ಶಾಸಕ ಅಶೋಕ್ ಕುಮಾರ್ ರೈರವರ ಹುಟ್ಟುಹಬ್ಬದ ಸಂಭ್ರಮ-ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್‌ನಿಂದ ವಿಕಲಚೇತನರಿಗೆ ವ್ಹೀಲ್‌ಚೆಯರ್, ವಾಕಿಂಗ್ ಸ್ಟಿಕ್ ವಿತರಣೆ

0

ಬಡಜನರಿಗೆ ಸಹಾಯ ಮಾಡಿದಾಗ ಧನ್ಯತಾ ಭಾವ ಮೂಡುತ್ತದೆ-ಅಶೋಕ್ ಕುಮಾರ್ ರೈ

ಪುತ್ತೂರು:ಶಾಸಕ ಅಶೋಕ್ ಕುಮಾರ್ ರೈಯವರ(Ashok Kumar Rai) ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ರಿ.ವತಿಯಿಂದ ವಿಕಲಚೇತನರಿಗೆ ವ್ಹೀಲ್ ಚೆಯರ್ ಮತ್ತು ವಾಕಿಂಗ್ ಸ್ಟಿಕ್ ವಿತರಣೆ ಹಾಗೂ ಅಭಿಮಾನಿಗಳಿಂದ ಅಶೋಕ್ ಕುಮಾರ್ ರೈಯವರ ಹುಟ್ಟುಹಬ್ಬ ಆಚರಣೆ ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆಯಿತು.


ವಿಕಲಚೇತನರಿಗೆ ವ್ಹೀಲ್ ಚೆಯರ್ ಮತ್ತು ವಾಕಿಂಗ್ ಸ್ಟಿಕ್ ವಿತರಿಸಿ, ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಅಭಿಮಾನಿಗಳ ಶುಭಹಾರೈಕೆ ಸ್ವೀಕರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈರವರು, ನಾನು ಹುಟ್ಟುಹಬ್ಬದ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ.ಬಡವರಿಗೆ ಸ್ಪಂದನೆ ಹಾಗೂ ಅವರ ಕೆಲಸ ಮಾಡಿಕೊಡುವುದರಲ್ಲಿ ನಾನು ಸಂತೋಷ ಪಡುತ್ತೇನೆ.ಪ್ರತೀ ದಿನ ಸುಮಾರು 300 ಜನ ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿದಾಗ ಅದರಲ್ಲಿ 200 ಜನರಿಗಾದರೂ ಸಹಾಯ ಮಾಡಿದಾಗ ನನಗೆ ಧನ್ಯತಾ ಭಾವ ಮೂಡುತ್ತದೆ ಎಂದರು.ನಿಮ್ಮ ಶುಭಾಶೀರ್ವಾದದಿಂದ ನನಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ.ನನಗೆ ಇಂದು ಇಂತಹ ಯೋಗ್ಯತೆ ಬರಬೇಕಾದರೆ ನಿಮ್ಮೆಲ್ಲರ ಸಹಕಾರವೇ ಕಾರಣ ಎಂದು ಹೇಳಿದ ಶಾಸಕರು, ನಿಮಗೆ ಯಾವರೀತಿ ಸ್ಪಂದಿಸಬೇಕೆಂಬುದು ಗೊತ್ತಿಲ್ಲ.ಹಾರ, ಹೂಗುಚ್ಚ ನೀಡಿ ಅಭಿನಂದಿಸಿದ ಅಭಿಮಾನಿಗಳ ಋಣ ತೀರಿಸಿವುದು ಹೇಗೆ ಎಂದು ಯೋಚಿಸುತ್ತೇನೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಇಂದು ಹಬ್ಬದ ವಾತಾವರಣ ಉಂಟಾಗಿದೆ. ಅಶೋಕ್ ರೈಯವರಿಗೆ ಬಡವರ ಬಗ್ಗೆ ಇದ್ದ ಕಾಳಜಿಯಿಂದ ಇಂದು ಇಷ್ಟು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಶಾಸಕರಾಗಿ ಅವರು ಮಾಡಿದ ಸಾಧನೆಗಳಿಂದ ಅವರ ಹುಟ್ಟುಹಬ್ಬಕ್ಕೆ ವಿಶೇಷ ಮೆರುಗು ಬಂದಿದೆ.ಅವರ ಮೇಲಿನ ಪ್ರೀತಿಯಂದ ಜನರು ಇಂದು ಶುಭಹಾರೈಸಿದ್ದಾರೆ ಎಂದರು.ಅನಾರೋಗ್ಯ ಪೀಡಿತರಿಗೆ ಸ್ಪಂದಿಸುವ ಗುಣ ಅಶೋಕ್ ರೈರವರಲ್ಲಿದೆ.ಅವರಿಗೆ ಉತ್ತಮ ಆರೋಗ್ಯದೊಂದಿಗೆ ಅವರ ಯೋಚನೆಗಳು ಸಾಕಾರಗೊಳ್ಳಲಿ ಎಂದು ಅವರು ಹಾರೈಸಿದರು.


ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ ಅಶೋಕ್ ಕುಮಾರ್ ರೈರವರ ಹುಟ್ಟುಹಬ್ಬ ವಿಶೇಷ ಶೈಲಿಯ ಕಾರ್ಯಕ್ರಮವಾಗಿದೆ. ಪುತ್ತೂರಿನ ಜನತೆಗೆ ಹಬ್ಬದ ಸಂತೋಷ, ಸಡಗರದ ಕಾರ್ಯಕ್ರಮ ಇದು. ಅಶೋಕ್ ರೈರವರ ಕೆಲಸ, ಶೈಲಿಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಪುತ್ತೂರಿನ ಮತದಾರರು, ನಾಯಕರು, ಕಾರ್ಯಕರ್ತರು ಇಂದು ಧನ್ಯತಾಭಾವ ಪಡೆದಿದ್ದಾರೆ.ಅಶೋಕ್ ರೈಯವರು ಶಾಸಕರಾಗಿದ್ದು ನಮಗೆ ದೇವರು ನೀಡಿದ ವರವಾಗಿದೆ.ರಾಜ್ಯದ ಇತರ ಶಾಸಕರಿಗೆ, ಸ್ಪೂರ್ತಿಯಾಗಿ ಮಾದರಿಯಾಗಿ ನಿಂತಿರುವ ಅವರು ಒಂದಲ್ಲ ಒಂದು ದಿನ ಮಂತ್ರಿಯಾಗಿ ಪುತ್ತೂರಿಗೆ ಬರಲಿ ಎಂದು ಹಾರೈಸಿದರು.


ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಮಾತನಾಡಿ ಕ್ರಿಯಾಶೀಲ ಶಾಸಕ ಅಶೋಕ್ ರೈರವರು ತನ್ನ ಹುಟ್ಟುಹಬ್ಬದ ದಿನ ವಿಕಲಚೇತನರಿಗೆ, ನೊಂದವರಿಗೆ ಆಶಾಕಿರಣವಾಗಿದ್ದಾರೆ. ಅವರಿಗೆ ತಾಯಿ, ಕುಟುಂಬ ಹಾಗೂ ಬಡವರ ಬಗ್ಗೆ ಉತ್ತಮ ಕಾಳಜಿ ಇದೆ.ಅವರ ಸ್ಪೂರ್ತಿಯಿಂದಾಗಿ ಪುತ್ತೂರಿನಲ್ಲಿ ಶಾಶ್ವತವಾಗಿ ಶಾಸಕರಾಗಿ ಇರಬೇಕು, ಅಲ್ಲದೆ ಮಂತ್ರಿಯಾಗಿ ಕ್ಷೇತ್ರಕ್ಕೆ ಬರಬೇಕು. ನಿಮ್ಮೊಂದಿಗೆ ನಾವು ಇದ್ದೇವೆ. ಆ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದರು.


ವ್ಹೀಲ್ ಚೆಯರ್, ವಾಕಿಂಗ್ ಸ್ಟಿಕ್ ವಿತರಣೆ:
ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ವ್ಹೀಲ್ ಚೆಯರ್ ಮತ್ತು ವಾಕಿಂಗ್ ಸ್ಟಿಕ್ ವಿತರಿಸಲಾಯಿತು.ಕೆದಂಬಾಡಿಯ ಮಾಯಿಲಪ್ಪ ರೈ, ಬಲ್ನಾಡಿನ ಶಂಕರ ಪಾಟಾಳಿ, ಸವಣೂರಿನ ಬೀಪಾತುಮ್ಮ, ಹಿರೇಬಂಡಾಡಿಯ ಯೋಗೀಶ್ ಎಚ್., ಪಡುವನ್ನೂರಿನ ಬಟ್ಯ ನಾಯ್ಕ, ಕೊಳ್ತಿಗೆಯ ರಮೇಶ, ಕೊಡಿಪ್ಪಾಡಿಯ ಮಹಮ್ಮದ್ ಹಫೀಝ್, ಬೆಳ್ಳಿಪ್ಪಾಡಿಯ ಸುಂದರಿ, 34 ನೆಕ್ಕಿಲಾಡಿಯ ಅಬ್ಬಾಸ್ ಹಾಗೂ ಪುತ್ತೂರು ಕಸಬಾದ ಹಲೀಮಾರವರಿಗೆ ವ್ಹೀಲ್ ಚೆಯರ್ ವಿತರಿಸಲಾಯಿತು.ಬಡಗನ್ನೂರಿನ ಚಿದಾನಂದ ರೈ, ಒಳಮೊಗ್ರುವಿನ ಸಾಬು, ನೆಟ್ಟಣಿಗೆ ಮುಡ್ನೂರಿನ ಆದಂ ಕುಂಞಿ, ತಿಂಗಳಾಡಿಯ ದೀಕ್ಷಾ, ಸುಳ್ಯಪದವಿನ ಕೃಷ್ಣಪ್ಪ ನಾಯ್ಕ, ಗೋಳಿತ್ತಡಿಯ ಬಾಬುರವರಿಗೆ ವಾಕಿಂಗ್ ಸ್ಟಿಕ್‌ನ್ನು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು.


