ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕೆ.,ಅವರಿಗೆ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿನ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕೆ. ಇವರು 2024ನೇ ಸಾಲಿನ ದ.ಕ.ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರು ಕಳೆದ 26 ವರ್ಷಗಳಿಂದ ಸರಕಾರಿ ಪ್ರೌಢಶಾಲಾ ಶಿಕ್ಷಕಿಯಾಗಿ ತನ್ನ ಅಪಾರ ಅನುಭವ ಹಾಗೂ ಪ್ರತಿಭೆಯ ಮೂಲಕ ಎಲೆಮರೆಯ ಕಾಯಿಯಂತೆ ತನ್ನನ್ನು ವಿಶಿಷ್ಟವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ. 4-11-1998ರಲ್ಲಿ ಸರಕಾರಿ ಪ್ರೌಢಶಾಲೆ ಹರಿಹರ ಪಳ್ಳತಡ್ಕ ಸುಳ್ಯ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು 11 ವರ್ಷ ಪ್ರಸಕ್ತ ಶಾಲೆಯಲ್ಲಿ ಇಂಗ್ಲಿಷ್ ಹಿಂದಿ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸಿ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಲು ಕಾರಣಕರ್ತರಾಗಿರುತ್ತಾರೆ. ನಂತರ ಏಳು ವರ್ಷಗಳ ಕಾಲ ಸರಕಾರಿ ಪದವಿ ಪೂರ್ವ ಕಾಲೇಜು ಕಡಬ ಇಲ್ಲಿ ಸೇವೆ ಸಲ್ಲಿಸಿ ಶಾಲಾ ಸಂಸತ್ತು, ಮಕ್ಕಳ ಹಕ್ಕು, ಮಕ್ಕಳ ಸುರಕ್ಷತೆ, ಪ್ರತಿಭಾ ಕಾರಂಜಿ ಮುಂತಾದ ಜವಾಬ್ದಾರಿಗಳನ್ನು ಇಲಾಖೆ ನಿರೀಕ್ಷಿಸಿದ ಮಟ್ಟದಲ್ಲಿ ಕೈಗೊಂಡು ಯಶಸ್ವಿಯಾಗಿದ್ದಾರೆ. ಮುಂದೆ 2016ರಿಂದ ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಹಿರೇಬಂಡಾಡಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಫಲಿತಾಂಶ ಸುಧಾರಣೆಗಾಗಿ ಇವರ ಅವಿರತ ಪ್ರಯತ್ನ ಶ್ಲಾಘನೀಯ. 26 ವರ್ಷಗಳ ತನ್ನ ವಿಶೇಷ ಪಾಠ, ಬೋಧನಾ ಕೌಶಲ ಹಾಗೂ ಬೋಧನಾ ಅನುಭವದಿಂದಾಗಿ ಸಮಾಜ ವಿಜ್ಞಾನ ಪಾಠವೆಂದರೆ ಮಕ್ಕಳಿಗೆ ಅಚ್ಚುಮೆಚ್ಚು ಎಂಬಂತಾಗಿ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆಯಲು ಕಾರಣಕರ್ತರಾಗಿದ್ದಾರೆ. ಪ್ರಸಕ್ತ ಸಂಸ್ಥೆಯು ಸತತ ನಾಲ್ಕು ವರ್ಷ ಶೇ.100 ಫಲಿತಾಂಶವನ್ನು ಪಡೆಯುತ್ತಿರುವುದಲ್ಲದೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇವರ ಪ್ರಯತ್ನ ಅಪಾರ. ಕರ್ನಾಟಕ ಸರಕಾರದ ಸಂಸದೀಯ ವ್ಯವಹಾರಗಳ ಸಚಿವಾಲಯ ನಡೆಸುವ ಯುವ ಸಂಸತ್ತು ಸ್ಪರ್ಧೆಗಳಲ್ಲಿ ಸತತವಾಗಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ತರಬೇತುಗೊಳಿಸಿರುವುದಲ್ಲದೆ ರಾಜ್ಯಮಟ್ಟದಲ್ಲಿಯೂ ಬಹುಮಾನ ಪಡೆಯುವಲ್ಲಿ ಯಶಸ್ವಿ ಆಗಿರುತ್ತಾರೆ.

