ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಆರೋಪ-ಪೊಲೀಸರಿಗೆ ದೂರು: ಪ್ರಕರಣ ದಾಖಲು: ತನಿಖೆ ವೇಳೆ ಬಯಲಾದ ಕಟ್ಟು ಕಥೆ-ಆಪಾದಿತನ ಬಿಡುಗಡೆ

0

ಆಸ್ಪತ್ರೆ, ಪೊಲೀಸ್ ಠಾಣೆ ಬಳಿ ಜಮಾಯಿಸಿದ ಎಸ್‌ಡಿಪಿಐ, ಕಾಂಗ್ರೆಸ್ ಪಕ್ಷ, ಸಂಘಟನೆಗಳ ಕಾರ್ಯಕರ್ತರು
ಘಟನೆಗೆ ಖಂಡನೆ-ಆಪಾದಿತನಿಗೆ ಶಿಕ್ಷೆ ವಿಧಿಸಲು ಆಗ್ರಹ ಇಬ್ಬರು ಅಪ್ರಾಪ್ತರನ್ನು ಕರೆದೊಯ್ದ ಪೊಲೀಸರು
ಸತ್ಯಾಸತ್ಯತೆ ತಿಳಿಯಲು ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ,ಹಿಂದೂ ಸಂಘಟನೆಗಳ ಪ್ರಮುಖರ ಆಗ್ರಹ

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರಿಗೆ ಅದೇ ಕಾಲೇಜಿನ ಹಿಂದು ವಿದ್ಯಾರ್ಥಿಯೋರ್ವ ಚೂರಿಯಿಂದ ಇರಿದು ಗಾಯಗೊಳಿಸಿರುವುದಾಗಿ ಆರೋಪಿಸಲಾದ ಹಿನ್ನೆಲೆಯಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ವಿಚಾರಣೆಗೆಂದು ಪೊಲೀಸರು ಕರೆದೊಯ್ಯ ಮತ್ತು ಚೂರಿಯಿರಿತ ಆಗಿರುವುದಾಗಿ ಸುದ್ದಿಗಳು ಹರಡಿ, ವಿದ್ಯಾರ್ಥಿನಿ ದಾಖಲಾದ ಆಸ್ಪತ್ರೆ ಬಳಿ ಮತ್ತು ಪೊಲೀಸ್ ಠಾಣೆಯ ಬಳಿ ನೂರಾರು ಮಂದಿ ಜಮಾಯಿಸಿ ತುಸು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದ ಮತ್ತು ಸಂತ್ರಸ್ತ ವಿದ್ಯಾರ್ಥಿನಿ ದೂರಿನ ಆಧಾರದಲ್ಲಿ ಆಪಾದಿತ ವಿದ್ಯಾರ್ಥಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ,ಸಿಸಿ ಟಿವಿಗಳ ಪರಿಶೀಲನೆ ಸೇರಿದಂತೆ ಬಳಿಕದ ತನಿಖೆಯಲ್ಲಿ ಇದೊಂದು ಕಟ್ಟುಕಥೆ ಎಂದು ಕಂಡುಕೊಂಡ ಪೊಲೀಸರು ಅಮಾಯಕ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿರುವ ಘಟನೆ ಆ.೨೦ರಂದು ನಡೆದಿದೆ.

ಘಟನೆ ಆ.20ರ ಬೆಳಗ್ಗೆ 8.45ರ ಸುಮಾರಿಗೆ ಪುತ್ತೂರು ಕಾಲೇಜು ರಸ್ತೆಯ ಕಾಲು ಸಂಕದ ಬಳಿ ನಡೆದಿದೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದರು.ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚೂರಿ ಇರಿತಕ್ಕೊಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದವರು.ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ತಾನು ಬೆಳಿಗ್ಗೆ ಕಾಲೇಜಿಗೆ ಬರುವಾಗ ಕಾಲೇಜು ಸಮೀಪ ತಮ್ಮದೇ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಎಡ ಕೈಗೆ ಯಾವುದೋ ಹರಿತವಾದ ವಸ್ತುವಿನಿಂದ ಗೀರಿರುವುದಾಗಿ ಅವರು ಆರೋಪಿಸಿದ್ದರು.ವಿಷಯ ತಿಳಿಯುತ್ತಲೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು,ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದ ಅಪ್ರಾಪ್ತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನೋರ್ವನನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು.

ಆಸ್ಪತ್ರೆ ಮುಂದೆ ಜಮಾಯಿಸಿದ ಪಕ್ಷ, ಸಂಘಟನೆ ಕಾರ್ಯಕರ್ತರು: ವಿದ್ಯಾರ್ಥಿನಿಗೆ ಚೂರಿಯಿಂದ ಇರಿಯಲಾಗಿದೆ ಎಂದು ಸುದ್ದಿ ಹರಡುತ್ತಲೇ, ಪುತ್ತೂರು ಬ್ಲಾಕ್ ಕಾಂಗ್ರೆಸ್, ಎಸ್‌ಡಿಪಿಐ, ಎನ್‌ಎಸ್‌ಯುಐ ಸಹಿತ ವಿವಿಧ ಸಂಘಟನೆಗಳ ಪ್ರಮುಖರು ವಿದ್ಯಾರ್ಥಿನಿ ದಾಖಲಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆಯ ಮುಂದೆ ಜಮಾಯಿಸಿ ಘಟನೆಯನ್ನು ಖಂಡಿಸಿದರಲ್ಲದೆ ಆರೋಪಿ ವಿದ್ಯಾರ್ಥಿಯನ್ನು ತಕ್ಷಣ ಬಂಧಿಸಿ ಶಿಕ್ಷೆ ವಿಧಿಸುವಂತೆ ಪೊಲೀಸರನ್ನು ಒತ್ತಾಯಿಸಿದರು.ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ.ಅವರು ಆಸ್ಪತ್ರೆಯಲ್ಲಿ ಜಮಾಯಿಸಿದವರನ್ನು ಸಮಾಧಾನಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ತೆಗೆದು ಪ್ರಕರಣ ದಾಖಲಿಸುತ್ತೇವೆ ಎಂದು ಭರವಸೆ ನೀಡಿ, ತನಿಖೆ ಮಾಡಲು ಸಹಕಾರ ನೀಡಿ ಎಂದು ಮನವಿ ಮಾಡಿದರು.ಈ ನಡುವೆ ಪೊಲೀಸರು ಮತ್ತು ಅಲ್ಲಿ ಸೇರಿದ್ದವರ ನಡುವೆ ತುಂಬಾ ಹೊತ್ತು ಚರ್ಚೆ ನಡೆಯಿತು.ನಗರಸಭೆ ಸದಸ್ಯ ರಿಯಾಜ್ ಪರ್ಲಡ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಎಸ್‌ಡಿಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್, ಎನ್‌ಎಸ್‌ಯುಐ ಮುಖಂಡರಾದ ಬಾತಿಷಾ ಅಳಕೆಮಜಲು, ಅಡ್ವರ್ಡ್, ಅಶ್ರಫ್ ಬಾವು ಸಹಿತ ಅನೇಕ ಮಂದಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರೂ ಆಸ್ಪತ್ರೆಗೆ ಭೇಟಿ ನೀಡಿದ್ದರು.ಕೊಂಬೆಟ್ಟು ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿ ಮತ್ತು ಪೊಲೀಸ್ ಠಾಣೆಯಲ್ಲಿದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಸತ್ಯಾಸತ್ಯತೆ ತನಿಖೆ ಮಾಡುವಂತೆ ಪೊಲೀಸರನ್ನು ಒತ್ತಾಯಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು,ಈ ಪ್ರಕರಣದಲ್ಲಿ ಅನುಮಾನ ಇದೆ,ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಬ್ಲೇಡ್‌ನಿಂದಾಗಿರಬಹುದು, ಕೊಯ್ದು ಓಡಿದ-ವಿದ್ಯಾರ್ಥಿನಿ ಆರೋಪ: ನಾನು ಯಾವಾಗಲೂ ಬೊಳುವಾರು ಮಾರ್ಗವಾಗಿ ಬರುವುದು.ಆದರೆ ಇವತ್ತು ಪುಸ್ತಕ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಖ್ಯರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಗೆ ಬಂದಾಗ ಅದು ಬಂದ್ ಆಗಿತ್ತು. ಮತ್ತೆ ಮುಂದೆ ಬಂದಾಗ ನನ್ನ ಹಿಂದೆ ಇನ್ನೊಂದು ತರಗತಿಯ ವಿದ್ಯಾರ್ಥಿ ನನ್ನನ್ನು ಫಾಲೋ ಮಾಡುತ್ತಿದ್ದ.ನನಗೆ ಹೆದರಿಕೆಯಾಯಿತು.ಉಳಿದವರು ಓಡಿದರು.ಕಾಲೇಜಿನ ಬಳಿಯ ಕಾಲು ಸಂಕದ ಬಳಿಯಿಂದ ಹೋಗುತ್ತಿದ್ದ ವೇಳೆ ಎದುರು ಬಂದ ಅವನು ನನ್ನಲ್ಲಿ ಬಂದು, ನೀನು ಇನ್ನೊಂದು ವಿದ್ಯಾರ್ಥಿನಿಯ ಫ್ರೆಂಡಾ ಎಂದು ಪ್ರಶ್ನಿಸಿ, ನಾನು ಅವಳನ್ನು ಪ್ರೀತಿಸುವುದಿಲ್ಲ.