ಇಲಾಖೆ ಮಾಡಿದ ತಪ್ಪನ್ನು ತಿದ್ದುಪಡಿ ಮಾಡಲು ಮೂರು ತಿಂಗಳಿನಿಂದ ಸತಾಯಿಸುತ್ತಿರುವ ಕಡಬ ಸರ್ವೆ ಇಲಾಖೆಯ ಅಧಿಕಾರಿಗಳು

0

ಎ.ಡಿ.ಎಲ್.ಆರ್.ನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

ಕಡಬ: ನೆಲ್ಯಾಡಿ ಗ್ರಾಮದ ವ್ಯಕ್ತಿಯೋರ್ವರ ಪಹಣಿಯಲ್ಲಿ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಹೆಚ್ಚುವರಿಯಾಗಿ ಸ್ಟಾರ್ ಸಿಂಬಲ್ ಬಂದಿದ್ದು ಇದರಿಂದ ಜಾಗದ ಮಾಲಕ ಜಾನ್ ರವರಿಗೆ ಜಾಗವನ್ನು ಮಾರಾಟ ಮಾಡಲು ಇನ್ನೀತರ ಯಾವುದೇ ಕೆಲಸಗಳಿಗೆ ತೊಂದರೆ ಉಂಟಾಗಿತ್ತು, ಈ ಹಿನ್ನಲೆಯಲ್ಲಿ ಅವರು ತಿದ್ದುಪಡಿಗಾಗಿ ಕಡಬ ಸರ್ವೆ ಇಲಾಖೆಗೆ ನೀಡಿದ್ದಾರೆ. ಆದರೆ ಕಡಬ ಸರ್ವೆ ಇಲಾಖೆಯಲ್ಲಿ ಸೂಪರ್ವೈಸರ್ ಆಗಿರುವ ಅಧಿಕಾರಿ ಹಾಗೂ ಇತರರು ಹಣ ನೀಡುವಂತೆ ಪೀಡಿಸುತ್ತಿದ್ದು, ಮೂರು ತಿಂಗಳಿನಿಂದ ಸತಾಯಿಸುತ್ತಿದ್ದರು, ಈ ಬಗ್ಗೆ ಜಾನ್ ಅವರು ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಪದವು ಅವರಲ್ಲಿ ವಿಷಯ ತಿಳಿಸಿದ್ದಾರೆ.

