ಆಟಿ ತಿಂಗಳ ಆಚರಣೆ ಎಂಬುದೇ ಇಲ್ಲ-ಕುಂಬ್ರ ದುರ್ಗಾಪ್ರಸಾದ್ ರೈ
ತುಳುನಾಡಿನಲ್ಲಿ ಆಟಿ ತಿಂಗಳು ವಿಶೇಷ ತಿಂಗಳಾಗಿದೆ-ಸುಂದರ ಪೂಜಾರಿ ಬಡಾವು
ಆಟಿ ತಿಂಗಳ ಕಷ್ಟದ ಜೀವನ, ಸಂಪ್ರದಾಯದ ಅರಿವು ಬೇಕು-ಶೈಲಜಾ ಸುದೇಶ್
ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಘಟಕದ ವತಿಯಿಂದ ಆಟಿ ಆಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 21ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಪುತ್ತೂರು ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ವಿಶೇಷ ತಿಂಗಳಾಗಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳು. ಆಟಿಯಲ್ಲಿ ಸಾಂಪ್ರದಾಯಿಕ ತಿನಿಸುಗಳನ್ನೇ ಹಿರಿಯರು ತಿನ್ನುತ್ತಿದ್ದರು. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವುದು ಇಂತಹ ಸಂಪ್ರದಾಯ ಇರುತ್ತಿತ್ತು. ಒಳ್ಳೆಯ ಕಾರ್ಯಕ್ರ ಆಯೋಜನೆ ಮಾಡಿದ್ದೀರಿ ಎಂದು ಹೇಳಿ ಶುಭಹಾರೈಸಿದರು.
ಸಂಪನ್ಮೂಲ ವಕೀಲರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ತುಳುನಾಡಿನಲ್ಲಿ ವರ್ಷದ ಎಲ್ಲಾ ತುಳು ತಿಂಗಳು ಒಂದೊಂದು ವಿಶಿಷ್ಟತೆ, ಸಂಪ್ರದಾಯವನ್ನು ಹೊಂದಿದೆ. ಅದರಲ್ಲಿ ಆಟಿ ತಿಂಗಳಿಗೆ ವಿಶೇಷ ಮಹತ್ವ ಇದೆ. ಆಟಿ ತಿಂಗಳ ಆಚರಣೆ ಎಂಬುದೇ ಇಲ್ಲ. ಇಂದು ವಿವಿಧ ಸಂಘ ಸಂಸ್ಥೆಗಳು ಆಟಿ ಅಚರಣೆ ಮಾಡುತ್ತಿವೆ ಎಂದರು. ಆಟಿಯಲ್ಲಿ ಯಾವುದೇ ಗಿಡ ನೆಟ್ಟರೂ ಚಿಗುರುವುದಿಲ್ಲ. ಈ ಕಾರಣದಿಂದ ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಮದುಮಗಳನ್ನು ತವರು ಮನೆಗೆ ಕಳುಹಿಸುವ ಸಂಪ್ರದಾಯ ಬಂದಿದೆ. ವರ್ಷದ ಇತರ ತಿಂಗಳಿನಲ್ಲಿ ನಾವು ಏನು ಮಾಡಿದ್ದೇವೋ ಅದನ್ನು ಯೋಚನೆ ಮಾಡುವ ತಿಂಗಳು ಆಟಿ. ಗದ್ದೆ ಬೇಸಾಯ ಮುಗಿದು ವಿಪರೀತ ಮಳೆ ಬರುವ ಸಮಯದ ಆಟಿಯಲ್ಲಿ ಹೊರಗೆ ಹೋಗಲಾರದ ಸ್ಥಿತಿ ಹಿಂದಿನ ಕಾಲದಲ್ಲಿ ಇತ್ತು. ಪತ್ತನಾಜೆ ಸಮಯದಲ್ಲಿ ತೆಗೆದಿಟ್ಟ ಧವಸಧಾನ್ಯಗಳನ್ನು ತೆಗಿದಿಟ್ಟರೆ ಮಾತ್ರ ಆಟಿ ತಿಂಗಳಿನಲ್ಲಿ ನಾವು ಊಟಮಾಡುವಂತಹ ಕಾಲ ಅಂದು ಇತ್ತು. ಆಟಿ ತಿಂಗಳಿನಲ್ಲಿ ಗೆಡ್ಡೆಗೆಣಸು, ಕೆಸು ಮುಂತಾದ ಪದಾರ್ಥಗಳನ್ನೇ ತಿನ್ನುತ್ತಿದ್ದರು. ಇಂತಹ ಬಡತನದ ಜೀವನ ಆಟಿ ತಿಂಗಳಿನದ್ದಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶೈಲಜಾ ಸುದೇಶ್ ಮಾತನಾಡಿ ನಮ್ಮ ಹಿರಿಯರಲ್ಲಿ ಬಡತನವಿತ್ತು ಗುಣದಲ್ಲಿ ಶ್ರೀಮಂತಿಕೆಯಿತ್ತು, ತುಂಬಿದ ಸಂಸಾರದಲ್ಲಿ ಸಂತೋಷವಿತ್ತು ಕೂಡು ಕುಟುಂಬದಲ್ಲಿ ರಕ್ಷಣೆಯಿತ್ತು ಈಗ ಎಲ್ಲವೂ ಇದೆ ಆದರೆ ಗುಣದಲ್ಲಿ ಬಡತನವಿದೆ ಎಂದರು. ಇಂತಹ ಕಾರ್ಯಕ್ರಮದಲ್ಲಿ ಹಿರಿಯರಿಗಿಂತಲೂ ಕಿರಿಯರ ಭಾಗವಹಿಸುವಿಕೆ ಅತೀ ಅಗತ್ಯ ಆಗ ಅವರಿಗೆ ಹಿಂದಿನ ಕಷ್ಟದ ದಿನಗಳು, ಅವರ ಜೀವನ ಶೈಲಿ, ಆಚಾರ ವಿಚಾರ, ಸಂಪ್ರದಾಯಗಳ ಅರಿವು ಮೂಡಬಹುದು ಎಂದರು. ಸಂಘದ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಪ್ರತಿಭಾ ಪುರಸ್ಕಾರ:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯ ರಮೇಶ್ ಕೆಮ್ಮಾಯಿರವರ ಪುತ್ರಿ ಯಾಶಿಕಾ ರವರನ್ನು ಸನ್ಮಾನಿಸಲಾಯಿತು.
