ಕಕ್ಕೂರು ಹಾ.ಉ.ಮಹಿಳಾ ಸಹಕಾರ ಸಂಘದ ಉದ್ಘಾಟನೆ

0

ಸಂಘದ ಸ್ಥಾಪನೆಯು ದ.ಕ.ಹಾಲಿನ ಒಕ್ಕೂಟದ ಭವಿಷ್ಯವನ್ನು ತೋರಿಸಿದೆ-ಸುಚರಿತ ಶೆಟ್ಟಿ

ಕೃಷಿ ಮತ್ತು ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖ-ಜಯರಾಮ ರೈ ಬಳೆಜ್ಜ
ಈ ಸಂಘ ಒಂದೇ ವರ್ಷದಲ್ಲಿ ಆಗಾಧವಾಗಿ ಬೆಳೆಯುತ್ತದೆ-ಶಶಿಕುಮಾರ್ ರೈ ಬಾಲ್ಯೊಟ್ಟು
ನೀವೆಲ್ಲರೂ ಹೃದಯ ವೈಶಾಲ್ಯವುಳ್ಳವರು – ಪದ್ಮನಾಭ ಶೆಟ್ಟಿ ಅಡ್ಕಾಜೆ
ಪರಸ್ಪರ ಸೇರಿದರೆ ಸಹಕಾರ ತತ್ವ ಬೆಳೆಯುತ್ತದೆ-ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್
ಎಲ್ಲರಲ್ಲಿಯೂ ಆತ್ಮವಿಶ್ವಾಸ ಕಾಣುತ್ತಿದೆ-ಸವಿತಾ ರೈ
ಹೆಚ್ಚು ಹಸಿರು ಹುಲ್ಲನ್ನು ಉಪಯೋಗಿಸಿ ಹೈನುಗಾರಿಕೆ ನಡೆಸಿ-ವಿವೇಕ್ ಡಿ.
ಪೈಪೋಟಿ, ಸಂಘರ್ಷದ ದೃಷ್ಟಿಯಿಂದ ಸಂಘ ಸ್ಥಾಪನೆ ಆಗಿಲ್ಲ-ರಂಗನಾಥ ರೈ ಗುತ್ತು
ಗೋ ಸೇವೆ ಮಾಡುವವರಿಗೆ ಹೆಚ್ಚಿನ ರೋಗ ಬಾಧಿಸುವುದಿಲ್ಲ-ವೆಂಕಟರಮಣ ಬೋರ್ಕರ್

ಪುತ್ತೂರು: ಈ ದೇಶದ ಸಂಸ್ಕೃತಿ, ಹೈನುಗಾರಿಕೆ, ಕೃಷಿ, ಗ್ರಾಮ ಭಾರತದಲ್ಲಿ ಸದೃಢವಾಗಿ ಉಳಿದಾಗ ಭವಿಷ್ಯದ ಭಾರತ ಸಶಕ್ತವಾಗುತ್ತದೆ. ಹೈನುಗಾರಿಕೆಯು ಮಹಿಳೆಯರ ಸಬಲೀಕರಣ, ಸ್ವಾವಲಂಬನೆಗೆ ಸಹಕಾರಿಯಾಗುತ್ತದೆ. ಇದರಿಂದ ದೇಶದ ಆರ್ಥಿಕತೆಯು ಅಭಿವೃದ್ಧಿಯಾಗುತ್ತದೆ. ಎಂದು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ. ಹೇಳಿದರು. ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ನೂತನವಾಗಿ ಪ್ರಾರಂಭಿಸಲಾದ ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ರಿಬ್ಬನ್ ಕಟ್ ಮಾಡಿ ಬಳಿಕ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ಗಡಿಭಾಗದ ಈ ಪ್ರದೇಶದಲ್ಲಿ ವೈಶಿಷ್ಟ್ಯತೆ, ವಿಶೇಷತೆಯ ಜೀವನ ಇರುತ್ತದೆ. ಇಲ್ಲಿ ಮಹಿಳಾ ಸಹಕಾರಿ ಸಂಘ ಆರಂಭ ಅಗಿದ್ದು ನಮ್ಮ ಒಕ್ಕೂಟಕ್ಕೆ ಭವಿಷ್ಯವಿದೆ ಎಂಬುದನ್ನು ತೋರಿಸಿದೆ ಎಂದರು. ರಾಜ್ಯದಲ್ಲಿ ಹಾಲಿನ ಉತ್ಪಾದನೆಯಲ್ಲಿ ದ.