ಶಾಲಾ ಸಂಸತ್ತಿನಲ್ಲಿ ಹೊರ ಹೊಮ್ಮುವ ವಿದ್ಯಾರ್ಥಿಗಳ ಬೇಡಿಕೆಗಳು ಮಕ್ಕಳ ಗ್ರಾಮ ಸಭೆಯಲ್ಲಿ ಪ್ರತಿಧ್ವನಿಸಿ, ಹಿರೇಬಂಡಾಡಿ ಗ್ರಾಮ ಪಂಚಾಯತಿನ ಗಮನಸೆಳೆದು ಶಾಲಾಭೌತಿಕ ಬೇಡಿಕೆಗಳಾದ ಸುಸಜ್ಜಿತ ಆಟದ ಮೈದಾನ, ಭೋಜನಾಲಯ, ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಪಡೆಯುವಲ್ಲಿ ಮೂಲ ಪ್ರೇರಣೆ ಇವರದಾಗಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ವ್ಯಕ್ತಗೊಂಡ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಗ್ರಾಮ ಪಂಚಾಯತ್ ಭರವಸೆಗಳು ಸಾಕಾರಗೊಂಡಿರುವುದನ್ನು ಹಿರೇಬಂಡಾಡಿ ಪ್ರೌಢಶಾಲೆಯಲ್ಲಿ ಗಮನಿಸಬಹುದಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟದ ಕ್ರೀಡಾ ಪ್ರತಿಭೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಆತ್ಮವಿಶ್ವಾಸ ತುಂಬುತ್ತಾ ಶಾಲಾ ಮಕ್ಕಳಿಗೆ ಮಮತೆಯ ಸ್ಪೂರ್ತಿಯಾಗಿದ್ದಾರೆ. ತ್ಯಾಜ್ಯ ನಿರ್ವಹಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲಾ ಪರಿಸರ ನಿರ್ಮಾಣದಲ್ಲಿ ಸಿಎಸ್‌ಎಪಿ ಕ್ರಿಯಾಯೋಜನೆಯ ಸಹಯೋಗದಲ್ಲಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆಗಳಿಸುವಂತೆ ಮಾಡುವಲ್ಲಿ ಬಹು ಮುಖ್ಯ ಪಾತ್ರ ಇವರದಾಗಿದೆ. ಶಾಲಾ ಪರಿಸರದಲ್ಲಿ ಸ್ವಚ್ಛ, ಸುಂದರ, ಪರಿಶುದ್ಧ, ಶಿಸ್ತುಬದ್ಧ ಕಲಿಕಾ ವಾತಾವರಣ ಕಾಪಾಡುವಲ್ಲಿ ಇವರ ಅಳಿಲು ಸೇವೆ ನಿರಂತರವಾದುದು. ಪಠ್ಯ, ಪಕ್ಷೇತರ, ಕ್ರೀಡಾ ಚಟುವಟಿಕೆಗಳಿಗೆ ಇವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಸ್ಪೂರ್ತಿದಾಯಕ. ಲಲಿತಾ ಕೆ ಇವರು ಉತ್ತಮ ವಾಗ್ಮಿಯೂ ಹೌದು. ಸಹ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲೂ ಭಾಗವಹಿಸಿ ಬಹುಮಾನಗಳಿಸಿರುತ್ತಾರೆ. ಉತ್ತಮ ಭಾಷಣಕಾರರಲ್ಲದೆ, ಸಭೆ ಸಮಾರಂಭಗಳಲ್ಲಿ ಅದ್ಭುತ ನಿರೂಪಕಿ ಹಾಗೂ ಕಾರ್ಯಕ್ರಮಗಳ ಸಂಘಟನಾ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಹುಮುಖ ಪ್ರತಿಭೆ. ತಾನು ಕರ್ತವ್ಯ ಸಲ್ಲಿಸಿರುವ ಮೂರು ಶಾಲೆಗಳಲ್ಲಿಯೂ ನಡೆದ ತಾಲೂಕು ಮಟ್ಟದ ಕ್ರೀಡಾಕೂಟಗಳ ಆಯೋಜನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿರುತ್ತಾರೆ.


