-ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಹಾರಾರ್ಪಣೆ
-ನಶಮುಕ್ತ ಭಾರತ ಪ್ರತಿಜ್ಞಾ ವಿಧಿ
-100 ಮಂದಿಗೆ ಹೆಲ್ಮೆಟ್ ಕೊಡುಗೆ
-ಐಎಸ್‌ಐ ಮಾರ್ಕ್ ಇಲ್ಲದ ಸವಾರರಿಗೆ ಸ್ಥಳದಲ್ಲಿಯೇ ಹೆಲ್ಮೆಟ್ ತೊಡಿಸುವಿಕೆ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರಿ ಪೊಲೀಸ್ ಠಾಣೆ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್(ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಸಂಘಟಕರು) ಜಂಟಿ ಸಹಯೋಗದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಮಾದಕ ದ್ರವ್ಯ ಅಳಿಸಿ, ನಮ್ಮೂರ ಉಳಿಸಿ. ನಮ್ಮ ಜೀವ ನಮ್ಮ ರಕ್ಷಣೆ ಎಂಬ ಧ್ಯೇಯವಾಕ್ಯದಡಿಯಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಕಾರ್ಯಕ್ರಮ ಆ.15 ರಂದು ಪುತ್ತೂರು ಬಸ್ಸು ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಜರಗಿತು.
ಭಾರತ ಸದೃಢವಾಗಬೇಕಾದರೆ ಯುವಸಮೂಹ ಸದೃಢವಾಗಬೇಕು-ಆಂಜನೇಯ ರೆಡ್ಡಿ:
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿ ಮಾತನಾಡಿ, ದೇಶವನ್ನು ಕಾಯುವ ನಮ್ಮ ಹೆಮ್ಮೆಯ ಸೈನಿಕರಿಗೆ ಅವರ ಸೇವೆಗೆ ಸೆಲ್ಯೂಟ್ ಹೊಡೆಯಬೇಕಾಗಿದೆ. ಮಿಲಿಟ್ರಿ ದೇಶ ಏನೆಂಬುದನ್ನು ನಮ್ಮ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದಾಗ ದೇಶವು ದೇಶಭಕ್ತ ಎನಿಸಿಕೊಳ್ಳುವುದು. ದೇಶವನ್ನು, ಕುಟುಂಬವನ್ನು ಮುನ್ನೆಡೆಸುವ ಯುವಸಮೂಹವು ಇಂದು ಮಾದಕ ದ್ರವ್ಯದತ್ತ ಒಲವು ತೋರುತ್ತಿರುವುದು ಖೇದಕರ. ಮಾದಕ ವಸ್ತುಗಳು ಇಂದು ಅವ್ಯಾಹಕವಾಗಿ ಬೆಳೆಯುತ್ತಿದ್ದು ಇದು ಯುವಸಮೂಹವನ್ನು ದುರಂತದೆಡೆಗೆ ಸಾಗಿಸುತ್ತಿದೆ ಎಂದ ಅವರು ಪುತ್ತೂರಿನಲ್ಲಿ ೧೫೦ ಮಂದಿ ಪೊಲೀಸ್ ಇದ್ದರೂ ಎಲ್ಲವನ್ನೂ ತಡೆಯಲು ಸಾಧ್ಯವಾಗೋದಿಲ್ಲ. ಕೇವಲ ಮಾದಕ ದ್ರವ್ಯಗಳು ಮಾತ್ರವಲ್ಲ ಫೇಸ್‌ಬುಕ್ ಲವ್, ಅಪಾಯವೆಂದು ಗೊತ್ತಿದ್ದರೂ ನದಿಗಳ ದಡದಲ್ಲಿ ಸೆಳ್ಪಿ ತೆಗೆಯುವುದು, ಹಾವಿನೊಂದಿಗೆ ಸೆಲ್ಪಿ ಇವುಗಳೂ ಕೂಡ ಮಾದಕ ದ್ರವ್ಯದ ಭಾಗವೆನಿಸಿದೆ. ಆದ್ದರಿಂದ ಭಾರತ ಸದೃಢವಾಗಬೇಕಾದರೆ ಯುವಸಮೂಹ ಸದೃಢವಾಗಬೇಕು ಎಂದಾದರೆ ಯುವಸಮೂಹ ಇಂತಹ ವ್ಯಸನಗಳಿಂದ ಎಚ್ಚೆತ್ತು ಮುಂದುವರೆಯಬೇಕಾಗಿದೆ ಎಂದು ಅವರು ಹೇಳಿದರು.
