ಗ್ರಾಂಧಿ ಪ್ರತಿಮೆಗೊಂದು ನೆಲೆ ಕೊಡಿ,ಪೇಟೆ ರಸ್ತೆಗೆ ಗಾಂಧೀಜಿಯ ಹೆಸರಿಡಿ-ಆಗ್ರಹ
ಉಪ್ಪಿನಂಗಡಿ: ಇಲ್ಲಿನ ಉಪ್ಪಿನಂಗಡಿಯಲ್ಲಿ ಈ ಮೊದಲು ಗಾಂಧಿ ಪ್ರತಿಮೆಯೊಂದಿದ್ದು, ಚತುಷ್ಪಥ ಹೆದ್ದಾರಿ ನೆಪದಲ್ಲಿ ಆ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಗಿದೆ. ಅದನ್ನು ಅಲ್ಲಿ ಮರುಸ್ಥಾಪಿಸಬೇಕು ಹಾಗೂ ಅಲ್ಲಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಹಾತ್ಮಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂಬ ಆಗ್ರಹ ಉಪ್ಪಿನಂಗಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಕೇಳಿ ಬಂತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಇರ್ಷಾದ್ ಯು.ಟಿ., ಈ ಮೊದಲು ಉಪ್ಪಿನಂಗಡಿಯಲ್ಲಿ ಗಾಂಧೀಜಿಯವರ ಪ್ರತಿಮೆ ಹಾಗೂ ಉದ್ಯಾನವನವೊಂದಿತ್ತು. ಆದ್ದರಿಂದ ಆ ಜಾಗಕ್ಕೆ ಗಾಂಧಿಪಾರ್ಕ್ ಎಂಬ ಹೆಸರು ಬಂದಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ನೆಪದಲ್ಲಿ ಅಲ್ಲಿಂದ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಅಲ್ಲಿ ಗಾಂಧಿ ಪ್ರತಿಮೆಯನ್ನು ಮರು ಸ್ಥಾಪಿಸಿ ಅದಕ್ಕೆ ಗಾಂಧಿ ವೃತ್ತ ಎಂದು ನಾಮಕರಣ ಮಾಡಬೇಕು ಹಾಗೂ ಅಲ್ಲಿಂದ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿಯ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಹಾತ್ಮಗಾಂಧಿ ರಸ್ತೆ (ಎಂ.ಜಿ. ರೋಡ್) ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯು ಪಂಚಾಯತ್‌ನಿಂದ ದೊರೆಯಿತು.
ಚರಂಡಿ ಕಾಮಗಾರಿ ಆಗಿಲ್ಲ:
