ಪುತ್ತೂರು: ಸುದ್ದಿ ಸೌಹಾರ್ದ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ.55.65ಕೋಟಿ ವ್ಯವಹಾರ ನಡೆಸಿ ರೂ.54,೦8,817 ಲಾಭಗಳಿಸಿದೆ. ಸಂಘವು ಕಳೆದ ಆರ್ಥಿಕ ವರ್ಷಕ್ಕಿಂತ ಶೇ.33.40ರಷ್ಟು ಹೆಚ್ಚುವರಿ ವ್ಯವಹಾರ ನಡೆಸಿದ್ದು, ಸಾಲ ವಸೂಲಾತಿಯಲ್ಲಿ ಶೇ.95.81 ಸಾಧನೆ ಮಾಡಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಡಾ.ಯು.ಪಿ ಶಿವಾನಂದ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.
ಸಭೆಯು ಆ.10ರಂದು ರೋಟರಿ ಮನಿಷಾ ಹಾಲ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದಲ್ಲಿ 3,203 ಸದಸ್ಯರಿಂದ ರೂ.76,16,800 ಪಾಲು ಬಂಡವಾಳ ಹೊಂದಿದೆ. ರೂ.12,33,65,141.50 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ರೂ.2,62,52,001ನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ರೂ.10,68,80,005.59ನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.95.81 ಸಾಧನೆ ಮಾಡಿದ್ದು ಕಳೆದ ಆರ್ಥಿಕ ಸಾಲಿಗಿಂತ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗಿಕರಣದಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು.
ಲಾಭಾಂಶ ವಿಂಗಡಣೆ:
ಸಂಘವು ಗಳಿಸಿದ ನಿವ್ವಳ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದ್ದು ಶೇ.2ರಂತೆ ಕ್ಷೇಮ ನಿಧಿಗೆ ರೂ.13,52,204, ಶೇ.2ರಂತೆ ಸಹಕಾರ ಶಿಕ್ಷಣ ನಿಧಿಗೆ ರೂ.1,08,176, ಶೇ.0.5ರಂತೆ ಸಹಕಾರ ಅಕಾಡೆಮಿ ಮೈಸೂರಿಗೆ ರೂ.27,044, ಶೇ.20ರಂತೆ ಕಾರ್ಯಾಚರಣೆ ಮೀಸಲು ನಿಧಿಗೆ ರೂ.10,81,763, ಶೇ.5ರಂತೆ ಸಾಮಾನ್ಯ ಕ್ಷೇಮ ನಿಧಿಗೆ ರೂ.2,70,441, ಸಿಬ್ಬಂದಿಗಳಿಗೆ ಬೋನಸ್ ರೂ.1,54,764, ಡಿವಿಡೆಂಡ್‌ಗೆ ರೂ.7,67,709 ಹಾಗೂ ಉಳಿಕೆಯಾದ ರೂ.16,46,806ನ್ನು ಉಳಿಕೆ ಕ್ಷೇಮ ನಿಧಿಗೆ ವಿಂಗಡಿಸಲಾಗಿದೆ.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಯು.ಪಿ ಶಿವಾನಂದ ಮಾತನಾಡಿ, ನಮ್ಮ ಸಹಕಾರಿ ಸಂಘದಲ್ಲಿ ಬ್ಯಾಂಕಿಂಗ್, ಸರಕಾರಿ, ಸಹಕಾರಿ, ರಾಜಕೀಯ, ಜನಪ್ರತಿನಿಧಿಗಳು, ಸಾಮಾಜಿಕ ಕಳಕಳಿಯ ನಿರ್ದೇಶಕರ ಆಡಳಿತ ಮಂಡಳಿ ಮತ್ತು ಅನುಭವೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳಿದ್ದು, ವಿಶ್ವಾಸನೀಯ ಸೇವೆ ನೀಡುತ್ತಿದೆ. ಕಾನೂನು ಪ್ರಕಾರವಾಗಿ ಸೇವೆ ನೀಡುತ್ತಿದೆ. ಸಮಸ್ಯೆಗಳಿಗೆ ಕಾನೂನಿನ ಮೂಲಕವೇ ಪರಿಹಾರ ನೀಡಲಾಗುತ್ತಿದೆ. ಸುಳ್ಯ ಶಾಖೆಯಲ್ಲಿಯೂ ಸಲಹಾ ಸಮಿತಿ ನೇತೃತ್ವದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಸದಸ್ಯರೆಲ್ಲರ ಸಹಕಾರದಿಂದ ಸಂಘವು ಅಭಿವೃದ್ಧಿಯತ್ತ ಸಾಗಿದೆ. ಯಾವುದೇ ತಪ್ಪುಗಳಾದರೆ ಸದಸ್ಯರು ನಮ್ಮ ಗಮನಕ್ಕೆ ತರಬೇಕು. ಸಂಘದ ಮುಖಾಂತರ ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ಸೂರೆನ್ಸ್, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಸೇವೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು. ಎಲ್ಲಾ ಸದಸ್ಯರಿಗೆ ಅನ್ವಯವಾಗುವಂತೆ ಯೋಜನೆಗಳನ್ನು ಮಾಡುವುದು, ಸದಸ್ಯರೆಲ್ಲರನ್ನೂ ಒಟ್ಟು ಸೇರಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳ ಆಯೋಜನೆ, ಸದಸ್ಯರ ಮಕ್ಕಳ ಸಾಧನೆಗಳನ್ನು ಗುರುತಿಸಿ ಅಭಿನಂದಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಮಾಧ್ಯಮದಂತೆ ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಠಾಚಾರ ರಹಿತ ಸೇವೆ:
ಸುದ್ದಿ ಸೌಹಾರ್ದ ಸಹಕಾರಿ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಸಂಘಗಳು ಲಂಚ, ಭ್ರಷ್ಠಾಚಾರವಿಲ್ಲದೆ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದೆ. ಸಹಕಾರಿ ಸಂಘಗಳು ಉತ್ತಮ ಸೇವೆಯ ಮೂಲಕ ಬೆಳೆಯುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಲಂಚ, ಭ್ರಷ್ಠಾಚಾರವಿಲ್ಲದೆ ಸೇವೆ ನೀಡುತ್ತಿರುವ ಸಹಕಾರಿ ಸಂಸ್ಥೆಗಳಲ್ಲಿ ಸುದ್ದಿ ಸೌಹಾರ್ದ ಸಹಕಾರಿಯು ಒಂದಾಗಿದೆ. ಸುದ್ದಿ ಪತ್ರಿಕೆಯ ಮೂಲಕ ಲಂಚ, ಭ್ರಷ್ಠಾಚಾರದ ವಿರುದ್ದ ಸಾಕಷ್ಟು ಆಂದೋಲನಗಳು ನಡೆದಿದೆ. ನಮ್ಮ ಸಂಘದ ಆಡಳಿತ ಮಂಡಳಿಯವರು ಯಾವುದೇ ಭತ್ಯೆಗಳನ್ನು ಪಡೆಯದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಷ್ಕಳಂಕದ ನಿರ್ದೇಶಕರು ಆಡಳಿತ ಮಂಡಳಿಯಲ್ಲಿದ್ದಾರೆ. ಅಪವಾದ ಬರುವಂತಹ ನಿರ್ದೇಶಕರು ಸಂಘದಲ್ಲಿಲ್ಲ. ಸಂಘದಲ್ಲಿ ಸದಸ್ಯರ ಠೇವಣಿ, ಬಂಡವಾಳ, ಸಾಲಗಳ ರಕ್ಷಣೆ ನಮ್ಮ ಹೊಣೆಯಾಗಿದ್ದು ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲಾ ಸಹಕಾರಿ ಸಂಸ್ಥೆಗಳು ಪ್ರಾಮಾಣಿಕವಾಗಿ ಸೇವೆ ನೀಡುತ್ತಿದೆ. ಮಾಧ್ಯಮದ ಮೂಲಕ ಸಮಾಜದಲ್ಲಿ ಕೆಲಸ ಮಾಡುವಂತೆ ಸಹಕಾರಿ ಕ್ಷೇತ್ರದಲ್ಲಿಯೂ ಸುದ್ದಿ ಸಹಕಾರಿಯು ಲಂಚ, ಭ್ರಷ್ಠಾಚಾರ ರಹಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಡಾ.ಯು.ಪಿ ಶಿವಾನಂದ ಹೇಳಿದರು.
