ಸಂಘ ಹೊಸದಲ್ಲ:ಡಿವಿ,ಮಠಂದೂರು ಉಪಸ್ಥಿತಿಯಲ್ಲಿ ಮಾಡಿರುವ ಸಂಘದ ಬೈಲಾ ಗೊಂದಲ ನಿವಾರಿಸಿ ನೋಂದಾವಣೆ
ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಸಮುದಾಯದ ಜನಗಣತಿ ಉದ್ದೇಶ -ಲೋಕಯ್ಯ ಗೌಡ
ರಾಜಕೀಯಕ್ಕಾಗಿ ಅಲ್ಲ : ನಮ್ಮ ಸಂಸ್ಕೃತಿ, ಸಂಪ್ರದಾಯ ಬೆಳೆಸಲು -ದಿನೇಶ್ ಮಡಪ್ಪಾಡಿ
ಒಟ್ಟಿಗೆ ಹೋಗುವುದಾದರೆ ಪುತ್ತೂರು ಸಂಘದ ಬೆಂಬಲ -ಚಿದಾನಂದ ಬೈಲಾಡಿ
ಜಿಲ್ಲಾ ಮಾತೃ ಸಂಘದ ಬದಲು ಒಕ್ಕೂಟ ಮಾಡಿದರೆ ಉತ್ತಮ -ಚಂದ್ರ ಕೋಲ್ಚಾರ್
ಸಂಘಕ್ಕೆ ವಿರೋಧ ಮಾಡಿರುವವರನ್ನು ಸೇರಿಸಿ ಸಮಿತಿ ಮಾಡಿರುವುದಕ್ಕೆ ವಿರೋಧವಿದೆ -ಕುಶಾಲಪ್ಪ ಗೌಡ ಪೂವಾಜೆ
ತುರ್ತಾಗಿ ಕೆಲವು ಪ್ರಮುಖರನ್ನು ಸೇರಿಸಿ ಗೊಂದಲ ನಿವಾರಣೆ ಮಾಡಿ -ರವಿ ಮುಂಗ್ಲಿಮನೆ
ನಾವು ಅರ್ಧ ಮಾಡಿದ್ದನ್ನು ಪೂರ್ಣಗೊಳಿಸುತ್ತಿದ್ದೇವೆ -ಪದ್ಮ ಗೌಡ ಬೆಳ್ತಂಗಡಿ
ನಾವು ಒಟ್ಟು ಸೇರುವ ಕೆಲಸ ಆಗಬೇಕು ಹೊರತು ವಿಘಟನೆಯಾಗಬಾರದು -ನಿತ್ಯಾನಂದ ಮುಂಡೋಡಿ
ಪುತ್ತೂರು:ದ.ಕ.ಜಿಲ್ಲೆಯಲ್ಲಿ ಈಗಾಗಲೇ ದ.ಕ.ಜಿಲ್ಲಾ ಒಕ್ಕಲಿಗ ಗೌಡ ಸಂಘ ನೋಂದಾವಣೆಯಾಗಿದ್ದು,ಇದೀಗ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ನೋಂದಾವಣೆಗೆ ಸಿದ್ಧತೆ ನಡೆಸುತ್ತಿರುವ ವಿಚಾರ, ಸಂಘದ ನೇತೃತ್ವ ವಹಿಸಿರುವ ಲೋಕಯ್ಯ ಗೌಡ ಅವರ ಅಧ್ಯಕ್ಷತೆಯಲ್ಲಿ ತೆಂಕಿಲ ಒಕ್ಕಲಿಗ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಜೂ.17ರಂದು ನಡೆದ ಸಭೆಯಲ್ಲಿ ಬೆಳಕಿಗೆ ಬಂದಿದೆ.ಆದರೆ, ಈ ಸಂಘ ಹೊಸದಲ್ಲ.ಎರಡು ವರ್ಷದ ಹಿಂದೆ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಮತ್ತು ಸಂಘದ ನಾಯಕರಾಗಿರುವ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲೇ ಮಾಡಿರುವ ಸಂಘ.ಆ ಬೈಲಾದಲ್ಲಿ ಸ್ವಲ್ಪ ಗೊಂದಲವಿತ್ತು.ಅದನ್ನು ಹೋಗಲಾಡಿಸಿ ಈಗ ಪೂರ್ಣ ಮಟ್ಟದ ಬೈಲಾ ಆಗಿ ನೋಂದಾವಣೆ ಕಾರ್ಯ ಆಗುತ್ತಿದೆ ಎಂದು ಮಂಗಳೂರು ತಾಲೂಕು ಸಂಘದ ಅಧ್ಯಕ್ಷರೂ ಆಗಿರುವ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪುತ್ತೂರು ತೆಂಕಿಲ ಒಕ್ಕಲಿಗ ಸಮುದಾಯ ಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಡಬ ಹೊರತುಪಡಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಡಬ ಸಂಘದವರೂ ಬೆಂಬಲ ಸೂಚಿಸಿದ್ದಾರೆ ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಅವರು ತಿಳಿಸಿದರು.ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಸಭೆಯ ಕೊನೆಯಲ್ಲಿ,ಜಿಲ್ಲಾ ಸಂಘಕ್ಕೆ ಆರು ತಾಲೂಕುಗಳಿಂದ ಅಧ್ಯಕ್ಷರ ಸಹಿತ 15 ಮಂದಿಯನ್ನು ಆಯ್ಕೆ ಮಾಡಿಕೊಡುವಂತೆ ತಿಳಿಸಿದರು.ಒಟ್ಟು 90 ಮಂದಿಯ ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಜನಗಣತಿ ಉದ್ದೇಶ: ಅಧ್ಯಕ್ಷತೆ ವಹಿಸಿದ್ದ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಅವರು ಮಾತನಾಡಿ, ಈ ಹಿಂದೆ ಕೇಂದ್ರ ಮಟ್ಟದ ಸಮಿತಿ ಆಗಿತ್ತು.ಮತ್ತೆ ಬೆಳವಣಿಗೆಯ ಕಾರಣ ಹೇಳುವುದಿಲ್ಲ.ಅದೇ ಸಮಿತಿಯನ್ನು ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಮಿತಿ ರಚಿಸಿದ್ದೇವೆ.ತಾಲೂಕುಗಳ ಮುಖಂಡರು ಅದರಲ್ಲಿ ಪದಾಧಿಕಾರಿಗಳಾಗುತ್ತಾರೆ.ಯಾರಿಗೂ, ಯಾವುದೇ ರೀತಿಯಲ್ಲಿ ಬೇಸರ ಆಗಬಾರದು ಎಂಬ ಪ್ರಯತ್ನದಲ್ಲಿ ಹೊಸ ಸಮಿತಿಯನ್ನು ಮಾಡಿದ್ದೇವೆ.ಬೈಲಾದಲ್ಲಿ, ಯಾವ ಸಂದರ್ಭದಲ್ಲೂ ಯಾರಿಗೂ ಸಹಾಯ ಮಾಡಬಹುದು ಎಂಬ ಗುರಿಯೊಂದಿಗೆ ಇಡೀ ಜಿಲ್ಲೆಯ ಎಲ್ಲಾ ತಾಲೂಕಿನ ಜನಗಣತಿ ಆಗಬೇಕು ಎಂಬುದು ನನ್ನ ಉದ್ದೇಶ.ಯಾಕೆಂದರೆ ಈ ಹಿಂದೆ ನಮ್ಮ ಸಮುದಾಯದ ಅಂಕಿ ಅಂಶ ಮಾತ್ರ ಹೇಳುತ್ತಿದ್ದರು. ಅದರ ಬದಲು ನಮಗೆ ಎಷ್ಟು ಕುಟುಂಬವಿದೆ,ಎಷ್ಟು ಸಂಪ್ರದಾಯವಿದೆ.ತರವಾಡು ಮನೆಗಳು ಎಷ್ಟು? ಗೋತ್ರಗಳ ಸಂಖ್ಯೆ ಇವೆಲ್ಲ ಮಾಹಿತಿ ನಮ್ಮಲ್ಲಿ ಇರಬೇಕು.ಇದು ರಾಜಕೀಯವಾಗಿ ಯಾರಿಗೂ ತೊಂದರೆ ಕೊಡಲು ಅಲ್ಲ.ನಮ್ಮ ಸಮಾಜದ ಸ್ಥಿತಿ ಗತಿ ಅರಿಯಲು ಎಂದರು.
