ಬಪ್ಪಪುಂಡೆಲು ಗದ್ದೆಯಲ್ಲಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಪುತ್ತೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಗಳ ಆಯೋಜನೆಯಲ್ಲಿ ಪಾಪೆಮಜಲು ಹಿರಿಯ ಪ್ರಾಥಮಿಕ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಜಂಟಿ ಆಶ್ರಯದಲ್ಲಿ ಜು .17 ರಂದು ಪಾಪೆಮಜಲಿನ ಬಪ್ಪಪುಂಡೆಲು ಹೊನ್ನಪ್ಪ ನಾಯ್ಕ ರವರ ಮನೆಯ ಆವರಣದ ಗದ್ದೆಯಲ್ಲಿ “ಗದ್ದೆಯಲ್ಲಿ ಒಂದು ದಿನ” ನೇಜಿ ನೆಡುವ ಕಾರ್ಯಕ್ರಮ ಮತ್ತು ಆಟೋಟ ಸ್ಫರ್ಧೆಗಳು ನಡೆಯಿತು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮನೆಯವರಾದ ಮಾಧವ ಮಂಗಳೂರು ಮಾತನಾಡಿ ಕೃಷಿ ಜೀವನ ಉತ್ತಮವಾಗಿದ್ದು, ಕೃಷಿಯ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಕೃಷಿಯನ್ನು ಉಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪಾಪೆಮಜಲು ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಿ .ದಿನೇಶ್ ಕುಮಾರ್ ಮಾತನಾಡಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಜನೆ ಮಾಡಿದ ನಮಗೆ ಉಣ್ಣಲು ಅಂದು ಕೃಷಿಯೇ ಜೀವಾಳವಾಗಿತ್ತು. ಮಕ್ಕಳು ಕೆಸರಲ್ಲಿನ ಅನುಭವ ಪಡೆದು ಅದನ್ನು ಮುಂದಿನ ಪೀಳಿಗೆಗೂ ಮುಂದುವರೆಸುವ ಕಾರ್ಯ ಮಾಡಬೇಕು. ಇಂತಹ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹಕ್ಕೆ ನಾವು ಬದ್ದರಿದ್ದೇವೆ’ ಎಂದು ಹೇಳಿದರು.
ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಮತ್ತು LT ಸುನಿತಾ ಎಂ ಮಾತನಾಡಿ ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಬಪ್ಪಪುಂಡೆಲು ಮನೆಯವರಾದ ಹೊನ್ನಪ್ಪ ನಾಯ್ಕ ಶುಭಹಾರೈಸಿದರು .ಎಸ್ ಡಿ ಎಂ ಸಿ ಕಾರ್ಯಧ್ಯಕ್ಷ ರಾದ ಇಕ್ಬಾಲ್ ಹುಸೈನ್ , ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ,ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರಾಹುಲ್ ಕೊಟ್ಟಾರಿ ಮತ್ತು ಇತಿಹಾಸ ಉಪನ್ಯಾಸಕ ಶರತ್ ಆಳ್ವ ಚನಿಲ , ಪಾಪೆಮಜಲು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು PRE LT ಮೇಬಲ್ ಡಿಸೋಜ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳಾದ ಮಾದವ, ರೋಹಿತ್ ರವರು ಉಪಸ್ಥಿತರಿದ್ದರು.
ಈ ಸಂದರ್ಭ ಪಾಪೆಮಜಲು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ತೆರೆಜ್ ಎಂ .ಸಿಕ್ವೇರಾ , ಪಾಪೆಮಜಲು ಪ್ರೌಢಶಾಲೆಯ ನಿವೃತ್ತ ವಿಜ್ಞಾನ ಶಿಕ್ಷಕಿ ಇಂದಿರಾ ಎಂ ಹಾಗೂ ಪಾಪೆಮಜಲು ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿ ಉತ್ತಮ ಅಂಕವನ್ನು ಪಡೆದ ಭವ್ಯಶ್ರೀ ಯವರನ್ನು ಸನ್ಮಾನಿಸಲಾಯಿತು .
ನೇಜಿ ನೆಡುವ ಕಾರ್ಯಕ್ರಮ , ಕೆಸರು ಗದ್ದೆಯಲ್ಲಿ ಓಟದ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ, ಉಪ್ಪು ಗೋಣಿ ಓಟ , ಕಂಬಳ ಸ್ಪರ್ಧೆ ಹೀಗೆ ಅನೇಕ ವಿಧದ ಸ್ಫರ್ಧೆಗಳಲ್ಲಿ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಊರಿನವರು ಸಂಭ್ರಮದಿಂದ ಪಾಲ್ಗೊಂಡರು. ಬಹುಮಾನಗಳ ಪ್ರಾಯೋಜಕತ್ವವನ್ನು ಸಿಬ್ಬಂದಿಯಾಗಿರುವ ಗಣೇಶ್ ನಾಯ್ಕ ದಂಪತಿಗಳು ವಹಿಸಿಕೊಂಡಿದ್ದರು.
ಸ್ಕೌಟ್ ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು , ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಮತ್ತು ಕಂಪ್ಯೂಟರ್ ವಿಜ್ಞಾನ ಉಪನ್ಯಾಸಕ ಚಂದ್ರಾಕ್ಷ ಕಾರ್ಯಕ್ರಮ ನಿರೂಪಿಸಿದರು.