ಧನಸಹಾಯ ವಿತರಣೆ:
ಬೆಳ್ತಂಗಡಿ ತಾಲೂಕಿನಲ್ಲಿ ಪರವಾನಗಿ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ವಿಶ್ವನಾಥ ರಾವ್ ಅವರ ಕುಟುಂಬಕ್ಕೆ, ಪುತ್ತೂರು ಮತ್ತು ಕಡಬ ತಾಲೂಕಿನ ಸರ್ವೆಯರ್‌ಗಳು ಸಂಗ್ರಹಿಸಿದ ರೂ. 95,೦೦೦ ಮೊತ್ತವನ್ನು ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮೂರ್ತಿ ಮತ್ತು ಭೂಮಾಪಕರೊಂದಿಗೆ ಶಾಸಕರು ವಿಶ್ವನಾಥ ರಾವ್ ಅವರ ಪತ್ನಿ ಚೈತ್ರಾಶ್ರೀ,ಮಗ ಪರಿಣತ್ ಅವರಿಗೆ ಧನಸಹಾಯ ರೂಪದಲ್ಲಿ ಹಸ್ತಾಂತರಿಸಿದರು.


ಮೆಡಿಕಲ್ ವೆಚ್ಚದ ಮಂಜೂರಾತಿ ಪತ್ರ ವಿತರಣೆ:
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇಬ್ಬರು ಮಹಿಳೆಯರಿಗೆ ಮೆಡಿಕಲ್ ವೆಚ್ಚದ ಮಂಜೂರಾತಿ ಪತ್ರ ವಿತರಿಸಲಾಯಿತು.ಪ್ರಿಯಾರವರಿಗೆ ರೂ. 73,740 ಮತ್ತು ಕಮಲರವರಿಗೆ ರೂ.20,000ದ ಮಂಜೂರಾತಿ ಪತ್ರವನ್ನು ಅಶೋಕ್ ರೈರವರು ವಿತರಿಸಿದರು.


ಗ್ಯಾರಂಟಿ ಯೋಜನೆಯ ಅಧ್ಯಕ್ಷ ಉಮಾನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ಮುರಳೀಧರ ರೈ ಮಠಂತಬೆಟ್ಟು, ಪ್ರವೀಣಚಂದ್ರ ಆಳ್ವ, ಅನಿತಾ ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸುಮಾ ಅಶೋಕ್ ರೈ, ನಿಹಾಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಾಲಕೃಷ್ಣ ಪೂಜಾರಿ ವಂದಿಸಿ,ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.ಪಕ್ಷದ ವಿವಿಧ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪ್ರೀತಿಯಿಂದ ಭಾಗವಹಿಸಿದ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇವೆ.ಶಾಸಕರ ಮಾರ್ಗದರ್ಶನದಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳು ನಮ್ಮ ಟ್ರಸ್ಟ್ ವತಿಯಿಂದ ನಡೆಯಲಿದೆ.ಯಾವುದೇ ಜಾತಿ, ಧರ್ಮ, ರಾಜಕೀಯ ಪಕ್ಷ ಮರೆತು ಜನ ಸಾಮಾನ್ಯರು ನಮ್ಮನ್ನು ಸಂಪರ್ಕಿಸಬಹುದು-
ಸುದೇಶ್ ಶೆಟ್ಟಿ ಶಾಂತಿನಗರ, ಕಾರ್ಯಾಧ್ಯಕ್ಷರು
ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು

LEAVE A REPLY

Please enter your comment!
Please enter your name here