ಸಂಘಟನೆ ರಾಜಕೀಯಕ್ಕಾಗಿ ಅಲ್ಲ: ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2 ವರ್ಷದ ಹಿಂದೆ ಜಿಲ್ಲಾ ಸಂಘ ಆಗಬೇಕೆಂದು ಲೋಕಯ್ಯ ಗೌಡ ಅವರ ನೇತೃತ್ವದಲ್ಲಿ ತಾಲೂಕಿನ ಹಿರಿಯರು ಸೇರಿ ಸಭೆ ಮಾಡಿದ್ದೆವು.ಆಗ ಬೈಲಾ ರಚನೆ ಮಾಡಿದರೂ ಕೆಲವೊಂದು ತಿದ್ದುಪಡಿ ಮಾಡಿದ್ದೇವೆ.ನಮ್ಮ ಬೈಲಾದಲ್ಲಿ, ಆದಿ ಚುಂಚನಗಿರಿ ಶಾಖಾ ಮಠದ ಶ್ರೀಗಳ ಅಂತಿಮ ನಿರ್ಣಯ ಬೇಕೆಂಬ ಮಾಹಿತಿ ಇತ್ತು.ಇದರೊಂದಿಗೆ ಬೆಳ್ತಂಗಡಿ ತಾಲೂಕಿನ ಗಂಗಾಧರ ಗೌಡರ ಸಮಾಜವನ್ನು ಪುನಃ ಗೌಡ ಕುಟುಂಬದ ನಮ್ಮ ಸಮುದಾಯದ 10 ಕುಟುಂಬ 18 ಗೋತ್ರಕ್ಕೆ ಸೇರ್ಪಡೆಗೊಳಿಸುವ ಒತ್ತಡದಿಂದ ರಾಜ್ಯದಿಂದ ಸೇರ್ಪಡೆಗೊಳಿಸುವ ಕಾರ್ಯ ಆಗಿತ್ತು.ಆದರೆ ನಮ್ಮ ಮತ್ತು ಅವರ ಸಂಸ್ಕೃತಿ, ಆಚಾರ ವಿಚಾರ ಬೇರೆ ಬೇರೆಯಾಗಿರುವುದರಿಂದ ರಾಜಕೀಯ ವಿಚಾರಕ್ಕೆ ಒಟ್ಟು ಸೇರುವ ಎಂದು ಹೇಳುವ ಮೂಲಕ, ನಮ್ಮ ಸಮುದಾಯಕ್ಕೆ ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತವಾಗಿತ್ತು.ಸೇರ್ಪಡೆಗೊಳಿಸಲು ಸ್ವಾಮೀಜಿಯವರ ಒತ್ತಡದಿಂದ ಎರಡು ಮೂರು ವರ್ಷ ಬೈಲಾ ಹಾಗೇ ಪೆಂಡಿಂಗ್ ಆಯಿತು.ಇದಾದ ಬಳಿಕ ಒಕ್ಕಲಿಗ ಗೌಡ ಸಂಘ ಎರಡು ಗ್ರೂಪ್ ಆಯಿತು.
ಗ್ರೂಪ್ ಆಗುವುದು ಬೇಡ ಎಂದು ಆಗ ನಾವು ಕೈಕಾಲು ಹಿಡಿದಿದ್ದೇವೆ. ಆದರೂ ಎರಡು ಗ್ರೂಪ್ ಆಯಿತು.ಅನಂತರ ಸುಮ್ಮನೆ ಕೂತಿದ್ದೆವು.ಈ ನಡುವೆ ನಮಗೆ ಏಕಾಏಕಿ ಜಿಲ್ಲಾ ಒಕ್ಕೂಟ ಆದ ಕುರಿತು ಪತ್ರಿಕೆ ಮೂಲಕ ತಿಳಿದು ಬಂತು.ಯಾವ ತಾಲೂಕಿನ ಸಭೆಯಲ್ಲಿಯೂ ನಿರ್ಣಯ ಆಗದೆ ಜಿಲ್ಲಾ ಒಕ್ಕೂಟ ಆಗಿರುವುದು ನಮಗೆ ಜಿಜ್ಞಾಸೆ ಆಯಿತು.ನಮಗೆ ಗೊತ್ತಿಲ್ಲದೆ ಹೇಗೆ ಆಯಿತು.ನಮ್ಮ ನಾಯಕರಾದ ಸಂಜೀವ ಮಠಂದೂರು, ಡಿ.ವಿ.ಸದಾನಂದ ಗೌಡ ಸಂಘ ಮಾಡುವಾಗ ಇದ್ದರು.ಅವರು ಕೂಡಾ ನಮಗೆ ಒಂದು ಮಾತು ಹೇಳಿಲ್ಲ.ಇದನ್ನು ಪ್ರಶ್ನಿಸಿ ನಾವು ಒಂದು ಸಭೆ ಮಾಡಿದ್ದೆವು.ಈ ಸಭೆ, ನಮಗೆ ಸಂಘಟನೆ ರಾಜಕೀಯಕ್ಕಾಗಿ, ಸೀಟು ಬೇಕೆಂಬ ಉದ್ದೇಶದಿಂದಾಗಿರಲಿಲ್ಲ.ನಾವು ನಮ್ಮಲ್ಲಿರುವ ಸಂಸ್ಕೃತಿ, ಸಂಪ್ರದಾಯದನ್ನು ಬೆಳೆಸಲು ಸಂಘಟನೆ ಮಾಡಬೇಕೆಂದು ತೀರ್ಮಾನಕ್ಕೆ ಬಂದೆವು.ಅನಂತರ ಬೈಲಾ ಮಾಡಿದ್ದೇವೆ.