ಅಖಿಲ ಕರ್ನಾಟಕ ಜನಜಾಗೃತಿ ದ.ಕ.ಜಿಲ್ಲಾ, ತಾಲೂಕು ವೇದಿಕೆಗಳಿಂದ ಡಾ|ಎಲ್.ಎಚ್.ಮಂಜುನಾಥ್‌ರವರಿಗೆ ಅಭಿನಂದನೆ

0

ಶ್ರೀ ಮಹಾಲಿಂಗೇಶ್ವರನ ನೆಲದ ಅಭಿನಂದನೆಯಿಂದ ನನ್ನ ಜೀವನ ಸಾರ್ಥಕವಾಯಿತು-ಡಾ|ಎಲ್.ಎಚ್.ಮಂಜುನಾಥ್

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರು ಹಾಗೂ ಶ್ರೀಮಂತರನ್ನು ಬೆಸೆಯುತ್ತಿತ್ತು. ವೇದಿಕೆಯ ನಿಜವಾದ ಫಲಾನುಭವಿಗಳು ಸಮಾಜದಲ್ಲಿ ಸದೃಢವಾಗಿದ್ದಾರೆ. ಜನಜಾಗೃತಿ ವೇದಿಕೆಯನ್ನು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ನನ್ನ ಸಣ್ಣ ಕಾಣಿಕೆ ನೀಡಿದ್ದೇನೆ ಅಷ್ಟೇ ಎಂದು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಕಾರ್ಯನಿರ್ವಾಹಕ ಅಽಕಾರಿ ಡಾ|ಎಲ್.ಎಚ್.ಮಂಜುನಾಥ್ ಹೇಳಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 23 ವರ್ಷಗಳಿಂದ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮುಖ್ಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಡಾ|ಎಲ್.ಎಚ್.ಮಂಜುನಾಥ್‌ರವರಿಗೆ ಅಖಿಲ ಕರ್ನಾಟಕ ಜನಜಾಗೃತಿ ಜಿಲ್ಲಾ ವೇದಿಕೆ ದ.ಕ. ಹಾಗೂ ತಾಲೂಕು ಜನಜಾಗೃತಿ ವೇದಿಕೆಗಳ ಜಂಟಿ ಆಶ್ರಯದಲ್ಲಿ ಪುತ್ತೂರು ಕೊಟೇಚಾ ಹಾಲ್‌ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಶ್ರೀಮಹಾಲಿಂಗೇಶ್ವರನ ನೆಲದಲ್ಲಿ ನಡೆದ ಅಭಿನಂದನೆಯಿಂದ ಇಂದು ನನ್ನ ಜೀವನ ಸಾರ್ಥಕವಾಯಿತು. ನನ್ನ ಕುಟುಂಬದ ಪರವಾಗಿ ನಿಮಗೆಲ್ಲರಿಗೂ ಅಭಿನಂದನೆಗಳು. 1981ರಿಂದ ಮಣಿಪಾಲದ ಟಿ.ಎಂ.ಎ.ಪೈರವರೊಂದಿಗೆ ಕೆಲಸ ಮಾಡಿದ್ದೆ. 2001ರಿಂದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕರ್ತವ್ಯಕ್ಕೆ ಸೇರಿ ಬೆಳ್ತಂಗಡಿಯಲ್ಲಿ ಕೆಲಸ ಪ್ರಾರಂಭಿಸಿದೆ ಎಂದು ಆರಂಭದ ದಿನಗಳನ್ನು ಅವರು ತಿಳಿಸಿದರು. ಗಾಂಧಿಜಿಯವರನ್ನು ನೆನಪು ಮಾಡಿಕೊಳ್ಳುವ ಕ್ಷೇತ್ರ ಎಂದರೆ ಅದು ಜನಜಾಗೃತಿ ವೇದಿಕೆ. ಈ ವೇದಿಕೆಯ ವತಿಯಿಂದ ಗಾಂಧಿ ಜಯಂತಿಯಂದು ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಮೂಲಕ ಗಾಂಽಜಿಯವರನ್ನು ಮತ್ತೊಮ್ಮೆ ಖಾವಂದರು ಭೂಮಿಗೆ ತಂದಿದ್ದಾರೆ. ಅತ್ಯಂತ ವ್ಯಸನಿಗಳನ್ನು ಮುಟ್ಟಿ ಆಶೀರ್ವಾದ ಮಾಡಿದ ವ್ಯಕ್ತಿ ಖಾವಂದರು ಎಂದ ಅವರು ಇಂದು ಸಮಾಜದಲ್ಲಿರುವ ದೊಡ್ಡ ದೊಡ್ಡ ವ್ಯಕ್ತಿಗಳು ಜನಜಾಗೃತಿ ವೇದಿಕೆಯಲ್ಲಿ ತೊಡಗಿಸಿಕೊಂಡವರೇ. ಜೀವ ಇರುವವರೆಗೂ ಜನಜಾಗೃತಿ ವೇದಿಕೆಯಲ್ಲಿ ದುಡಿಯುತ್ತೇನೆ. ನೀವೂ ಕೂಡ ಜನಜಾಗೃತಿ ವೇದಿಕೆಯಲ್ಲಿ ಸೇವೆ ಮಾಡಿ ಎಂದರು.