ಆಧಾರಸ್ತಂಭವಾಗಿರುವ ಮಗ ವಿರೋಧಾಭ್ಯಾಸಗಳಿಂದ ಜೀವವನ್ನು ಹೋಗಲಾಡಿಸುವುದು ಸರಿಯೇ-ಉದಯರವಿ:
ಪುತ್ತೂರು ಸಂಚಾರಿ ಠಾಣೆಯ ಪಿಎಸ್‌ಐ ಉದಯರವಿ ಮಾತನಾಡಿ, ದೇಶಕ್ಕೆ ರಕ್ಷಣೆ ನೀಡುವ ಸೈನಿಕರ ತ್ಯಾಗ ಬಲಿದಾನಗಳಿಂದ ಭಾರತ ದೇಶವು ಹಲವು ವಿಪತ್ತುಗಳನ್ನು ಮೆಟ್ಟಿ ನಿಂತಿದೆ. ಅತಿ ಹೆಚ್ಚು ಸೈನಿಕರನ್ನು ಹೊಂದಿದ ಪಂಜಾಬ್‌ನಲ್ಲಿ ವಿರೋಧಿ ರಾಷ್ಟ್ರಗಳು ಮಾದಕ ದ್ರವ್ಯಗಳನ್ನು ನೀಡುವ ಮೂಲಕ ಅವರ ಬಲ ಕುಗ್ಗಿಸುವ ಕೆಲಸ ಮಾಡುತ್ತಿರುವುದು ವಿಪರ‍್ಯಾಸ. ಪ್ರತಿಯೋರ್ವ ನಾಗರಿಕ ಸಂಚಾರಿ ನಿಯಮಗಳನ್ನು ಪಾಲಿಸಿದಾಗ ಅಪರಾಧಗಳು ಕಡಿಮೆಯಾಗುತ್ತದೆ ಮಾತ್ರವಲ್ಲ ಅಮೂಲ್ಯ ಜೀವವೂ ಉಳಿಯುತ್ತದೆ. ಇತ್ತೀಚೆಗಿನ ಏಳು ತಿಂಗಳಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ 13 ಜನ ಮೃತ ಪಟ್ಟಿದ್ದಾರೆ ಎಂಬುದು ಖೇದಕರ. ಮನೆಗೆ ಆಧಾರಸ್ತಂಭವಾಗಿರುವ ಮಗ ವಿರೋಧಾಭ್ಯಾಸಗಳಿಂದ ಜೀವವನ್ನು ಹೋಗಲಾಡಿಸುವುದು ಸರಿಯೇ ಎಂದು ಅವರು ಹೇಳಿದರು.
