ಪುತ್ತೂರು: ವಾರದ ಹಿಂದೆಯಷ್ಟೆ ಪುತ್ತೂರು ಬನ್ನೂರು ಕರ್ಮಲದಲ್ಲಿ ಗೋ ಕಳ್ಳರಿಂದ ತಪ್ಪಿಸಿಕೊಂಡ ನಿರಾಶ್ರಿತ ಗೋವುಗಳನ್ನು ರಕ್ಷಣೆ ಮಾಡಿ ವಾರಿಸುದಾರರಿಗೆ ಒಪ್ಪಿಸಿದ ಘಟನೆಯ ಬೆನ್ನಲ್ಲೇ ಆ.1 ರಂದು ರಾತ್ರಿ ಪುತ್ತೂರು ಕಾರ್ಜಾಲು ಧೂಮಾವತಿ ರಸ್ತೆಯ ಬಳಿ ಗಾಯಗೊಂಡ ಗೋವು ಪತ್ತೆಯಾಗಿದೆ. ಗಾಯಗೊಂಡ ಗೋವನ್ನು ಸ್ಥಳೀಯರು ರಕ್ಷಣೆ ಮಾಡಿದ್ದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋ ಶಾಲೆಯ ಬಳಿ ತಾತ್ಕಾಲಿಕವಾಗಿ ನೆಲೆ ನೀಡಲಾಗಿದೆ.
ಧೂಮಾವತಿ ರಸ್ತೆಯ ಬದಿ ಗಾಯಗೊಂಡ ಸ್ಥಿತಿಯಲ್ಲಿ ಆ.1ರಂದು ಸಂಜೆ ಪತ್ತೆಯಾದ ದನವೊಂದನ್ನು ಸ್ಥಳೀಯರಾದ ವಿಶ್ವನಾಥ್ ನಾಯಕ್, ಶೋಭಾ ,ಕಾರ್ತಿಕ್, ಗುರುಪ್ರಸಾದ್, ಶ್ರೇಷ್ಠ, ನಿರಂಜನ್,ಅರುಣ್,ರಾಜೇಶ್, ನಾರಾಯಣ್ ಅವರು ರಕ್ಷಣೆ ಮಾಡಿ ವಿಶ್ವನಾಥ ಅವರ ಮನೆಯ ಬಳಿ ಕಟ್ಟಿ ಹಾಕಿದ್ದರು. ಆ.2ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಪದ್ಮನಾಭ, ರಾಜೇಶ, ರವಿ, ಆನಂದ,ನಿರಂಜನ ಅವರು ದೇವಳದ ಗೋ ಶಾಲೆಯ ಬಳಿ ತಾತ್ಕಾಲಿಕ ನೆಲೆ ನೀಡಿ ಆರೈಕೆ ಮಾಡಿದ್ದಾರೆ. ವಾಸ್ತು ಇಂಜಿನಿಯರ್ ಪಿ ಜಿ ಜಗನ್ನಿವಾಸ ರಾವ್ ಮತ್ತು ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ ಕೃಷ್ಣ ಪ್ರಸನ್ನ , ಸ್ಥಳೀಯ ನಿವಾಸಿ ಆತೀಶ್ ನಾಯಕ್ ಅವರು ಗೋವನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸುವಲ್ಲಿ ಸಹಕರಿಸಿದರು.
ವಾರದ ಹಿಂದೆಯೂ ನಿರಾಶ್ರಿತ ಗೋವಿನ ರಕ್ಷಣೆ ಮಾಡಲಾಗಿತ್ತು:
ವಾರದ ಹಿಂದೆ ಪುತ್ತೂರು ಬನ್ನೂರು ಕರ್ಮಲ ಸಮೀಪ ಎರಡು ನಿರಾಶ್ರಿತ ಗೋವುಗಳು ಪತ್ತೆಯಾಗಿತ್ತು. ಆ ಸಮಯದಲ್ಲಿ ಗೋವನ್ನು ದೇವಳದ ವತಿಯಿಂದ ರಕ್ಷಣೆ ಮಾಡಿ ಬಳಿಕ ವಾರಿಸುದಾರರಿಗೆ ಹಸ್ತಾಂತರಿಸಲಾಗಿತ್ತು. ಈ ವೇಳೆ ವಾರಿಸುದಾರರ ಮನೆ ಬಳಿಯಿಂದಲೇ ಗೋ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಪೊಲೀಸರ ತಪಾಸಣೆ ಭಯದಲ್ಲಿ ಗೋವನ್ನು ದಾರಿ ಬದಿಯಲ್ಲೇ ಬಿಟ್ಟು ಹೋಗಿರಬಹುದೆಂಬ ಸಂಶಯ ಬಂದಿತ್ತು. ಇದೀಗ ಅದೇ ರೀತಿ ಮೈಯೆಲ್ಲ ಗಾಯಗೊಂಡ ದನವೊಂದು ಪತ್ತೆಯಾಗಿದ್ದು ಅದನ್ನು ರಕ್ಷಣೆ ಮಾಡಲಾಗಿದೆ. ವಾರಿಸುದಾರರು ದೇವಳವನ್ನು ಸಂಪರ್ಕಿಸುವಂತೆ ದೇವಳದಿಂದ ಮಾಹಿತಿ ಲಭ್ಯವಾಗಿದೆ.