ಪುತ್ತೂರು: ಕುಂಬ್ರಕ್ಕೆ ಮತ್ತೆ ಕೆಎಸ್‌ಆರ್‌ಟಿಸಿ ಸಿಟಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ.ಆರ್‌ರವರಿಗೆ ಕುಂಬ್ರ ವರ್ತಕರ ಸಂಘದ ವತಿಯಿಂದ ಜೂ.22 ರಂದು ಶಾಲು ಹಾಕಿ, ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಲಾಯಿತು. ಪುತ್ತೂರು ಡಿಫೋಗೆ ತೆರಳಿದ ವರ್ತಕರ ನಿಯೋಗವು ಸಂಘದ ಮನವಿಗೆ ಶೀಘ್ರ ಸ್ಪಂದನೆ ನೀಡುವ ಮೂಲಕ ಕುಂಬ್ರಕ್ಕೆ ಸಿಟಿ ಬಸ್ಸು ವ್ಯವಸ್ಥೆ ಕಲ್ಪಿಸುವ ಮೂಲಕ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ಕುಂಬ್ರದಿಂದ ಪುತ್ತೂರಿಗೆ ಬರುವ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.30 ರ ಸಮಯಕ್ಕೆ ಸರಿಯಾಗಿ ಬಸ್ಸು ಇಲ್ಲದೆ ಇರುವುದರಿಂದ ನೇತಾಡಿಕೊಂಡು ಬರಬೇಕಾದ ಅನಿವಾರ್ಯತೆ ಇತ್ತು. ಈ ಬಗ್ಗೆ ವರ್ತಕರ ಸಂಘವು ಕೆಎಸ್‌ಆರ್‌ಟಿಸಿ ಡಿಸಿಗೆ ಮನವಿ ಮಾಡಿಕೊಂಡಿತ್ತು. ಅದರಂತೆ ಇದೀಗ ಸಿಟಿ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ನಿಟ್ಟಿನಲ್ಲಿ ಡಿಸಿ.ಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಸದಸ್ಯರಾದ ಜಯರಾಮ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ 8.30 ಕ್ಕೆ ಬಸ್ಸು ಬರಲಿ
ಕಳೆದ ಕೆಲವು ದಿನಗಳಿಂದ ಬಸ್ಸು 9 ಗಂಟೆಗೆ ಹೊತ್ತಿಗೆ ಕುಂಬ್ರಕ್ಕೆ ಬರುತ್ತಿರುವುದರಿಂದ ಸಮಸ್ಯೆಯಾಗಿದೆ.ಈ ವೇಳೆಗಾಗಲೇ ಮಕ್ಕಳು ಇತರ ಬಸ್ಸುಗಳಲ್ಲಿ ನೇತಾಡಿಕೊಂಡು ಹೋಗಿರುತ್ತಾರೆ. ಶಾಲಾ ಸಮಯಕ್ಕೆ ತಲುಪಬೇಕಾದ ಅಗತ್ಯತೆ ಇರುವುದರಿಂದ ಕುಂಬ್ರಕ್ಕೆ ಬೆಳಿಗ್ಗೆ 8.30 ರ ಹೊತ್ತಿಗೆ ಬಸ್ಸು ಬಂದರೆ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಅಥವಾ 8.15 ಕ್ಕೆ ಬಂದರೂ ತೊಂದರೆ ಇಲ್ಲ. 9 ಗಂಟೆಗೆ ಬರುವುದರಿಂದ ಇದು ವಿದ್ಯಾರ್ಥಿಗಳಿಗೆ ಶಾಲಾ,ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಂಘದ ಪದಾಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದರು.