ಪುತ್ತೂರು: ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ಇತರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಜು.13ರಂದು ಪುತ್ತೂರು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,185 ಪ್ರಕರಣಗಳ ಪೈಕಿ 537 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ.2,33,೦5,782 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.
ಲೋಕ ಅದಾಲತ್ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಣಿ,ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.
ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳು: ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ ಅವರ ನ್ಯಾಯಾಲಯದಲ್ಲಿ 51 ಪ್ರಕರಣಗಳಲ್ಲಿ 17 ಇತ್ಯರ್ಥಗೊಂಡಿದ್ದು ರೂ.54,68,770 ಪರಿಹಾರ ವಿತರಣೆಗೆ ಆದೇಶ ಆಗಿದೆ.ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಿಯಾರವಿ ಜೋಗಲೇಕರ್ ಅವರ ನ್ಯಾಯಾಲಯದಲ್ಲಿ 127 ಪ್ರಕರಣಗಳಲ್ಲಿ 57 ಇತ್ಯರ್ಥಗೊಂಡಿದ್ದು ರೂ.36,57,೦೦೦ ಪರಿಹಾರ ವಿತರಣೆಗೆ ಆದೇಶ ಆಗಿದೆ. ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಜೆಎಮ್ಎಫ್ ಸಿಯೂ ಆಗಿರುವ ಪ್ರಿಯಾ ಜೋವಲೆಕರ್ ಅವರ ನ್ಯಾಯಾಲಯದಲ್ಲಿ 158 ಪ್ರಕರಣಗಳಲ್ಲಿ 63 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.72,79,8೦೦ ಪರಿಹಾರ ವಿತರಣೆಗೆ ಆದೇಶ ಆಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ ಸಿ ನ್ಯಾಯಾಧೀಶೆ ಅರ್ಚನಾ ಕೆ ಉನ್ನಿತಾನ್ ಅವರ ನ್ಯಾಯಾಲಯದಲ್ಲಿ 3೦೦ ಪ್ರಕರಣಗಳಲ್ಲಿ 38 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.52,44,934 ಪರಿಹಾರ ವಿತರಣೆಗೆ ಆದೇಶ ಆಗಿದೆ. ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್ಎಫ್ ಸಿ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 318 ಪ್ರಕರಣಗಳಲ್ಲಿ 185 ಇತ್ಯರ್ಥಗೊಂಡಿದ್ದು, ರೂ.26,85೦ ಪರಿಹಾರ ವಿತರಣೆಗೆ ಆದೇಶ ಆಗಿದೆ. 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್ಎಫ್ ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 231 ಪ್ರಕರಣಗಳಲ್ಲಿ 180 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.16,28,428 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಅಶ್ವಿನಿ ರೈ, ಚಂದ್ರಾವತಿ ಸಿ.ಟಿ, ಮಿಥುನ್ ರೈ, ಸುಶ್ಮಿತಾ, ರಾಜೇಶ್ವರಿ ಆಚಾರ್ಯ ಅವರು ಸಹಕರಿಸಿದರು. ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅವರು ನೇಮಕ ಮಾಡಿದ್ದರು.
5 ವರ್ಷದ ಪ್ರಕರಣ ಇತ್ಯರ್ಥ
ನಮ್ಮ ಜಾಗದ ವಿಚಾರಕ್ಕೆ ಸಂಬಂಧಿಸಿ ಸುಮಾರು 5 ವರ್ಷದಿಂದ ಕೋರ್ಟ್ ಕೇಸು ಇತ್ತು.ಇವತ್ತು ಲೋಕ ಅದಾಲತ್ ಮೂಲಕ ನ್ಯಾಯಾಧೀಶರು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಟ್ಟಿದ್ದಾರೆ ಎಂದು ಇಬ್ರಾಹಿಂ ದಂಪತಿ ತಿಳಿಸಿದ್ದಾರೆ. 5ನೇ ಹೆಚ್ಚುವರಿ ನ್ಯಾಯಾಧೀಶೆ ಸರಿತಾ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ಇತ್ಯರ್ಥವಾಯಿತು.