ಸ್ವಂತ ಜಾಗವಿದ್ದರೂ ಕಟ್ಟಡ ಭಾಗ್ಯವಿಲ್ಲ..!ಅತಂತ್ರ ಸ್ಥಿತಿಯಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆ

0

ಬಾಡಿಗೆ ಕಟ್ಟಡವನ್ನೂ ಬಿಟ್ಟು ಕೊಡುವಂತೆ ನೋಟೀಸ್

ವಿಶೇಷ ವರದಿ: ಯೂಸುಫ್ ರೆಂಜಲಾಡಿ


ಪುತ್ತೂರು: ಜನಸಾಮಾನ್ಯರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೇ ಇಲ್ಲಿ ಶಿಕ್ಷೆಯೇ..! ಸ್ವಂತ ಕಟ್ಟಡವಂತೂ ಮೊದಲೇ ಇಲ್ಲ. ವಸತಿ ವ್ಯವಸ್ಥೆಯೂ ಇಲ್ಲ, ಶೌಚಾಲಯದ ಪರಿಸ್ಥಿತಿಯೂ ಅಯೋಮಯ. ಲಾಕಪ್ ವ್ಯವಸ್ಥೆಯಿಲ್ಲ, ಪೊಲೀಸ್ ಜೀಪು ಕೂಡಾ ಇಲ್ಲ, ಇದು ಗಡಿಭಾಗದ ಈಶ್ವರಮಂಗಲ ಪೊಲೀಸ್ ಹೊರಠಾಣೆಯಲ್ಲಿರುವ ಮೂಲಭೂತ ಸಮಸ್ಯೆಗಳ ಕುರಿತ ಕಥೆ-ವ್ಯಥೆ… ಹೌದು ಪೊಲೀಸರೆಂದರೆ ಜನರ ರಕ್ಷಕರು, ಸಮಾಜದ ಸ್ವಾಸ್ಥ್ಯ ಕಾಪಾಡುವವರು, ಅಪರಾಧಗಳನ್ನು ತಡೆಯುವವರು. ಅವರ ಕಾರ್ಯ ಚಟುವಟಿಕೆ ಇತರ ಎಲ್ಲ ಇಲಾಖೆಗಿಂತಲೂ ವಿಭಿನ್ನ. ಅವರ ಕೆಲಸಕ್ಕೆ ರಾತ್ರಿ ಹಗಲು ಎಂಬ ವ್ಯತ್ಯಾಸವಿಲ್ಲ. ಯಾವ ಸಂದರ್ಭದಲ್ಲೂ ತಮ್ಮ ಕೆಲಸಕ್ಕೆ ಸಜ್ಜಾಗಿ ನಿಂತಿರಬೇಕಾದ ಪರಿಸ್ಥಿತಿ ಅವರದ್ದು. ಹಾಗಿದ್ದ ಮೇಲೆ ಅದೇ ಇಲಾಖೆಗೆ ಸರಿಯಾದ ಕಟ್ಟಡ, ಸಿಬ್ಬಂದಿ ಹಾಗೂ ಇನ್ನಿತರ ಸೌಕರ್ಯಗಳು ಇಲ್ಲವೆಂದರೆ ಹೇಗೆ..? ಆದರೆ ಇಲ್ಲಿ ಅದೆಲ್ಲವೂ ಮರೀಚಿಕೆ.


