ಉಪ್ಪಿನಂಗಡಿ: ಜೂ 21; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಮ್ಮಾರ ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಮಾತನಾಡಿ, ಶಾರೀರಿಕ, ಮಾನಸಿಕ, ಬೌದ್ಧಿಕ ಆರೋಗ್ಯಕ್ಕಾಗಿ ಹಾಗೂ ಶ್ರದ್ಧೆ, ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುವಲ್ಲಿ ಯೋಗ ಅತ್ಯಂತ ಪ್ರಯೋಜನಕಾರಿಯಾಗಿದೆ. ಅಂತಾರಾಷ್ಟ್ರೀಯ ಯೋಗ ದಿನವಾದ ಇಂದಿನಿಂದ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು, ಪ್ರತಿ ದಿನ ಯೋಗ ಮಾಡುವ ಸಂಕಲ್ಪ ಮಾಡೋಣ ಎಂದು ಯೋಗ ದಿನದ ಶುಭಾಶಯ ನುಡಿಯಲ್ಲಿ ತಿಳಿಸಿದರು.
ಕೆಮ್ಮಾರ ಸರಕಾರಿ ಶಾಲೆಯ ಮುಖ್ಯಗುರು ಜಯಶ್ರೀ ಎಂ ಮಾತನಾಡಿ, ನಿರಂತರ ಯೋಗ ಅಭ್ಯಾಸದಿಂದ ಶರೀರ, ಮನಸ್ಸು, ಇಂದ್ರಿಯದ ಕಲ್ಮಶಗಳು ದೂರವಾಗಿ ನಿರ್ಮಲವಾದ ಮನಸ್ಸು ಸ್ವಾಧೀನಕ್ಕೆ ಬರುತ್ತದೆ. ಬುದ್ದಿ ಸೂಕ್ಷ್ಮ ರೂಪಗೊಂಡು, ಕಠಿಣ ಮತ್ತು ಸೂಕ್ಷ್ಮ ವಿಷಯಗಳನ್ನು ಶೀಘ್ರವಾಗಿ ಗೃಹಣ ಮಾಡಲು ಸಾದ್ಯವಾಗುದಲ್ಲದೆ ಯೋಗದಿಂದ ಚಿರಂಜೀವಿಯಾಗಿ ಕೆಲಸಮಾಡುತ್ತದೆ. ಯೋಗದ ಅಭ್ಯಾಸ ಅನುಸಂಧಾನ ಮಾಡಿಕೊಂಡಾಗ ಸ್ವಾರ್ಥ, ದುರಾಸೆ, ಅಸೂಯೆ, ಕೋಪ ಎಂಬ ಮನಸ್ಸಿನ ಪೊರೆಯನ್ನು ಕಳಚಿದಾಗ ಶೃದ್ಧೆ, ಭಕ್ತಿ, ನಿಷ್ಠೆ, ಶರಣಾಗತಿ ಅಂತರಂಗದ ಸಿರಿ ಹೆಚ್ಚಿಸಿದಷ್ಟು ಬಹಿರಂಗದಲ್ಲಿ ನಲಿವು ಗೆಲುವು ನಮ್ಮದಾಗಿ, ಸದ್ಭಾವ- ಸದ್ಗುಣಗಳು, ಸದಾಚಾರ, ಸೇವಾ ಮನೋಭಾವನೆಯಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಮನಮುಟ್ಟುವಂತೆ ವಿವರಿಸಿದರು.
ಅಂತರಾಷ್ಟ್ರೀಯ ಯೋಗ ದಿನದ ನೇತೃತ್ವ ವಹಿಸಿದ್ದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ ಶಾಲಾ ಮಕ್ಕಳಿಗೆ ಮತ್ತು ಶಾಲಾ ಸಮಿತಿಯ ಸರ್ವರಿಗೂ ಯೋಗಾಭ್ಯಾಸವನ್ನು ನಿರ್ವಹಿಸಿಕೊಟ್ಟರು.
|ಯೋಗ ಕ್ಷೇಮಂ ಮಹಾಮ್ಯಾಹಂ| ಎನ್ನುವಂತೆ ದಿನನಿತ್ಯ ಯೋಗ ಧ್ಯಾನ, ಪ್ರಾಣಾಯಾಮದ ಆತ್ಮಬಲ ವೃಧ್ದಿಸಿಕೊಂಡರೆ ಪರಸ್ಪರ ಸಹಬಾಳ್ವೆಯ ಜೀವನ ಮತ್ತು ಸುಂದರ ಬದುಕು ನಮ್ಮದಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರೆಬಂಡಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಾರಿಜಾಕ್ಷಿ ಶುಭಹಾರೈಸಿದರು. ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅಕ್ಷರ ದಾಸೋಹ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.