ಸೆ.21ರಂದು ಕಡಬದಲ್ಲಿ ಗುರವಂದನಾ ಕಾರ್ಯಕ್ರಮ

0

ಗುರುಪರಂಪರೆ ಉಳಿಸಲು ಪ್ರೇರಣಾದಾಯಕ ಕಾರ್ಯಕ್ರಮ- ಭಾಗೀರಥಿ ಮುರುಳ್ಯ

ಕಡಬ: ಕಡಬ ಹಾಗೂ ಪುತ್ತೂರು ತಾಲೂಕುಗಳ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಮತ್ತು ಶಿಕ್ಷಕರ ಸಂಘ, ಕಡಬ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಪ್ರಣವ್ ಫೌಂಡೇಷನ್ ಇವರಿಂದ ಸಾಧಕ ಶಿಕ್ಷಕರಿಗೆ ಪ್ರಣವ್ ಗುರು ಪುರಸ್ಕಾರ, ಗುರವಂದನಾ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಡಬ ಅನುಗ್ರಹ ಸಭಾಭವನದಲ್ಲಿ ಸೆ.21 ನೇ ಶನಿವಾರ ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಕರು ಯಾವುದೇ ಕ್ಷೇತ್ರದಲ್ಲಿರುವ ವ್ಯಕ್ತಿಗಳನ್ನು ಉತ್ತಮ ಹಾಗೂ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶಿಕ್ಷಕರುಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ, ತಮಗೆ ಶಿಕ್ಷಣ ನೀಡಿದ ಶಿಕ್ಷಕರ ಬಗ್ಗೆ ಗೌರವ ಭಾವನೆ ಶಾಶ್ವತವಾಗಿ ಉಳಿಸಿಕೊಂಡು ಮುಂದೆ ವಿದ್ಯಾರ್ಥಿಗಳು ವಿದ್ಯೆ ಪಡೆದ ಶಿಕ್ಷರನ್ನು ಗೌರವಿಸಿ ಗುರು ಪರಂಪರೆ ಉಳಿಸಲು ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.

ಕಳೆದ ವರ್ಷ ಪ್ರಣವ್ ಫೌಂಡೇಶನ್ ಆಶ್ರಯದಲ್ಲಿ ಸುಳ್ಯದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ಪ್ರಥಮ ಬಾರಿಗೆ ಗುರುವಂದನೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಎಸ್‌ಡಿಎಂಸಿ ಹಾಗೂ ಊರವರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಯಾವುದೇ ಪ್ರಶಸ್ತಿಗೆ ಬಯಸದೆ ಸೇವೆ ಸಲ್ಲಿಸುತ್ತಿರುವ ಸಾಧಕ ಶಿಕ್ಷರನ್ನು ಗುರುತಿಸಿ ಗೌರವಿಸಲಾಗುವುದು. ಕಡಬ ತಾಲೂಕಿನ 13 ಪ್ರಾಥಮಿಕ ಹಾಗೂ 6 ಪ್ರೌಢ ಶಾಲಾ ಶಿಕ್ಷರನ್ನು ಗುರುತಿಸಿ ಗುರುವಂದನೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಶಾಸಕರು ಹೇಳಿದರು.


ಪ್ರಣವ್ ಫೌಂಡೇಶನ್‌ನ ಟ್ರಸ್ಟಿ ಮಹೇಶ್ ಕುಮಾರ್ ರೈ ಮೇನಾಲ ಮಾತನಾಡಿ ನಮ್ಮ ಸಂಸ್ಥೆ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ , ಆರೋಗ್ಯ ಪರಿಸರ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಕೆಲಸ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣದೊಂದಿಗೆ ನಮ್ಮ ಸೇವಾ ಕಾರ್ಯ ಪ್ರಾರಂಭವಾಗಿದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನಾಲ್ಕು ಹಳ್ಳಿಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳಲ್ಲಿ ಕಸ ವಿಲೇವಾರಿ, ಸರಕಾರಿ ಆಸ್ಪತ್ರೆಯಲ್ಲಿ 120 ರೋಗಿಗಳಿಗೆ ನೆರವಾಗುವ ಡಯಾಲಿಸಿಸ್ ಕೇಂದ್ರ ನಿರ್ಮಾಣ , ಗ್ರಾಮೀಣ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ ಅಳವಡಿಕೆ, ಕೊಡಗು, ದಕ್ಷಿಣ ಕನ್ನಡ , ಬೆಂಗಳೂರು ನಗರ ಮೊದಲಾದ ಜಿಲ್ಲೆಗಳ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಶಾಲಾ ಕಾರ್ಯಕ್ರಮದಡಿ ಟಿವಿ ಅಳವಡಿಕೆ, ಕೊಡಗು ಜಿಲ್ಲೆಯ ಅತ್ಯಾಡಿ ಗ್ರಾಮದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ, ಇಂತಹ ಸಮಾಜಮುಖಿ ಕಾರ್ಯಗಳೊಂದಿಗೆ ಸುಭದ್ರ ಸಮಾಜ ಹಾಗೂ ಸದೃಢ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಶಿಕ್ಷರನ್ನು ಗುರುತಿಸುವ ಗುರುವಂದನಾ ಕಾರ್ಯಕ್ರಮವನ್ನು ಮಾಡುತಿದ್ದೇವೆ, ಈ ಬಾರಿ ಶಾಸಕರ ಆಶಯದಂತೆ ಕಡಬದಲ್ಲಿ ಕಾರ್ಯಕ್ರಮ ನಡೆಯಲಿದೆ, ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಬೋಜೇ ಗೌಡ ಸನ್ಮಾನ ಕಾರ್ಯ ನೆರವೇರಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮುಖಂಡರಾದ ಪ್ರಕಾಶ್ ಎನ್.ಕೆ, ಅಶೋಕ್ ಕುಮಾರ್ ಪಿ, ನಿತೀಶ್ ಗೌಡ ಏನಾಜೆ, ಕಿಶನ್ ರೈ ಪೆರಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here