ಆರೋಗ್ಯವಂತ, ಪ್ರಜ್ಞಾವಂತ, ವಿದ್ಯಾವಂತರೆನಿಸಿಕೊಂಡಾಗ ಸುಂದರ ಸಮಾಜದ ನಿರ್ಮಾಣ-ಎಂ.ಎಸ್ ಮಹಮದ್:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ಪೊಲೀಸರು ನೀಡುವ ಕಿವಿ ಮಾತು ನಮ್ಮ ರಕ್ಷಣೆಗೆ ಹೊರತು ಅವರ ರಕ್ಷಣೆಗೆ ಅಲ್ಲ. ದೇಶದ ಅಭಿವೃದ್ಧಿಯಲ್ಲಿ ಯುವಸಮೂಹ ಎಂಬ ಮಾನವ ಸಂಪನ್ಮೂಲ ಒಳ್ಳೆಯ ದಿಸೆಯಲ್ಲಿ ಸಾಗಿದಾಗ ದೇಶ ಅಭಿವೃದ್ಧಿ ಪಥದತ್ತ ಸಾಗಬಲ್ಲುದು. ಪ್ರಸಕ್ತ ವಿದ್ಯಾಮಾನದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ಎನಿಸಿಕೊಳ್ಳಬೇಕಾದರೆ ಯುವಸಮೂಹ ಆರೋಗ್ಯವಂತ, ಪ್ರಜ್ಞಾವಂತ, ವಿದ್ಯಾವಂತರೆನಿಸಿಕೊಂಡಾಗ ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುವುದು. ನಾವು ಸ್ವತಂತ್ರವಾಗಿ, ಸ್ವಾಭಿಮಾನಿಯಾಗಿ ಸಮಾಜದಲ್ಲಿ ಬದುಕಬೇಕೇ ವಿನಹ ಪರಾವಲಂಭಿಗಳಾಗಿ ಅಲ್ಲ ಎಂದರು.
ಸದೃಢ ಯುವಕರ ತಂಡವಿದ್ದಾಗ ಪುತ್ತೂರಿನಲ್ಲಿ ಬದಲಾವಣೆ ತರುವುದು ಅಸಾಧ್ಯವಲ್ಲ-ಹೇಮನಾಥ ಶೆಟ್ಟಿ:
ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸಂಚಾರಿ ನಿಯಮವನ್ನು ತಪ್ಪಿ ಮುನ್ನೆಡೆದಾಗ ಅಪಘಾತವಾಗುವುದು ಅದರಿಂದ ಪ್ರಾಣ ಹಾನಿಯಾಗುವುದು, ಕುಟುಂಬಕ್ಕೆ ಹೊರೆ ಎನಿಸುವುದು ಸರ್ವೇಸಾಮಾನ್ಯ. ಮಾದಕ ದ್ರವ್ಯ ಮುಕ್ತ ಪುತ್ತೂರು, ಸಂಚಾರಿ ನಿಯಮಗಳ ಜನ ಜಾಗೃತಿ ಮೂಲಕ ಉತ್ತಮ ಕಾರ್ಯಕ್ರಮ ಮಾಡುವ ಇಂತಹ ಸದೃಢ ಯುವಕರ ತಂಡವಿದ್ದಾಗ ಪುತ್ತೂರಿನಲ್ಲಿ ಬದಲಾವಣೆ ತರುವುದು ಅಸಾಧ್ಯವಲ್ಲ ಎಂದರು.
ಮನಸ್ಸು ಜೋಡಣೆ ಮಾಡುವಂತಹ ಕಾರ್ಯವನ್ನು ಮಾಡಬೇಕಾಗಿದೆ-ಮಹಮದ್ ಬಡಗನ್ನೂರು:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮದ್ ಬಡಗನ್ನೂರು ಮಾತನಾಡಿ, ಜಗತ್ತು ಬೆಳೆಯುವಾಗ ಮಾನವ ಸಂಪನ್ಮೂಲವು ಹೇಗೆ ಬೆಳೆಯಬೇಕು ಅನ್ನುವುದು ಬಹಳ ಮುಖ್ಯ. ಮಾನವನ ಜೀವವು ಎಷ್ಟು ಪ್ರಮುಖವೆನಿಸಿಕೊಳ್ಳಬೇಕಾದರೆ ಇಂತಹ ಕಾರ್ಯಕ್ರಮಗಳು ಒಳ್ಳೆಯ ನಿದರ್ಶನವಾಗಬಲ್ಲವು ಮಾತ್ರವಲ್ಲ ಪರಿವರ್ತನೆಗೆ ದಾರಿ ಮಾಡಿಕೊಳ್ಳುತ್ತದೆ. ಹಸಿದವನ ಹೊಟ್ಟೆ ನೀಗಿಸುವುದು ಎಷ್ಟು ಮುಖ್ಯವೋ ಅಷ್ಟೇ ಅವನಿಗೆ ಬದುಕಲು ದಾರಿ ಮಾಡಿಕೊಡುವುದಾಗಿದೆ. ಮನಸ್ಸು ಮನಸ್ಸು ಜೋಡಣೆ ಮಾಡುವಂತಹ ಕಾರ್ಯವನ್ನು ಇಂದು ನಾವು ಮಾಡಬೇಕಾಗಿದೆ ಎಂದರು.
