ಪುತ್ತೂರು: ಸಮಾಜಮುಖಿ ಸೇವೆಗೆ ಹೆಸರಾದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ 2024-25ನೇ ಸಾಲಿನ ವಲಯ ಸೇನಾನಿಯಾಗಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಕಟಪೂರ್ವ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ರವರು ನೇಮಕಗೊಂಡಿದ್ದಾರೆ.
ಲಿಗೋರಿ ಎಸ್. ಮೊಂತೇರೊ ಹಾಗೂ ಮೇರಿ ಮೊಂತೇರೊರವರ ಪುತ್ರಿಯಾಗಿ ಮಂಗಳೂರಿನಲ್ಲಿ ಜನಿಸಿದ ಗ್ರೇಸಿ ಗೊನ್ಸಾಲ್ವಿಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಮಂಗಳೂರಿನಲ್ಲಿ ವಿದ್ಯಾಭ್ಯಾಸಗೈಯ್ದು, ಮಂಗಳೂರಿನ ಪ್ರತಿಷ್ಠಿತ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ ಇಲ್ಲಿ ಎಂ.ಎಸ್.ಡಬ್ಲ್ಯೂ ಪದವಿ ಪಡೆದ ನಂತರ 2 ವರ್ಷ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ.
1985ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ನೇಮಕಗೊಂಡು1985-89ರ ವರೆಗೆ ದಾವಣಗೆರೆಯಲ್ಲಿ 4 ವರ್ಷ ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ, 1989ರಿಂದ 2004ರ ವರೆಗೆ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಡಿಪಿಒ ಆಗಿ ಸುಳ್ಯದಲ್ಲಿ 3 ವರ್ಷ, ಪುತ್ತೂರಿನಲ್ಲಿ 7 ವರ್ಷ, ಬಂಟ್ವಾಳದಲ್ಲಿ 5 ವರ್ಷ ಸೇವೆ, ನಂತರ ಇದೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಗೆ ಭಡ್ತಿ ಹೊಂದಿ ಮಂಗಳೂರಿನಲ್ಲಿ 8 ವರ್ಷ ವಿವಿಧ ಹುದ್ದೆಯಲ್ಲಿ ಸೇವೆ, ನಂತರ ಡೆಪ್ಯುಟಿ ನಿರ್ದೇಶಕ ಹುದ್ದೆಗೆ ಭಡ್ತಿ ಹೊಂದಿ ಉಡುಪಿಯಲ್ಲಿ 5 ವರ್ಷ ಸೇವೆ ಸಲ್ಲಿಸಿ, ರಾಜ್ಯ ಮಟ್ಟದ ಹುದ್ದೆಗೆ ಭಡ್ತಿ ಹೊಂದಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಎಪ್ರಿಲ್ 2020ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.
ಬನ್ನೂರು ನಿವಾಸಿ, ನಿಕಟಪೂರ್ವ ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ರವರ ಪತ್ನಿಯಾಗಿರುವ ಗ್ರೇಸಿ ಗೊನ್ಸಾಲ್ವಿಸ್ ರವರು ಸರಕಾರಿ ಸೇವೆಯಲ್ಲಿ ಇರುವಾಗಲೇ ರೋಟರಿ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ನಿವೃತ್ತಿ ಜೀವನದ ಪ್ರಾರಂಭದಲ್ಲೇ 2021ರಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಸದಸ್ಯರಾಗಿರುತ್ತಾರೆ. ಸದಸ್ಯರಾಗಿ ಕೇವಲ 2 ವರ್ಷದ ಅವಧಿಯಲ್ಲಿ ಕ್ಲಬ್ನ 21ನೇ ವರ್ಷಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕ್ಲಬ್ ಅನ್ನು ಯಶಸ್ವಿಯಾಗಿ ಪೂರೈಸಿ ಇದೀಗ ರೋಟರಿ ಜಿಲ್ಲೆ 3181ರ ವಲಯ 4ರ ವಲಯ ಸೇನಾನಿಯಾಗಿ ಸೇವೆ ಸಲ್ಲಿಸಲಿದ್ದಾರೆ.