ಲಯನ್ಸ್ ಪುತ್ತೂರು ಕ್ರೌನ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಬನ್ನೂರು ಚರ್ಚ್ ಸಭಾಂಗಣದಲ್ಲಿ ಉಚಿತ ಆರೋಗ್ಯ ಶಿಬಿರ

0

*ಉತ್ತಮ ಆರೋಗ್ಯಕ್ಕೆ ಒಳ್ಳೆಯ ಶಿಬಿರ, ಪ್ರಯೋಜನ ಪಡೆದುಕೊಳ್ಳಿ-ಡಾ.ಯದುರಾಜ್
*ಜನರ ಆರೋಗ್ಯದ ಈ ಶಿಬಿರ ಪರಸ್ಪರ ಪ್ರೀತಿಯನ್ನು ಹಂಚುತ್ತದೆ-ವಂ|ಬಾಲ್ತಜಾರ್ ಪಿಂಟೊ

ಪುತ್ತೂರು: ಲಯನ್ಸ್ ಜಿಲ್ಲೆ 317ಡಿ, ರೀಜನ್ 4, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನೇತೃತ್ವದಲ್ಲಿ, ಮಂಗಳೂರು ತಲಪಾಡಿ ದೇವಿನಗರದ ಶಾರದ ಯೋಗ, ನ್ಯಾಚುರೋಪತಿ(ಪ್ರಕೃತಿ ಚಿಕಿತ್ಸೆ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬನ್ನೂರು ಸಂತ ಅಂತೋನಿ ಚರ್ಚ್‌ನ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆಯ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವು ಆ.11 ರಂದು ಬನ್ನೂರು ಚರ್ಚ್ ಸಭಾಂಗಣದಲ್ಲಿ ನಡೆಯಿತು.


ಉತ್ತಮ ಆರೋಗ್ಯಕ್ಕೆ ಒಳ್ಳೆಯ ಶಿಬಿರ, ಪ್ರಯೋಜನ ಪಡೆದುಕೊಳ್ಳಿ-ಡಾ.ಯದುರಾಜ್:
ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಯದುರಾಜ್ ಡಿ.ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಸಂಘ-ಸಂಸ್ಥೆಗಳು ಸಾರ್ವಜನಿಕರ ಆರೋಗ್ಯದ ಬಗೆಗಿನ ಕಾಳಜಿ ಬಗ್ಗೆ ಉಚಿತ ಶಿಬಿರಗಳು ನಡೆಸುತ್ತಿರುವುದು ಶ್ಲಾಘನೀಯ. ಆರೋಗ್ಯದ ವಿವಿಧ ಕಾರಣಗಳಿಂದಾಗಿ ಇಂದು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರಲ್ಲಿನ ಜೀವನ ಪದ್ಧತಿ, ಆಹಾರ ಪದ್ಧತಿಯಲ್ಲಿ ವ್ಯತ್ಯಯ, ವ್ಯಾಯಾಮ ಇಲ್ಲದಿರುವಿಕೆಯಿಂದಾಗಿ ಸುಮಾರು 30 ವರ್ಷ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಕಾಣಿಸಿಕೊಳ್ಳುವುದು ಮಾತ್ರವಲ್ಲ ಮಾನಸಿಕ ಕಾಯಿಲೆಯೊಂದಿಗೆ ಬಳಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ ಎಂದ ಅವರು ಸಾರ್ವಜನಿಕರು ಇಂತಹ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.


ಜನರ ಆರೋಗ್ಯದ ಈ ಶಿಬಿರ ಪರಸ್ಪರ ಪ್ರೀತಿಯನ್ನು ಹಂಚುತ್ತದೆ-ವಂ|ಬಾಲ್ತಜಾರ್ ಪಿಂಟೊ:
ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ಮಾತನಾಡಿ, ಎಲ್ಲಿ ಪ್ರೀತಿ ಇದಿಯೋ ಅಲ್ಲಿ ನಾವು ಮಾಡುವ ಕಾರ್ಯಗಳು ಯಶಸ್ವಿಯಾಗುವುದು. ಪ್ರೀತಿ ಇರುವ ಸ್ಥಳದಲ್ಲಿ ದೇವರು ವರವೆಂಬ ಕೊಡುಗೆಯನ್ನೂ ಕೊಡುತ್ತಾರೆ ಮಾತ್ರವಲ್ಲ ಅದು ಹಂಚಿಕೊಳ್ಳಲ್ಪಡುತ್ತದೆ. ಆಸ್ಪತ್ರೆಯವರು ಹಾಗೂ ವಿವಿಧ ಸಂಘ-ಸಂಸ್ಥೆಯವರು ಜೊತೆಗೂಡಿ ಜನರ ಆರೋಗ್ಯಕ್ಕೋಸ್ಕರ ಹಮ್ಮಿಕೊಂಡ ಈ ಶಿಬಿರ ಪರಸ್ಪರ ಪ್ರೀತಿಯನ್ನು ಹಂಚುತ್ತದೆ. ಇವರುಗಳ ಸೇವಾ ಕಾರ್ಯ ನಿರಂತರ ಮುಂದುವರೆಯುವಲ್ಲಿ ದೇವರು ಆಶೀರ್ವದಿಸಲಿ ಎಂದರು.