ಚುನಾವಣೆ ಬಳಿಕ ಮತ್ತೆ ಸುಳ್ಯದಲ್ಲಿ ಇನ್ನೊಂದು ಮೀಟಿಂಗ್ ಮಾಡಿದ್ದೆವು.ಮೊನ್ನೆ ಪುತ್ತೂರಿನಲ್ಲಿ ಬೈಲಾ ಅಂತಿಮ ಹಂತಕ್ಕೆ ತಂದಿದ್ದೇವೆ.ಕೆಲವೊಂದು ತಪ್ಪು ಆಗುವುದು ಸಹಜ. ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ, ಒಕ್ಕಲಿಗ ಭವನ ಮಂಗಳೂರು¿ ಎಂದು ಹೆಸರಿಸಿದ್ದೇವೆ ಎಂದು ಅವರು ಸಂಘದ ಉದ್ದೇಶಗಳನ್ನು ತಿಳಿಸಿದರು.ಪ್ರತಿ ಆರು ತಾಲೂಕಿನಿಂದ ಸೂಚಿಸಿದ 15 ಮಂದಿಯನ್ನು ಜಿಲ್ಲಾ ಸಂಘಕ್ಕೆ ಸೇರಿಸಿ. ಒಟ್ಟು 90 ಮಂದಿ ಆಡಳಿತ ಮಂಡಳಿ ಸದಸ್ಯರು.ಪ್ರಸ್ತುತ ತಾಲೂಕು ಅಧ್ಯಕ್ಷರು ಕಡ್ಡಾಯವಿದ್ದು, ಕಾರ್ಯಕಾರಿ ಸಮಿತಿ ರಚನೆ ಮಾಡಲಾಗುವುದು ಎಂದವರು ತಿಳಿಸಿದರು.
ಒಟ್ಟಿಗೆ ಹೋಗುವುದಾದರೆ ಪುತ್ತೂರು ಸಂಘದ ಬೆಂಬಲ: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ, ಹಿಂದೊಮ್ಮೆ ಸಿ.ಪಿ ಜಯರಾಮ ಗೌಡ ಅವರ ನೇತೃತ್ವದಲ್ಲಿ ಜಲ್ಲಾ ಸಂಘಟನೆ ಮಾಡಿ ಆ ಮೂಲಕ ನಾವು ಚುನಾವಣೆಗೆ ಬೇಕಾದ ಅವಕಾಶ ಪಡೆದುಕೊಳ್ಳಬಹುದೆಂದು ಸಭೆ ಮಾಡಿದ ದಿನಗಳಿವೆ.ಕಾರಣಾಂತರಗಳಿಂದ ಅದು ಮುಂದುವರಿಯಲಿಲ್ಲ.2 ವರ್ಷದ ಹಿಂದೆ ಮತ್ತೆ ಇದೇ ಸಭಾಂಗಣದಲ್ಲಿ ಸಂಘಟನೆ ಪ್ರಯತ್ನ ನಡೆಯಿತು.ಸೌಜನ್ಯ ಪ್ರಕರಣದಲ್ಲಿ ಕೂಡ ಸಂಘದ ಅಸ್ತಿತ್ವ ಬೇಕೆಂದು ಪ್ರಯತ್ನ ಮಾಡಿದ ದಿನಗಳಿವೆ.ಸಣ್ಣ ಬೈಲಾ ಕೂಡಾ ಆಗಿತ್ತು.ನನ್ನನ್ನೇ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಉಲ್ಲೇಖ ಬಂತು.ಆಗ ನಾನು ತಾಲೂಕು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿರಲಿಲ್ಲ.ಈ ನಡುವೆ ಮತ್ತೊಂದು ಸಂಘಟನೆ ಆಯಿತು ಎನ್ನುವ ಮಾಹಿತಿ ಬಂತು. ಆದರೆ ನಮ್ಮಲ್ಲಿ ಒಂದು ತತ್ವ ಇರಬೇಕು.ಏನೇ ಇರಲಿ ನಮ್ಮಲ್ಲಿ ಒಂದು ಸಂಘಟನೆ ಇರಬೇಕು.ಅದನ್ನು ಮರ್ಜ್ ಮಾಡುವ ಮೂಲಕವಾದರೂ ಆಗಬಹುದು.ಸೇರಿಸಿಕೊಳ್ಳುವ ಮೂಲಕವೂ ಆಗಬಹುದು.ಯಾವತ್ತಾದರೂ ನಾವು ಒಂದು ಸಂಘಟನೆಯ ಮೂಲಕ ಹೋರಾಟ ಮಾಡಬೇಕು.ಎರಡು ಸಂಘಟನೆ ಆಗಿ ಹೋದರೆ ಅದು ನಮ್ಮ ಅಸ್ತಿತ್ವಕ್ಕೆ ಖಂಡಿತಾ ಪೆಟ್ಟು ಕೊಡುತ್ತದೆ. ಹಾಗಾಗಿ ಒಟ್ಟಿಗೆ ಹೋಗುವುದಾದರೆ ಮಾತ್ರ ಪುತ್ತೂರು ಸಂಘದಿಂದ ಬೆಂಬಲವಿದೆ.ಎರಡು ಆದಾಗ ಮುಂದೆ ನಾವು ನೋಡಬೇಕಾಗುತ್ತದೆ ಎಂದರು.