ಸಂಘ ಸಂಸ್ಥೆಗಳಲ್ಲೂ ಸಕ್ರಿಯ:
ಹಲವಾರು ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿರುವ ಇವರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ಸಹ ಶಿಕ್ಷಕಿಯಾಗಿ, ಶ್ರೀದುರ್ಗಾ ಶಕ್ತಿ ಭಜನಾ ಮಂಡಳಿ ಆಲಂಕಾರು ಇದರ ಕಾರ್ಯದರ್ಶಿಯಾಗಿ, ಅಧ್ಯಾಪಕರ ಸಹಕಾರಿ ಸಂಘ ಕಡಬ ಇದರ ನಿರ್ದೇಶಕಿಯಾಗಿಯೂ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಪುತ್ತೂರು ಘಟಕದ ಉಪಾಧ್ಯಕ್ಷರಾಗಿಯೂ ವಿವಿಧ ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಗ್ರಾಮ ಪಂಚಾಯತ್ ಶಾಲಾ ಅಭಿವೃದ್ಧಿ ಸಮಿತಿ ಶಿಕ್ಷಕ ವೃಂದ ಪೋಷಕ ವೃಂದದೊಂದಿಗೆ ಸಾಮರಸ್ಯದೊಂದಿಗೆ ಮಕ್ಕಳ ನಿರಂತರ ಹಾಜರಾತಿ ಹಾಗೂ ಶಾಲಾ ದಾಖಲಾತಿಗೆ ಸಂಬಂಧಿಸಿದಂತೆ ವಿಶೇಷ ಶ್ರಮವಹಿಸಿರುತ್ತಾರೆ.

ಸುಳ್ಯ ತಾಲೂಕಿನ ಪಂಜ ಕೊಟ್ರಂಜ ದಿ.ಕುಂಞಣ್ಣ ಗೌಡ ಹಾಗೂ ದಿ.ಲಿಂಗಮ್ಮ ಇವರ ಸುಪುತ್ರಿಯಾಗಿರುವ ಶ್ರೀಮತಿ ಲಲಿತಾ ಕೆ. ರವರು ಪುತ್ತೂರು ತಾಲೂಕು ಪ್ರಭಾರ ದೈಹಿಕ ಪರಿವೀಕ್ಷಣಾಧಿಕಾರಿಯಾಗಿರುವ ಆಲಂಕಾರು ಬಾಕಿಲ ನಿವಾಸಿ ಚಕ್ರಪಾಣಿ ಎಂ.ವಿ ಯವರ ಧರ್ಮಪತ್ನಿ ಆಗಿರುತ್ತಾರೆ. ಇವರು ಸುಪುತ್ರ ದಂತ ವೈದ್ಯಕೀಯ ವಿದ್ಯಾರ್ಥಿ ಅಚಲ್ ಆಲಂಕಾರು ಹಾಗೂ ಸುಪುತ್ರಿ ಅಹ್ನಾ ಎಯವರ ಅಕ್ಕರೆಯ ಮಾತೆಯಾಗಿರುತ್ತಾರೆ. ಇವರು ಕೆ ಎಸ್ ಎಸ್ ಕಾಲೇಜು ಸುಬ್ರಮಣ್ಯ ಇಲ್ಲಿ ಕಲಾಪದವಿಯನ್ನು, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮೈಸೂರು ಇಲ್ಲಿ ತಮ್ಮ ಬಿ ಎಡ್ ವ್ಯಾಸಂಗವನ್ನು ಪೂರೈಸಿರುತ್ತಾರೆ. ಕಲಿಕೆಯೇ ಜೀವನ ಎಂಬ ಸಂದೇಶದೊಂದಿಗೆ ನಿರಂತರ ಕಲಿಕಾರ್ಥಿಯಾಗಿರುವ ಇವರು ಇಂಗ್ಲೀಷ್ ಭಾಷೆಯಲ್ಲಿ ಪಿಜಿಡಿಇ ಇತಿಹಾಸ, ಇಂಗ್ಲೀಷ್ ಹಾಗೂ ರಾಜ್ಯಶಾಸ್ತ್ರ ವಿಷಯಗಳಲ್ಲಿ ಕೆಎಸ್‌ಒಯು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದಿರುತ್ತಾರೆ. ಸಮಾಜ ವಿಜ್ಞಾನ ವಿಷಯದಲ್ಲಿ ತಾಲೂಕು, ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ಕಾರ್ಯಾಗಾರಗಳನ್ನು ನಿರ್ವಹಿಸಿರುವ ಇವರು ಪ್ರತಿಭಾ ಕಾರಂಜಿ ಹಾಗೂ ವಿವಿಧ ಸ್ಪರ್ಧೆಗಳ ತೀರ್ಪುಗಾರ ನಿರ್ಣಾಯಕರಾಗಿಯೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲ ಶಿಕ್ಷಕಿ ಆಗಿರುತ್ತಾರೆ.

LEAVE A REPLY

Please enter your comment!
Please enter your name here