ನಮ್ಮ ಜೀವನದಲ್ಲಿ ಬಹುದೊಡ್ಡ ಆಶ್ಚರ್ಯಕರವಾದ ವ್ಯಕ್ತಿ ಖಾವಂದರು -ಡಾ. ಮೋಹನ್ ಆಳ್ವ:
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವರವರು ಮಾತನಾಡಿ ದೇಶದ ಎಲ್ಲಾ ಶ್ರದ್ಧಾಕೇಂದ್ರಗಳನ್ನು ತುಲನೆ ಮಾಡಿದರೆ ಧರ್ಮಸ್ಥಳ ಕ್ಷೇತ್ರ ನಂಬರ್ ವನ್ ಕ್ಷೇತ್ರವಾಗಿ ನಿಂತಿದೆ. ಖಾವಂದರು ವ್ಯಕ್ತಿಯಲ್ಲ. ಅವರು ನಮ್ಮ ಜೀವನದಲ್ಲಿ ಬಹುದೊಡ್ಡ ಆಶ್ಚರ್ಯಕರವಾದ ವ್ಯಕ್ತಿ ಎಂದರು. 1982ರಲ್ಲಿ ರುಡ್‌ಸೆಟ್ ಸಂಸ್ಥೆಗೆ ಸೇರಿದ ಮಂಜುನಾಥ್‌ರವರು ಹಲವು ಕಾರ್ಯಕ್ರಮಗಳ ಮೂಲಕ ಹೊಸ ರೂಪ ಕೊಟ್ಟರು. 2001ರಿಂದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಧಿಕಾರ ವಹಿಸಿದ ಬಳಿಕ ಜಿಲ್ಲೆಯ ಪ್ರತೀ ಗ್ರಾಮಗಳಿಗೂ ಯೋಜನೆಯನ್ನು ವಿಸ್ತಾರಗೊಳಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಸ್ವಾವಲಂಬಿಯಾಗಿ ಸುಸ್ಥಿರಗೊಂಡು ಇಂದು 25 ಸಾವಿರ ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸುತ್ತಿದೆ. 65 ಲಕ್ಷ ಕುಟುಂಬಗಳು ಯೋಜನೆಯಲ್ಲಿ ತೊಡಗಿಕೊಂಡಿವೆ. ರಾಜ್ಯದ 3 ಕೋಟಿ ಜನರು ಧರ್ಮಸ್ಥಳದ ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಯೋಜನೆಯಲ್ಲಿ 45 ಸಾವಿರ ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಡಾ|ಎಲ್.ಎಚ್.ಮಂಜುನಾಥರವರಿಗೆ ಕರ್ತ್‌ತ್ವ ಶಕ್ತಿ ಇದೆ. ಸಮರ್ಥ ಸೇನಾಧಿಪತಿಯಾಗಿ ಜನಜಾಗೃತಿ ವೇದಿಕೆ, ಹಾಗೂ ಯೋಜನೆಯನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ. ಖಾವಂದರಿಗೆ ಸ್ವಾಮಿನಿಷ್ಠನಾಗಿ ಕೆಲಸ ಮಾಡಿದ್ದಾರೆ ಎಂದ ಅವರು ಶ್ರೀಕ್ಷೇತ್ರದ ಯೋಜನೆಗಳಾದ ಸುರಕ್ಷಾ ಆರೋಗ್ಯ ವಿಮೆ ಮಹತ್ವದ ವಿಮೆಯಾಗಿದೆ. ಸಿರಿಗ್ರಾಮೋದ್ಯೋಗ, ಕೆರೆ ದುರಸ್ಥಿ, ಇಂಗು ಗುಂಡಿ, ಗ್ರಾಮ ನಿರ್ಮಾಣ, ಶಾಲೆಗಳಿಗೆ ಕೊಡುಗೆಗಳು ಮುಂತಾದ ಯೋಜನೆಗಳ ಬಗ್ಗೆ ಡಾ. ಮೋಹನ್ ಆಳ್ವ ಶ್ಲಾಘನೆ ವ್ಯಕ್ತಪಡಿಸಿದರು.