ಅಧ್ಯಕ್ಷರು ಯಾರಾದರೂ ಆಗಬಹುದು ಆದರೆ ಸಂಘಟನೆ ಒಂದೇ ಇರಬೇಕು: ಎಲ್ಲರೂ ಸೇರಿ ಈ ವಿಚಾರದಲ್ಲಿ ಮಾತುಕತೆ ನಡೆಸಿ, ಸ್ವಾಮೀಜಿಯವರಲ್ಲೂ ಈ ಕುರಿತು ಮಾತನಾಡಿದೆ.ಎರಡು ಸಂಘಟನೆ ಬೇಡ.ಅಧ್ಯಕ್ಷರು ಯಾರೂ ಆಗಬಹುದು.ಆದರೆ ಸಂಘಟನೆ ಒಂದೇ ಅಗಬೇಕು. ಮುಂದಿನ ದಿನ ಕೂತು ಮಾತನಾಡಿ ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಮಾಡಬೇಕೆಂದು ಹೇಳಿದರು.ಇದರ ಜೊತೆಗೆ ಬೈಲಾದಲ್ಲಿರುವ ಕೆಲವು ವಿಚಾರಗಳನ್ನು ಬದಲಾವಣೆಗೆ ಸಲಹೆ ನೀಡಿದರು.ಜಿಲ್ಲಾ ಸಂಘದಲ್ಲಿ ತಾಲೂಕು ಅಧ್ಯಕ್ಷರು ಇರಬೇಕಾದರೆ ಅಲ್ಲಿ ಬದಲಾವಣೆ ಅಗತ್ಯ.ಇಲ್ಲವಾದರೆ ತಾಂತ್ರಿಕ ತೊಂದರೆ ಆಗಬಹುದು.ಸಂಘ ಅನ್ನುವ ಶಬ್ದ ಬಂದಾಗ, ನಮ್ಮದು ಮರ್ಜ್ ಆಗುತ್ತಾ ಎಂಬ ಪ್ರಶ್ನೆ ಬರಬಹುದು.ಯಾಕೆಂದರೆ ನಮ್ಮಲ್ಲಿ ಈಗಾಗಲೇ ಬೈಲಾ ಇದೆ.ಇದರ ಕುರಿತು ಸ್ವಲ್ಪ ಆಲೋಚನೆ ಮಾಡಬೇಕು.ಸಂಘಕ್ಕೆ ಮಾತೃ ಸಂಘ ಶಬ್ದ ಸೂಕ್ತ ಆಗುತ್ತದೆಯೋ ಎಂದು ನೋಡಬೇಕು ಎಂದು ಚಿದಾನಂದ ಬೈಲಾಡಿ ಸಲಹೆ ನೀಡಿದರು.
ಜಿಲ್ಲಾ ಮಾತೃ ಸಂಘದ ಬದಲು ಒಕ್ಕೂಟ ಮಾಡಿದರೆ ಉತ್ತಮ: ಸುಳ್ಯ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅವರು ಮಾತನಾಡಿ ಸಂಘಟನೆ ಬೇಕು.ಆದರೆ ಒಂದಾಗಿ ಹೋಗಬೇಕು.ಈ ನಿಟ್ಟಿನಲ್ಲಿ ಜಿಲ್ಲಾ ಮಾತೃಸಂಘ ಅನ್ನುವ ಬದಲು ಅದನ್ನು ಒಕ್ಕೂಟ ಮಾಡುವುದು ಉತ್ತಮ.ಜಿಲ್ಲಾ ಒಕ್ಕೂಟಕ್ಕೆ ಹೆಚ್ಚಿನ ಶಕ್ತಿ ಇರುತ್ತದೆ ಎಂದು ಸಲಹೆ ನೀಡಿದರು.