ಜೂ.19ರಂದು ಸರ್ವೆ ಇಲಾಖೆಗೆ ಆಗಮಿಸಿದ ರಾಯ್ ಅಬ್ರಹಾಂ ಹಾಗೂ ಸೈಯದ್ ಮೀರಾ ಸಾಹೇಬ್ ಅವರು ಎಡಿಎಲ್ಆರ್ ಶ್ರೀನಿವಾಸ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು, ಈ ಸಂದರ್ಭದಲ್ಲಿ ಸೂಪರ್ವೈಸರ್ ಚಂದ್ರಶೇಖರ ಮೂರ್ತಿ ಅವರನ್ನು ಕರೆಯುವಂತೆ ಹೇಳಿದರು. ಸೂಪರ್ ವೈಸರ್ ಸೇರಿದಂತೆ ತಮ್ಮ ಕೆಳಗಿನ ಅಧಿಕಾರಿ, ಸಿಬ್ಬಂದಿ ಅವರನ್ನು ತನ್ನ ಛೇಂಬರ್ಗೆ ಕರೆಯಲು ಹಿಂದೆ ಮುಂದೆ ನೋಡುತ್ತಿದ್ದರು. ಈ ವೇಳೆ ಮತ್ತೆ ತರಾಟೆಗೆ ತೆಗೆದುಕೊಂಡ ರಾಯ್ ಅಬ್ರಹಾಂ ಅವರು ಏನು ನಿಮ್ಮ ಕಛೇರಿಯ ಅಧಿಕಾರಿಗಳು ನಿಮ್ಮ ಕಂಟ್ರೋಲ್ ನಲ್ಲಿ ಇಲ್ವ, ಇಲ್ಲಿ ಎಲ್ಲ ಕೆಲಸಕ್ಕೂ ದುಡ್ಡು ಕೊಡಬೇಕಲ್ವ, ರೆಕಾರ್ಡ್ ಪಡೆಯುದಕ್ಕೆ ಮತ್ತು ಸರ್ವೆ ಕೆಲಸಗಳಿಗೆ ಎಷ್ಟು ದುಡ್ಡು ಪಡೆಯುತ್ತಿದ್ದಿರಿ?, 50 ಸೆಂಟ್ಸ್ ಜಾಗಕ್ಕೆ 50 ಸಾವಿರ, 75 ಸೆಂಟ್ಸ್ಗೆ 75 ಸಾವಿರ, 1 ಎಕ್ರೆಗೆ 1 ಲಕ್ಷದಂತೆ ತಗೊಳ್ತ ಇದ್ದಿರಲ್ವ ಏನು ನಿಮಗೆ ಸ್ವಲ್ಪನೂ ಮಾನ ಮರ್ಯಾದಿ ಇಲ್ವ?, ಬಡವರಿಂದ ಈ ರೀತಿಯಾಗಿ ಹಣ ಪಡೆದು ಅವರನ್ನು ಸತಾಯಿಸುತ್ತಿದ್ದಿರಲ್ವ, ಹಣ ಕೊಡದಿದ್ದರೆ ಅರಣ್ಯ ಎಂದು ಸುಲಭದಲ್ಲಿ ಬರೆದು ಹಾಕ್ತಿರಿ, ದುಡ್ಡು ಕೊಟ್ಟವರಿಗೆ ಅರಣ್ಯನೂ ಇಲ್ಲ, ಸಾರ್ವಜನಿಕ ಕೆರೆಯೂ ಆಗ್ತದೆ. ಏನು ನೀವು ಇಲ್ಲಿ ಜಾಗ ಮಾರಾಟ ಮಾಡಲು ಕೂತಿದ್ದಿರಾ ಅಥಾವ ಜನರ ಸೇವೆ ಮಾಡಲು ಇದ್ದಿರಾ ಸ್ವಲ್ಪ ಯೋಚನೆ ಮಾಡಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಅಬ್ರಹಾಂ ಅವರು ಜಾನ್ ಅವರ ಸಮಸ್ಯೆಯನ್ನು ಈಗಲೇ ಸರಿ ಮಾಡಿಕೊಡುವಂತೆ ಪಟ್ಟು ಹಿಡಿದರು, ಬಳಿಕ ಈ ಬಗ್ಗೆ ದಾಖಲಾತಿಗಳ ಪ್ರಕ್ರಿಯೆ ಪ್ರಾರಂಭ ಮಾಡಿದ ಸೂಪರ್ವೈಸರ್ ಅವರು ಕೂಡಲೇ ಮಾಡಿ ಕೊಡುತ್ತೇನೆ ಎಂದು ಒಪ್ಪಿಕೊಂಡರು. ಈ ವೇಳೆ ಕಚೇರಿಗೆ ಬಂದಿದ್ದ ಹಲವಾರು ಸಾರ್ವಜನಿಕರು ನಮ್ಮನ್ನು ಹಲವು ತಿಂಗಳುಗಳಿಂದ ಸತಾಯಿಸುತ್ತಿದ್ದಾರೆ ಇವರಿಗೆ ದೇವರೇ ಶಿಕ್ಷೆ ಕೊಡಬೇಕಷ್ಟೆ ಎಂದು ಹೇಳಿಕೊಳ್ಳುತ್ತಿದ್ದರು.

ಕಡಬ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯನ್ನು ಕೇಳುವವರು ಯಾರು?

ಇದೇ ಸಂದರ್ಭದಲ್ಲಿ ಅಲ್ಲಿದ್ದ ಹಲವಾರು ಅರ್ಜಿದಾರರು ಪ್ರತಿಕ್ರಿಯೆ ನೀಡಿ, ಇಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಡದೆ ಒಂದು ಪೈಲು ಮುಂದಕ್ಕೆ ಹೋಗುವುದಿಲ್ಲ, ಇವರನ್ನು ಕೇಳುವವರು ಯಾರು, ಇಲ್ಲಿ ಜನಪ್ರತಿನಿಧಿಗಳೇ ಬ್ರೋಕರ್ ಗಳ ಹಾಗೆ ಕೆಲಸ ಮಾಡುತ್ತಿದ್ದಾರೆ, ಅದೇ ಈ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆಯಾಗಿದೆ. ಈ ಮಧ್ಯೆ ಬಡವರು ತಮ್ಮ ಕೆಲಸಕ್ಕೆ ಪ್ರತಿದಿನ ಬರುವುದಕ್ಕೆ ದುಡ್ಡು ಕೊಟ್ಟು ಹೇಗಾದರೂ ಮಾಡಿಸುತ್ತಿದ್ದಾರೆ ಇದು ಕಡಬದ ಪರಿಸ್ಥಿತಿ, ದೊಡ್ಡ ಅಧಿಕಾರಿಗಳು ದುಡ್ಡು ಕೇಳಿಯೇ ಪಡೆಯುತ್ತಿದ್ದಾರೆ, ಮತ್ತೆ ಅವರ ಕೆಲಗಿನ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ರಾಜರೋಷವಾಗಿ ಲಂಚ ಪಡೆಯುತ್ತಿದ್ದಾರೆ ಎಂದು ಅಲ್ಲಿದ್ದವರು ಹೇಳುತ್ತಿದ್ದರು.

LEAVE A REPLY

Please enter your comment!
Please enter your name here