ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು ಸಂಘದ ಸದಸ್ಯರ ಸಹಕಾರದಿಂದ ಸತತ 18ನೇ ಬಾರಿಗೆ ಶೇ.100 ವಸೂಲಾತಿಯ ಸಾಧನೆ ಮಾಡಿದ್ದು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಾಳೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಂಘವು ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, 2023-24ನೇ ಸಾಲಿಗೆ 38.75 ಕೋಟಿ ವ್ಯವಹಾರ ನಡೆಸಿ, 55.26 ಲಕ್ಷ ಲಾಭ ಗಳಿಸಿದೆ. ಸಂಘವು ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದೆ. ಸಂಘವು ಸದಸ್ಯರಿಗೆ ಅಲ್ಪಾವಧಿ, ಮಧ್ಯಮಾವಧಿ, ವಾಹನ ಖರೀದಿ ಸಾಲ, ಕೃಷಿಯೇತರ ಸಾಲ, ಸ್ವಸಹಾಯ ಗುಂಪುಗಳ ಸಾಲ, ಚಿನ್ನಾಭರಣ ಸಾಲ ನೀಡುತ್ತಿದೆಯಲ್ಲದೆ, ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡುತ್ತಿದೆ. ಅಲ್ಲದೇ ಎಲ್ಲಾ ರೀತಿಯ ರಾಸಾಯನಿಕ ಗೊಬ್ಬರೆ, ಕ್ರಿಮಿನಾಶಕಗಳ ಮಾರಾಟ ಮಾಡುತ್ತಿದ್ದು, ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದೆ. ಕೃಷಿ ಸಾಲ ಹೊಂದಿದ ಸದಸ್ಯರು ಮರಣ ಹೊಂದಿದ್ದಲ್ಲಿ ಸಂಘದಿಂದ 10 ಸಾವಿರ ರೂ.ವನ್ನು ಸಾಂತ್ವಾನ ನಿಧಿಗಾಗಿ ನೀಡಲಾಗುತ್ತಿದೆ. ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಿಕೆ ಖರೀದಿಯನ್ನೂ ನಡೆಸುತ್ತಿದೆ.
ಸಂಘವು ಅಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿಯನ್ನು ಪಡೆದುಕೊಂಡಿದ್ದು, ಸಂಘದ ಅಭಿವೃದ್ಧಿಗಾಗಿ 13 ಜನ ಆಡಳಿತ ಮಂಡಳಿ ನಿರ್ದೇಶಕರಿದ್ದು, ಅಧ್ಯಕ್ಷರಾಗಿ ಎಸ್. ತೋಯಜಾಕ್ಷಿ ಶೆಟ್ಟಿ, ಉಪಾಧ್ಯಕ್ಷರಾಗಿ ತನಿಯಪ್ಪ ಪೂಜಾರಿ, ನಿರ್ದೇಶಕರಾಗಿ ಡಾ. ರಾಜಗೋಪಾಲ ಶರ್ಮ, ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮೀ, ರೇವತಿ ಪಿ., ಸುನೀಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ಬಶೀರ್ ಕೆ., ಮುಹಮ್ಮದ್ ಶರೀಫ್, ಚೆನ್ನಕೇಶವ ಯಾನೆ ಚೆನ್ನಮೇರ, ಬೇಬಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವೀಚಾರಕರಾಗಿ ಯೊಗೀಶ ಎಚ್. ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀಮತಿ ಪುಷ್ಪಾ ಡಿ. ಹಾಗೂ ಸಿಬ್ಬಂದಿಗಳು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಈ ಪ್ರಶಸ್ತಿಯನ್ನು ಪಡೆಯಲಾಗಿದೆ ಎಂದು ಸಂಘದ ಅಧ್ಯಕ್ಷರಾದ ತೋಯಜಾಕ್ಷ ಶೆಟ್ಟಿ ಎಸ್. ತಿಳಿಸಿದ್ದಾರೆ.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ 2006ರಿಂದ ನಿರಂತರವಾಗಿ ತೋಯಜಾಕ್ಷ ಶೆಟ್ಟಿ ಎಸ್. ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಅಧ್ಯಕ್ಷೀಯ ಅವಧಿಯಲ್ಲಿ ಸತತ 18ನೇ ಬಾರಿಗೆ ಸಂಘವು ಶೇ.100 ವಸೂಲಾತಿಯ ಸಾಧನೆಯನ್ನು ಮಾಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಅವರ ಗುಣದಿಂದಾಗಿ ಈ ಸಂಘವು ನಿರಂತರ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅಲ್ಲದೇ, ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.