ಕ.ಹಾಲು ಉತ್ಪಾದಕರ ಒಕ್ಕೂಟ ಮೊದಲಿನ ಸಾಲಿನಲ್ಲಿದೆ. ದ.ಕ.ಜಿಲ್ಲೆಯಲ್ಲಿ ಪ್ರತೀದಿನ 3 ಲಕ್ಷದ 61 ಸಾವಿರ ಹಾಲು ಉತ್ಪಾದನೆ ಆಗುತ್ತದೆ. ಹಾಲಿನಲ್ಲಿ ಗುಣಮಟ್ಟ ಪಾರದರ್ಶಕತೆಯನ್ನು ಒಕ್ಕೂಟ ಕಾಪಾಡಿಕೊಂಡಿದೆ ಎಂದರು. ಹೈನುಗಾರಿಕೆಗೆ ಎಲ್ಲಾ ರೀತಿಯ, ಸಹಾಯಧನ, ಸಹಕಾರ, ವೈದ್ಯಕೀಯ ಸೌಲಭ್ಯ, ಯೋಜನೆಗಳನ್ನು ಒಕ್ಕೂಟದಿಂದ ಪಡೆದುಕೊಳ್ಳಿ. ಸಂಘದಲ್ಲಿ ಪಾರದರ್ಶಕವಾದ ಆಡಳಿತ ನಡೆಸಬೇಕಾದರೆ ಆಡಳಿತಾತ್ಮಕ ತರಬೇತಿಯನ್ನು ಕೂಡ ನೀವು ಪಡೆದಿರಬೇಕು ಎಂದರು. ಇಂದು ಉದ್ಘಾಟನೆಯಾದ ಸಂಘ 744ನೇ ಸಂಘವಾಗಿದೆ. ಹೈನುಗಾರಿಕೆಯಿಂದ ಪ್ರಕೃತಿಯು ಬೆಳೆಯುತ್ತದೆ. ಪುತ್ತೂರಿನಲ್ಲಿ ಹೈನುಗಾರಿಕೆ ಹಾಗೂ ಕೃಷಿ ಉಳಿಯಬೇಕು. ಗ್ರಾಹಕ ಸ್ನೇಹಿಯಾದ ನಂದಿನಿ ಉತ್ಪನ್ನಗಳ್ಳನ್ನು ಹೆಚ್ಚು ಮಾಡಬೇಕಾಗಿದೆ. ಇದಕ್ಕಾಗಿ ಯುವಕ ಯುವತಿಯರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ನಿಮ್ಮ ಪ್ರೋತ್ಸಾಹದಿಂದ ಒಕ್ಕೂಟ ಬೆಳೆಯಲು ಸಹಕಾರಿಯಾಗುತ್ತದೆ ಎಂದ ಅವರು ಇದನ್ನು ಸದೃಢವಾಗಿ ಬೆಳೆಸೋಣ. ಸಹಕಾರ ಕ್ಷೇತ್ರವನ್ನು ಬಲಪಡಿಸೋಣ ಎಂದು ಹೇಳಿ ಹಾರೈಸಿದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಜಯರಾಮ ರೈ ಬಳೆಜ್ಜ ಮಾತನಾಡಿ 1986 ರಲ್ಲಿ ದ.ಕ.ಹಾಲು ಒಕ್ಕೂಟ ಸ್ಥಾಪನೆ ಆಗಿದೆ. ಒಕ್ಕೂಟದಲ್ಲಿ 210 ಮಹಿಳಾ ಸಂಘಗಳಿವೆ. 53,೦78 ಮಂದಿ ಸಕ್ರಿಯವಾಗಿ ಹಾಲು ಪೂರೈಕೆ ಮಾಡುತ್ತಿದ್ದಾರೆ. ದ.ಕ.