ಶಿಕ್ಷಕರು ಜೀವನ ಮೌಲ್ಯವನ್ನು ರೂಪಿಸುವವರು-ಯಶಸ್ವಿ ಸೋಮಶೇಖರ್
ಪುತ್ತೂರು: ಶಿಕ್ಷಕರು ಬರೀ ಪಾಠ ಬೋಧಿಸುವವರಲ್ಲ, ಶಿಕ್ಷಕರು ವಿದ್ಯಾರ್ಥಿಯ ಬಾಳಿನಲ್ಲಿ ಜೀವನದ ಮೌಲ್ಯವನ್ನು ರೂಪಿಸುವವರು, ಕನಸನ್ನು ಭಿತ್ತುವವರು, ಭವಿಷ್ಯ ರೂಪಿಸುವವರು ಎಂದು ರೋಟರಿ ಜಿಲ್ಲೆ 3181 ಇದರ 2027-28ರ ನಿಯೋಜಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ರವರು ಹೇಳಿದರು.

ಸೆ.12ರಂದು ಸಂಜೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ಸಂಜೆ ನೆರವೇರಿದ ರೋಟರಿ ಕ್ಲಬ್ ಪುತ್ತೂರು ಮತ್ತು ಇನ್ನರ್ ವ್ಹೀಲ್ ಕ್ಲಬ್ ಪುತ್ತೂರುನಿಂದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಸ್ವಾರ್ಥರಹಿತ ಸೇವೆಯನ್ನು ಸಮಾಜಕ್ಕೆ ನೀಡುವವರಾಗಿದ್ದು ಅದರಂತೆ ಶಿಕ್ಷಕರದ್ದು ಕೂಡ ಸ್ವಾರ್ಥರಹಿತ ವ್ಯಕ್ತಿತ್ವವಾಗಿದೆ. ರಾಷ್ಟ್ರ ಕಟ್ಟುವ ಶಿಕ್ಚಕರಿಗೆ ಪ್ರತಿ ವರ್ಷ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ಶಿಕ್ಷಕರು ವೃತ್ತಿಯಲ್ಲಿ ನಿವೃತ್ತರಾದರೂ ಅವರನ್ನು ಮಾತನಾಡಿಸುವುದು “ನಮಸ್ತೆ ಟೀಚರ್” ಎಂಬುದಾಗಿ-ಡಾ.ಶ್ರೀಪ್ರಕಾಶ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ ಮಾತನಾಡಿ, ಶಿಕ್ಷಕರು ವೃತ್ತಿಯಲ್ಲಿ ನಿವೃತ್ತರಾದರೂ ಅವರನ್ನು ಪ್ರತಿಯೋರ್ವ ಮಾತನಾಡಿಸುವುದು “ನಮಸ್ತೆ ಟೀಚರ್” ಎಂಬುದಾಗಿ. ವಿದ್ಯಾರ್ಥಿಯ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಯ ತಪ್ಪನ್ನು ತಿದ್ದಿ ತೀಡಿ ಆತನನ್ನು ಮನುಷ್ಯನನ್ನಾಗಿ ಮಾಡಿಸುವ ಮೂಲಕ ಬದುಕಿನ ಒಳಗಣ್ಣನ್ನು ತೆರೆಸಿದ ಜವಾಬ್ದಾರಿ ಹೊಂದಿದವರು ಶಿಕ್ಷಕರಾಗಿದ್ದಾರೆ. ಶಿಕ್ಷಣ ನೀತಿ ಯಾವುದೇ ಇರಲಿ, ಬದುಕಿನ ಅಮೂಲ್ಯ ಸಮಯವನ್ನು ಸಮಾಜಕ್ಕೆ ಮೀಸಲಿರಿಸಿ, ಸಮಾಜವನ್ನು ಕಟ್ಟುವಲ್ಲಿ ಶಿಕ್ಷಕರು ಶ್ರಮಿಸಿರುತ್ತಾರೆ ಎಂದರು.