ಅವರ ಕಾರ್ಯಗಳಿಗೆ ಈ ಕಾರ್ಯಕ್ರಮ ಹೆಗ್ಗಳಿಕೆಯಾಗಿದೆ-ಅಶೋಕ್ ಕುಮಾರ್ ರೈ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ 23 ವರ್ಷಗಳಿಂದ ಡಾ|ಎಲ್.ಎಚ್.ಮಂಜುನಾಥ್‌ರವರ ಕಾರ್ಯವೈಖರಿಯನ್ನು ನೀವು ಬಲ್ಲವರು. ಅವರ ಕಾರ್ಯಗಳಿಗೆ ಈ ಕಾರ್ಯಕ್ರಮ ಹೆಗ್ಗಳಿಕೆಯಾಗಿದೆ. ಜನಜಾಗೃತಿ ವೇದಿಕೆಯಿಂದ ಮಾಡಿದ ಮದ್ಯವರ್ಜನಾ ಶಿಬಿರಗಳು ಮದ್ಯವಸನಿ ಕುಟುಂಬಕ್ಕೆ ದಾರಿದೀಪವಾಗಿದೆ. ಸುಮಾರು 1ಲಕ್ಷದ 20 ಸಾವಿರದಷ್ಟು ಜನರು ಮದ್ಯವರ್ಜನಾ ಶಿಬಿರದಿಂದ ಮುಕ್ತಿ ಹೊಂದಿದ್ದಾರೆ. ಇವತ್ತು ಫಲಾನುಭವಿ ಕುಟುಂಬಗಳಿಂದ ರಾಜ್ಯಕ್ಕೆ 300 ಕೋ.ರೂ.ನಷ್ಟು ಆದಾಯ ಬರುತ್ತಿದೆ ಎಂದರು. ಮಂಜುನಾಥ್‌ರವರಲ್ಲಿ ಉತ್ತಮ ವಿಚಾರಗಳು ಅಡಗಿದೆ. ಅವರ ಜ್ಞಾನಭಂಡಾರ ಸಮಾಜಕ್ಕೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳಿಗೆ ನಿರಂತರ ಸಿಗಲಿ ಎಂದರು.