ಹಾಲು ಒಕ್ಕೂಟ ಈ ಬಾರಿ 7 ಕೋಟಿ ಲಾಭ ಪಡೆದುಕೊಂಡಿದೆ ಎಂದರು. ಕೃಷಿ ಮತ್ತು ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳು. ಬೇರೆ ಬೇರೆ ಕಾರಣಗಳಿಂದ ಹೈನುಗಾರಿಕೆ ಇಂದು ಕಡಿಮೆ ಆಗಿದೆ. ಆದರೆ ಹಾಲಿಗೆ ಬೇಡಿಕೆ ಕಡಿಮೆ ಆಗಿಲ್ಲ. ಬೆಳ್ತಂಗಡಿ ತಾಲುಕು ಇವತ್ತು ಹಾಲು ಪೂರೈಕೆಯಲ್ಲಿ ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಸಂಘ ಮುಂದಿನ ವರ್ಷಕ್ಕೆ ಒಂದು ಸಾವಿರ ಲೀ. ಹಾಲು ಪೂರೈಕೆ ಮಾಡುವ ಸಂಘವಾಗಬೇಕು ಎಂದರು. ಶೂನ್ಯ ಬಡ್ಡಿ ದರದಲ್ಲಿ ಒಂದೇ ದಿನದಲ್ಲಿ ಒಂದು ದನಕ್ಕೆ 21,೦೦೦ ರೂ.ನ ಹಾಗೆ 4 ದನ ಸಾಕಲು ಎಸ್‌ಸಿಡಿಸಿಸಿ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು. ಹಾಲು ಪೂರೈಕೆ ಮಾಡುವ ಹೈನುಗಾರರ ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸುವ ಯೋಜನೆ ಒಕ್ಕೂಟದ ಮುಂದಿದೆ. ಪುತ್ತೂರಿನಲ್ಲಿ 10 ಎಕ್ರೆ ಜಾಗ ಖರೀದಿ ಮಾಡಿ ಒಕ್ಕೂಟದ ಕಾರ್ಯಯೋಜನೆ ಮಾಡಲಾಗುವುದು ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಮಹಿಳಾ ಸಹಕಾರ ಸಂಘ ಆರಂಭ ಮಾಡಿದ್ದೀರಿ. ಈ ಸಂಘವನ್ನು ನಡೆಸಲು ಸಾಧ್ಯವಿದೆಯಾ ಎಂಬ ಮಾತು ಎಲ್ಲರಲ್ಲಿ ಇರಬಹುದು. ಆದರೆ ಈ ಸಂಘ ಒಂದೇ ವರ್ಷದಲ್ಲಿ ಆಗಾಧವಾಗಿ ಬೆಳೆಯುತ್ತದೆ ಎಂಬ ನಂಬಿಕೆ ವಿಶ್ವಾಸ ನನಗಿದೆ. ದಾನಿಗಳ ಸಹಕಾರದಿಂದ ಸಂಘಕ್ಕೆ ಪೂರಕವಾದ ಯೋಜನೆಗಳು ನಡೆಯುತ್ತಿದೆ. ಹೈನುಗಾರಿಕೆ ನಡೆಸಲು ಸಹಕಾರಿ ಸಂಘದ ವತಿಯಿಂದ ರೂ. 3 ಲಕ್ಷವರೆಗೆ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು. ಸಂಘ ಸ್ಥಾಪನೆಯಾಗಲು ಶ್ರಮಿಸಿದ ಜಯಪ್ರಕಾಶ್ ರೈ ರವರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅಡ್ಕಾಜೆ ಮಾತನಾಡಿ ಹೃದಯ ವೈಶಾಲ್ಯವುಳ್ಳವರು ನೀವು. ಕೆಲವು ವರ್ಷಗಳ ಹಿಂದೆ ಹಾಲಿನ ಉತ್ಪಾದನೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವಿತ್ತು