ಮಂಗಳೂರು ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜಿನ ವಸತಿ ವೈದ್ಯಕೀಯ ಅಧಿಕಾರಿ ಡಾ.ಅನೂಪ್, ಲಯನ್ಸ್ ವಲಯ ನಾಲ್ಕರ ರೀಜನ್ ಚೇರ್‌ಪರ್ಸನ್ ಪಾವನರಾಮ ಬಿ, ವಲಯ ನಾಲ್ಕರ ರೀಜನ್ ಅಂಬಾಸಿಡರ್ ಲ್ಯಾನ್ಸಿ ಮಸ್ಕರೇನ್ಹಸ್, ಬನ್ನೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಸ್ತ್ರೀ ಸಂಘಟನೆ ಅಧ್ಯಕ್ಷೆ ನತಾಲಿಯಾ ಪಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ಸ್ ಪುತ್ತೂರು ಕ್ರೌನ್‌ನ ನಿಶಾ ಮಿನೇಜಸ್ ಮತ್ತು ಬಳಗ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಯನ್ಸ್ ಪುತ್ತೂರು ಕ್ರೌನ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ಆಂಟನಿ ಒಲಿವೆರಾ ವಂದಿಸಿದರು.

ಲಯನ್ಸ್ ಪುತ್ತೂರು ಕ್ರೌನ್‌ನ ಕೋಶಾಧಿಕಾರಿ ವಿಕ್ಟರ್ ಶರೂನ್ ಡಿ’ಸೋಜ, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಐವನ್ ಫೆರ್ನಾಂಡೀಸ್, ಅನಿತಾ ಸಿಕ್ವೇರಾ, ಮೋಲಿ ಪಿಂಟೊರವರು ಅತಿಥಿಗಳಿಗೆ ಪೆನ್ನು ನೀಡಿ ಸ್ವಾಗತಿಸಿದರು. ಲಯನ್ಸ್ ಪುತ್ತೂರು ಕ್ರೌನ್ ಕಾರ್ಯದರ್ಶಿ ಲೀನಾ ಮಚಾದೋ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಸಿಬ್ಬಂದಿ, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸದಸ್ಯರು, ಬನ್ನೂರು ಸಂತ ಅಂತೋನಿ ಚರ್ಚ್‌ನ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆಯ ಸದಸ್ಯರು ಸಹಕರಿಸಿದರು.

ಉತ್ತಮ ಆರೋಗ್ಯಕ್ಕೆ ಯೋಗ, ನ್ಯಾಚುರೋಪತಿ ಪರಿಹಾರ..
ಪ್ರಸ್ತುತ ವಿದ್ಯಾಮಾನದಲ್ಲಿ ಯೋಗದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ನ್ಯಾಚುರೋಪತಿ ವೈದ್ಯಕೀಯ ಎಂಬುದು ಹಿಂದಿನ ಕಾಲದಿಂದಲೂ ನಡೆದು ಬಂದ ವೈದ್ಯಕೀಯ ವಿಧಾನವಾಗಿದೆ. ಇಂದಿನ ಜಗತ್ತಿನಲ್ಲಿ ಮಾನವ ಒತ್ತಡ ಎನ್ನುವ ಗುಮ್ಮನಿಂದಾಗಿ ತನ್ನ ಆರೋಗ್ಯವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದ್ದಾನೆ. ದೇಹಕ್ಕೆ ದಿನದಲ್ಲಿ ಸುಮಾರು ಮೂರು ಲೀಟರ್ ನೀರು, ಒಂದು ಗಂಟೆ ವ್ಯಾಯಾಮ, ಮನಸ್ಸಿನ ಶಾಂತಿಗಾಗಿ ಧ್ಯಾನ ಇವು ಇದ್ದಲ್ಲಿ ಆರೋಗ್ಯವು ಸುಸ್ಥಿತಿಯಲ್ಲಿ ಇರಲು ಸಾಧ್ಯವಾಗುತ್ತದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿ ಚಿಕಿತ್ಸೆಯಲ್ಲಿ ಸುಲಭವಾದ ಉತ್ತಮ ಆಯಾಮಗಳಿದ್ದು ಸಾರ್ವಜನಿಕರು ಇದರ ಪ್ರಯೋಗ ಪಡೆದುಕೊಳ್ಳುವಂತಾಗಬೇಕು.
-ಡಾ.ನಯನಶ್ರೀ, ವಸತಿ ವೈದ್ಯಕೀಯ ಅಧಿಕಾರಿ, ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು, ಮಂಗಳೂರು

105 ಫಲಾನುಭವಿಗಳು ಭಾಗಿ..
ಸಭಾ ಕಾರ್ಯಕ್ರಮದ ಬಳಿಕ ಮಂಗಳೂರು ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರುಗಳು ಹಾಗೂ ಸಿಬ್ಬಂದಿಗಳಿಂದ ಉಚಿತ ಆರೋಗ್ಯ ಶಿಬಿರ ಏರ್ಪಟ್ಟಿದ್ದು, ಈ ಶಿಬಿರದಲ್ಲಿ ಸುಮಾರು 105ಕ್ಕೂ ಮಿಕ್ಕಿ ಫಲಾನುಭವಿಗಳು ಭಾಗವಹಿಸಿ ತಜ್ಞ ವೈದ್ಯರಿಂದ ಸೂಕ್ತ ಸಲಹೆ-ಸೂಚನೆಗಳನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here