ಸಮಸ್ಯೆಗಳ ಮಧ್ಯೆಯೇ ಕಾರ್ಯನಿರ್ವಹಣೆ:
ಕಾವು ಪ್ರಾ.ಕೃ.ಪ.ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ಕಟ್ಟಡದಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆ ಕಾರ್ಯಾಚರಿಸುತ್ತಿದೆ. ಸಂಘದ ಕಟ್ಟಡದಲ್ಲಿ 2011ನೇ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ಆಗಿನ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರವರು ಈಶ್ವರಮಂಗಲ ಹೊರಠಾಣೆಯನ್ನು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ಅದೇ ಕಟ್ಟಡದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಊರಿಗೆ ರಕ್ಷಣೆ ನೀಡಿ ನೆಮ್ಮದಿಯಲ್ಲಿ ಮಲಗುವಂತೆ ಮಾಡುವ ಪೊಲೀಸರಿಗೇ ಸರಿಯಾಗಿ ನಿದ್ದೆಯಿಲ್ಲ. ಇಲ್ಲಿ ಏನಿದ್ದರೂ ಸಮಸ್ಯೆಗಳದ್ದೇ ಕಾರುಬಾರು.ಠಾಣೆಯ ಪ್ರವೇಶ ಕೊಠಡಿಯಲ್ಲಿ ಸರಿಯಾಗಿ ಅತ್ತಿಂದಿತ್ತ ತಿರುಗಲೂ ಸ್ಥಳವಿಲ್ಲ. ಪೊಲೀಸ್ ಅಽಕಾರಿಗಳಿಗೆ ಉಳಿದುಕೊಳ್ಳಲು ಸರಿಯಾದ ವಸತಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಕ್ಕಟ್ಟಿನ ಕೊಠಡಿಯಲ್ಲೇ ದಿನ ಕಳೆಯುತ್ತಿದ್ದು ತಮ್ಮ ಬಟ್ಟೆ ಬರೆಗಳನ್ನೂ ಅದೇ ಇಕ್ಕಟ್ಟಿನಲ್ಲಿ ಇಡುತ್ತಿದ್ದಾರೆ. ಅಡುಗೆ ಮಾಡುವುದಕ್ಕೂ ಹೇಳಿಕೊಳ್ಳುವಂಥ ವ್ಯವಸ್ಥೆ ಇಲ್ಲ. ಕಟ್ಟಡದ ಹೊರಭಾಗದಲ್ಲಿರುವ ಶೌಚಾಲಯದ ವ್ಯವಸ್ಥೆ ಕೂಡಾ ಅತಂತ್ರ ಸ್ಥಿತಿಯಲ್ಲಿದೆ.


9ರಲ್ಲಿ ಇರುವುದು ಬರೀ 3 ಮಂದಿ..!:
ಈಶ್ವರಮಂಗಲ ಹೊರಠಾಣೆಯಲ್ಲಿ ಎಎಸ್ಸೈ ಸೇರಿ ಒಟ್ಟು 9 ಹುದ್ದೆ ಇದೆ. ಆದರೆ ಸದ್ಯಕ್ಕೆ ಒಬ್ಬರು ಎಎಸ್ಸೈ, ಒಬ್ಬರು ಎಚ್.ಸಿ ಹಾಗೂ ಇನ್ನೊಬ್ಬರು ಪಿ.ಸಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಹೆಸರಿಗೆ 9 ಹುದ್ದೆ ಇದ್ದರೂ ಬರೀ 3 ಹುದ್ದೆ ಮಾತ್ರ ಭರ್ತಿಯಾಗಿದ್ದು ಅವರೇ ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಲ್ಲಿರುವ ಪೊಲೀಸರು ಮೂಲಭೂತ ಸೌಕರ್ಯ ವಂಚಿತವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನಾರ್ಹವೇ ಸರಿ.