4ನೇ ವಾರ್ಡಿನ ಪರಿಶಿಷ್ಟ ಜಾತಿ ಕಾಲನಿಗೆ ಹೋಗುವ ರಸ್ತೆಯ ವಿವಿಧ ಕಡೆ ಚರಂಡಿಗೆ 1,31,077 ರೂ. ಬಿಲ್ ಮಾಡಿದ್ದನ್ನು ವರದಿಯಲ್ಲಿ ತೋರಿಸಲಾಗಿದೆ. ಆದರೆ ಈ ಬಾರಿ ಅಲ್ಲಿ ಚರಂಡಿ ಕೆಲಸವೇ ಆಗಿಲ್ಲ. ಅದಕ್ಕೆ ಬೇಕಾದ ದಾಖಲೆಗಳು ನನ್ನಲ್ಲಿವೆ. ಆದರೆ ಕಾಮಗಾರಿ ನಡೆಯದೇ ಈ ಬಿಲ್ ಹೇಗೆ ಮಾಡಲಾಗಿದೆ ಎಂದು ಗ್ರಾಮಸ್ಥ ಸ್ನೇಕ್ ಝಕಾರಿಯಾ ಪ್ರಶ್ನಿಸಿದರು. ಆಗ ಸದಸ್ಯ ಮೈಸೀದ್ ಇಬ್ರಾಹೀಂ ಮಾತನಾಡಿ, ಈ ಬಾರಿ ಚರಂಡಿ ಕಾಮಗಾರಿ ಮಾಡಲಾಗಿದೆ ಎಂದರು. ಆದರೆ ಸ್ನೇಕ್ ಝಕಾರಿಯಾ ಅವರು ತನ್ನಲ್ಲಿದ್ದ ಹೂಳು ತುಂಬಿದ ಪೋಟೋಗಳನ್ನು ಸಭೆಗೆ ಪ್ರದರ್ಶಿಸಿದರು. ಆಗ ಸ್ಪಷ್ಟನೆ ನೀಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಅದು ಈ ಸಲದ ಕ್ರಿಯಾಯೋಜನೆಯ ಕೆಲಸವಲ್ಲ. ಈ ಸಲ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇದ್ದುದ್ದರಿಂದ ಕ್ರಿಯಾ ಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಅದು ಕಳೆದ ಬಾರಿಯ ಕ್ರಿಯಾಯೋಜನೆಯ ಕೆಲಸ. ಆ ಕೆಲಸ ಆಗಿದೆ. ಕಾಮಗಾರಿ ಗುತ್ತಿಗೆದಾರರಿಗೆ ಬಿಲ್ ಮಾತ್ರ ಈ ಸಲ ಮಾಡಿದ್ದು ಎನ್ನುವುದರ ಮೂಲಕ ಚರ್ಚೆಗೆ ತೆರೆ ಎಳೆದರು.
ಜೆಜೆಎಂ ಕಾಮಗಾರಿ ಕಳಪೆ:
ಜಲ ಜೀವನ್ ಮೆಷಿನ್ ಯೋಜನೆಯಡಿ ಹಾಕಲಾದ ಕುಡಿಯುವ ನೀರಿನ ಸಂಪರ್ಕದ ಪೈಪ್‌ಗಳೆನ್ನೆಲ್ಲಾ ಹೆಚ್ಚಿನ ಕಡೆಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲೇ ಹಾಕಲಾಗಿದೆ. ಪೈಪ್ ಹಾಕುವಾಗ ಅವರು ಮೂರು ಅಡಿ ತೋಡಿ ಪೈಪ್ ಹಾಕಬೇಕಿತ್ತು. ಆದರೆ ಅವರು ಒಂದು ಅಡಿನೂ ತೋಡಿಲ್ಲ. ಇವರ ಕಳಪೆ ಕಾಮಗಾರಿಯಿಂದಾಗ ಈಗ ಪೈಪ್‌ಗಳು ಕಾಣಿಸುತ್ತಿದ್ದು, ಚರಂಡಿಯ ಹೂಳು ತೆಗೆಯಲು ಸಮಸ್ಯೆಯಾಗುತ್ತಿದೆ ಎಂದು ಸ್ನೇಕ್ ಝಕಾರಿಯ ಆರೋಪಿಸಿದರು. ಅದಕ್ಕುತ್ತರಿಸಿದ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ., ಜೆಜೆಎಂನ ಕಳಪೆ ಕಾಮಗಾರಿಯ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ನಾವು ಮೇಲ್ತನಿಖೆಗೆ ಬರೆದಿದ್ದೇವೆ ಎಂದು ತಿಳಿಸಿದರು.