ನಿನ್ನನ್ನು ಪ್ರೀತಿಸುತ್ತೇನೆ ಎಂದಾಗ ನಾನು ಅವನಿಗೆ ಬೈದೆ.ಅದಕ್ಕೆ ಆವನು ನನ್ನ ಕೈಗೆ ಬ್ಲೇಡ್‌ನಿಂದ ಆಗಿರಬಹುದು ಕೊಯ್ದು ಓಡಿದ.ಅವನೊಂದಿಗೆ ಇನ್ನೂ ೮ ಮಂದಿ ಇದ್ದರು ಎಂದು ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಜೊತೆ ಹೋಗಿರದ ಆಪಾದಿತ ವಿದ್ಯಾರ್ಥಿ- ಸಿಸಿ ಕ್ಯಾಮರಾದಲ್ಲಿ ಬಯಲು-ವಿದ್ಯಾರ್ಥಿ ಬಿಡುಗಡೆ: ಬೆಳಿಗ್ಗೆ ಗಂಟೆ 8.45ಕ್ಕೆ ಪುಸ್ತಕ ಖರೀದಿಸಲೆಂದು
ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಬಂದಿರುವುದಾಗಿ ಮತ್ತು ಬಳಿಕ ನಡೆದಿದೆ ಎನ್ನಲಾದ ಘಟನೆ ಕುರಿತು ವಿದ್ಯಾರ್ಥಿನಿ ನೀಡಿದ್ದ ಹೇಳಿಕೆಯಾಧರಿಸಿ ತನಿಖೆ ಆರಂಭಿಸಿದ ಪೊಲೀಸರು,
ಶ್ರೀಧರ್ ಭಟ್ ಅಂಗಡಿಯ ಸಿಸಿ ಕ್ಯಾಮರಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಿದರು.ಆದರೆ ವಿದ್ಯಾರ್ಥಿನಿ ಈ ರಸ್ತೆಯಲ್ಲಿ ಹೋದ ದೃಷ್ಯ ಈ ಕ್ಯಾಮರಾಗಳಲ್ಲಿ ಕಂಡು ಬರಲಿಲ್ಲ.ಬಳಿಕ ಬೊಳುವಾರು ಸ್ನೇಹ ಟೆಕ್ಸ್‌ಟೈಲ್ಸ್, ಕೊಂಬೆಟ್ಟು ಶಾಲಾ ಪರಿಸರದ ಸಿಸಿ ಕ್ಯಾಮರ ಪರಿಶೀಲನೆ ಮಾಡಿದರು.ಈ ವೇಳೆ, ಬೊಳುವಾರಿನಲ್ಲಿ ಆಕೆ ರಿಕ್ಷಾದಿಂದ ಇಳಿದು ಕಾಲೇಜಿಗೆ ಹೋಗುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ವಿದ್ಯಾರ್ಥಿನಿ ಆರೋಪ ಹೊರಿಸಿದ್ದ ವಿದ್ಯಾರ್ಥಿ ತನ್ನ ಸ್ನೇಹಿತನೊಂದಿಗೆ ನೆಲ್ಲಿಕಟ್ಟೆ ರಸ್ತೆಯಿಂದ ಬರುತ್ತಿದ್ದುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ವಿದ್ಯಾರ್ಥಿನಿ ಮತ್ತು ಆರೋಪ ಹೊತ್ತ ವಿದ್ಯಾರ್ಥಿ ಎಲ್ಲೂ ಜೊತೆಯಾಗಿ ಬರುತ್ತಿದ್ದ ದೃಷ್ಯ ಸಿಸಿ ಕ್ಯಾಮರಾದಲ್ಲಿರಲಿಲ್ಲ.ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ತನಕ ಆಕೆಯ ಕೈಗೆ ಗಾಯವಾಗಿರಲಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಪ್ಪಿಕೊಳ್ಳದ ವಿದ್ಯಾರ್ಥಿನಿ: ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಷ್ಯಗಳು ಮತ್ತು ಕಾಲೇಜಿಗೆ ಹೋಗುವ ತನಕ ಆಕೆಯ ಕೈಗೆ ಯಾವುದೇ ಗಾಯವಾಗದಿದ್ದ ಕುರಿತು ವಿದ್ಯಾರ್ಥಿಗಳು ನೀಡಿದ್ದ ಹೇಳಿಕೆ ಕುರಿತು ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಗೆ ತಿಳಿಸಿದಾಗ ಆಕೆ ಅದನ್ನು ಒಪ್ಪಲಿಲ್ಲ.ಬಳಿಕ ಸಿಸಿಟಿವಿ ದೃಷ್ಯಗಳ ವಿಡಿಯೋ ದಾಖಲೆ ತೋರಿಸಿದಾಗ, ಇದು ಎಡಿಟ್ ಮಾಡಿದ ವಿಡಿಯೋ ಎಂದು ಪೊಲೀಸರಿಗೆ ಹೇಳಿರುವುದಾಗಿ ತಿಳಿದು ಬಂದಿದೆ.ಕೊನೆಗೂ ತನಿಖೆ ಮುಂದುವರಿಸಿದ ಪೊಲೀಸರು, ವಿದ್ಯಾರ್ಥಿ ನಿರಪರಾಧಿ ಎಂದು ಕಂಡುಕೊಂಡು ಬಿಡುಗಡೆಗೊಳಿಸಿ, ತನಿಖೆಗೆ ಕರೆದಾಗ ಠಾಣೆಗೆ ಬರುವಂತೆ ಸೂಚಿಸಿ ಹೆತ್ತವರೊಂದಿಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿದು ಬಂದಿದೆ.

ವಿದ್ಯಾರ್ಥಿನಿ ದೂರು ಪ್ರಕರಣ ದಾಖಲು

ಸಂತ್ರಸ್ತ ಬಾಲಕಿ ನೀಡಿದ್ದ ದೂರಿನ ಮೇರೆಗೆ ಆಪಾದಿತ ವಿದ್ಯಾರ್ಥಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾನು ವ್ಯಾಸಂಗ ಮಾಡುತ್ತಿರುವ ಪುತ್ತೂರಿನ ಕಾಲೇಜಿಗೆ ತೆರಳುತ್ತಿದ್ದಾಗ,ತನ್ನ ಹಿಂದುಗಡೆಯಿಂದ ಪರಿಚಯದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಆರೋಪಿತ ಬಾಲಕನು ಹಿಂಬಾಲಿಸಿಕೊಂಡು ಬಂದು,ತನ್ನನ್ನು ಪ್ರೀತಿಸುತ್ತಿರುವ ವಿಚಾರದಲ್ಲಿ ಮಾತನಾಡಿರುತ್ತಾನೆ.ಈ ವೇಳೆ ತಾನು ನಿರಾಕರಿಸಿದ್ದು, ಕೋಪಗೊಂಡ ಬಾಲಕನು ಆತನ ಬಳಿಯಿದ್ದ ಯಾವುದೋ ಹರಿತವಾದ ಆಯುಧದಿಂದ ತನ್ನ ಕೈಗೆ ತಿವಿದು ಪರಾರಿಯಾಗಿರುತ್ತಾನೆ ಎಂದು,ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿ ನೀಡಿದ್ದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 42/2024) ಕಲಂ: 78, 126(2), 118(1), 238 BNS 2023 ಮತ್ತು ಕಲಂ 12 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ನೆರೆದವರು ಹೇಳಿದ್ದು…

ಹುಡುಗ, ಟೀಚರ್ ಮತ್ತು ಪ್ರಿನ್ಸಿಪಾಲ್ ಮೇಲೂ ಎಫ್‌ಐಆರ್ ದಾಖಲಾಗಬೇಕು:
ಹುಡುಗಿಗೆ ಚೂರಿ ಇರಿತ ಆಗಿದೆ. ಆ ಚೂರಿ ಇರಿತಗೊಂಡ ಹುಡುಗಿಯನ್ನು ಅಲ್ಲಿಯ ಟೀಚರ್ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ನೀವು ಇದು ಗ್ಲಾಸ್ ತಾಗಿದ್ದು ಎಂದು ಹೇಳುವಂತೆ ಹೇಳಿಸಿ ಮತ್ತೆ ತರಗತಿಗೆ ಕರೆದೊಯ್ದು ತಂದೆ ತಾಯಿಯನ್ನು ಕರೆಸಿ ತಿಳಿಸಿದರು.ಟೀಚರ್ ಇಂತಹ ಸುಳ್ಳು ಹೇಳಬಾರದಿತ್ತು.ಯಾರು ಈ ಘಟನೆಗೆ ಕಾರಣ ಆಗಿದ್ದಾರೋ ಆ ಹುಡುಗನ ಮೇಲೆ, ಟೀಚರ್, ಪ್ರಿನ್ಸಿಪಾಲ್ ಅವರ ಮೇಲೂ ಎಫ್‌ಐಆರ್ ಆಗಬೇಕೆಂದು ನಮ್ಮ ಆಗ್ರಹ.ಇಂತಹ ಘಟನೆ ನಡೆದಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿನ್ಸಿಪಾಲ್ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಮಾಹಿತಿ ನೀಡಬೇಕಾಗಿತ್ತು.ಅದನ್ನು ಅವರು ಮಾಡದೆ ಅಲ್ಲೇ ಮುಗಿಸುವ ಪ್ರಯತ್ನ ಮಾಡಿದ್ದಾರೆ
-ಇಬ್ರಾಹಿಂ ಸಾಗರ್, ಅಧ್ಯಕ್ಷರು ಎಸ್‌ಡಿಪಿಐ,ಪುತ್ತೂರು ವಿಧಾನಸಭಾ ಕ್ಷೇತ್ರ

ನ್ಯಾಯ ಸಿಗುವ ತನಕ ವಿದ್ಯಾರ್ಥಿನಿ ಜೊತೆ ನಿಲ್ಲುತ್ತೇವೆ
ಪುತ್ತೂರಿನ ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಬಾರದಂತಹ ಘಟನೆ ನಡೆದಿದೆ.ವಿದ್ಯಾರ್ಥಿನಿಯ ಮೇಲೆ ವಿದ್ಯಾರ್ಥಿಯೊಬ್ಬ ಅಮಾನುಷವಾಗಿ ಚೂರಿಯಿಂದ ಇರಿಯುವ ಕೆಲಸ ಆಗಿದೆ.ವಿದ್ಯಾರ್ಥಿನಿ ಹೇಳುವ ಪ್ರಕಾರ ಕಾಲೇಜಿನ ಶಿಕ್ಷಕರ ಕೈವಾಡ ಕೂಡಾ ಇದೆ.ಆರೋಪಿಗೆ ಸಹಾಯ ಮಾಡುವ ಕೆಲಸ ಕೂಡಾ ಆಗಿದೆ ಎಂದು ವಿದ್ಯಾರ್ಥಿನಿಯ ಹೇಳಿಕೆಯ ಮೇಲೆ ಕಾಣುತ್ತಿದೆ.ಇದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದಾರೆ.ಇಂತಹ ಘಟನೆ ಮುಂದಿನ ದಿನ ಯಾವ ಕಾಲೇಜಿನಲ್ಲೂ ಆಗಬಾರದು.ವಿದ್ಯಾರ್ಥಿನಿಗೆ ನ್ಯಾಯ ಸಿಗುವ ತನಕ ವಿದ್ಯಾರ್ಥಿನಿಯ ಜೊತೆ ನಾವು ನಿಲ್ಲುತ್ತೇವೆ – ರಿಯಾಜ್ ಪರ್ಲಡ್ಕ, ನಗರಸಭಾ ಸದಸ್ಯ

ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸುವ ಕೆಲಸ
ಕೊಂಬೆಟ್ಟು ಶಾಲೆಯ ವಿದ್ಯಾರ್ಥಿನಿಗೆ ಅದೇ ಶಾಲೆಯ ವಿದ್ಯಾರ್ಥಿ ಚೂರಿ ಇರಿತ ಮಾಡಿರುವುದು ಖಂಡನೀಯ.ಈ ಹಿಂದೆಯೂ ಕೂಡಾ ಹಲವಾರು ಬಾರಿ ಕೊಂಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿನಿಯ ಮೇಲೆ ಅದರಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿರುವುದು ಅತ್ಯಂತ ಖಂಡನೀಯ.ಪುತ್ತೂರು ಎಬಿವಿಪಿ ಇತರ ಸಂಘಟನೆಗಳು ತ್ರಿಶೂಲ ದಾಳಿಗಳ ಮೂಲಕ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆ ರೀತಿಯಲ್ಲಿ ಇದು ಕೂಡಾ ಅದರ ಒಂದು ಭಾಗ.ಇಲ್ಲಿನ ಶಾಸಕರು, ಪೊಲೀಸರು ವಿದ್ಯಾರ್ಥಿಯ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು -ಬಾತೀಷ ಅಳಕೆಮಜಲು, ಎನ್‌ಎಸ್‌ಯುಐ ಮುಖಂಡ

ಅಧ್ಯಾಪಕರನ್ನು ಅಮಾನತುಗೊಳಿಸಬೇಕು
ಯಾವುದೇ ಧರ್ಮದ ವಿದ್ಯಾರ್ಥಿಗಳಿಗಾದರೂ ಯಾರೇ ಆಗಲಿ ಅಲ್ಲಿ ಹಲ್ಲೆ ನಡೆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಅತಿ ದೊಡ್ಡ ಹಾನಿಯಾಗುತ್ತದೆ.ಇವತ್ತು ನಡೆದ ಘಟನೆ ಅತ್ಯಂತ ಖಂಡನೀಯ.ಹೋರಾಟ ಮಾಡುತ್ತೇವೆ. ಪ್ರಕರಣವನ್ನು ಮುಚ್ಚಿ ಹಾಕಲು ಹೊರಟ ಕಾಲೇಜಿನ ಅಧ್ಯಾಪಕರ ಕೆಲಸ ಖಂಡನೀಯ.ಅಧ್ಯಾಪಕರನ್ನು ಅಮಾನತು ಮಾಡಬೇಕು.ಎನ್.ಎಸ್.ಯು.ಐ ವಿದ್ಯಾರ್ಥಿಗಳ ಜೊತೆ ನಿಲ್ಲುತ್ತದೆ
-ಎಡ್ವರ್ಡ್, ಅಧ್ಯಕ್ಷರು ಎನ್‌ಎಸ್‌ಯುಐ ಪುತ್ತೂರು

