ವಿವೇಕಾನಂದ ಆಂ.ಮಾ. ಮುಖ್ಯಗುರು ಸತೀಶ್‌ ಕುಮಾರ್‌ ರೈಯವರಿಗೆ ಸೈನ್ಸ್‌ ಒಲಿಂಪಿಯಾಡ್‌ ಫೌಂಡೇಶನ್‌ ಬೆಸ್ಟ್‌ ಪ್ರಿನ್ಸಿಪಾಲ್‌ ಅವಾರ್ಡ್‌

0

ಪುತ್ತೂರು: ಜಗತ್ತಿನ ಅತೀ ದೊಡ್ಡ ಒಲಿಂಪಿಯಾಡ್ಸ್‌ ಆಗಿರುವ ಸೈನ್ಸ್‌ ಒಲಿಂಪಿಯಾಡ್ಸ್‌ ಫೌಂಡೇಶನ್‌ ವತಿಯಿಂದ ನೀಡಲಾಗುವ ʻಬೆಸ್ಟ್‌ ಡಿಸ್ಟ್ರಿಕ್ಟ್‌ ಪ್ರಿನ್ಸಿಪಾಲ್‌ ಅವಾರ್ಡ್‌ʼ ಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸತೀಶ್‌ ಕುಮಾರ್‌ ರೈಯವರು ಭಾಜನರಾಗಿದ್ದಾರೆ.


ಜಗತ್ತಿನ ಸುಮಾರು 70 ರಾಷ್ಟ್ರಗಳ 90 ಸಾವಿರಕ್ಕಿಂತಲೂ ಅಧಿಕ ಶಾಲೆಗಳ ಮಿಲಿಯನ್‌ ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೂ ಭಾಗವಹಿಸಿ ಅತ್ಯುತ್ತಮ ಅಂಕಗಳೊಂದಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ತೋರಿರುವ ಹಿನ್ನೆಲೆಯಲ್ಲಿ ಈ ಶಾಲೆಯ ಮುಖ್ಯಗುರು ಸತೀಶ್‌ ಕುಮಾರ್‌ ರೈಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಆಕರ್ಷಕ ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

2008 ರಲ್ಲಿ ಇವರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸಹಾಯಕ ಮುಖ್ಯಗುರುವಾಗಿ ಕರ್ತವ್ಯ ಆರಂಭಿಸಿ 2010 ರಿಂದ ಮುಖ್ಯಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಗುರುವಾಗಿ ಅಧಿಕಾರ ವಹಿಸಿದ ಮೇಲೆ ಶಾಲೆಯ ವಿದ್ಯಾರ್ಥಿಗಳು ಅನೇಕ ವಿಷಯಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಿದೆ. ಶೈಕ್ಷಣಿಕವಾಗಿಯೂ ಪ್ರತೀ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ಇಲ್ಲಿನ ವಿದ್ಯಾರ್ಥಿಗಳು ವಿಶೇಷ ಸ್ಥಾನಗಳನ್ನು ಪಡೆದುಕೊಂಡು ಬರುತ್ತಿದ್ದಾರೆ. ಪಠ್ಯಪೂರಕ ವಿಷಯಗಳಾದ ಕ್ರೀಡೆ, ಈಜು, ಚೆಸ್, ವಿಜ್ಞಾನ ಮಾದರಿ, ಸಂಸ್ಕೃತ ಪರೀಕ್ಷೆಗಳು, ವಿದ್ಯಾಭಾರತಿಯ ಅಖಿಲ ಭಾರತೀಯ ವಿಜ್ಞಾನಮೇಳಗಳು ಸೇರಿದಂತೆ ಹಲವು ವಿಷಯಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯುತ್ತಿದ್ದಾರೆ. ಶಾಲೆಯ ಬೆಳ್ಳಿಹಬ್ಬ ಮತ್ತು ಚಿಣ್ಣರ ಮೇಳ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿತ್ತು.


ಶಾಲೆಯಲ್ಲಿ  ಸುಮಾರು 2000 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿದ್ದು, ನೂರಕ್ಕೂ ಮಿಕ್ಕಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಶಾಲಾ ಚಟುವಟಿಕೆಗಳು ನಿರಂತರವಾಗಿ ನಡೆಯಲು ಮತ್ತು ಸುಸೂತ್ರವಾಗಿ ನಡೆಯಲು ಸತೀಶ್ ಕುಮಾರ್ ರೈಯವರ ಮೇಲ್ವಿಚಾರಣೆ ಪರಿಣಾಮಕಾರಿಯಾಗಿದೆ‌. ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ಪೂರಕ ವಿಷಯಗಳಲ್ಲಿ ಹೆಚ್ಚಿನ ಕೌಶಲ್ಯ ಮತ್ತು ಜ್ಞಾನಾಭಿವೃದ್ಧಿಗಾಗಿ ಹತ್ತು ಹಲವು ವಿಷಯಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿಟ್ಟಿನಲ್ಲಿ ಅವಕಾಶಗಳನ್ನು ತೆರೆದುಕೊಡುವಲ್ಲಿ ಸತೀಶ್ ಕುಮಾರ್ ರೈಯವರು ಮುತುವರ್ಜಿ ವಹಿಸುತ್ತಿದ್ದಾರೆ. ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲದೇ 100 ಕ್ಕೂ ಅಧಿಕ ಶಿಕ್ಷಕರ ತಂಡ ಮತ್ತು ಶಾಲೆಯ ಭೌತಿಕ ನಿರ್ವಹಣೆಯಲ್ಲಿ ಇವರ ಜಾಣ್ಮೆ ಮತ್ತು ಚಾಕಚಕ್ಯತೆಗೆ ಸರಿಸಾಟಿಯಿರಲಾರದು. ಶಾಲೆಯೇ ತನ್ನ ಸರ್ವಸ್ವ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಹಗಲು ರಾತ್ರಿ ಶಾಲೆಯ ಬೆಳವಣಿಗೆಯಲ್ಲಿ ಶ್ರಮವಹಿಸುತ್ತಿದ್ದಾರೆ. ಇವರ ಕಾರ್ಯವೈಖರಿ ನೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ  ಹೆಚ್ಚಿನ ಕಾರ್ಯಕ್ರಮಗಳು ಇಲ್ಲಿ ಆಯೋಜಿಸಲ್ಪಡುತ್ತವೆ. ಮಣಿಪುರ ಮತ್ತು ಮೇಘಾಲಯದ ವಿದ್ಯಾರ್ಥಿಗಳ ಕಾಠಿಣ್ಯತೆಯನ್ನು ನಿವಾರಿಸಿ ಅವರಲ್ಲಿ ಮೃದು ಸ್ವಭಾವ ತರುವಲ್ಲಿ ಹಾಗೂ ಕಲಿಕೆಯಲ್ಲಿ ಆಸಕ್ತಿ ತರುವಲ್ಲಿಯೂ ಇವರ ಶ್ರಮ ಅಪಾರವಾದುದು. ಇವರ ಶಾಲೆಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ವಿದ್ಯಾರ್ಥಿಗಳ ಪೋಷಕರಿಂದಲೂ ಮೆಚ್ಚುಗೆಯ ಮಾತುಗಳಿವೆ.

LEAVE A REPLY

Please enter your comment!
Please enter your name here