ಉಪ್ಪಿನಂಗಡಿ: ಇಲ್ಲಿನ ಖಾಸಗಿ ಜಾಗವೊಂದರಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಆ ಗುಂಡಿ ಪ್ರದೇಶವನ್ನು ಮುಚ್ಚಿಸಲು ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಖಾಸಗಿಯವರಿಗೆ ಸೇರಿದ ಜಾಗವಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಹೆದ್ದಾರಿಯ ಚರಂಡಿ ಈ ಪ್ರದೇಶಕ್ಕಿಂತ ಮೇಲ್ಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ಜಾಗದಲ್ಲಿ ನೀರು ತುಂಬಿ ಕೆರೆಯಂತಾಗಿದ್ದು, ಆ ಬಳಿಕ ನಾವುಗಳು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಮೌಖಿಕವಾಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದು, ಅದಕ್ಕೆ ಅವರು ಈ ಜಾಗ ಭೂ ಸ್ವಾಧೀನವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೂ ನಮ್ಮ ಮನವಿಯ ಮೇರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯವರು ಅಲ್ಲಿನ ಚರಂಡಿಯನ್ನು ಇನ್ನಷ್ಟು ತಗ್ಗಿಸಿದ್ದು, ಮೋರಿಯನ್ನು ಹಾಕಿಸಿಕೊಟ್ಟಿದ್ದಾರೆ. ಇದರಿಂದ ಈಗ ಸಾಕಷ್ಟು ನೀರು ಹರಿದು ಹೋಗುತ್ತಿದ್ದರೂ, ಸ್ವಲ್ಪ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇನ್ನು ಇಲ್ಲಿ ಚರಂಡಿಯನ್ನು ತಗ್ಗಿಸಲು ಸಾಧ್ಯವಿಲ್ಲ. ಯಾಕೆಂದರೆ ಇದರಿಂದ ಸಂಪರ್ಕ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ಹೆದ್ದಾರಿಗೆ ಅಡ್ಡವಾಗಿ ಹಾಕಲಾಗಿರುವ ಮೋರಿ ಮೇಲ್ಮಟ್ಟದಲ್ಲಿ ಬರುತ್ತದೆ. ಇದರಿಂದಾಗಿ ಈ ಗುಂಡಿ ಪ್ರದೇಶಕ್ಕೆ ಮಣ್ಣು ತುಂಬಿಸುವುದೇ ಈ ಸಮಸ್ಯೆ ಪರಿಹಾರಕ್ಕಿರುವ ಏಕೈಕ ಮಾರ್ಗ. ಆದ್ದರಿಂದ ಈ ಬಗ್ಗೆ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಹಳೆ ಮಂಗಳೂರು ರಸ್ತೆಯ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭ ಚರಂಡಿ ನಿರ್ಮಿಸಿದ್ದು, ಆದರೆ ಅದಕ್ಕೆ ಸ್ಲ್ಯಾಬ್ ಅಳವಡಿಸಿಲ್ಲ. ಹಳೆ ಮಂಗಳೂರು ರಸ್ತೆಯೂ ಕತ್ತರಿಸಲ್ಪಟ್ಟಿದೆ. ಈ ರಸ್ತೆಯ ಮೂಲಕ ಇಲ್ಲಿರುವ ಉಮ್ಮರ್ ಫಾರೂಕ್ ಜುಮಾ ಮಸೀದಿಗೆ ಮಕ್ಕಳು ಹೋಗುತ್ತಿದ್ದು, ಒಂದು ಕಡೆ ಇಲ್ಲಿರುವ ಸಣ್ಣ ಕಾಲುದಾರಿಗೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಧರೆ ಕುಸಿದು ಬಿದ್ದಿದ್ದರಿಂದ ಆ ದಾರಿಯೂ ಬಂದ್ ಆಗಿದೆ. ಆದ್ದರಿಂದ ಇಲ್ಲಿ ಸಂಚಾರಕ್ಕೆ ತೊಡಕಾಗಿದ್ದು, ಚರಂಡಿಗೆ ಸ್ಲ್ಯಾಬ್ ಹಾಕಿಕೊಡಲು ಮತ್ತು ದಾರಿಗೆ ಬಿದ್ದಿರುವ ಮಣ್ಣನ್ನು ತೆರವು ಮಾಡಿ ಹಳೆ ಮಂಗಳೂರು ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗದಂತೆ ವ್ಯವಸ್ಥೆ ಮಾಡಿಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲು ಗ್ರಾ.ಪಂ.ಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅವರಿಗೆ ಮನವಿ ನೀಡಿದ ನಿಯೋಗದಲ್ಲಿ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಬೂತ್ ಅಧ್ಯಕ್ಷ ಅಬ್ದುಲ್ ಖಾದರ್, ಇಸಾಕ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಪ್ರಮುಖರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಶೀಲ ಶೆಟ್ಟಿ, ಶರೀಕ್ ಅರಪ್ಫಾ, ರಿಜ್ವಾನ್, ಹರೀಶ್, ಅಣ್ಣು ಮತ್ತಿತರರು ಉಪಸ್ಥಿತರಿದ್ದರು.