ಕಟ್ಟಡ ಕಾಮಗಾರಿ ಕಳಪೆ:
ರಾಮನಗರದ ಟ್ಯಾಂಕ್ ಬಳಿ ಕಟ್ಟಡಕ್ಕೆ 4,75,144 ರೂ. ಬಿಲ್ ಮಾಡಲಾಗಿದೆ. ಆದರೆ ಅಲ್ಲಿ ಕಟ್ಟಡವೇ ಪೂರ್ಣಗೊಂಡಿಲ್ಲ. ಆದರೂ ಅದಕ್ಕೆ ಹೇಗೆ ಬಿಲ್ ನೀಡಲಾಗಿದೆ ಎಂದು ಫಾರೂಕ್ ಜಿಂದಗಿ ಆಕ್ಷೇಪಿಸಿದರಲ್ಲದೆ, ಆ ಕಟ್ಟಡ ಕಾಮಗಾರಿಯೂ ಕಳಪೆಯಾಗಿದೆ ಎಂದು ಆರೋಪಿಸಿದರು. ಆಗ ಸ್ಪಷ್ಟನೆ ನೀಡಿದ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಅದಕ್ಕೆ ಪೂರ್ತಿ ಹಣ ನೀಡಿಲ್ಲ. ಹಂತ ಹಂತವಾಗಿ ಕಾಮಗಾರಿ ನಡೆದಿರುವುದಕ್ಕೆ ಮಾತ್ರ ಬಿಲ್ ನೀಡಲಾಗಿದೆ. ಆ ಕಟ್ಟಡದ ಕಾಮಗಾರಿ ಕಳಪೆಯಾಗಿರುವ ಆರೋಪದ ಬಗ್ಗೆ ಜಿಲ್ಲಾ ಪಂಚಾಯತ್ ಎಂಜಿನಿಯರ್‌ರೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗುವುದು ಎಂದರು.
ನೀರು ನೀಡುವಲ್ಲಿ ತಾರತಮ್ಯ?:
ಪುಳಿತ್ತಡಿಯ ಸರಕಾರಿ ಶಾಲೆಗೆ ಕುಡಿಯುವ ನೀರಿನ ಸಂಪರ್ಕ ಬೇಕೆಂದು ಗ್ರಾ.ಪಂ.ಗೆ ಮನವಿ ಮಾಡಿದಾಗ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಎರಡು ಸಾವಿರ ರೂ. ಕಟ್ಟಬೇಕೆಂದು ತಿಳಿಸಿದ್ದಾರೆ. ಅದರಂತೆ ಎರಡು ಸಾವಿರ ರೂಪಾಯಿ ಕಟ್ಟಿ ನೀರಿನ ಸಂಪರ್ಕ ಪಡೆಯಲಾಗಿದೆ. ಸರಕಾರಿ ಶಾಲೆಗೆ ಕುಡಿಯುವ ನೀರು ಸಂಪರ್ಕಕ್ಕೂ ಹಣ ನೀಡಬೇಕೇ ಎಂದು ಪ್ರಶ್ನಿಸಿದ ಸ್ನೇಕ್ ಝಕಾರಿಯಾ, ಆದರೆ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುವಲ್ಲಿ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು. ಆಗ ಪಿಡಿಒ ಮಾತನಾಡಿ, ಅದು ಮೊದಲು ಪಡೆದಿರುಬೇಕು. ೨೦೨೨ರಿಂದ ಕಾನೂನಿನ ಉಪವಿಧಿಗಳು ಬದಲಾಗಿವೆ. ಆದ್ದರಿಂದ ಆ ಬಳಿಕ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾ.ಪಂ. ಉಚಿತವಾಗಿ ನೀಡಬಾರದು ಎಂದಿದೆ. ಹಾಗಾಗಿ ಉಚಿತವಾಗಿ ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಸದಸ್ಯ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ಗಾಂಧಿಪಾರ್ಕ್‌ನಲ್ಲಿ ನೂತನವಾಗಿ ನಿರ್ಮಾಣವಾದ ವಾಣಿಜ್ಯ ಸಂಕೀರ್ಣದ ಹಾಗೂ ಅವರ ಮನೆಯ ಎದುರು ಖಾಸಗಿ ವ್ಯಕ್ತಿಯೋರ್ವರು ಕಾಂಕ್ರೀಟ್ ಚರಂಡಿ ನಿರ್ಮಿಸಿ, ಅದರ ಮೇಲೆ ಸ್ಲ್ಯಾಬ್ ಹಾಕಿ ತನಗೆ ಅನುಕೂಲವಾಗುವ ರೀತಿ ಮಾಡಿಕೊಂಡಿದ್ದು, ಇದರಿಂದ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗ್ರಾ.