ಪುತ್ತೂರು: ಮಂಗಳವಾರ ಎಲ್ಲೆಡೆ ಧಾರಾಕಾರ ಮಳೆ ಸುರಿದಿದೆ. ಬಹುತೇಕ ಕಡೆಗಳಲ್ಲಿ ಹೊಳೆ,ನದಿಗಳು ತುಂಬಿ ಹರಿಯುತ್ತಿತ್ತು. ಕೆಲವು ಕಡೆಗಳಲ್ಲಿ ಗಾಳಿಯೂ ಬೀಸಿತ್ತು. ಮಂಗಳವಾರ ಇಡೀ ದಿನ ಜನ ಆತಂಕದಲ್ಲೇ ಕಳೆಯುವಂತಾಗಿತ್ತು. ಮಳೆಗೆ ಏನಾಗುತ್ತದೋ ಎಂಬ ಭಯ ಪ್ರತೀಯೊಬ್ಬರನ್ನೂ ಕಾಡುತ್ತಿತ್ತು. ಇದೆಲ್ಲದರ ನಡುವೆ ಕುಂಬ್ರ ಮೆಸ್ಕಾಂ ಸಬ್ ಸ್ಟೇಷನ್ ಸಿಬಂದಿಗಳು ಇಡೀ ದಿನ ತಮ್ಮ ನಿತ್ಯ ಕಾರ್ಯದಲ್ಲೇ ನಿರತರಾಗಿದ್ದು ಮಾತ್ರವಲ್ಲದೆ ಸಾಹಸೀ ಕೆಲಸವನ್ನು ಮಾಡಿ ಜನರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.
ಒಳಮೊಗ್ರು ಗ್ರಾಮದ ಬೊಳ್ಳಾಡಿ ಕುಕ್ಕುಮುಗೇರು ಮಾಡದ ಬಳಿ ಉಪ್ಪಳಿಗೆ ಮರ ಎಚ್ ಟಿ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ತುಂಬಿ ಹರಿಯುತ್ತಿದ್ದ ಹೊಳೆಯ ಮಧ್ಯೆ ಈ ಲೈನ್ ಹಾದು ಹೋಗಿತ್ತು. ಈ ಲೈನ್ ಮೂಲಕ ಒಳಮೊಗ್ರು, ಅರಿಯಡ್ಕ, ಬಡಗನ್ನೂರು ಸೇರಿ ಆರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಆಗುತ್ತಿತ್ತು. ದುರಸ್ಥಿ ಮಾಡದೇ ಇದ್ದರೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಹೊಳೆಯ ಪಕ್ಕದಲ್ಲಿರುವ ತೋಟದಲ್ಲಿ ಸೊಂಟದ ತನಕ ನೀರಿದ್ದರೂ ಸಾಹಸಿಗರಂತೆ ತೆರಳಿದ ಕುಂಬ್ರ ಮೆಸ್ಕಾಂ ಸಿಬಂದಿಗಳಾದ ಪ್ರಶಾಂತ್, ತೀರ್ಥಾನಂದ್ ,ಜಗದೀಶ್ ಮತ್ತು ಕುಂಬ್ರ ಮೆಸ್ಕಾಮ ಜೆ ಇ ರವೀದ್ರ ರವರು ತಂತಿಮೇಲೆ ಬಿದ್ದ ಬೃಹತ್ ಗಾತ್ರದ ಮರವನ್ನು ತೆರವು ಗೊಳಿಸಿ ವಿದ್ಯುತ್ ಸಂಪರ್ಕ ಸುಗಮಗೊಳಿಸಿದ್ದಾರೆ. ಇವರ ಈ ಕೆಲಸ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.