ಮೌನಕ್ಕೆ ಶರಣಾಗುವ ಪೊಲೀಸರು…!:
ಈಶ್ವರಮಂಗಲ ಹೊರಠಾಣೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಅಲ್ಲಿನ ಪೊಲೀಸರನ್ನು ಕೇಳಿದರೆ ಈ ಬಗ್ಗೆ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮಾಧ್ಯಮಕ್ಕೆ ಹೇಳಿಕೆ ನೀಡಿ ಮೇಲಽಕಾರಿಗಳ ಕೆಂಗಣ್ಣಿಗೆ ಗುರಿಯಾದರೆ ಎಂಬ ಭಯ ಅವರನ್ನು ಆವರಿಸಿರುವಂತಿದೆ. ಆದರೂ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಅದುಮಿಟ್ಟು ಒತ್ತಡದ ಮಧ್ಯೆಯೂ ರಾತ್ರಿ-ಹಗಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಕೇರಳ ಗಡಿ ಪ್ರದೇಶ:
ಈಶ್ವರಮಂಗಲ ಗಡಿ ಪ್ರದೇಶ. ಇಲ್ಲಿಂದ ಅತ್ತ ಕೇರಳ ಗಡಿಗೆ ಇರುವುದು ಬರೇ 5 ಕಿ.ಮೀ ಅಂತರ. ಈ ಠಾಣಾ ವ್ಯಾಪ್ತಿಯಲ್ಲಿ 7 ಬಾರ್‌ಗಳಿವೆ, 5 ಪೆಟ್ರೋಲ್ ಬಂಕ್ ಇದೆ. ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಕಾರಣ ಇಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಅನಿವಾರ್ಯ. ಹೊರಠಾಣೆಯಾದರೂ ವ್ಯವಸ್ಥಿತ ಕಟ್ಟಡದೊಂದಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸುವುದು ಅನಿವಾರ್ಯ. ಈ ಬಗ್ಗೆ ಜನರ ಆಗ್ರಹಗಳೂ ಹಿಂದಿನಿಂದಲೂ ವ್ಯಕ್ತವಾಗುತ್ತಿದೆ.


ಬಾಡಿಗೆ ಕಟ್ಟಡದಲ್ಲೇ ಕರ್ತವ್ಯ:
ಇದೀಗ ಸಹಕಾರಿ ಸಂಘದ ಕಟ್ಟಡ ವಿಸ್ತರಿಸುವ ನಿಟ್ಟಿನಲ್ಲಿ ಕಟ್ಟಡವನ್ನು ಬಿಟ್ಟುಕೊಡುವಂತೆ ಪೊಲೀಸ್ ಇಲಾಖೆಗೆ ಸಂಘದ ಆಡಳಿತ ಮಂಡಳಿ ಮನವಿ ಮಾಡಿದೆ. ಇದರಿಂದಾಗಿ ಹೊರಠಾಣೆಗೆ ಬೇರೆ ಕಟ್ಟಡ ವ್ಯವಸ್ಥೆ ತುರ್ತಾಗಿ ಬೇಕಾಗಿದೆ. ಗಡಿಪ್ರದೇಶದ ಜೊತೆಗೆ ಈಶ್ವರಮಂಗಲ ಅಭಿವೃದ್ದಿ ಹೊಂದುತ್ತಿರುವ ಪೇಟೆ. ಮಾತ್ರವಲ್ಲದೇ ನೆಟ್ಟಣಿಗೆ ಮುಡ್ನೂರು, ಪಡುವನ್ನೂರು, ಬಡಗನ್ನೂರು ಮತ್ತು ಮಾಡ್ನೂರು ಮೊದಲಾದ ಗ್ರಾಮಗಳು ಇದೇ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಮೊದಲಾದವುಗಳು ನಡೆದಲ್ಲಿ ಪ್ರಾಥಮಿಕ ತನಿಖಾ ವರದಿ ಸಂಪ್ಯ ಠಾಣೆಯಲ್ಲಿ ಆಗುವುದರಿಂದ ಆರೋಪಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಎ-ಐಆರ್ ಮಾಡಬೇಕಾಗುತ್ತದೆ. ಇದು ಬಲು ತ್ರಾಸದಾಯಕ ಕೂಡಾ. ಬಂಽಸಲ್ಪಟ್ಟವರನ್ನು ಕೂಡಿ ಹಾಕಲು ಲಾಕಪ್ ವ್ಯವಸ್ಥೆಯೂ ಇಲ್ಲಿಲ್ಲ. ಹಾಗಿರುವಾಗ ಇಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯೊಂದೇ ಇಲ್ಲಿಗೆ ಪರಿಹಾರ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದೆ.

