




ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿವೇಶನ ಮತ್ತು ಕಟ್ಟಡಗಳಿಗೆ ಈ ಖಾತಾ ವಿತರಿಸಲು ದ.೦1 ರಿಂದ ಹೊಸದಾಗಿ ಅಭಿವೃದ್ಧಿಪಡಿಸಿರುವ ಇ – ಸ್ವತ್ತು 2.0 ತಂತ್ರಾಂಶದಲ್ಲಿ ಹಲವು ಲೋಪದೋಷಗಳಿಂದ ಕೂಡಿದ್ದು ಈ ಬಗ್ಗೆ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರ ಸದನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.




ಭಾರತದ ಸಂವಿಧಾನದ ಆಶಯದಂತೆ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ರಚನೆಯಾದ ಗ್ರಾಮ ಪಂಚಾಯತಿಗಳು ಗ್ರಾಮೀಣ ಜನರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಮುಂಚೂಣಿ ಕಾರ್ಯಾಲಯವಾಗಿದೆ ಆದರೆ ಪ್ರಸ್ತುತ ಸರ್ಕಾರಗಳ ನೀತಿಗಳಿಂದಾಗಿ ಗ್ರಾಮೀಣ ಭಾಗದ ಜನರು ತಮ್ಮ ಹಲವಾರು ಸೇವೆಗಳಿಗಾಗಿ ನಗರ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ‘ವಿ’ ಎಂಬುದು ಬಿಟ್ಟು ಹೋಗಿದ್ದು ಕೇವಲ ಕೇಂದ್ರೀಕರಣವಾಗುತ್ತಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ನಿಯಮಗಳನ್ನು ರೂಪಿಸುವಾಗ ಗ್ರಾಮೀಣ ಭಾಗದ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಇಂತಹ ಹಲವಾರು ಗೊಂದಲಗಳಿಗೆ ಆಸ್ಪದ ಇರುವುದಿಲ್ಲ. ಪ್ರಸ್ತುತ ಪರಿಚಯಿಸಲಾಗಿರುವ ಇ- ಸ್ವತ್ತು 2.0 ತಂತ್ರಾಂಶದ ಲೋಪದೋಷಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸಿ ಗ್ರಾಮೀಣ ಜನರಿಗೆ ಸುಸೂತ್ರವಾಗಿ ಸೇವೆ ಸಿಗುವಂತಾಗಲು ಸರಕಾರ ಆದಷ್ಟು ಶೀಘ್ರವಾಗಿ ಕ್ರಮವಹಿಸುವಂತೆ ಎಮ್ಎಲ್ಸಿ ಕಿಶೋರ್ ಕುಮಾರ್ರವರು ಆಗ್ರಹಿಸಿದರು.





