ಪುತ್ತೂರು: ಬೊಳುವಾರು ವಿಶ್ವಕರ್ಮ ಮಹಿಳಾ ಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯು ಆ.26ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ರೋಹಿಣಿ ಆಚಾರ್ಯ ದಂಪತಿ ನೇತೃತ್ವದಲ್ಲಿ ಮಂಡಳಿ ಅಧ್ಯಕ್ಷೆ ಶುಭಾ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಪೂಜಾ ಕಾರ್ಯಕ್ರಮ ಜರಗಿತು. ಅಭಿಷೇಕ್ ಪುರೋಹಿತ್ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭ ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜ, ವಿಶ್ವಕರ್ಮ ಮಹಿಳಾ ಮಂಡಳಿ ನೇತೃತ್ವದಲ್ಲಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿರುವ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.
ಶಿಬಿರ ನಡೆಸಿಕೊಡಲಿರುವ ಯಕ್ಷರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಆಚಾರ್ಯ ಮಾಣಿ ಮಾತನಾಡಿ, ಯಕ್ಷಗಾನ ಗಂಡು ಕಲೆ. ಹಾಗೆಂದು ಗಂಡಸರಿಗೆ ಮಾತ್ರ ಸೀಮಿತವಾದ ಕಲೆಯಲ್ಲ. ಇಂದು ಅನೇಕ ಮಂದಿ ಹೆಂಗಸರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶಿಬಿರದಲ್ಲಿ ಯಕ್ಷಗಾನ ನಾಟ್ಯ, ಬಣ್ಣಗಾರಿಕೆ, ವೇಷ ಕಟ್ಟುವ ವಿಧಾನ, ಮಾತುಗಾರಿಕೆ, ಅಭಿನಯ ಅಲ್ಲದೆ ಮುಮ್ಮೇಳಕ್ಕೆ ಬೇಕಾದ ವಿಚಾರಗಳನ್ನು ಕಲಿಸಿಕೊಡಲಾಗುವುದು. ಹೆಸರು ನೋಂದಾಯಿಸಲು ಹಾಗೂ ಮಾಹಿತಿಗಾಗಿ 9481973290 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಜಗದೀಶ್ ಮಾತನಾಡಿ, ಯಕ್ಷಗಾನ ಕಲೆ ಮುಂದಿನ ಪೀಳಿಗೆಗೆ ಸಾಗಬೇಕು. ಈ ಹಿನ್ನೆಲೆಯಲ್ಲಿ ಯಕ್ಷಗಾನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಸಂಸ್ಕಾರ ಹಾಗೂ ಸಂಪ್ರದಾಯದ ತಳಹದಿಯಾಗಿರುವ ಯಕ್ಷಗಾನವನ್ನು ಕಲಿಸುವ ಕಾಯಕವನ್ನು ಮಾಡುವ ದಿಶೆಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗುದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಶುಭಾ ಪುರುಷೋತ್ತಮ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನಂದ್ ಆಚಾರ್ಯ ಅಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ‘ಕುಲದೇವಿ ಕಾಳಿಕಾಂಭ-ಶಿಲ್ಪಕೌಶಲ’ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ. ಕೆ ಆಚಾರ್ಯ ಅಲಂಕಾರು, ಹಿಮ್ಮೇಳದಲ್ಲಿ ಪಿ. ಕೃಷ್ಣಯ್ಯ ಆಚಾರ್ಯ, ಮೋಹನ ಶರವೂರು, ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಈಶ್ವರ ), ಮಾಣಿ ಸತೀಶ ಆಚಾರ್(ಪಾರ್ವತಿ ), ಹರೀಶ ಆಚಾರ್ಯ ಬಾರ್ಯ (ತ್ವಷ್ಟ್ರು ವಿಶ್ವಕರ್ಮ ), ವಿಸ್ಮಿತ್ (ನಾರದ )ಭಾಗವಹಿಸಿದ್ದರು. ಸಂಘದ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು.