ಬೆಟ್ಟಂಪಾಡಿ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಅನುಷ್ಠಾನ

0

ಬೆಟ್ಟಂಪಾಡಿ:ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯವು ಸಂಪೂರ್ಣ ಗಣಕೀಕೃತ ಸೇವೆಯನ್ನು ನೀಡುತ್ತಿದ್ದು ಮಂಗಳೂರಿನ ಎಡ್ ವೈಸ್ ಲರ್ನ್ ಸಂಸ್ಥೆಯ ಸಹಯೋಗದೊಂದಿಗೆ ಡಿಜಿಟಲ್ ಗ್ರಂಥಾಲಯವನ್ನು ಜೂ. 24 ರಂದು ಅನುಷ್ಠಾನ ಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಿ ‘ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಜೊತೆಗೆ ಡಿಜಿಟಲ್ ಗ್ರಂಥಾಲಯ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಯುಕ್ತವಾಗಿ ಬಳಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು. ಕಾಲೇಜಿನ ಗ್ರಂಥಪಾಲಕ ರಾಮ ಕೆ. ಡಿಜಿಟಲ್ ಗ್ರಂಥಾಲಯದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಕಾಲೇಜಿನ ಗ್ರಂಥಾಲಯದಲ್ಲಿ ನೂತನವಾಗಿ ಆರಂಭಗೊಂಡ ಈ ಸೇವೆಯಲ್ಲಿ ವಿದ್ಯಾರ್ಥಿಗಳು 24 X 7 ಯಾವುದೇ ಸಮಯದಲ್ಲಿ ಪಠ್ಯ ಪುಸ್ತಕಗಳು, ಪರಾಮರ್ಶನ ಗ್ರಂಥಗಳು, ದಿನ ಪತ್ರಿಕೆಗಳು, ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು, ಪದವಿ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಮೊಬೈಲ್ ಮತ್ತು ಕಂಪ್ಯೂಟರ್ ಬಳಸಿಕೊಂಡು ಪಡೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪೊಡಿಯ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಗಾಯತ್ರಿ, ಎಡ್ ವೈಸ್ ಲರ್ನ್ ಸಂಸ್ಥೆಯ ಧೀರಜ್, ಪ್ರತಿಮಾ, ಅನುಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಿಜಿಟಲ್ ಗ್ರಂಥಾಲಯ ಅನುಷ್ಠಾನಗೊಳಿಸಲು ಕಾಲೇಜಿನ 2023-24ನೇ ಸಾಲಿನ ವಾಣಿಜ್ಯಶಾಸ್ತ್ರ ಸಂಘದ ವಿದ್ಯಾರ್ಥಿಗಳು ಸಂಪನ್ಮೂಲವನ್ನು ಕ್ರೋಢೀಕರಿಸಿ ಸಹಕರಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here