ಸಂಘಕ್ಕೆ ವಿರೋಧ ಮಾಡಿರುವವರನ್ನು ಸೇರಿಸಿ ಸಮಿತಿ ಮಾಡಿರುವುದಕ್ಕೆ ವಿರೋಧವಿದೆ: ಬೆಳ್ತಂಗಡಿ ಗೌಡ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಗೋತ್ರ ವಿಚಾರ ಇಲ್ಲದಿರುವವರನ್ನು ಸೇರಿಸುವುದಕ್ಕೆ ನಮ್ಮ ವಿರೋಧವಿದೆ. ಅವರನ್ನು ಸೇರಿಸಿಕೊಂಡು ಸಂಘ ಮಾಡುವುದಾದರೆ ಬೆಳ್ತಂಗಡಿ ತಾಲೂಕಿನ ಗೌಡ ಸಂಘದ ವಿರೋಧವಿದೆ.ಸಂಘಕ್ಕೆ ವಿರೋಧಿಸಿದವರನ್ನು ಸೇರಿಸಿ ಹೊಸ ಸಮಿತಿ ಮಾಡಿರುವುದಕ್ಕೂ ನಮ್ಮ ವಿರೋಧವಿದೆ.ಹಾಗಾಗಿ ಇವತ್ತು ಲೋಕಯ್ಯ ಗೌಡರ ನೇತೃತ್ವದಲ್ಲಿ ನಡೆಯುತ್ತಿರುವುದು ಅಧಿಕೃತವಾಗಿ ಆಗಬೇಕೆಂದು ಹೇಳಿದರು.
ತುರ್ತಾಗಿ ಕೆಲವು ಪ್ರಮುಖರನ್ನು ಸೇರಿಸಿ ಗೊಂದಲ ನಿವಾರಣೆ ಮಾಡಿ: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ ಎರಡು ಸಂಘ ಮಾಡುವ ವ್ಯವಸ್ಥೆಯಲ್ಲಿ ನಾವಿಲ್ಲ.ಸಮಸ್ಯೆ ಆಗುತ್ತಿರುವುದನ್ನು ಪರಿಹಾರ ಮಾಡಬೇಕೆಂದು ಹಿಂದೆ ಡಿ.ವಿ.ಸದಾನಂದ ಗೌಡರಲ್ಲೂ, ಸಂಜೀವ ಮಠಂದೂರು ಅವರಲ್ಲೂ ಅನೇಕ ಸಲ ತಿಳಿಸಿದ್ದೆ.ಮುಂದೆ ಇದು ಎಲ್ಲಾ ಗ್ರಾಮಗಳಿಗೆ, ನಮ್ಮ ಸಂಘಕ್ಕೂ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ತುರ್ತಾಗಿ ಕೆಲವು ಪ್ರಮುಖರನ್ನು ಸೇರಿಸಿ ಡಿ.ವಿ.ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ನೇತೃತ್ವದಲ್ಲಿ ಒಂದು ವ್ಯವಸ್ಥೆಯ ಸಭೆ ಮಾಡಿ ಹಿಂದೆ ಆಗಿರುವುದನ್ನು ಮರೆತು ಸರಿ ಮಾಡಬಹುದಲ್ವಾ ಎಂದು ಪ್ರಸ್ತಾಪಿಸಿದರು.
ನಾವು ಅರ್ಧ ಮಾಡಿದ್ದನ್ನು ಪೂರ್ಣಗೊಳಿಸುತ್ತಿದ್ದೇವೆ:ಬೆಳ್ತಂಗಡಿ ತಾಲೂಕಿನ ಪದ್ಮ ಗೌಡ ಅವರು ಮಾತನಾಡಿ ಜಿಲ್ಲಾ ಸಂಘ ಹಿಂದೆಯೇ ಆಗಿದೆ.ಅದನ್ನು ನೋಂದಾವಣೆ ಮಾಡಲು ಮಾತ್ರ ಬಾಕಿ ಆಗಿತ್ತು.ಈ ಹಿಂದೆಯೂ ನಾವು ಎಲ್ಲಾ ಸಂಘಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ಸೇರಿಸಿ ಸಂಘಟನೆ ಮಾಡಿದ್ದೇವೆ.ಸ್ವಾಮೀಜಿ, ಡಿ.ವಿ.ಸದಾನಂದ ಗೌಡ, ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಮಾಡಿದ್ದೇವೆ.ಆದರೆ ಅದನ್ನು ನೋಂದಾವಣೆ ಮಾಡಲು ಮಾತ್ರ ಬಾಕಿ ಇತ್ತು.ನಾವು ಈಗ ಬಾಕಿ ಇರುವ ಕೆಲಸ ಮಾಡುತ್ತಿದ್ದೇವೆ.ಗೊಂದಲ ಮಾಡುವ ಅವಶ್ಯಕತೆ ಇಲ್ಲ.ನಮ್ಮ ಸ್ವಾಮೀಜಿಗಳ ಮೇಲೆ ನಮಗೆ ಗೌರವ ಇದೆ.ನಮಗೂ ಒಂದು ಗೌರವ ಇದೆ. ಹಾಗಾಗಿ ನಾವು ಅರ್ಧ ಮಾಡಿದ್ದನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದರು.
ನಾವು ಒಟ್ಟು ಸೇರುವ ಕೆಲಸ ಆಗಬೇಕು ಹೊರತು ವಿಘಟನೆಯಾಗಬಾರದು: ಸುಳ್ಯ ಗೌಡ ಸಂಘದ ಪದಾಧಿಕಾರಿ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ ಇದು ಹೊಸ ಸಂಘ ಅಲ್ಲ.2 ವರ್ಷದ ಹಿಂದೆ ಪ್ರಾರಂಭ ಮಾಡಿದ ಸಂಘ ಮತ್ತು ಅಧಿಕೃತವಾದ ಸಂಘ ಇದಾಗಿದೆ.ಎಲ್ಲಾ ತಾಲೂಕಿನವರನ್ನು ಸೇರಿಸಿಕೊಂಡು ಮುಂದಿನ ಯೋಜನೆ ಕುರಿತು ಚಿಂತಿಸಬೇಕು.ನಮ್ಮ ಸಮಾಜದ ಮುಖಂಡರು ಅನ್ನಿಸುವ ಡಿ.ವಿ.ಸದಾನಂದ ಗೌಡರು, ಸಂಜೀವ ಮಠಂದೂರು ಆಗಿರಲಿ ಅವರನ್ನು ಮುಂದೆ ಇಟ್ಟುಕೊಂಡು ಈ ವಿಚಾರಗಳ ಬಗ್ಗೆ, ಗೊಂದಲಗಳ ಬಗ್ಗೆ ಸರಿ ಮಾಡುವ ಕೆಲಸ ಆಗಬೇಕು.ನಾವು ಒಟ್ಟು ಸೇರುವ ಕೆಲಸ ಆಗಬೇಕು ವಿನಾಃ ವಿಘಟನೆ ಮಾಡುವ ಕೆಲಸ ಅಲ್ಲ.ಆದ್ದರಿಂದ ಎಲ್ಲರನ್ನು ಸೇರಿಸಿಕೊಂಡು ಹೋಗುವ ಸಂಘ ಇದಾಗಬೇಕು.ನಮಗೆ ಲೋಕಯ್ಯ ಗೌಡರ ಮೇಲೆ ನಂಬಿಕೆ ಇದೆ.ದ.ಕ.ಜಿಲ್ಲೆಯ ಗೌಡ ಸಮಾಜ ನಾವೆಲ್ಲ ಒಗ್ಗಟ್ಟಾಗಿರಬೇಕೆಂದು ನನ್ನ ಹಾರೈಕೆಯಾಗಿದೆ ಎಂದರು.