ಶಿಕ್ಷಣ ಸಂಸ್ಥೆಯವರೂ ಇಂತಹ ಘಟನೆಗಳಾದಾಗ ಬೇಜವಾಬ್ದಾರಿಯಿಂದ ವರ್ತಿಸಬಾರದು
ಚೂರಿ ಇರಿತ ಪ್ರಕರಣ ವಿಚಾರವಾಗಿ ನಾನು ಈಗಾಗಲೇ ದ.ಕ ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದು ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಘಟನೆ ನಮಗೆಲ್ಲಾ ಬಹಳ ನೋವು ಮತ್ತು ಆಘಾತ ತಂದಿದೆ. ಇಂತಹ ಕೃತ್ಯ ಭವಿಷ್ಯದಲ್ಲಿ ಮರುಕಳಿಸಬಾರದು, ಹಾಗಾಗಿ ಕಟ್ಟುನಿಟ್ಟಿನ ಕ್ರಮ ಆಗಬೇಕು, ಕಾಲೇಜಿನಲ್ಲಿ ಇಂತಹ ಘಟನೆ ನಡೆಯುವುದೆಂದರೆ ನಿಜವಾಗಿಯೂ ಬಹಳ ಬೇಸರದ ವಿಚಾರ. ವಿದ್ಯೆ ಕಲಿಕೆಗೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಇಂತಹ ಕೃತ್ಯ ನಡೆಸುವುದೆಂದರೆ ಅದನ್ನು ಈಗಲೇ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಣ ಸಂಸ್ಥೆಯವರೂ ಕೂಡಾ ಇಂತಹ ಘಟನೆಗಳಾದಾಗ ಬೇಜವಾಬ್ದಾರಿಯಿಂದ ವರ್ತಿಸಬಾರದು. ಎಂ.ಎಸ್ ಮುಹಮ್ಮದ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಪೊಲೀಸ್ ಇಲಾಖೆ ಉತ್ತಮ ನಿರ್ಧಾರ ತೆಗೆದುಕೊಂಡಿದೆ:
ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯು ಅತ್ಯಂತ ಚಾಣಾಕ್ಷತನದಿಂದ ತನಿಖೆ ಮಾಡುವ ಮೂಲಕ ಸರಿಯಾದ ನ್ಯಾಯವನ್ನು ಪೊಲೀಸರು ಒದಗಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ.ಇಲ್ಲಿನ ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರು ಉತ್ತಮ ಕ್ರಮ ಕೈಗೊಳ್ಳಬೇಕು.ಉತ್ತಮ ನಿರ್ಧಾರವನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿದೆ
-ದಯಾನಂದ ರೈ ಉಜಿರುಮಾರು, ಅಧ್ಯಕ್ಷರು ಬಿಜೆಪಿ ಪುತ್ತೂರು

ಸುಳ್ಳು ಹೇಳಿಕೆ ಕೊಟ್ಟು ಸಮಾಜದ ಶಾಂತಿ ಕೆಡಿಸುವುದು ಸರಿಯಲ್ಲ
ಅನ್ಯಮತೀಯ ಹುಡುಗಿ ತನ್ನ ಕೈಗೆ ಬ್ಲೇಡ್‌ನಿಂದ ಗೀರಿಕೊಂಡು ಅದನ್ನು ಅದೇ ಶಾಲೆಯ ಯುವಕನ ಮೇಲೆ ಆರೋಪ ಹೊರಿಸಿದ್ದಾರೆ.ಈ ಘಟನೆ ಸುಳ್ಳು. ವಿದ್ಯಾಕ್ಷೇತ್ರದಲ್ಲಿ ಯಾವ ರೀತಿಯ ಕೋಮು ಭಾವನೆ ಕೆರಳಿಸಬಾರದು.ಯಾಕೆಂದರೆ ಹುಡುಗಿ ದೂರು ಕೊಡುವ ಸಂದರ್ಭ ಕೆಲವರು ಬಂದು ಕೆರಳಿಸುವ ಕೆಲಸ ಮಾಡಿದ್ದಾರೆ.ಹತ್ತೂರಿನ ಒಡೆಯನಾದ ಪುತ್ತೂರು ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ಸತ್ಯಕ್ಕೆ ಜಯ ಇದೆ. ಸುಳ್ಳು ಹೇಳಿಕೆ ಕೊಟ್ಟು ಸಮಾಜದ ಶಾಂತಿಯನ್ನು ಹಾಳು ಮಾಡುವುದು ಸರಿಯಲ್ಲ. ಘಟನೆ ಒಳ್ಳೆಯ ರೀತಿಯಲ್ಲಿ ಸುಖಾಂತ್ಯವಾಗಬೇಕೆಂದು ನಾವು ಬಯಸುತ್ತೇವೆ
-ನರಸಿಂಹ ಮಾಣಿ, ಹಿಂದು ಜಾಗರಣ ವೇದಿಕೆ ಪ್ರಮುಖರು

ಮಹಾಲಿಂಗೇಶ್ವರನ ಮಣ್ಣಿನಲ್ಲಿ ಧರ್ಮ ಮತ್ತು ಸತ್ಯಕ್ಕೆ ಜಯವಿದೆ:

