ಉಪ್ಪಿನಂಗಡಿ: ಅಜ್ಮೀರ್ ಯಾತ್ರೆಗೆಂದು ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋದ ಸಂಸ್ಥೆಯೊಂದು ಅಲ್ಲಿ ತಲುಪಿದ ಮೇಲೆ ಮೊದಲೇ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚುವರಿ ಹಣದ ಬೇಡಿಕೆಯಿಟ್ಟ ಬಗ್ಗೆ ಬೆಂಗಳೂರು ನಿವಾಸಿಯೋರ್ವರು ಉಪ್ಪಿನಂಗಡಿ ಮೂಲದ ಟೂರ್ ಸಂಸ್ಥೆಯೊಂದರ ಮೇಲೆ ಬೆಂಗಳೂರಿನ ಪದ್ಮನಾಭ ನಗರದ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ಮಿನಾಜ್ ನಗರದ ನಿವಾಸಿ ಅಬ್ದುಲ್ ರಝಾಕ್ ಎನ್. ಎಂಬವರು ಉಪ್ಪಿನಂಗಡಿ ಮೂಲದ ಜಲಾಲಿಯ ಅಜ್ಮಿರ್ ಝಿಯಾರತ್ ಟೂರ್ ಸಂಸ್ಥೆಯ ವಿರುದ್ಧ ದೂರು ನೀಡಿದ್ದು, ಈ ಟೂರ್ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ನೀಡಿದ ಜಾಹೀರಾತನ್ನು ನೋಡಿ ಆ ಸಂಸ್ಥೆಯ ಮುಖ್ಯಸ್ಥರಾದ ಫಾರೂಕ್ ಎಂಬ ವ್ಯಕ್ತಿಯನ್ನು ನಾನು ವಿಚಾರಿಸಿದ್ದು, ಒಬ್ಬ ವ್ಯಕ್ತಿಗೆ ಏಳು ಸಾವಿರ ರೂಪಾಯಿ ನೀಡಬೇಕು. ಅದರಲ್ಲಿ ರೈಲು ಟಿಕೇಟು, ಉಳಿದುಕೊಳ್ಳಲು ರೂಂ ಮತ್ತು ಊಟದ ವ್ಯವಸ್ಥೆ ಎಲ್ಲಾ ನಮ್ಮದೇ. ರೈಲಿನಲ್ಲಿ ಮಾತ್ರ ಊಟದ ವೆಚ್ಚ ನಿಮ್ಮದೆಂದು ಹೇಳಿದ್ದರು. ಅದರಂತೆ ನಾನು ನನ್ನ ಕುಟುಂಬದ ಎಂಟು ಮಂದಿ ಸದಸ್ಯರನ್ನು ಅಜ್ಮೀರ್ ಯಾತ್ರೆಗೆ ಕಳುಹಿಸಿಕೊಟ್ಟಿದ್ದು, ಅಜ್ಮೀರ್‌ಗೆ ಹೋದ ಬಳಿಕ ಫಾರೂಕ್ ಅವರು ಪ್ರತಿಯೋರ್ವ ಸದಸ್ಯರಿಗೆ ಐದು ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕೆಂದು ನನಗೆ ಕಾಲ್ ಮಾಡಿ ತಿಳಿಸಿದ್ದು, ಹಣ ಕೊಡದಿದ್ದರೆ ಅವರನ್ನು ಇಲ್ಲಿಯೇ ಬಿಟ್ಟು ಬರುತ್ತೇನೆ ಎಂದಿದ್ದರು. ಆಗ ನಾನು ನಮ್ಮ ಸದಸ್ಯರನ್ನು ಅಲ್ಲಿಯೇ ಬಿಟ್ಟು ಬಂದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ತಿಳಿಸಿದಾಗ, ಪೊಲೀಸರಿಗೆ ದೂರು ನೀಡಿದರೆ ನಿಮ್ಮನ್ನು ಎಲ್ಲಿಗೋದರೂ ಬಿಡುವುದಿಲ್ಲ ಎಂದು ಆತ ಹೇಳಿದ್ದಲ್ಲದೆ, ಅವ್ಯಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾನೆ ಎಂದು ಅಬ್ದುಲ್ ರಝಾಕ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.