ಅಖಂಡ ಭಾರತದ ಕನಸಿಗೆ ಕಾರ್ಗಿಲ್ ವಿಜಯೋತ್ಸವ ಬುನಾದಿಯಾಗಲಿ- ಶ್ರೀಕಾಂತ್ ಶೆಟ್ಟಿ
- ಕಾರ್ಗಿಲ್ ವೀರ ಯೋಧರ ಸಂಸ್ಮರಣೆ ಹಾಗೂ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ
ಮರಣೋತ್ತರ ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಪೋಷಕರು ಭಾಗಿ - ಕಾರ್ಯಕ್ರಮದಲ್ಲಿ ಭಾಗಿಯಾದ ಸುಮಾರು 30 ನಿವೃತ್ತ ಯೋಧರಿಗೆ ಸನ್ಮಾನ
ಪುತ್ತೂರು: “ಸಾವಿರ ವರ್ಷಗಳ ಹೋರಾಟದ ಬಳಿಕವೂ ತನ್ನತನವನ್ನು ಉಳಿಸಿಕೊಂಡ ಏಕೈಕ ದೇಶವೆಂದರೆ ಭಾರತ. ಈ ಜಗತ್ತಿನಲ್ಲಿ ಹೊನ್ನಿಗಾಗಿ, ಹೆಣ್ಣಿಗಾಗಿ, ಅಧಿಕಾರಕ್ಕಾಗಿ ಯುದ್ಧಗಳು ನಡೆದಿದೆ. ಆದರೆ ತನ್ನ ಸಂಸ್ಕೃತಿ, ತನ್ನ ಸಭ್ಯತೆಯ ಉಳಿವಿಗಾಗಿ ಒಂದು ಸಾವಿರ ವರ್ಷಗಳ ನಿರಂತರ ಯುದ್ಧವೇನಾದರೂ ನಡೆದಿದ್ದರೆ, ಅದು ಈ ಪುಣ್ಯಭೂಮಿ ಭಾರತದಲ್ಲಿ ಮಾತ್ರ” ಎಂದು ಖ್ಯಾತ ವಾಗ್ಮಿಗಳಾದ ಶ್ರೀಕಾಂತ್‌ಶೆಟ್ಟಿ ಅವರು ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ 25 ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ ʼಕಾರ್ಗಿಲ್‌ವಿಜಯ – ಯೋಧ ನಮನʼ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. “ಈ ದೇಶ ಇಂದು ಪ್ರಜಾಸತ್ತಾತ್ಮಕ ದೇಶವಾಗಿ ಉಳಿದಿದೆ ಎಂದಾದರೆ ಅದಕ್ಕೆ ಹಿಂದು ಬಹುಸಂಖ್ಯಾತವಾಗಿರುವಂತಹ ನಮ್ಮ ಸಾಂಸ್ಕೃತಿಕ ಬುನಾದಿಯೇ ಕಾರಣ. ದೇಶ ಎಂದರೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ. ದೇಶಕ್ಕೆ ಅಪಾಯ ಒದಗಿದಾಗಲೆಲ್ಲಾ ಜಾತಿ, ನೀತಿ, ಮತ, ಪಂಥವನ್ನು ಬಿಟ್ಟು ಈ ದೇಶ ಒಂದಾಗಿದೆ. ಒಬ್ಬೊಬ್ಬ ಯೋಧನ ರಾಷ್ಟ್ರ ಪ್ರೇಮ ಹಾಗೂ ಈ ನೆಲದ ಋಣಭಾವದಿಂದಲೇ ಇಂದು ದೇಶ ಸುಭದ್ರವಾಗಿದೆ. ಈ ದೇಶವನ್ನು ಅಖಂಡ ಭಾರತವನ್ನಾಗಿ ಮಾಡಬೇಕು ಎನ್ನುವ ಹಂಬಲಕ್ಕೆ ಕಾರ್ಗಿಲ್ ವಿಜಯ ಸಂಭ್ರಮಾಚರಣೆ ಬುನಾದಿಯಾಗಬೇಕಾಗಿದೆ. ನಮ್ಮ ಪೂರ್ವಜರು ಮಾಡಿದಂತಹ ತ್ಯಾಗ, ಬಲಿದಾನಗಳು ನಮ್ಮ ಮಕ್ಕಳಿಗೆ ಪ್ರೇರಣೆಯನ್ನು ನೀಡಲಿ. ಭಾರತವನ್ನು ವಿಶ್ವಗುರುವನ್ನಾಗಿ ಅಲಂಕರಿಸಲು ಬೇಕಾದ ಕೆಲಸ ಕಾರ್ಯಗಳು ನಮ್ಮಿಂದ ಸಾಧ್ಯವಾಗಲಿ” ಎಂದರು. ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಮರಣೋತ್ತರ ಶೌರ್ಯ ಚಕ್ರ ಪುರಸ್ಕೃತ ಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಪೋಷಕರಾದ ಎಂ. ವೆಂಕಟೇಶ್ ಹಾಗೂ ಅನುರಾಧಾ ವೆಂಕಟೇಶ್ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಎಂ. ವೆಂಕಟೇಶ್ ಅವರು ಮಾತನಾಡಿ “ದೇಶಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಮುಂದಿನ ಜನಾಂಗವನ್ನು ಸ್ಪಷ್ಟ ಗುರಿಯೆಡೆಗೆ ಬೆಳೆಸುವ, ಅಂತೆಯೇ ದೇಶಪ್ರೇಮವನ್ನು