ಇ-ಸ್ವತ್ತು 2.0 ತಂತ್ರಾಂಶದಲ್ಲಿರುವ ಲೋಪದೋಷಗಳು
2.0 ತಂತ್ರಾಂಶದಲ್ಲಿರುವ ಲೋಪದೋಷಗಳ ಬಗ್ಗೆ ಸರಕಾರದ ಗಮನಕ್ಕೆ ತಂದ ಅವರು ಈ ಹಿಂದೆ ಅರ್ಜಿದಾರರ ವಿವರಗಳು ಮತ್ತು ದಾಖಲೆಗಳನ್ನು ಈ ಸ್ವತ್ತು ತಂತ್ರಾಂಶದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು(ಎಸ್ಡಿಎಎ) ಅಪ್ಲೋಡ್ ಮಾಡಲು ಅವಕಾಶವಿತ್ತು, ಹೊಸ ತಂತ್ರಾಂಶದಲ್ಲಿ ಈ ಕೆಲಸವನ್ನು ಸಾರ್ವಜನಿಕರು ಅಥವಾ ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿ ಆಪರೇಟರ್ ಮಾಡಬೇಕಾಗಿದೆ ಇಬ್ಬರಿಗೂ ಅರ್ಜಿಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಯಾವುದೇ ರೀತಿಯ ಸೂಕ್ತ ಮಾಹಿತಿಯನ್ನು ನೀಡಿರುವುದಿಲ್ಲ , ಅಧ್ಯಕ್ಷರಿಗೆ ಹೊಸದಾಗಿ ಲಾಗಿನ್ ನೀಡಲಾಗಿದೆ ಆದರೆ ಅವರಿಗೆ ಯಾವುದೇ ಸೂಕ್ತ ತರಬೇತಿ ನೀಡಿಲ್ಲ ಮತ್ತು ಲಾಗಿನ್ ಐ ಡಿ ಮತ್ತು ಪಾಸ್ವರ್ಡ್ ಅನ್ನು ಇವರೆಗೂ ನೀಡಿರುವುದಿಲ್ಲ, ಹೊಸ ತಂತ್ರಾಂಶದಲ್ಲಿ ನಮೂನೆ 9 ನ್ನು ಕೈ ಬಿಟ್ಟು ನಮೂನೆ 11-ಂ ಮಾತ್ರ ನೀಡಲಾಗುತ್ತದೆ ಈ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚಾರ ಮಾಡಿಲ್ಲ, ಈ ಹಿಂದೆ ಪಂಚತಂತ್ರ ತಂತ್ರಾಂಶದಲ್ಲಿರುವ ಸ್ವತ್ತಿಗೆ ನಮೂನೆ 11 -ಎ ಯನ್ನು ಗ್ರಾಮ ಪಂಚಾಯಿತಿಯಲ್ಲಿ ನೇರವಾಗಿ ಸೃಜಿಸಬಹುದಿತ್ತು ಆದರೆ ಈಗ ಅದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅನುಮೋದನೆ ಅಗತ್ಯವಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಿದ ಫಲಾನುಭವಿಗಳಿಗೆ ಕದ ನಂಬ್ರ ವಿತರಿಸಲು ಅವಕಾಶವಿರುವುದಿಲ್ಲ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವತ್ತಿಗೆ ಈಗಾಗಲೇ ಸೃಜಿಸಲಾಗಿರುವ ನಮೂನೆ 11 -ಬಿ ಯನ್ನು ನಮೂನೆ 11-ಎ ಆಗಿ ಮಾರ್ಪಡಿಸಲು ಅವಕಾಶವಿರುವುದಿಲ್ಲ, ಈ ಸ್ವತ್ತು 2.೦ ತಂತ್ರಾಂಶದ ಬಗ್ಗೆ ಗ್ರಾಮ ಪಂಚಾಯತಿಯ ಯಾವ ಅಧಿಕಾರಿಗಳಿಗೂ ಪರಿಪೂರ್ಣ ತರಬೇತಿಯನ್ನು ನೀಡಿರುವುದಿಲ್ಲ, ಗ್ರಾಮ ಪಂಚಾಯತ್ನಲ್ಲಿ ಅನುಮೋದನೆ ನೀಡಿ ವಿತರಣೆ ಮಾಡುವ ಅರ್ಜಿಗೆ ಈಗ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಅನುಮೋದನೆ ಪಡೆಯುವಂತಾಗಿದೆ. ಈ ಸ್ವತ್ತು ತಂತ್ರಾಂಶದಲ್ಲಿನ ಸಮಸ್ಯೆಗಳ ನಿವಾರಣೆಗೆ ಸಹಾಯವಾಣಿಯನ್ನು ತೆರೆಯಲಾಗಿದ್ದು, ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬುದಾಗಿ ಗ್ರಾಮ ಪಂಚಾಯತಿಗಳಿಂದ ದೂರುಗಳು ಬರುತ್ತದೆ. ಅಭಿಯಾನ ಪ್ರಾರಂಭವಾಗಿ ಹತ್ತು ದಿವಸ ಕಳೆದಿದ್ದರೂ ರಾಜ್ಯದ 5951 ಗ್ರಾಮ ಪಂಚಾಯತಿಗಳಲ್ಲಿ ಈವರೆಗೂ ಕೆಲವೇ ಕೆಲವು ಖಾತಾ ಪ್ರಮಾಣ ಪತ್ರವನ್ನು ಮಾತ್ರ ವಿತರಿಸಲು ಸಾಧ್ಯವಾಗಿದೆ ಎಂಬಿತ್ಯಾದಿ ವಿಷಯಗಳನ್ನು ಸರಕಾರದ ಗಮನಕ್ಕೆ ತರಲಾಯಿತು.