ಇದು ಹೊಸತಲ್ಲ: ನಮ್ಮ ಸಂಘ ಹೊಸತಲ್ಲ. ಕದ್ದು ಮುಚ್ಚಿ ಸಮಾಜ ಸಂಘ ಸ್ಥಾಪನೆ ಮಾಡುವುದೂ ಸರಿಯಲ್ಲ.ಒಂದು ಸಂಘ ಇರುವಾಗ ಏಕಾಏಕಿ ಎರಡನೆ ಸಂಘ ಮಾಡಿ ಗೊಂದಲ ಮಾಡಿದ್ದು ನಾವಲ್ಲ. ಹೊಸ ಸಂಘ ಮಾಡುವ ವಿಚಾರ ಈ ಹಿಂದಿನ ಸಂಘದಲ್ಲಿ ಕೇಳದೆ ಮಾಡಿದ್ದು ಸಂಸ್ಥೆಗೆ ಅವಮಾನ ಮಾಡಿದಂತೆ.ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರೆ ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ನಾವು ಇವತ್ತು ಈ ಹಿಂದಿನ ಸಂಘವನ್ನು ನೋಂದಾವಣೆ ಮಾಡುವುದು ಮಾತ್ರ ಎಂಬ ಕುರಿತು ಬೆಳ್ತಂಗಡಿ ತಾಲೂಕಿನ ಸಂಘದ ಸದಸ್ಯರೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದರು.ಬಂಟ್ವಾಳ ತಾಲೂಕು ಗೌಡ ಸಂಘದ ಅಧ್ಯಕ್ಷ ಮೋನಪ್ಪ ಗೌಡ, ನಿವೃತ್ತ ಪೊಲೀಸ್ ಅಧೀಕ್ಷಕ ರಾಮದಾಸ್ ಗೌಡ, ಸುಳ್ಯ ನಗರ ಪಂಚಾಯತ್ನ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ವೆಂಕಟ್ರಮಣ ಕೋ ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಗೌಡ, ಐ.ಸಿ.ಕೈಲಾಸ್, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಎಸ್.ಪಿ.ಮುರಳೀಧರ ಕೆಮ್ಮಾರ ಸಹಿತ ಹಲವಾರು ಮಂದಿ ಸಲಹೆ ನೀಡಿದರು.ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜಾ ಕೆ, ಶಿವರಾಮ ಮತಾವು, ಲಿಂಗಪ್ಪ ಗೌಡ ತೆಂಕಿಲ, ರಾಧಾಕೃಷ್ಣ ನಂದಿಲ, ಶ್ರೀಧರ್ ಗೌಡ ಕಣಜಾಲು, ಭಾಸ್ಕರ್ ಗೌಡ ಕೋಡಿಂಬಾಳ, ಮಹಾಬಲ ಗೌಡ ಸಹಿತ ಸುಳ್ಯ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ ತಾಲೂಕು ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಸಂಧ್ಯಾ ಶಶಿಧರ್ ಪ್ರಾರ್ಥಿಸಿದರು. ದಿನೇಶ್ ಮಡಪ್ಪಾಡಿ ಒಟ್ಟು ಕಾರ್ಯಕ್ರಮ ನಿರ್ವಹಿಸಿದರು.
ಒಕ್ಕೂಟವೆಂದು ಬದಲಾಯಿಸುವ ನೋಂದಾವಣೆ ಬಳಿಕ-ಕೂತು ಮಾತನಾಡೋಣ
ನಮಗೂ ಸಂಘ ಒಗ್ಗಟ್ಟಿನಲ್ಲಿರಬೇಕೆಂಬ ಆಸೆ ಇದೆ.ಈ ನಿಟ್ಟಿನಲ್ಲಿ ಸಂಘದ ನೋಂದಾವಣೆ ಆದ ಬಳಿಕ ಕೂತು ಮಾತನಾಡುವ ವ್ಯವಸ್ಥೆ ಮಾಡುವ.ಉದ್ದೇಶ ನಮಗೆ ರಾಜಕೀಯದ ಉದ್ದೇಶ ಇಲ್ಲ. ಸಮಾಜ ಒಳ್ಳೆಯದಾಗಬೇಕು.ಹಾಗಾಗಿ ಮೊದಲು ನೋಂದಾವಣೆ ಮಾಡುತ್ತೇವೆ.ಬಳಿಕ ಕೂತು ಮಾತನಾಡೋಣ.ಸಂಘದ ಹೆಸರಿನಲ್ಲಿ ಗೊಂದಲ ನಿವಾರಣೆ ಅಗತ್ಯ. ಈಗಾಗಲೇ ಎಲ್ಲಾ ಆರು ತಾಲೂಕಿನಲ್ಲಿ ಸಂಘ ಆಗಿದೆ. ಮಾತೃ ಸಂಘ ಪದ ಗೊಂದಲ ಇದೆ.ನನಗೂ ಇದು ಸಮಂಜಸ ಕಾಣುತ್ತಿಲ್ಲ.ಹಾಗಾಗಿ ಜಿಲ್ಲಾ ಒಕ್ಕೂಟ ಮಾಡುವ ಚಿಂತನೆ ಇದೆ.ಗೌಡರ ಯಾನೆ ಒಕ್ಕಲಿಗ ಸಂಘದ ಜಿಲ್ಲಾ ಒಕ್ಕೂಟ ಮಾಡುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ,ಸಲಹೆ ಪಡೆಯುವುದು ಅಗತ್ಯ
-ಲೋಕಯ್ಯ ಗೌಡ ಮಂಗಳೂರು