ಪಂ. ಮೌನವಾಗಿರುವುದು ಯಾಕೆ ಎಂದು ಗ್ರಾಮಸ್ಥ ಮುಹಮ್ಮದ್ ಕೆಂಪಿ ಪ್ರಶ್ನಿಸಿದರು. ಅದಕ್ಕೆ ಸದಸ್ಯ ತೌಸೀಫ್ ಯು.ಟಿ. ಮಾತನಾಡಿ, ಅಲ್ಲಿ ಅವರು ಚರಂಡಿ ನಿರ್ಮಿಸಿದ್ದಾರೆ. ಅದಕ್ಕೆ ಮುಂದೆ ಗ್ರಾ.ಪಂ.ನ ಕ್ರಿಯಾಯೋಜನೆಯಲ್ಲಿಟ್ಟು ಅನುದಾನ ನೀಡಿ. ನಾನೀಗ ಹಣ ಹಾಕಿ ಕಾಮಗಾರಿ ಮಾಡಿ ಎಂದು ತಿಳಿಸಿ, ಕಾಮಗಾರಿ ನಡೆಸಿದ್ದಾರೆ. ಏನು ಮಾಡಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಮುಹಮ್ಮದ್ ಕೆಂಪಿಯವರು ಆ ಹಣವನ್ನು ಕೊಡಬೇಡಿ ಎಂದರು.
ಗ್ರಾ.ಪಂ. ರಸ್ತೆಯ ಮಾರ್ಜಿನ್‌ಗಳು ಹೆಚ್ಚಿನ ಕಡೆಗಳಲ್ಲಿ ಒತ್ತುವರಿಯಾದ ಬಗ್ಗೆ ಗ್ರಾಮಸ್ಥ ವೆಂಕಪ್ಪ ಪೂಜಾರಿ ಸಭೆಯ ಗಮನಕ್ಕೆ ತಂದರು. ಆಗ ಅಬ್ದುರ್ರಹ್ಮಾನ್ ಕೆ. ಅವರು ಈ ಬಗ್ಗೆ ನಿರ್ಣಯ ಗ್ರಾಮಸ್ಥರು ನಿರ್ಣಯ ಮಾಡಿ ತೆರವಿಗೆ ಕ್ರಮ ಕೈಗೊಳ್ಳೋಣ ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು. ತೆರವಿಗೆ ನಿರ್ಣಯ ಮಾಡುವಂತೆ ಗ್ರಾಮಸ್ಥ ವೆಂಕಪ್ಪ ಪೂಜಾರಿ ಆಗ್ರಹಿಸಿದರು. ಈಗ 9/11 ಮಾಡಲು ತುಂಬಾ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಮೊದಲಿನ ರೀತಿಯೇ 9/11 ಆಗಬೇಕೆಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿಬಂತು. ಈ ಬಗ್ಗೆ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮುಹಮ್ಮದ್ ತೌಸೀಫ್ ಯು.ಟಿ., ವಿನಾಯಕ ಪೈ, ಉಷಾಚಂದ್ರ ಮುಳಿಯ, ಉಷಾ ನಾಯ್ಕ, ಲೋಕೇಶ್ ಪೂಜಾರಿ, ಧನಂಜಯ ಕುಮಾರ್, ಯು.ಕೆ. ಇಬ್ರಾಹೀಂ, ಮೈಸಿದ್ ಇಬ್ರಾಹೀಂ, ಶೋಭಾ, ಸುರೇಶ್ ಅತ್ರೆಮಜಲು, ವನಿತಾ, ಕೆ. ಅಬ್ದುರ್ರಹ್ಮಾನ್, ಅಬ್ದುರ್ರಶೀದ್, ನೆಬಿಸ ಬಿ., ಸೌಧ ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಚರ್ಚಾ ನಿಯಂತ್ರಣಾಧಿಕಾರಿಯಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಚರ್ಚೆ ನಿಯಂತ್ರಿಸಿದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ವರದಿ ಮಂಡಿಸಿದರು. ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ ಸ್ವಾಗತಿಸಿ, ವಂದಿಸಿದರು.