ಎಂದರು. ಇಂದು ಕುಟುಂಬ ವಿಭಜನೆ ಹಾಗೂ ಕೃಷಿಕರ ಮಕ್ಕಳ ಉದ್ಯೋಗದ ಹಿನ್ನಲೆಯಲ್ಲಿ ಹೈನುಗಾರಿಕೆ ಕಡಿಮೆಯಾಗಿದೆ. ಹೈನುಗಾರಿಕೆಯಿಂದ ಯಾವತ್ತೂ ಲಾಭ ಇದೆ. ಒಕ್ಕೂಟದ ಅಧಿಕಾರಿಗಳು ಕೂಡ ಒಳ್ಳೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸಹಕಾರ ಸಂಘ ಆಗಬೇಕಿದ್ದರೆ ಬಹಳ ಕಷ್ಟ ಇದೆ. ಮುಂದಿನ ದಿನಗಳಲ್ಲಿ ಸಂಘದ ಮೂಲಕ ಸದಸ್ಯರಿಗೆ ಮಾಹಿತಿ ಶಿಬಿರ ನಡೆಸಬೇಕು ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ. ನೆಲ್ಲಿತಿಮಾರ್ ಮಾತನಾಡಿ ಬೆಟ್ಟಂಪಾಡಿ ಹಾಗೂ ತಂಬುತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಿಂದ ಸಂಘ ಆರಂಭಗೊಂಡಿದೆ. ಎಲ್ಲರೂ ಪರಸ್ಪರ ಸೇರಿದರೆ ಸಹಕಾರ ತತ್ವ ಬೆಳೆಯುತ್ತದೆ. ಮನುಷ್ಯತ್ವ ಇರುವ ಮನುಷ್ಯನಿಗೆ ಸಹಕಾರ ತತ್ವ ಇರುತ್ತದೆ. ಭಾಷಣದಲ್ಲಿ ಸಹಕಾರ ಬೆಳೆಯುವುದಿಲ್ಲ ಎಂದರು. ಇಂದು ಸಹಕಾರ ರಂಗ ಎಲ್ಲರನ್ನು ಒಗ್ಗೂಡಿಸಿದೆ. ಹೈನುಗಾರಿಕೆ ಮಾಡುವ ಕುಟುಂಬದಲ್ಲಿ ಸಮಸ್ಯೆಗಳು ಕಡಿಮೆ. ಪ್ರತಿಯೊಬ್ಬರೂ ಕನಿಷ್ಠ ಒಂದು ದನವನ್ನಾದರೂ ಸಾಕಿ. ಹಟ್ಟಿಗೊಬ್ಬರದ ಮೂಲಕ ಸಾವಯವ ಕೃಷಿ ಮಾಡಿ ಎಂದು ಸಲಹೆ ನೀಡಿದ ಅವರು ನಾವೆಲ್ಲರೂ ಒಳ್ಳೆಯ ಸಹಕಾರಿಗಳಾಗೋಣ ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸವಿತ ರೈ ಮಾತನಾಡಿ ಇಂದು ಧೈರ್ಯದಿಂದ ಮಹಿಳಾ ಸಹಕಾರ ಸಂಘ ಸ್ಥಾಪನೆ ಆಗಿದೆ. ಸಂಘದ ಅಧ್ಯಕ್ಷರು, ನಿರ್ದೇಶಕರು ಹಾಗೂ ಎಲ್ಲರಲ್ಲಿಯೂ ಆತ್ಮವಿಶ್ವಾಸ ಕಾಣುತ್ತಿದೆ. ಸಂಘ ಆರಂಭವಾಗುವ ಮೊದಲೇ ನೀವು ತರಬೇತಿಯನ್ನು ಪಡೆದಿದ್ದೀರಿ. ಉತ್ತಮ ಯೋಜನೆಗಳ ಮೂಲಕವೇ ಸಂಘ ಆರಂಭ ಮಾಡಲಾಗಿದೆ. ಸಂಘ ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಎಂದರು.