ಆತಂಕದ ಪರಿಸ್ಥಿತಿಯಲ್ಲಿ ಪುತ್ತೂರಿನ ಜನತೆ ಇರುವ ಸನ್ನಿವೇಶ ನಿರ್ಮಾಣ ಆಗಿತ್ತು.ರಾಜಕಾರಣದಲ್ಲಿ ದಿಕ್ಕು ತಪ್ಪಿಸುವ ಯಾವೆಲ್ಲ ವ್ಯವಸ್ಥೆಗಳು ಆಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಇವತ್ತಿನ ವಿದ್ಯಾಮಾನ ನಡೆದು ಹೋಗಿದೆ.ಅಮಾಯಕ ವಿದ್ಯಾರ್ಥಿಗಳ ಮೇಲೆ ಪೋಕ್ಸೊ ಕೇಸು ದಾಖಲು ಮಾಡುವಂತೆ ಹೇಳಿಕೊಡುವಂತಹ ರಾಜಕಾರಣ ಪುತ್ತೂರಿನಲ್ಲಿ ಶೋಭೆ ತರುವುದಿಲ್ಲ.ಮಹಾಲಿಂಗೇಶ್ವರನ ಮಣ್ಣಿನಲ್ಲಿ ಧರ್ಮ ಮತ್ತು ಸತ್ಯಕ್ಕೆ ಜಯವಿದೆ ಹೊರತು ಸುಳ್ಳು ಆರೋಪಗಳ ಮೂಲಕ ಸಂಘಟನೆ ಮಾಡಬಹುದು,ಸಮಾಜದಲ್ಲಿ ಶಾಂತಿ ಭಂಗ ಮಾಡಬಹುದು ಎಂದು ಅರಾಜಕತೆಯನ್ನು ನಿರ್ಮಾಣ ಮಾಡಬಹುದು ಎಂಬ ಯೋಚನೆಯಲ್ಲಿ ಇಟ್ಟಿರುವ ತಪ್ಪು ಹೆಜ್ಜೆಗಳು ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ಕೊಟ್ಟಿದೆ.ಈ ರೀತಿಯ ಸುಳ್ಳು ಆರೋಪ, ಅಪಪ್ರಚಾರ ಯಾರು ಮಾಡಿದ್ದಾರೋ ಅವರೆಲ್ಲರಿಗೂ ಭಗವಂತ ಬುದ್ದಿಯನ್ನು ಕೊಡಲಿ.ಇದರ ಜೊತೆಗೆ ಬಾಂಗ್ಲಾದ ರೀತಿಯಲ್ಲಿ ಹೋರಾಟದ ಹೇಳಿಕೆಯು ಪುತ್ತೂರಿನ ಘಟನೆಗೆ ತುಲನೆ ಮಾಡಬೇಕಾದ ಅವಶ್ಯಕತೆ ಇದೆ.ಆದರೆ ಪೊಲೀಸ್ ಇಲಾಖೆ ಅತ್ಯಂತ ಸಮರ್ಥವಾಗಿ ಈ ಪ್ರಕರಣವನ್ನು ಭೇದಿಸಿ ವಿದ್ಯಾರ್ಥಿಳಿಗೆ ನ್ಯಾಯ ದೊರಕಿಸಿದ್ದಾರೆ. – ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರು

ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಗಮಿಸಿದ ಹಿಂದು ಸಂಘಟನೆ, ಪಕ್ಷದ ಪ್ರಮುಖರು: ಹಿಂದು ಸಂಘಟನೆ ಕಾರ್ಯಕರ್ತರು ಮತ್ತು ಬಿಜೆಪಿ ಪಕ್ಷದ ಪ್ರಮುಖರು ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಗಮಿಸಿ, ಘಟನೆಯ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು,ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಗೌಡ, ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲದ ನೂತನ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಹರಿಪ್ರಸಾದ್ ಯಾದವ್, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿರೂಪಾಕ್ಷ ಭಟ್ ಮಚ್ಚಿಮಲೆ, ಸತೀಶ್ ನಾಕ್ ಪರ್ಲಡ್ಕ, ಯುವರಾಜ್ ಪೆರಿಯತ್ತೋಡಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಪುರುಷೋತ್ತಮ ಮುಂಗ್ಲಿಮನೆ, ಕಿರಣ್ ಬಲ್ನಾಡು, ಹಿಂದು ಸಂಘಟನೆಗಳ ಪ್ರಮುಖರಾದ ಅಜಿತ್ ರೈ ಹೊಸಮನೆ, ನರಸಿಂಹ ಮಾಣಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here