ಪಂಚಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಸುವರ್ಣ ಮಹೋತ್ಸವದ ಪೂರ್ವಭಾವಿ ಸಭೆ

0

ಈಶ್ವರಮಂಗಲ : ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆ 50 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಸಲುವಾಗಿ ಪೂರ್ವ ಭಾವಿ ಸಭೆ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಶಶಿಧರ್ ರೈ ಕುತ್ಯಾಳ ಅವರನ್ನು ಆಯ್ಕೆ ಮಾಡಲಾಯಿತು.


ಶಾಲಾ ಆಡಳಿತ ಮಂಡಳಿಯ ಸಂಚಾಲಕ ಬಿ.ಸರ್ವೋತ್ತಮ ಬೋರ್ಕರ್ ಅವರು ಪ್ರಸ್ತಾವಿಕ ಮಾತನಾಡಿ, ಪಂಚಲಿಂಗೇಶ್ವರ ಪ್ರೌಢ ಶಾಲೆ ಈ ವರ್ಷ 50 ವರ್ಷಗಳನ್ನು ಪೂರೈಸಿದ್ದು, ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಶಾಲೆಗೆ ಅಗತ್ಯವಿರುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಕ್ರೀಡಾಂಗಣದ ವಿಸ್ತರಣೆಯೊಂದಿಗೆ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಹಳೆಯ ವಿದ್ಯಾರ್ಥಿ ಸಂಘವೂ ಇಲ್ಲಿ ಸಕ್ರಿಯವಾಗಿದ್ದು, ಆರಂಭಿಕ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸುವರ್ಣ ಮಹೋತ್ಸವ ಆಚರಣೆಗೆ ಸಂಪೂರ್ಣ ಸಹಕಾರದ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಆರಂಭಿಕ ಸಭೆಯಲ್ಲಿ ಪರಿಪೂರ್ಣ ಸಮಿತಿ ರಚನೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯಾಗಬೇಕಿದೆ ಎಂದರು.


ಶಾಲಾ ನಿವೃತ್ತ ಶಿಕ್ಷಕ ನಾಗಪ್ಪ ಗೌಡ ಬೊಮ್ಮೆಟ್ಟಿ ಅವರು ಮಾತನಾಡಿ, ಈ ಶಾಲೆ ನಮಗೆ ಬದುಕು ಕಟ್ಟಿಕೊಟ್ಟಿದೆ. ಹಾಗಾಗಿ ಶಾಲೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸುವರ್ಣ ಮಹೋತ್ಸವ ಆಚರಣೆಗೆ ತನ್ನ ಪೂರ್ಣ ಸಹಕಾರವಿದೆ ಎಂದರು. ಅಲ್ಲದೆ ರೂ.25 ಸಾವಿರವನ್ನು ಸುವರ್ಣ ಮಹೋತ್ಸವ ಸಮಿತಿಗೆ ಮೊದಲ ದೇಣಿಗೆಯಾಗಿ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಭಟ್ ಅವರು ಮಾತನಾಡಿ, ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ಕೆ ಸಹಕರಿಸಬೇಕಾದುದು ನಮ್ಮ ಕರ್ತವ್ಯ. ಸುವರ್ಣ ಮಹೋತ್ಸವ ಆಚರಣೆಗೆ ನನ್ನ ಪೂರ್ಣ ಸಹಕಾರವಿದೆ. ಇಲ್ಲಿ ಶಿಕ್ಷಣ ಕಲಿತ ಎಲ್ಲರೂ ಸಹಕಾರ ನೀಡುತ್ತಾರೆ ಎಂಬ ನಂಬಿಕೆಯೂ ಇದೆ. ಎಲ್ಲರೂ ಸೇರಿಕೊಂಡು ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸೋಣ ಎಂದರು.


ಸಭೆಯಲ್ಲಿ ಅಂಗೀಕರಿಸಿದ ತೀರ್ಮಾನಗಳು…
ಪ್ರಸ್ತುತ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಸುವ್ಯವಸ್ಥಿತ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡುವುದು. ಪ್ರಸ್ತುತ ಇರುವ ಶಾಲಾ ಕ್ರೀಡಾಂಗಣವನ್ನು ವಿಸ್ತರಣೆ ಮಾಡಿ ಸುವ್ಯವಸ್ಥಿತ ಕ್ರೀಡಾಂಗಣವಾಗಿ ರೂಪುಗೊಳಿಸುವುದು. ಸುವರ್ಣ ಮಹೋತ್ಸವವನ್ನು ವಿಭಿನ್ನ ಕಾರ್ಯಕ್ರಮಗಳೊಂದಿಗೆ ನಡೆಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪಿ.ಸೀತಾರಾಮ ಭಟ್ ಬರಕ್ಕೆರೆ, ನಿರ್ದೇಶಕರಾದ ಕೊಂಕಣಿಗುಂಡಿ ಕೃಷ್ಣಪ್ಪ ಗೌಡ, ಎಸ್.ರಾಧಾಕೃಷ್ಣ ಭಂಡಾರಿ ಸರ್ವತ್ತೋಡಿ, ಅಶ್ವಿತ್ ಎಂ ಮೆಣಸಿನಕಾನ, ಶಾಲಾ ಮುಖ್ಯ ಶಿಕ್ಷಕಿ ವನಿತಾ, ಶಾಲಾ ನಿವೃತ್ತ ಶಿಕ್ಷಕ ರಘುನಾಥ ರೈ ಕುತ್ಯಾಳ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಮುರಳಿಮೋಹನ್ ಶೆಟ್ಟಿ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here