ಮಂಜುನಾಥರವರು ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ್ದಾರೆ -ಪ್ರತಾಪಸಿಂಹ ನಾಯಕ್:
ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕ ಮಾತನಾಡಿ ಜೀವನದ ಪಯಣದಲ್ಲಿ ಅನುಭವ ನೀಡಿದ ವ್ಯಕ್ತಿಗಳಿಗೆ ಸಮಾಜದಿಂದ ಗೌರವ ಸಿಗಬೇಕು. ನನ್ನ ಜೀವನದ ಬಹುದೊಡ್ಡ ಸಮಯದಲ್ಲಿ ಮಂಜುನಾಥ್‌ರವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರ ಬಗೆಗಿನ ಪ್ರೀತಿ, ಗೌರವ ತೋರಿಸಿಕೊಡುವ ಕಾರ್ಯಕ್ರಮ ಇದಾಗಿದೆ ಎಂದರು. ರಾಷ್ಟ್ರಮಟ್ಟದಲ್ಲಿ ಸರಕಾರಗಳು ಅನುಷ್ಠಾನ ಮಾಡಿದ ಕಾರ್ಯಕ್ರಮಗಳನ್ನು ಹಲವು ವರ್ಷದ ಹಿಂದೆಯೇ ಖಾವಂದರು ಅನುಷ್ಠಾನ ಮಾಡಿರುತ್ತಿದ್ದರು. ಅವರ ಕಲ್ಪನೆ, ಕನಸುಗಳಿಂದ ಗ್ರಾಮಾಭಿವೃದ್ಧಿ ಯೋಜನೆ ವಿಸ್ತಾರವಾಗಿ ಬೆಳೆದಿದೆ. ಇದರ ನೇತೃತ್ವ ವಹಿಸಿದ್ದ ಡಾ|ಎಲ್.ಎಚ್.ಮಂಜುನಾಥರವರು ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ್ದಾರೆ ಎಂದರು.


ಅವರ ಯೋಜನೆಗಳನ್ನು ಮುಂದುವರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಅನಿಲ್ ಕುಮಾರ್ ಎಸ್.ಎಸ್.:
ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ ಕಳೆದ 4 ವರ್ಷಗಳಿಂದ ಮಂಜುನಾಥರವರ ಮಾರ್ಗದರ್ಶನದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದರಿಂದ ಅವರ ಕಾರ್ಯಯೋಜನೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು. ಅವರ ಆಶಯಗಳಂತೆ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳನ್ನು ಮುಂದುವರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.


ಮದ್ಯವನ್ನು ತ್ಯಜಿಸಿದವರಿಗೆ ವಿಲ್ ಪವರ್ ಇರುತ್ತದೆ-ವಸಂತ ಸಾಲಿಯಾನ್:
ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಮಾತನಾಡಿ ಜನಜಾಗೃತಿ ವೇದಿಕೆಯಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಹಲವರು ಕಾರ್ಯನಿರ್ವಹಿಸಿದ್ದಾರೆ. ಮದ್ಯವರ್ಜನಾ ಶಿಬಿರದಿಂದ ವ್ಯಸನ ಮುಕ್ತರಾದವರನ್ನು ಖಾವಂದರು ಆತ್ಮೀಯತೆಯೊಂದಿಗೆ ಮಾತನಾಡಿಸುತ್ತಿದ್ದರು. ಅವರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದ್ದರು. ಮದ್ಯವನ್ನು ತ್ಯಜಿಸಿದವರಿಗೆ ವಿಲ್ ಪವರ್ ಇರುತ್ತದೆ ಎಂದರು. ನೂತನ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ ಕಾರ್ಯ ಮಾಡಲಿ ಎಂದರು.


ಮನಸ್ಸು ಮನಸ್ಸು ಸೇರಿಸಿ ಕಾರ್ಯಕ್ರಮ ಮಾಡಿದ್ದೇವೆ-ಪದ್ಮನಾಭ ಶೆಟ್ಟಿ:
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಪನೆಯನ್ನು ಸಾಕಾರ ಮಾಡಿದ ಧಿಮಂತ ವ್ಯಕ್ತಿ ಮಂಜುನಾಥರವರು. ಮನಸ್ಸು ಮನಸ್ಸು ಸೇರಿಸಿ ಈ ಕಾರ್ಯಕ್ರಮ ಮಾಡಿದ್ದೇವೆ. ಖಾವಂದರ ರಾಯಭಾರಿಯಾಗಿ ಮಂಜುನಾಥರವರು ಕೆಲಸ ನಿರ್ವಹಿಸಿದ್ದಾರೆ. ಜನಜಾಗೃತಿ ವೇದಿಕೆಯಲ್ಲಿ ತೊಡಗಿಸಿಕೊಂಡವರು ಇಂದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ ಎಂದ ಅವರು ನಮ್ಮನ್ನು ಮುಂದಕ್ಕೆ ಕೊಂಡೊಯ್ಯಲು ನಿಮ್ಮ ಮಾರ್ಗದರ್ಶನ ನಮಗೆ ಬೇಕು ಎಂದರು.