ಲಂಚ, ಭ್ರಷ್ಠಾಚಾರದ ವಿರುದ್ಧ ಫಲಕ ವಿತರಣೆ:
ಸುದ್ದಿ ಪತ್ರಿಕೆಯ ಮೂಲಕ ಲಂಚ, ಭ್ರಷ್ಠಾಚಾರದ ವಿರುದ್ದ ಪ್ರಾಮಾಣಿಕ ಕೆಲಸ ಮಾಡಲಾಗಿದೆ. ಸಂಘದ ಸದಸ್ಯರು ರಾಜರು. ನಿಮ್ಮ ಪರವಾಗಿ ನಾವು ಆಡಳಿತ ನಡೆಸುವುದು. ಲಂಚ, ಭ್ರಷ್ಠಾಚಾರವಿಲ್ಲದೆ ಆಡಳಿತ ನಡೆಸುವವರಿಗೆ ನಮ್ಮ ಬೆಂಬಲ. ಸಮಾಜದಲ್ಲಿ ಸೇವೆ ಸಲ್ಲಿಸಿದಂತೆ ಸಹಕಾರಿ ಸಂಘದ ನಿರ್ದೇಶಕರು ಸಹಕಾರಿ ಕ್ಷೇತ್ರದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸಿ ಲಂಚ, ಭ್ರಷ್ಠಾಚಾರ ರಹಿತ ಸೇವೆಗೆ ಕೊಡುಗೆ ನೀಡುವ ಘೋಷಣೆ ಮಾಡಬೇಕು ಎಂದು ಹೇಳಿದ ಅಧ್ಯಕ್ಷ ಡಾ.ಯು.ಪಿ ಶಿವಾನಂದರವರು ಸಂಘದ ಸುಳ್ಯ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸಂಘದ ಉಪಾಧ್ಯಕ್ಷರು, ನಿರ್ದೇಶಕರಿಗೆ ಲಂಚ, ಭ್ರಷ್ಠಾಚಾರದ ವಿರುದ್ದ ಫಲಕ ವಿತರಿಸಿದರು.
ನಿರ್ದೇಶಕರಾದ ಜಾನ್ ಕುಟಿನ್ಹಾ, ಹರೀಶ್ ಬಂಟ್ವಾಳ್, ಎ.ವಿ ನಾರಾಯಣ, ಮೋಹನ ರೈ ಕೆ.ಯಂ., ಜೊಹರಾ ನಿಸಾರ್ ಅಹಮ್ಮದ್, ಸ್ವಾತಿ ಮಲ್ಲಾರ, ಈಶ್ವರ ವಾರಣಾಸಿ, ರಾಜೇಶ್ ಎಂ.ಎಸ್., ಶೇಷಪ್ಪ ಕಜೆಮಾರ್, ಸುಳ್ಯ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಗ್ಮಿ ಸಂಗ್ರಾಹಕ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನಿರ್ದೇಶಕ ಎನ್.ಕೆ ಜಗನ್ನಿವಾಸ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ನರೇಂದ್ರ ವರದಿ ಮಂಡಿಸಿದರು. ಉಪಾಧ್ಯಕ್ಷ ಯು.ಪಿ ರಾಮಕೃಷ್ಣ ಆಡಿಟ್ ವರದಿಯನ್ನು ಮಂಡಿಸಿದರು. ಸಿಬ್ಬಂದಿ ಅನಂತರಾಮ ಮಹಾಸಭೆಯ ನೋಟೀಸ್ ಓದಿದರು. ಸುಳ್ಯ ಶಾಖೆಯ ವ್ಯವಸ್ಥಾಪಕ ಚೇತನ್ ಕೆ.ಬಿ. ಅಂದಾಜು ಆಯ-ವ್ಯಯ ಮಂಡಿಸಿದರು. ನಿರ್ದೇಶಕ ಕೆ. ಸುಂದರ ನಾಯ್ಕ ವಂದಿಸಿದರು. ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಚೇರಿ ಸಿಬ್ಬಂದಿಗಳಾದ ಚೇತನ್, ಅಶ್ವಿನಿ ಎನ್.ಎಸ್., ಪಿಗ್ಮಿ ಸಂಗ್ರಾಹಕರಾದ ಸುಬ್ರಹ್ಮಣ್ಯ, ಶ್ರೀಧರ, ಸತೀಶ ಪ್ರಭು, ಶಿವರಾಮ, ಸುಳ್ಯ ಶಾಖೆಯ ಸಿಬ್ಬಂದಿ ಅನ್ವಿತಾ, ಪಿಗ್ನಿ ಸಂಗ್ರಾಹಕಿ ಪವಿತ್ರ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಗಿಫ್ಟ್ ನೀಡಲಾಯಿತು.