ಸನ್ಮಾನ ಗೌರವಾರ್ಪಣೆ:
ಹಲವಾರು ವಿದ್ಯಾಸಂಸ್ಥೆಗಳನ್ನು ಮುನ್ನೆಡೆಸುತ್ತಿರುವ ರೋಟರಿ ಜಿಲ್ಲೆ 3181 ಇದರ 2027-28ರ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ಹಾಗೂ ಕಾಂತಮ್ಮ ಸೋಮಶೇಖರ್ ದಂಪತಿಯನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ ರೋಟರಿ ಪುತ್ತೂರು ಕುಟುಂಬದ ಸದಸ್ಯರಾಗಿರುವ ಶಂಕರಿ ಎಂ.ಎಸ್ ಭಟ್, ತನುಜಾ ಝೇವಿಯರ್, ಸಂಧ್ಯಾ ಬೈಲಾಡಿ, ತೆರೆಜಾ ಮಾಡ್ತಾ, ಮೀನಾಕ್ಷಿ ಸತೀಶ್ ರವರುಗಳಿಗೆ ಹೂಗುಚ್ಛ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.
ಅನಿಸಿಕೆ:
ಸನ್ಮಾನಿತ ನಿವೃತ್ತ ಶಿಕ್ಷಕರ ಪರವಾಗಿ ಬೆಳ್ಳಿಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ ಎನ್.ಎಂ ಹಾಗೂ ಸರ್ವೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಹದೇವರವರು ವ್ಯಕ್ತಪಡಿಸಿದ ಅನಿಸಿಕೆಯಲ್ಲಿ ರೋಟರಿ ಕಾರ್ಯವನ್ನು ಶ್ಲಾಘಿಸಿದರು. ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಸಂಧ್ಯಾ ಸಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ರೋಟರಿ ಪುತ್ತೂರು ವೃತ್ತಿ ಸೇವಾ ನಿರ್ದೇಶಕ ಸತೀಶ್ ನಾಯಕ್ ರವರು ಅತಿಥಿಗಳ ಪರಿಚಯ ಮಾಡಿದರು.
ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಸದಸ್ಯೆ ರಮಾ ಪ್ರಭಾಕರ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ ಕ್ಲಬ್ ವಾರದ ವರದಿ ಮಂಡಿಸಿದರು. ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಅಧ್ಯಕ್ಷೆ ರೂಪಲೇಖ ವಂದಿಸಿ, ರೋಟರಿ ಕ್ಲಬ್ ಪುತ್ತೂರು ಸದಸ್ಯ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.
21 ನಿವೃತ್ತ ಶಿಕ್ಷಕರಿಗೆ ಸನ್ಮಾನ..
ಪ್ರಸಕ್ತ ವರ್ಷದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೆಳ್ಳಿಪ್ಪಾಡಿ ಸರಕಾರಿ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ ಎನ್ ಎಂ, ಸಿರಿಬಾಗಿಲು ಸರಕಾರಿ ಹಿ.ಪ್ರಾ ಶಾಲೆಯ ಸಹ ಶಿಕ್ಷಕ ವಿಜಯಕುಮಾರ್ ಎನ್, ಬೊಳಿಕ್ಕಳ ಸರಕಾರಿ ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ನೇತ್ರಾವತಿ ಎ, ಮಿತ್ತಡ್ಕ ಸರಕಾರಿ ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಮುತ್ತಪ್ಪ ಪೂಜಾರಿ, ಬಲ್ನಾಡು ಸರಕಾರಿ ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಇಂದಿರಾ ಪಿ, ಬೆಟ್ಟಂಪಾಡಿ ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಪುಷ್ಪಾ ಕೆ.ಆರ್, ಕುದ್ಮಾರು ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಕುಶಾಲಪ್ಪ ಪಿ, ಇಡಬೆಟ್ಟು ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಪ್ರೇಮ, ಪಾಪೆಮಜಲು ಸ.ಹಿ ಪ್ರಾ.ಶಾಲೆಯ ಸಹ ಶಿಕ್ಷಕಿ ಮೇಬಲ್ ಪಿ ಡಿ’ಸೋಜ, ಮಣಿಕ್ಕರ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಎಂ ಜಾನಕಿ, ಬಡಗನ್ನೂರು ಸರಕಾರಿ ಹಿ.ಪ್ರಾ ಶಾಲೆಯ ಸಹ ಶಿಕ್ಷಕಿ ಎಂ.ಜಾನಕಿ, ಉಪ್ಪಿನಂಗಡಿ ಪುಳಿತ್ತಡಿ ಮಠ ಶಾಲೆಯ ಮುಖ್ಯ ಶಿಕ್ಷಕಿ ಜ್ಯುಲಿಯಾನ ವಾಸ್, ಸರ್ವೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಹದೇವ ಇ, ಮಣಿಕ್ಕರ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ಕೆ, ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟ ಪಾಯಿಸ್, ಕಡಬ ಮರ್ದಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಕೆ.ಜಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಹ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್, ಪಾಣಾಜೆ ಸುಬೋಧ ಪ್ರೌಢಶಾಲೆಯ ಸಹ ಶಿಕ್ಷಕ ಶ್ರೀಪತಿ ಭಟ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಎ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಹ ಶಿಕ್ಷಕ ರೊನಾಲ್ಡ್ ಮೋನಿಸ್, ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜೈಮಾಲಾ ಉಚ್ಚಿಲ್ ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ನಿರಂತರ ಆಚರಣೆ..
1965 ರಲ್ಲಿ ಪುತ್ತೂರಿನಲ್ಲಿ ಸ್ಥಾಪನೆಯಾದ ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಪುತ್ತೂರು ನಿರಂತರವಾಗಿ ನಿವೃತ್ತಗೊಂಡ ಶಿಕ್ಷಕರನ್ನು ಭಾರತ ರತ್ನ ಪ್ರಶಸ್ತಿ ಪುರಸ್ಕೃತ, ದೇಶದ ಪ್ರಥಮ ಶಿಕ್ಷಕ ಉಪ ರಾಷ್ಟ್ರಪತಿ, ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದಂದು ಆಯಾ ವರ್ಷ ಗುರುತಿಸಿ ಸನ್ಮಾನಿಸುತ್ತಾ ಬಂದಿದೆ. ಮೂರು ವಿಶ್ವವಿದ್ಯಾನಿಲಯದಲ್ಲಿ ವೈಸ್ ಚಾನ್ಸಲರ್ ಆಗಿರುವ ಭಾರತದ ರಾಷ್ಟ್ರಪತಿಯಾಗಿರುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ತನ್ನ ಹುಟ್ಟುಹಬ್ಬ ಆಚರಣೆ ಬೇಡ, ತನ್ನ ಹುಟ್ಟುಹಬ್ಬದ ದಿನದಂದು ಅಕ್ಷರ ಕಲಿಸುವ ಶಿಕ್ಷಕರನ್ನು ಗುರುತಿಸಿ ಎಂದಿದ್ದರು. ಸನ್ಮಾನದ ಜೊತೆಗೆ ಶಿಕ್ಷಕರಿಗೆ ಯಾರು ಮಾದರಿ ವ್ಯಕ್ತಿ ಎಂದು ಕ್ಲಬ್ ಸೂಚಿಸಿದ್ದು, ಶಿಕ್ಷಕರು ತಮ್ಮ ಮಾದರಿ ವ್ಯಕ್ತಿ ಯಾರೆಂಬುದು ಸೂಚಿಸಿರುತ್ತಾರೆ.
-ಚಿದಾನಂದ ಬೈಲಾಡಿ,
ಕಾರ್ಯಕ್ರಮದ ಸಂಯೋಜಕರು