ದ.ಕ.ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಮಾತನಾಡಿ ಶುಭಗಳಿಗೆಯಲ್ಲಿ ಸಂಘ ಆರಂಭಗೊಂಡಿದೆ. ಒಕ್ಕೂಟಕ್ಕೆ ಬೇಕಾದ 2 ಲಕ್ಷ ಲೀ. ನಷ್ಟು ಹಾಲನ್ನು ಹೊರ ಜಿಲ್ಲೆಯಿಂದ ತರಿಸುತ್ತೇವೆ. ಹೈನುಗಾರಿಕೆಗೆ ಬೇಕಾದ ಹಸಿರು ಪ್ರದೇಶ ಇಲ್ಲಿ ಕಾಣುತ್ತಿದೆ. ಹೆಚ್ಚು ಹಸಿರು ಹುಲ್ಲನ್ನು ಉಪಯೋಗಿಸಿ ಹೈನುಗಾರಿಕೆ ನಡೆಸಿ. ಮುಂದಿನ ದಿನಗಳಲ್ಲಿ ಹೈನುಗಾರಿಕೆ ಮಾಹಿತಿ ಕಾರ್ಯಗಾರ ಮಾಡೋಣ. ನಿಮಗೆ ಬೆನ್ನೆಲುಬಾಗಿ ನಾವು ಇದ್ದೇವೆ. ಒಕ್ಕೂಟ ಇದೆ ಎಂದು ಹೇಳಿದರು.

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ಈ ಭಾಗದ ಹಲವರು ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯಲ್ಲಿ ಸಂಘ ಆರಂಭಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ಸಂಘ ಆರಂಭ ಮಾಡಲಾಗಿದೆ. ೧೦೧ ಮನೆಯ ಸದಸ್ಯರು ಇಲ್ಲಿ ಸದಸ್ಯರಾಗಿದ್ದಾರೆ. ಯಾವ ಪೈಪೋಟಿ, ಸಂಘರ್ಷದ ದೃಷ್ಟಿಯಿಂದ ಇಲ್ಲಿ ಸಂಘ ಸ್ಥಾಪನೆ ಆಗಿಲ್ಲ. ಈ ಸಂಘ ಉತ್ತರೋತ್ತರ ಬೆಳಗಲಿ ಎಂದರು.

ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ಹಾಲು ಉತ್ಪದಕರ ಸಂಘದ ಸದಸ್ಯನಾಗಿ ಹಾಲು ಪೂರೈಕೆ ಮಾಡುತ್ತಿದ್ದೆ. ಯಾರು ಗೋ ಸೇವೆ ಮಾಡುತ್ತಾರೋ ಅವರಿಗೆ ಹೆಚ್ಚಿನ ರೋಗ ಬಾಧಿಸುವುದಿಲ್ಲ. ಆರೋಗ್ಯ ಭಾಗ್ಯ ಮುಖ್ಯ. ಹೈನುಗಾರಿಕೆ ನಡೆಸಿ ಅರೋಗ್ಯವಂತರಾಗಿ. ಶುಭ ಶುಕ್ರವಾರದಂದು ಲಕ್ಷ್ಮಿರವರ ಮನೆಯಲ್ಲಿ ಆರಂಭಗೊಂಡ ಸಂಘಕ್ಕೆ ಲಕ್ಷ್ಮೀ ಒಲಿಯಲಿ ಎಂದು ಹಾರೈಸಿದರು.