ಕಾನೂನಿನಲ್ಲಿ ಯಾರೂ ದೊಡ್ಡವರು, ಸಣ್ಣವರಿಲ್ಲ. ಎಲ್ಲರೂ ಸಮಾನರು-ಎನ್.ಕೆ ಜಗನ್ನೀವಾಸ್ ರಾವ್:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ಕೆ ಜಗನ್ನೀವಾಸ್ ರಾವ್ ಮಾತನಾಡಿ, ಸಮಾಜ ಸೇವಕ ರಝಾಕ್‌ರವರ ನೇತೃತ್ವದಲ್ಲಿ ಅವರ ತಂಡವು ಹಲವು ಸಮಾಜಮುಖಿ ಕಾರ್ಯಗಳು ನಡೆಸುವ ಮೂಲಕ ಸಾಮರಸ್ಯಕ್ಕೆ ನಾಂದಿ ಹಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕರಿಗೆ ಸನ್ಮಾನ, ಅಮರ್ ಅಕ್ಬರ್ ಅಂತೋನಿ ಹೆಸರಿನಲ್ಲಿ ಕ್ರಿಕೆಟ್ ಆಯೋಜನೆ ಇದು ದೇವರು ಮೆಚ್ಚುವಂತಹ ಕಾರ್ಯವಾಗಿದೆ. ಕಾನೂನಿನಲ್ಲಿ ಯಾರೂ ದೊಡ್ಡವರು, ಸಣ್ಣವರಿಲ್ಲ. ಎಲ್ಲರೂ ಸಮಾನರು. ಪ್ರಜ್ಞಾವಂತ ನಾಗರಿಕರು ಕಾನೂನನ್ನು ಸರಿಯಾಗಿ ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ. ಸಿಂಗಾಪುರದಂತಹ ಗಲೀಜು ರಾಷ್ಟ್ರವು ಇಂದು ಸುಂದರ ರಾಷ್ಟ್ರವಾಗಿ ನಿರ್ಮಾಣಗೊಂಡಿದೆ, ಇದು ನಮ್ಮ ಭಾರತ ದೇಶಕ್ಕೆ ಸಾಧ್ಯವಿಲ್ಲವೇ? ಎಂದ ಅವರು ದೇಶದಲ್ಲಿನ ಕಾನೂನನ್ನು ಬಿಗಿಗೊಳಿಸಬೇಕು, ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷಿಯಾಗಬೇಕು. ಯುವಸಮೂಹಕ್ಕೆ ಸರಿಯಾದ ಕೆಲಸ ಕೊಟ್ಟಾಗ ಸಮಾಜವು ಉತ್ತಮ ದಾರಿಯಲ್ಲಿ ಸಾಗಬಲ್ಲುದು ಎಂದು ಅವರು ಹೇಳಿದರು.