ನಿವೃತ್ತ ಶಿಕ್ಷಕ, ಮಧುಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿರವರ ಮಧುಪ್ರಪಂಚ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಘಟಕಗಳ ಅಧ್ಯಕ್ಷರಾದ ಬೆಳ್ತಂಗಡಿ ತಾಲೂಕಿನ ಕಾಸಿಂ ಮಲ್ಲಿಗೆಮನೆ, ಮಂಗಳೂರು ತಾಲೂಕಿನ ಚಂದ್ರಶೇಖರ ಉಚ್ಚಿಲ, ಸುಳ್ಯ ತಾಲೂಕಿನ ಲೋಕನಾಥ ಅಮೆಚ್ಚೂರು, ಮಂಜೇಶ್ವರ ತಾಲೂಕಿನ ಜಯಪ್ರಕಾಶ್, ಕಾಸರಗೋಡು ತಾಲೂಕಿನ ಅಖಿಲೇಶ್ ನಗುಮೊಗಂ, ಬೆಳ್ತಂಗಡಿ ತಾಲೂಕಿನ ಉಪಾಧ್ಯಕ್ಷ ಶಾರದಾ ರೈ, ಡಾ|ಎಲ್.ಎಚ್.ಮಂಜುನಾಥರವರ ಪತ್ನಿ ನಳಿನಿ, ಮಹಮ್ಮದ್ ಇಸ್ಮಾಯಿಲ್, ಕೆ.ಸಿ.ಭಂಡಾರಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ. ಸವಣೂರು ಅಭಿನಂದನಾ ಪತ್ರ ವಾಚಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ವಂದಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಉಪಾಧ್ಯಕ್ಷೆ ವಿದ್ಯಾಗೌರಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಡಾ.ಶ್ರೀಪತಿ ರಾವ್, ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಸತೀಶ್ ನಾಯ್ಕ್ ಪರ್ಲಡ್ಕ, ಶ್ಯಾಂಸುಂದರ್ ರೈ, ರಾಮಣ್ಣ ಗೌಡ ಗುಂಡೋಲೆ, ಲೋಕೇಶ್ ಬೆತ್ತೋಡಿ, ಸದಾಶಿವ ರೈ ಸೂರಂಬೈಲು, ಜನಜಾಗೃತಿ ವೇದಿಕೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಪದಾಽಕಾರಿಗಳು ಶೌರ್ಯ ತಂಡದವರು ಉಪಸ್ಥಿತರಿದ್ದರು.

ಅಭಿನಂದನೆ
23 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮುಖ್ಯ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಡಾ|ಎಲ್.ಎಚ್.ಮಂಜುನಾಥ್ ಮತ್ತು ನಳಿನಿ ದಂಪತಿಯನ್ನು ಗುಲಾಬಿ ಹೂವಿನ ಹಾರ, ಶಲ್ಯ, ಪೇಟ, ಫಲಪುಷ್ಪ, ಮಲ್ಲಿಗೆ ಹೂ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ವಿವಿಧ ತಾಲೂಕಿನ ಜನಜಾಗೃತಿ ವೇದಿಕೆಗಳಿಂದ, ಪುತ್ತೂರು ಆದರ್ಶ ಆಸ್ಪತ್ರೆ ವತಿಯಿಂದ ಅಭಿನಂದಿಸಲಾಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವೈಯಕ್ತಿವಾಗಿ ಶಲ್ಯ, ಫಲಪುಷ್ಪ ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here