ಸ್ವಂತ ಕಟ್ಟಡಕ್ಕೆ ಅನುದಾನಕ್ಕೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ-ಅಶೋಕ್ ರೈ
ಸಮಸ್ಯೆ ವಿಚಾರವಾಗಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ‘ಸುದ್ದಿ’ ಸಂಪರ್ಕಿಸಿದಾಗ ಈಶ್ವರಮಂಗಲದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಪೊಲೀಸ್ ಹೊರಠಾಣೆಗೆ ಸ್ವಂತ ಕಟ್ಟಡದ ಅವಶ್ಯಕತೆಯಿದೆ. ಗಡಿ ಪ್ರದೇಶ ಆದ ಕಾರಣ ಅಲ್ಲಿ ಈ ಹಿಂದೆಯೇ ಹೊರಠಾಣಾ ಕಟ್ಟಡ ನಿರ್ಮಾಣ ಆಗಬೇಕಿತ್ತು. ಕಟ್ಟಡಕ್ಕೆ ಬೇಕಾದ ಜಾಗವಿದ್ದು ನೂತನ ಕಟ್ಟಡ ನಿರ್ಮಾಣ ಮಾಡಲು ಅನುದಾನ ಒದಗಿಸುವಂತೆ ಗೃಹ ಸಚಿವರ ಜೊತೆ ಮಾತನಾಡುತ್ತೇನೆ. ಮಾತ್ರವಲ್ಲದೇ ಸಿಬ್ಬಂದಿ ಕೊರತೆ ನೀಗಿಸುವ ಬಗ್ಗೆಯೂ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕಟ್ಟಡವನ್ನು ಬಿಟ್ಟುಕೊಡುವಂತೆ ನೊಟೀಸ್ ಕೊಟ್ಟಿದ್ದೇವೆ
ಕಳೆದ 12 ವರ್ಷಗಳಿಂದ ಕಾವು ಪ್ರಾ.ಕೃ.ಕೃ.ಪ.ಸಹಕಾರ ಸಂಘದ ಈಶ್ವರಮಂಗಲ ಶಾಖೆಯ ಕಟ್ಟಡದಲ್ಲಿ ಪೊಲೀಸ್ ಹೊರಠಾಣೆ ಕಾರ್ಯಾಚರಿಸುತ್ತಿದ್ದು ಸಂಘದ ಅವಶ್ಯಕತೆಗನುಗುಣವಾಗಿ ಕಟ್ಟಡವನ್ನು ಬಿಟ್ಟುಕೊಡುವಂತೆ ಈ ಹಿಂದೆಯೇ ಕೆಲವು ಬಾರಿ ನಾವು ಮನವಿ ಮಾಡಿಕೊಂಡಿದ್ದೆವು. ಪೊಲೀಸ್ ಠಾಣೆಗೆ ಪರ್ಯಾಯ ವ್ಯವಸ್ಥೆ ಆಗದೇ ಇದ್ದುದರಿಂದ ನಾವು ಮುಂದುವರಿಸಿದ್ದೆವು. ಇದೀಗ ಸಂಘದ ವ್ಯವಹಾರ ಜಾಸ್ತಿಯಿದ್ದು ಅಡಿಕೆ ದಾಸ್ತಾನಿಡಲು, ಗೊಬ್ಬರ ಇಡಲು ಸ್ಥಳಾವಕಾಶದ ಕೊರತೆಯಿದ್ದು ಸಂಘದ ಸ್ವಂತ ಉಪಯೋಗಕ್ಕೆ ಬೇಕಾಗಿ ಕಟ್ಟಡವನ್ನು ವಾಪಸ್ ಬಿಟ್ಟುಕೊಡುವಂತೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯವರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ಜು.31ರಂದು ಕಟ್ಟಡವನ್ನು ಖಾಲಿ ಮಾಡುವುದಾಗಿ ಲಿಖಿತವಾಗಿ ನಮಗೆ ಭರವಸೆ ಕೊಟ್ಟಿದ್ದಾರೆ.
-ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷರು ಪ್ರಾ.ಕೃ.ಪ.ಸಹಕಾರ ಸಂಘ ಕಾವು

