ಪುತ್ತೂರು: ಪುತ್ತೂರು-ಸವಣೂರು ರಸ್ತೆಯ ಸರ್ವೆಯ ತುಂಬಿ ಹರಿಯುವ ಗೌರಿ ಹೊಳೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಮಹೀಂದ್ರ ಶೋರೂಂ ನ ಉದ್ಯೋಗಿ ಸನ್ಮಿತ್ (21)ಗೆ ಸೇರಿದ ಡಿಯೋ ಸ್ಕೂಟರ್ ಹೊಳೆಯ ಬದಿಯಿಂದ 150ಮೀ ದೂರದಲ್ಲಿ, ಮೊಬೈಲ್ ಫೋನ್, ಪರ್ಸ್, ಹೆಲ್ಮೆಟ್,ಟಿಫಿನ್ ಬಾಕ್ಸ್ ಸಹಿತ ಪತ್ತೆಯಾಗಿದೆ.
ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಎಂಬವರ ಪುತ್ರನಾಗಿರುವ ಸನ್ಮಿತ್ ಮಹೇಂದ್ರ ಶೋರೂಂ ನಲ್ಲಿ ಉದ್ಯೋಗಿಯಾಗಿದ್ದು ನಿನ್ನೆಯೂ ಕೆಲಸಕ್ಕೆ ಹಾಜರಾಗಿದ್ದ. ಪ್ರತಿದಿನ ಸಂಜೆ 6.30ರ ವೇಳೆಗೆ ಮನೆ ಸೇರುತ್ತಿದ್ದ ಸನ್ಮಿತ್ ನಿನ್ನೆಯ ದಿನ ತಂದೆಗೆ ಕರೆಮಾಡಿ ಮನೆ ತಲುಪುವಾಗ ರಾತ್ರಿ 10 ಗಂಟೆಯಾಗಬಹುದೆಂದು ತಿಳಿಸಿದ್ದ. ರಾತ್ರಿ 9.30ರ ವರೆಗೂ ಮಗ ಮನೆಗೆ ಬಾರದಿದ್ದಾಗ ತಂದೆ ಖುದ್ದಾಗಿ ಸನ್ಮಿತ್ ಗೆ ಕರೆಮಾಡಿ ವಿಚಾರಿಸಿದ್ದು ಇನ್ನರ್ಧ ಗಂಟೆಯಲ್ಲಿ ಮನೆ ತಲುಪುವುದಾಗಿ ಹೇಳಿದ್ದ. ರಾತ್ರಿ 11 ಗಂಟೆಯಾದರೂ ಮಗ ಮನೆಗೆ ಬಾರದಿದ್ದಾಗ ತಂದೆ ಮತ್ತೆ ಸನ್ಮಿತ್ ಮೊಬೈಲ್ ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸುತ್ತಿರಲಿಲ್ಲ.
ರಾತ್ರಿ 1 ರವರೆಗೂ ಮಗ ಬಾರದಿದ್ದಾಗ ಪರಿಚಯದವರೊಂದಿಗೆ ಕಾರಿನಲ್ಲಿ ಮಗನನ್ನು ಹುಡುಕುತ್ತಾ ಬಂದಿದ್ದಾರೆ. ಈ ವೇಳೆ ಸರ್ವೆ ಹೊಳೆ ಬಳಿ ಮಗನ ಸ್ಕೂಟರ್ ಕಂಡು ಸಂಶಯಗೊಂಡ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಕೂಟರ್ ಮತ್ತು ಅದರಲ್ಲಿದ್ದ ವಸ್ತುಗಳು ಸನ್ಮಿತ್ ಗೆ ಸೇರಿದ್ದೆಂದು ಖಚಿತವಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಹೊಳೆಯಲ್ಲಿ ಸನ್ಮಿತ್ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಸನ್ಮಿತ್ ನಿಜವಾಗಿಯೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಗೆ ಪೊಲೀಸ್ ತನಿಖೆಯ ಬಳಿಕ ಉತ್ತರ ಸಿಗಬೇಕಾಗಿದೆ.