ಮೂಡಿಸುವ ಜವಾಬ್ದಾರಿ ಹೊತ್ತಿರುವ ಶಿಕ್ಷಣ ಸಂಸ್ಥೆಯನ್ನು ನಡೆಸುವುದು ಕೂಡ ಒಂದು ಅತ್ಯುತ್ತಮ ದೇಶಸೇವೆಯಾಗಿದೆ” ಎಂದರು. ಬಳಿಕ ಅನುರಾಧಾ ವೆಂಕಟೇಶ್ ಅವರು “ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿಯನ್ನು ನಮ್ಮ ಯೋಧರು ನಿಭಾಯಿಸುತ್ತಿದ್ದಾರೆ. ಗಡಿಯನ್ನು ಕಾಯುವ ಯೋಧ, ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಮಾದರಿಯಾಗಬೇಕು. ಅತ್ಯಂತ ವಿಷಮಕರ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡುವವನೇ ಯೋಧನಾಗಿರುತ್ತಾನೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದೇ ಅನಿಶ್ಚಿತತೆಗೆ ಹೆದರಿ ಜೀವನವನ್ನು ಬಲಿಕೊಡದೆ, ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾ ಬದುಕೆಂಬ ಕುರುಕ್ಷೇತ್ರದ ಯೋಧರಾಗಬೇಕು” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳ ವೀರಗಾಥೆಯನ್ನು ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಿ ಸ್ಮರಿಸಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ವಹಿಸಿಕೊಂಡು “ಯೋಧರ ಬದುಕಿನಲ್ಲಿ ರಾಷ್ಟ್ರದ ಭದ್ರತೆ ಪ್ರಮುಖವಾಗಿರುತ್ತದೆ. ಇಂದಿನ ವಿದ್ಯಾರ್ಥಿಗಳು ದೇಶದ ಒಳಿತಿನ ಚಿಂತನೆಯನ್ನು ಮಾಡಬೇಕು. ಗಡಿಯನ್ನು ಕಾಯುವ ಯೋಧರು ನಮಗೆ ಪ್ರೇರಣೆಯಾಗಲಿ” ಎಂದು ಆಶಿಸಿದರು. ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಮಂಡಳಿ ಸದಸ್ಯರು, ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತಮಂಡಳಿ ಸದಸ್ಯರು, ಉಪನ್ಯಾಸಕರು, ಹಾಗೂ ಎನ್.ಸಿ.ಸಿ ಕೆಡೆಟ್ ಗಳು ಭಾಗವಹಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ, ಉಪಪ್ರಾಂಶುಪಾಲರಾದ ದೇವಿಚರಣ್ ರೈ ಎಂ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗಿಯಾದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ.ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಅವರು ವಂದಿಸಿದರು. ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
ಯೋಧ ನಮನ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 25 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ʼಕಾರ್ಗಿಲ್‌ವಿಜಯ – ಯೋಧ ನಮನʼ ಕಾರ್ಯಕ್ರಮದಲ್ಲಿ ಸುಮಾರು 30 ಕ್ಕೂ ಹೆಚ್ಚು ನಿವೃತ್ತ ಯೋಧರು ಪಾಲ್ಗೊಂಡಿದ್ದರು. ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಯ ಗೌರವಾರ್ಥವಾಗಿ ಇವರಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. |