738ಮತಗಳು, 7032 ಅಂಚೆ ಮತಗಳು ಸೇರಿದಂತೆ ಒಟ್ಟು 14,15,770 ಮತಗಳು ಚಲಾವಣೆಯಾಗಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ ಕೋಲಾರದಲ್ಲಿ ಜೆಡಿ ಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು ಮತ್ತು ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ,ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಬೆಳಗಾವಿಯಲ್ಲಿ ಜಗದೀಶ್‌ ಶೆಟ್ಟರ್‌, ಉಡುಪಿಯಲ್ಲಿ ಕೋಟ ಶ್ರೀನಿವಾಸ್‌ ಪೂಜಾರಿ, ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ, ತುಮಕೂರಿನಲ್ಲಿ ಸೋಮಣ್ಣ, ಬೆಂಗಳೂರು ಗ್ರಾಮಾಂತರ ಡಾ.ಮಂಜುನಾಥ್‌, ಚಿಕ್ಕಬಳ್ಳಾಪುರ ಡಾ.ಸುಧಾಕರ್‌, ಧಾರವಾಡದಲ್ಲಿ ಪ್ರಹ್ಲಾದ್‌ ಜೋಶಿ,ಹಾವೇರಿಯಲ್ಲಿ ಬಸವರಾಜ್‌ ಬೊಮ್ಮಾಯಿ,ಬಾಗಲಕೋಟೆಯಲ್ಲಿ ಪಿಸಿ ಗದ್ದಿಗೌಡರ್‌, ವಿಜಯಪುರದಲ್ಲಿ ರಮೇಶ್‌ ಜಿಗಜಿಣಗಿ, ಮೈಸೂರಿನಲ್ಲಿ ಯಧುವೀರ್‌ ಒಡೆಯರ್‌, ಮಂಗಳೂರಿನಲ್ಲಿ ಕ್ಯಾ.ಬ್ರಿಜೇಶ್‌ ಚೌಟ, ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ, ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಮತ್ತು ಬೆಂಗಳೂರು ಕೇಂದ್ರದಲ್ಲಿ ಪಿ ಸಿ ಮೋಹನ್‌ ಗೆಲುವು ಸಾಧಿಸಿದ್ದಾರೆ.

ಇನ್ನುಳಿದಂತೆ ಚಾಮರಾಜನಗರದಲ್ಲಿ ಕಾಂಗ್ರೆಸ್‌ ನ ಸುನೀಲ್‌ ಬೋಸ್‌, ಹಾಸನದಲ್ಲಿ ಶ್ರೇಯಸ್‌ ಪಟೇಲ್‌, ಬಳ್ಳಾರಿಯಲ್ಲಿ ತುಕರಾಮ್‌, ಬೀದರ್‌ ನಲ್ಲಿ ಸಾಗರ್‌ ಖಂಡ್ರೆ, ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ, ಕೊಪ್ಪಳದಲ್ಲಿ ರಾಜಶೇಖರ್‌ ಯತ್ನಾಳ್‌, ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್‌,ಕಲ್ಬುರ್ಗಿಯಲ್ಲಿ ರಾಧಕೃಷ್ಣ ದೊಡ್ಮನಿ ಮತ್ತು ರಾಯಚೂರಿನಲ್ಲಿ ಕುಮಾರ ನಾಯ್ಕ್‌ ಗೆಲುವು ಸಾಧಿಸಿದ್ದಾರೆ.

LEAVE A REPLY

Please enter your comment!
Please enter your name here