ನೂತನ ಕಟ್ಟಡ ಆಗಲೇಬೇಕಾಗಿದೆ
ಈಶ್ವರಮಂಗಲ ಗಡಿಭಾಗವಾಗಿರುವುದರಿಂದ ಮತ್ತು ಪೊಲೀಸರ ಕಾರ್ಯದಕ್ಷತೆಗೆ ಅನುಕೂಲಕ್ಕೆ ಬೇಕಾಗಿ ನೂತನ ಕಟ್ಟಡದ ನಿರ್ಮಾಣ ಅತೀ ಅಗತ್ಯವಾಗಿ ಬೇಕಾಗಿದೆ. ಈಶ್ವರಮಂಗಲ ಹೊರಠಾಣೆ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು ಅಪರಾಧ ಚಟುವಟಿಕೆ ನಡೆದಾಗ ಮತ್ತು ಇನ್ನಿತರ ಅಹಿತಕರ ಘಟನೆ ನಡೆದಾಗ ಪೊಲೀಸರ ಅವಶ್ಯಕತೆ ಇದ್ದೇ ಇರುತ್ತದೆ. ಪೊಲೀಸ್ ಠಾಣೆಯ ವ್ಯವಸ್ಥೆಯೂ ಸರಿಯಿಲ್ಲ, ಸಿಬ್ಬಂದಿಗಳ ಕೊರತೆಯೂ ಇದೆ. ಈ ಅವ್ಯವಸ್ಥೆ ಶೀಘ್ರದಲ್ಲೇ ಬಗೆಹರಿಯಬೇಕಾಗಿದ್ದು ಈಶ್ವರಮಂಗಲಕ್ಕೆ ಪೊಲೀಸ್ ಕಟ್ಟಡ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಈ ಬಗ್ಗೆ ನಾವು ಶಾಸಕ ಅಶೋಕ್ ರೈ ಜೊತೆ ಮಾತನಾಡುತ್ತೇವೆ.
-ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ನಿರ್ದೇಶಕರು ಮಧುರಾ ಸ್ಕೂಲ್ ಮೇನಾಲ

ಕಟ್ಟಡದ ಬೇಡಿಕೆ ಈಡೇರಬೇಕಾಗಿದೆ
ಸುಮಾರು 8 ವರ್ಷಗಳ ಹಿಂದೆ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಮುಖಾಂತರ ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ನೀಡಲಾಗಿತ್ತು. ಶಕುಂತಳಾ ಶೆಟ್ಟಿಯವರು ಬಹಳ ಪ್ರಯತ್ನ ಪಟ್ಟಿದ್ದರೂ ಕೂಡಾ ಕೊನೆಗೆ ಕಟ್ಟಡ ನಿರ್ಮಾಣ ಕಾರ್ಯ ಬಾಕಿಯಾಗಿತ್ತು. ಇದೀಗ ಶಾಸಕ ಅಶೋಕ್ ರೈ ಅವರ ಗಮನಕ್ಕೂ ತಂದಿದ್ದೇವೆ. ಆಗಿನ ಗೃಹ ಸಚಿವರೇ ಈಗಲೂ ಗೃಹ ಸಚಿವರಾಗಿದ್ದಾರೆ. ಕಟ್ಟಡಕ್ಕೆ ಅನುದಾನ ಒದಗಿಸಿ ಶೀಘ್ರದಲ್ಲೇ ಕಟ್ಟಡ ನಿರ್ಮಿಸಲು ಶಾಸಕ ಅಶೋಕ್ ರೈ ಮೂಲಕ ಗೃಹ ಸಚಿವರಿಗೆ ಒತ್ತಡ ಹಾಕುವ ಕಾರ್ಯ ಮಾಡುತ್ತೇವೆ.
-ಶ್ರೀರಾಂ ಪಕ್ಕಳ, ಸದಸ್ಯರು ನೆ.ಮುಡ್ನೂರು ಗ್ರಾ.ಪಂ

LEAVE A REPLY

Please enter your comment!
Please enter your name here