ಪುತ್ತೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೋಡಿನ ಬದಿಯ ತಡೆಗೋಡೆ ಕುಸಿದು ಬಿದ್ದು ಕೃಷಿ ತೋಟಕ್ಕೆ ನೀರು ನುಗ್ಗಿ ಹಾನಿಯುಂಟಾದ ಬಗ್ಗೆ ಕುರಿಯ ಗ್ರಾಮದ ಕೊಪ್ಪಳದಿಂದ ವರದಿಯಾಗಿದೆ.
ಡಿಂಬ್ರಿಬೈಲು ಕೊಪ್ಪಳ ಶ್ಯಾಮ ಸುಂದರ ರೈಯವರ ಕೃಷಿ ತೋಟದ ಪಕ್ಕದಲ್ಲೇ ಇರುವ ತೋಡಿನ ತಡೆಗೋಡೆ ಜು.30 ರಂದು ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಪರಿಣಾಮ ಮಳೆ ನೀರು ತೋಟಕ್ಕೆ ನುಗ್ಗಿ ತೋಟ ಜಲಾವೃತಗೊಂಡಿತ್ತು. ಮಳೆ ನೀರಿನೊಂದಿಗೆ ಮರಳು ಕಲ್ಲು ತೋಟಕ್ಕೆ ಬಂದಿದ್ದು ಅಡಿಕೆ ಗಿಡಗಳಿಗೆ ಹಾನಿಯಾಗಿದೆ. ಬಾಳೆ ಗಿಡಗಳು ,ಅಡಿಕೆ ಗಿಡಗಳ ಬುಡಗಳಲ್ಲಿ ಮರಳು ಕೆಸರು ತುಂಬಿಕೊಂಡು ಕೃಷಿ ತೋಟ ಸಂಪೂರ್ಣ ಹಾನಿಗೊಳಗಾಗಿದೆ. ತೋಡಿನ ತಡೆಗೋಡೆ ಕುಸಿದಿರುವುದರಿಂದ ಮತ್ತೆ ಭಾರಿ ಮಳೆಯಾದರೆ ಮಳೆ ನೀರು ತೋಟಕ್ಕೆ ನುಗ್ಗುವ ಸಾಧ್ಯತೆ ಇದೆ. ತಡೆಗೋಡೆ ಕುಸಿದು ಬಿದ್ದಿರುವುದರಿಂದ ಸುಮಾರು ಹದಿನೈದು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತೋಟದ ಮಾಲಕ ಶ್ಯಾಮಸುಂದರ ರೈ ಕೊಪ್ಪಳ ಅವರು ಮಾಹಿತಿ ನೀಡಿದ್ದಾರೆ.