ರಾಮಕುಂಜ: ಆಟೋ ರಿಕ್ಷಾವೊಂದರಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ದನದ ಮಾಂಸ ಹಾಗೂ ಆಟೋ ರಿಕ್ಷಾ ವಶಪಡಿಸಿಕೊಂಡಿರುವ ಘಟನೆ ಜೂ.30ರಂದು ಮಧ್ಯಾಹ್ನ ರಾಮಕುಂಜದಲ್ಲಿ ನಡೆದಿದೆ. ಈ ಪ್ರಕರಣದ ಇನ್ನಿತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ರಾಮಕುಂಜ ಗ್ರಾಮದ ಅಮೈ ನಿವಾಸಿ ಅಬ್ದುಲ್ಲಾ ಬಂಧಿತ ಆರೋಪಿ. ಈತನ ಅಣ್ಣ ಹಮೀದ್ ಹಾಗೂ ಕೊಯಿಲ ನಿವಾಸಿ ಇಸ್ಮಾಯಿಲ್ ತಲೆಮರೆಸಿಕೊಂಡಿದ್ದಾರೆ. ಕಡಬ ಪಿಎಸ್‌ಐ ಅಭಿನಂದನ ಎಂ.ಎಸ್.ಹಾಗೂ ಸಿಬ್ಬಂದಿಗಳು ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಕೊಯಿಲ ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ ಕೆಎ 21, ಸಿ 4686 ನೋಂದಾವಣೆಯ ರಿಕ್ಷಾವನ್ನು ಅದರ ಚಾಲಕ ಅಮೈ ನಿವಾಸಿ ಅಬ್ದುಲ್ಲಾ ಪೊಲೀಸರನ್ನು ನೋಡಿ ರಿಕ್ಷಾವನ್ನು ಶಾರದಾನಗರದ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು ಪೊಲೀಸರು ಬೆನ್ನಟ್ಟಿ ಅಮೈ ಎಂಬಲ್ಲಿ ಆಟೋ ರಿಕ್ಷಾ ನಿಲ್ಲಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಿಕ್ಷಾದಲ್ಲಿ 2 ಪ್ಲಾಸ್ಟಿಕ್ ಚೀಲದಲ್ಲಿ ದನದ ಮಾಂಸದ ಕಟ್ಟು ಪತ್ತೆಯಾಗಿದೆ. ಅಬ್ದುಲ್ಲಾ ತನ್ನ ಮನೆಯಲ್ಲಿದ್ದ ದನವನ್ನು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಅಣ್ಣ ಹಮೀದ್‌ನ ನೆರವಿನೊಂದಿಗೆ ಕೆಎ 51, ಡಿ 0455ನಂಬ್ರದ ಪಿಕಪ್ ವಾಹನದಲ್ಲಿ ಕೊಯಿಲ ನಿವಾಸಿ ಇಸ್ಮಾಯಿಲ್‌ನ ಮನೆ ಹತ್ತಿರಕ್ಕೆ ಕೊಂಡೊಯ್ದು ಅಲ್ಲಿ ವಧೆ ಮಾಡಿ ಮಾಂಸವನ್ನು ಪ್ಲಾಸ್ಟಿಕ್ ಕವರ್‌ಗೆ ತೂಕ ಮಾಡಿ ತುಂಬಿಸಿ ಮಾರಾಟ ಮಾಡಲು ತೆಗೆದುಕೊಂಡು ಬರುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ. ಬಳಿಕ ಪೊಲೀಸರು ಆಟೋ ರಿಕ್ಷಾದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತಲಾ 5 ಕೆ.ಜಿ.ಯಂತೆ ತೂಕ ಮಾಡಿದ್ದ 8 ಪ್ಯಾಕೇಟ್‌ಗಳು, ಮತ್ತೊಂದು ಚೀಲದಲ್ಲಿ ತಲಾ 2 ಕೆ.ಜಿ.ಯಂತೆ ತೂಕ ಮಾಡಿದ್ದ 6 ಪ್ಯಾಕೇಟ್‌ಗಳು ಹಾಗೂ 1 ಕೆ.ಜಿಯಂತೆ ತೂಕ ಮಾಡಿದ್ದ 10 ಪ್ಯಾಕೇಟು ಸೇರಿ ಒಟ್ಟು 62 ಕೆ.ಜಿ.ದನದ ಮಾಂಸ ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ವಧೆ ಮಾಡಲು ಉಪಯೋಗಿಸಿದ್ದ 1 ಮರದ ತುಂಡು, 2 ಕಬ್ಬಿಣದ ಸತ್ತಾರ್, 2 ಚಾಕು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾಂಸದ ಮೌಲ್ಯ ರೂ.14,400 ಹಾಗೂ ಆಟೋ ರಿಕ್ಷಾದ ಮೌಲ್ಯ ರೂ. 1 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಇಸ್ಮಾಯಿಲ್ ಹಾಗೂ ಹಮೀದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್.ಅವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಪಿಎಸ್‌ಐ ಅಭಿನಂದನ್ ಎಂ.ಎಸ್., ಹೆಡ್‌ಕಾನ್‌ಸ್ಟೇಬಲ್‌ಗಳಾದ ಹರೀಶ್, ಶೀನಪ್ಪ, ಭವಿತ್, ಮಹೇಶ್, ಕಾನ್‌ಸ್ಟೇಬಲ್‌ಗಳಾದ ಶ್ರೀಶೈಲ, ವಿನೋದ್, ಸೋಮಯ್ಯರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.