ಸಂಘದ ಅಧ್ಯಕ್ಷೆ ಶ್ರೀದೇವಿ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿ ಕೊಮ್ಮಂಡ, ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಹಾಗೂ ನಿವೃತ್ತ ಕಂದಾಯ ನಿರೀಕ್ಷಕ ಶೇಷಪ್ಪ ರೈ ನಾಕಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಸಂಘವನ್ನು ರಿಬ್ಬನ್ ಕಟ್ ಮಾಡಿ, ದೀಪ ಬೆಳಗಿಸಿ ಹಾಲು ಖರೀದಿ ಮಾಡುವ ಮೂಲಕ ಉದ್ಘಾಟಿಸಲಾಯಿತು. ಪಾಣಾಜೆ ಬಿಎಂಸಿ ಕಾರ್ಯದರ್ಶಿ ಸತ್ಯನಾರಾಯಣ ಅಡಿಗ, ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ದಯಾಮಣಿರವರನ್ನು ಹೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್, ವಿಸ್ತರಣಾಧಿಕಾರಿ ಮಾಲತಿ, ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರುಗಳಾದ ಕುಸುಮಾವತಿ, ರಾಜೇಶ್ವರಿ ಬಿ., ಎಂ. ಗಿರಿಜಾ, ಪ್ರೇಮಲತಾ ಜೆ. ರೈ, ಸವಿತಾ, ಪ್ರೀತಿತಾ ರೈ, ಅನ್ನಪೂರ್ಣ ಬಿ., ಲಲಿತಾ, ನಳಿನಿ ಟಿ., ನವೀನ ಡಿ. ರೈ, ರವಿಕಲಾ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಯಿದು ಕುಂಞಿ, ಪಾರ್ವತಿ ಲಿಂಗಪ್ಪ ಗೌಡ, ಗಂಗಾಧರ ಗೌಡ ಮಿತ್ತಡ್ಕ, ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ, ಮಿತ್ತಡ್ಕ ಶಾಖೆಯ ಕೃಷ್ಣ ಮಣಿಯಾಣಿ, ಕೃತಕ ಗರ್ಭದಾರರಾದ ಕೊರಗಪ್ಪ ಗೌಡ ಸೇರಿದಂತೆ ಸಂಘದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಶ್ರೀದೇವಿ ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ವಂದಿಸಿದರು. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ. ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸ್ಥಾಪನೆಗೆ ಸಹಕರಿಸಿದ ಮಹನೀಯರಿಗೆ, ದಾನಿಗಳಿಗೆ ಸನ್ಮಾನ

ಸಂಘ ಆರಂಭಿಸುವಲ್ಲಿ ಸಹಕಾರ ನೀಡಿದ ಮಹನೀಯರನ್ನು ಹಾಗೂ ದಾನಿಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ತಂಬುತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ತೇಜಸ್ವಿನಿಯವರನ್ನು ಸನ್ಮಾನಿಸಲಾಯಿತು.
ನೂತನ ಸಂಘಕ್ಕೆ ರೂ.25,೦೦೦ ಸಾವಿರವನ್ನು ಕೊಡುಗೆಯಾಗಿ ನೀಡಿದ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ರೈ ನುಳಿಯಾಲು, ಸಂಘದ ನಿವೇಶನಕ್ಕೆ 5 ಸೆಂಟ್ಸ್ ಜಾಗ ನೀಡಿದ ಸಂಘದ ಉಪಾಧ್ಯಕ್ಷೆ ರಜಿತಾ ಎಲ್. ಗೌಡ ಹಾಗೂ ತಾತ್ಕಾಲಿಕವಾಗಿ ಸಂಘದ ಕಾರ್ಯಗಳಿಗೆ ತನ್ನ ಮನೆಯಲ್ಲಿ ಸ್ಥಳವಕಾಶ ನೀಡಿದ ಲಕ್ಷ್ಮಿ ಎನ್. ಕಕ್ಕೂರುರವನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪನೆಗೆ ಶ್ರಮಿಸಿ ನೇತೃತ್ವ ವಹಿಸಿ ಸಂಘದ ಆರಂಭಕ್ಕೆ ಕಾರಣಕರ್ತರಾದ ಜಯಪ್ರಕಾಶ್ ರೈ ಸಿ. ಮತ್ತು ಶ್ರೀದೇವಿ ದಂಪತಿಯನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here