ನಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರಗಳ ಬಗ್ಗೆ ತಿಳುವಳಿಕೆ ನೀಡಬೇಕು-ಶಾಸಕ ಅಶೋಕ್ ರೈ
ಪುತ್ತೂರು: ಆಟಿದ ಕೂಟ ತುಳುನಾಡಿನ ಸಂಸ್ಕೃತಿಯಾಗಿದ್ದು ಅದು ಎಂದೆಂದೂ ಉಳಿಯಬೇಕಿದ್ದು ಇದಕ್ಕಾಗಿ ನಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಬೊಳಂತಿಮೊಗರು ಸರಕಾರಿ ಹಿ ಪ್ರಾ ಶಾಲೆಯಲ್ಲಿ ನಡೆದ ಎಲ್ ಕೆ ಜಿ ತರಗತಿ ಹಾಗೂ ಆಟಿದ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ತುಳು ಭಾಷೆ, ತುಳು ಸಂಸ್ಕೃತಿ ಮಾತ್ರವಲ್ಲ ನಮ್ಮ ತುಳುನಾಡಿದ ಆಹಾರ ಪದ್ದತಿಯೂ ವಿಶೇಷತೆಯನ್ನು ಹೊಂದಿದೆ ಅದು ತುಳುನಾಡಿನ ಜನತೆಯ ನರನಾಡಿಯ ಸಂಬಂಧದ ಕೊಂಡಿಯಾಗಿದೆ ಎಂದು ಹೇಳಿದರು.
ಕೆಪಿಎಸ್ ಮಾದರಿ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿದೆ:
ಪ್ರತೀ ಎರಡು ಗ್ರಾಮಕ್ಕೊಂದು ಕೆಪಿಎಸ್ ಮಾದರಿ ಶಾಲೆ ಅಗತ್ಯವಿದ್ದು ಇದರಿಂದ ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಸರಕಾರಿ ಶಾಲೆಗೆ ಎಲ್ ಕೆ ಜಿ ತರಗತಿ ಮಂಜೂರಾಗಿದೆ ಎಂದು ಹೇಳಿದರು.
ಆರೋಗ್ಯದ ಬಗ್ಗೆ ಮಕ್ಕಳಿಗೆ ಮಾಹಿತಿ
ಪ್ರತೀ ಶಾಲೆಯ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಯೋಜನೆ ನಮ್ಮ ಮುಂದೆ ಇದ್ದು ಈ ಬಗ್ಗೆ ಸರಕಾರದ ಜೊತೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಉದ್ದೇಶವಿದೆ. ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ, ತಿಳುವಳಿಕೆ ಇದ್ದಲ್ಲಿ ಮುಂದೆ ಅದು ಮಕ್ಕಳನ್ನು ಸರಿ ದಾರಿಯಲ್ಲಿ ಸಾಗಲು ಸಹಕಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶೂ ವಿತರಣೆಯನ್ನು ಮಾಡಲಾಯಿತು. ನೂತನವಾಗಿ ನಿರ್ಮಾಣಗೊಂಡ ದ್ವಜಸ್ಥಂಬವನ್ನು ಶಾಸಕರು ಲೋಕಾರ್ಪಣೆಗೈದರು. ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಪುರಂದರ್ ಜೈನ್, ಜಯಂತ, ನಿವೃತ್ತ ಶಿಕ್ಷಕ ಪಿ ಡಿ ಶೆಟ್ಟಿ, ದಾನಿ ಕಮಲಾ ಗಿರಿಯಪ್ಪ ಗೌಡ, ಪಟ್ಟಣ ಪಂಚಾಯತ್ ಸದಸ್ಯ ಡೀಕಯ್ಯ, ರಮಾನಾಥ ವಿಟ್ಲ,ಶ್ರೀನಿವಾಸ್ ಶೆಟ್ಟಿ ,ಅಶ್ರಫ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂದ್ಯಾ ರಾಣಿ ಉಪಸ್ಥಿತರಿದ್ದರು.ಶಿಕ್ಷಕ ವಿಠಲ್ ನಾಯ್ಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.