ಚೆನ್ನಮಣೆ ಆಟ, ಲಿಂಬೆ ಚಮಚ ಓಟ, ಬಲೂನ್ ಊದುವುದು, ಮ್ಯುಸಿಕಲ್ ಚೇರ್, ಬಲೂನ್ ಎಟಾಕ್, ಕ್ವಿಝ ಮುಂತಾದ ಒಳಾಂಗಣ ಅಟಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ಪ್ರಕರ್ತರ ಸಂಘದ ಕೊಶಾಧಿಕಾರಿ ಕವಿತಾ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಸಂತೋಷ್‌ನಗರ, ಸದಸ್ಯರಾದ ತಾರನಾಥ್ ಪೊಸೊಳಿಕೆ ಮತ್ತು ಮೋಹನ್ ಶೆಟ್ಟಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸದಸ್ಯೆ ಚಿತ್ರಾಂಗಿಣಿ ಸತ್ಯಪ್ರಕಾಶ್ ಪ್ರಾರ್ಥಿಸಿದರು, ಉಪಾಧ್ಯಕ್ಷ ಪಿ.ಸದಾಶಿವ ಭಟ್ ಸನ್ಮಾನ ಕಾರ್ಯಕ್ರಮ ಹಾಗೂ ಮಾಜಿ ಉಪಾಧ್ಯಕ್ಷ ಶರತ್ ಕುಮಾರ್ ಪಾರ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ವಂದಿಸಿದರು. ಜೊತೆ ಕಾರ್ಯದರ್ಶಿ ದಿಲ್‌ಶಾನ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಒ ಸೃಜನ್ ಊರುಬೈಲು, ಸುದ್ದಿ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಂ.ನರೇಂದ್ರ, ಪರಿವಾರ ಕ್ರೆಡಿಟ್ ಕೊ-ಓಪರೇಟಿವ್ ಸೊಸೈಟಿಯ ನಿರ್ದೇಶಕ ಸುದೇಶ್ ಕುಮಾರ್ ಚಿಕ್ಕಪುತ್ತೂರು, ಸುದ್ದಿಬಿಡುಗಡೆಯ ವರದಿಗಾರರಾದ ಉಮಾಪ್ರಸಾದ್ ರೈ ನಡುಬೈಲು, ಲೊಕೇಶ್ ಬನ್ನೂರು, ಶೇಖ್ ಜೈನುದ್ದೀನ್, ಯತೀಶ್ ಉಪ್ಪಳಿಗೆ, ಹರಿಪ್ರಸಾದ್, ಅಶ್ವಥ್ ಬೆಟ್ಟಂಪಾಡಿ ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಸದಾಶಿವ ಶೆಟ್ಟಿ ಮಾರಂಗ, ಯೂಸುಫ್ ರೆಂಜಿಲಾಡಿ, ಸದಸ್ಯರಾದ ಶ್ರಿಧರ್ ರೈ ಕೊಡಂಬು, ಶಿವಕುಮಾರ್ ಈಶ್ವರಮಂಗಲ, ರಮೇಶ್ ಕೆಮ್ಮಾಯಿ, ಪ್ರಜ್ವಲ್ ತಾರಿಗುಡ್ಡೆ, ಆದಿತ್ಯ ಈಶ್ವರಮಂಗಲ, ಅಕ್ಷತಾ ರವಿಚಂದ್ರ, ಜಯಲಕ್ಷ್ಮೀ, ಶ್ವೇತಾ, ಅಕ್ಷಯ್ ಮತ್ತಿತರರು ಉಪಸ್ಥಿತರಿದ್ದರು.
ಆಟಿದ ವಿಶೇಷ ತಿನಿಸುಗಳ ಭೋಜನ ಕೂಟ
ಆಟಿ ಆಚರಣೆಯಯಲ್ಲಿ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ಒಳಗೊಂಡ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಪತ್ರೊಡೆ, ಪೂಂಬೆ ಪಲ್ಯ, ಹಲಸಿನ ಪಾಯಸ, ಚಟ್ನಿ ಸೇರಿದಂತೆ ವಿವಿಧ ಖಾದ್ಯಗಳು ವಿಶೇಷವಾಗಿತ್ತು.