ಯುವಸಮೂಹದಿಂದ ಸಮಾಜದ ಸ್ವಾಸ್ಥ್ಯ ಕೆಡದಿರಲಿ-ಎಲ್.ಟಿ ರಝಾಕ್ ಹಾಜಿ:
ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ ಮಾತನಾಡಿ, ಸಮಾಜದಲ್ಲಿನ ಕುಂದು ಕೊರತೆ ಗಮನಿಸಿ ಇಂದಿಲ್ಲಿ ಯುವಕರ ತಂಡ ಉತ್ತಮ ಕಾರ್ಯಕ್ರಮನ್ನು ಆಯೋಜಿಸಿರುವುದು ಶ್ಲಾಘನೀಯ. ಪ್ರಸ್ತುತ ದಿನಗಳಲ್ಲಿ ಮಾದಕ ದ್ರವ್ಯ ಸೇವನೆಗೆ ಯುವಸಮೂಹ ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಮಾತ್ರವಲ್ಲ ಇದರಿಂದ ಅವರ ಕುಟುಂಬವು ಬೀದಿ ಪಾಲಾಗುತ್ತಿರುವುದು ವಿಪರ‍್ಯಾಸವಾಗಿದೆ. ಯುವಸಮೂಹ ಇದರಿಂದ ಎಚ್ಚೆತ್ತು ಒಳ್ಳೆಯ ಜೀವನವನ್ನು ನಡೆಸುವಲ್ಲಿ ಹೆಜ್ಜೆ ಇಟ್ಟಾಗ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.
ನಾಗರಿಕ ಸೇವೆ, ಸಮಾಜ ಸೇವೆ ನಮ್ಮದಾಗಲಿ-ಜೆರಾಲ್ಡ್ ಡಿ’ಕೋಸ್ಟ:
sಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ಮಾತನಾಡಿ, ಮದ್ಯಪಾನ ಯಾರು ಮಾಡುತ್ತಾರೆಯೋ, ಮಾದಕ ದ್ರವ್ಯ ಯಾರು ಸೇವನೆ ಮಾಡುತ್ತಾರೆಯೋ, ಸಂಚಾರಿ ನಿಯಮ ಯಾರು ಪಾಲಿಸುತ್ತಿಲ್ಲವೋ ಅವರ ಬದುಕು ಚಿಂತಾಜನಕವಾಗುತ್ತದೆ. ಯುವಸಮೂಹ ಮಾದಕ ದ್ರವ್ಯ ಸೇವನೆ ಮಾಡುವ ಮೂಲಕ ತನ್ನ ಕುಟುಂಬನ್ನು ಅಧಃಪತನದತ್ತ ಕೊಂಡೊಯ್ಯುತ್ತಾನೆ. ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಾಗಿದೆ. ನಾಗರಿಕ ಸೇವೆ, ಸಮಾಜ ಸೇವೆ ನಮ್ಮದಾಗಲಿ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರುರವರು ಆಗಮಿಸಿ ಶುಭ ಕೋರಿದರು. ವೇದಿಕೆಯಲ್ಲಿ ಗಾಂಧಿ ಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ, ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಕುಟ್ಟಿ ಎಂ.ಕೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮೋಹನ್‌ದಾಸ್ ರೈ, ಅಧ್ಯಕ್ಷ ಜುನೈದ್ ಪಿ.ಕೆ, ಸಂಘಟನಾ ಸದಸ್ಯ ಅಶೋಕ್ ರಾವ್ ಬಪ್ಪಳಿಗೆ, ನಗರಸಭಾ ನಾಮನಿರ್ದೇಶಿತ ಸದಸ್ಯ ಷೆರೀಪ್ ಬಲ್ನಾಡು, ಸಲೀಂ ಬರೆಪ್ಪಾಡಿ, ಹಿಂದು-ಮುಸ್ಲಿ-ಕ್ರಿಶ್ಚಿಯನ್ ಜನಜಾಗೃತಿ ಸಂಘಟನೆಯ ಭಾನುಪ್ರಕಾಶ್,ಮಾಜಿ ಸೈನಿಕರ ಸಂಘದ ಸದಸ್ಯರು ಸಹಿತ ಹಲವರು ಉಪಸ್ಥಿತರಿದ್ದರು. ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಸಂಘಟಕ ರಝಾಕ್ ಬಿ.ಎಚ್ ವಂದಿಸಿ, ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಐಎಸ್‌ಐ ಮಾರ್ಕ್ ಇಲ್ಲದ ಸವಾರರಿಗೆ ಸ್ಥಳದಲ್ಲಿಯೇ ಹೆಲ್ಮೆಟ್ ತೊಡಿಸುವಿಕೆ..
ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿದ ದ್ವಿಚಕ್ರ ವಾಹನ ಸವಾರರಲ್ಲಿ ಐಎಸ್‌ಐ ಮಾರ್ಕ್‌ನ ಹೆಲ್ಮೆಟ್ ಯಾರು ಧರಿಸಿರಲಿಲ್ಲವೋ ಅವರನ್ನು ನಿಲ್ಲಿಸಿ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿ ಹಾಗೂ ಪುತ್ತೂರು ಸಂಚಾರಿ ಠಾಣೆಯ ಪಿಎಸ್‌ಐ ಉದಯರವಿರವರು ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್‌ನ್ನು ನೀಡಿ ಮಾನವನ ತಲೆಯ ಮಹತ್ವದ ಬಗ್ಗೆ ಕಿವಿ ಮಾತು ನುಡಿದ ಘಟನೆ ನಡೆಯಿತು. ಇದರಲ್ಲಿ ಹೆಲ್ಮೆಟ್ ಧರಿಸದೆ ಬಂದಿರುವ ಸಣ್ಣ ಮಕ್ಕಳಿಗೂ ಅವರ ಜೀವದ ಪ್ರಾಮುಖ್ಯತೆಯವನ್ನು ವಿವರಿಸಿ ಅವರಿಗೂ ಹೆಲ್ಮೆಟ್ ತೊಡಿಸಲಾಯಿತು. ವಾಹನಕ್ಕೆ ಲಕ್ಷ ವೆಚ್ಚ ಮಾಡ್ತೀರಾ, ಮೊಬೈಲ್‌ಗೆ ಸಾವಿರಗಟ್ಟಲೇ ವ್ಯಯಿಸುತ್ತೀರಾ ಆದರೆ ಜೀವ ಉಳಿಸುವ ಹೆಲ್ಮೆಟ್‌ಗೆ ಬರೀ ನೂರು ರುಪಾಯಿನಾ?, ಹೆಲ್ಮೆಟ್ ಧರಿಸದಿದ್ದರೆ 500 ರೂ.ದಂಡ ಬೀಳುತ್ತದೆ ಎಂದ ಮಾತ್ರಕ್ಕೆ ಜೀವಕ್ಕೆ ರಕ್ಷಣೆಯಿಲ್ಲದ ಹೆಲ್ಮೆಟ್‌ನ್ನು ಧರಿಸಬೇಡಿ ಎಂದು ಹೇಳಿರುವ ಪ್ರಸಂಗ ಕೂಡ ನಡೆಯಿತು.
ಗಾಂಧೀ ಪ್ರತಿಮೆಗೆ ಗೌರವಾರ್ಪಣೆ..
ಆರಂಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ಎನ್ ಭಟ್‌ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಸೈನಿಕರನ್ನು ಸಂಘಟಕರಿಂದ ಶಾಲು ಹೊದಿಸಿ ಗುರುತಿಸಲಾಯಿತು. ಮಾದಕ ದ್ರವ್ಯ ಮುಕ್ತ ಪುತ್ತೂರು ಆಗಬೇಕು ಎನ್ನುವ ನಿಟ್ಟಿನಲ್ಲಿ ನಶಮುಕ್ತ ಭಾರತ ಎಂದು ಪ್ರತಿಜ್ಞಾ ವಿಧಿ ನಡೆಸಲಾಯಿತು.