ಸೆ.14-ಅ.2: ಎಲ್ಲಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ

0

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆನಂದ್‌ ಕೆ. ಸೂಚನೆ

ಮಂಗಳೂರು: ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಶಾಲೆ, ಅಂಗನವಾಡಿ ಕೇಂದ್ರ, ಸರಕಾರಿ ಕಟ್ಟಡ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಹಾಗೂ ಗ್ರಾಮ ಪಂಚಾಯತ್‌ ಅಧಿಕಾರಿ ಹಾಗೂ ಸಿಬಂದಿ ಸೆ. 14ರಿಂದ ಅ. 2ರ ವರೆಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆನಂದ್‌ ಕೆ. ಸೂಚಿಸಿದರು.ಅವರು “ಸ್ವಚ್ಛತಾ ಹಿ ಸೇವಾ’ ಆಂದೋಲನವನ್ನು ಆಯೋಜಿಸುವ ಕುರಿತು ಜರಗಿದ ಆನ್‌ಲೈನ್‌ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ವಸತಿ ವ್ಯವಹಾರಗಳ ಸಚಿವಾಲಯ ಪ್ರತಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ “ಸ್ವತ್ಛತಾ ಹಿ ಸೇವಾ’ ಆಂದೋಲನವನ್ನು ಆಯೋಜಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆ ಹಾಗೂ ಎನ್‌ಜಿಒ ಅವರೊಂದಿಗೆ ಸೇರಿಕೊಂಡು ಒಂದು ತಂಡ ರಚಿಸಿ ಶ್ರಮದಾನ ಚಟುವಟಿಕೆಗಳನ್ನು ನಿಯಮಿತವಾಗಿ ಪ್ರಾರಂಭಿಸಬೇಕು. ಶ್ರಮದಾನ ವಾರದಲ್ಲಿ ಒಂದು ದಿನ ತಪ್ಪದೇ ಮಾಡುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ ಕಂಡು ಬರಬಾರದು. ಸ್ಥಳೀಯವಾಗಿ ಶ್ರಮದಾನ ಚಟುವಟಿಕೆ ಮಾಡಬೇಕು ಎಂದು ಎಲ್ಲ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.


ಆಶಾ ಕಾರ್ಯಕರ್ತೆಯರು ನೈರ್ಮಲ್ಯ ಅಭಿಯಾನಗಳಲ್ಲಿ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಮತ್ತು ಮಾಹಿತಿ, ಶಿಕ್ಷಣ ಚಟುವಟಿಕೆಗಳ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಬೇಕು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೇಂದ್ರಗಳ ಸುತ್ತಮುತ್ತ ಶ್ರಮದಾನ ಆಯೋಜಿಸುವುದು. ಸ್ವತ್ಛತೆ ಮತ್ತು ಶುದ್ಧ ಕುಡಿಯುವ ನೀರಿನಿಂದ ಆರೋಗ್ಯದ ಕುರಿತು ಅರಿವು ಮೂಡಿಸುವ ಪೋಸ್ಟರ್‌, ಕಿರು ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದರು.

ಎ.ಪಿ.ಎಂ.ಸಿ. ಯಾರ್ಡ್‌ಗಳು, ಮಂಡಿಗಳು, ಮಾರುಕಟ್ಟೆಗಳಲ್ಲಿ ತ್ಯಾಜ್ಯದಿಂದ ಸಂಪತ್ತು ಮಾಡುವ ಕುರಿತು ಸ್ವತ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಅಭಿಯಾನಗಳಲ್ಲಿ ಶಾಲಾ ಮಕ್ಕಳು ಭಾಗವಹಿಸಲು ಜಾಥಾ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಶಾಲಾ ಮತ್ತು ಕಾಲೇಜು ಆವರಣಗಳಲ್ಲಿ ಸ್ವತ್ಛತೆ ಕಾಪಾಡಲು ಶ್ರಮದಾನ ನಡೆಸಬೇಕು. ಶೌಚಾಲಯಗಳ ಸ್ವತ್ಛತೆ ಹಾಗೂ ನಿರಂತರ ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ಮತ್ತು ಕಾಲೇಜು ಸುತ್ತಮುತ್ತ ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here