ರೂ.11.79 ಲಕ್ಷ ನಿವ್ವಳ ಲಾಭ | ಶೇ.10 ಡಿವಿಡೆಂಡ್
ಪುತ್ತೂರು: ಬಿಇಒ ಆಫೀಸ್ ಬಳಿಯ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ 2023-24ನೇ ಸಾಲಿನ ಐದನೇ ವಾರ್ಷಿಕ ಮಹಾಸಭೆಯು ಸೆ.15 ರಂದು ಬೆಳಿಗ್ಗೆ ಲಯನ್ಸ್ ಸೇವಾ ಭವನದಲ್ಲಿ ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಅಧ್ಯಕ್ಷ ಇ.ನಾರಾಯಣ ಹೇರಳೆರವರು ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘವು ವರದಿ ಸಾಲಿನಲ್ಲಿ ರೂ.11,79,945 ಲಾಭಾಂಶ ಪಡೆದಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಂಸ್ಥೆಯು ವರದಿ ವರ್ಷದಲ್ಲಿ ರೂ.14,51,81,447 ವಹಿವಾಟು ಮಾಡಿರುತ್ತದೆ. ಹಾಗೆಯೇ ಸಂಸ್ಥೆಯ ಸದಸ್ಯತ್ವದಲ್ಲಿ, ಠೇವಣಾತಿ ಸ್ವೀಕಾರದಲ್ಲಿ ಹಾಗೂ ಸಹಕಾರಿಯ ದುಡಿಯುವ ಬಂಡವಾಳವನ್ನು ಹೆಚ್ಚಿಸುವಲ್ಲಿ ಸಂಘವು ಉತ್ತಮ ಸಾಧನೆ ಮಾಡಿರುತ್ತದೆ. ವರದಿ ವರ್ಷದಲ್ಲಿ 530 ಮಂದಿ ‘ಎ’ ಸದಸ್ಯತ್ವ ಹೊಂದಿದ್ದು ಹೊಂದಿದ್ದು, ಹೊಸದಾಗಿ 45 ಮಂದಿ ‘ಎ ಕ್ಲಾಸ್’ ಸದಸ್ಯತ್ವ ಹೊಂದಿರುತ್ತಾರೆ. ವರದಿ ವರ್ಷದಲ್ಲಿ ರೂ.5,88,000 ‘ಎ ಕ್ಲಾಸ್’ ಹಾಗೂ 3400 ‘ಬಿ ಕ್ಲಾಸ್’ ಪಾಲು ಬಂಡವಾಳ ಇರುತ್ತದೆ ಮಾತ್ರವಲ್ಲ ಸಂಘದ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಅಧ್ಯಕ್ಷ ಇ.ನಾರಾಯಣ ಹೇರಳೆಯವರು ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ ಹೊಳ್ಳ ಸಭೆಯ ನೋಟಿಸನ್ನು ಮತ್ತು ಹಿಂದಿನ ಸಭೆಯ ನಡಾವಳಿಯನ್ನು ಓದಿ, ಲೆಕ್ಕಪರಿಶೋಧಕರ ವರದಿಯಲ್ಲಿ ನಮೂದಿಸಿದ ನ್ಯೂನತೆಗಳನ್ನು ಮತ್ತು ಅನುಪಾಲನಾ ವರದಿಯನ್ನು ಸಭೆಗೆ ತಿಳಿಸಿ, 2023-24ನೇ ಸಾಲಿನ ಲೆಕ್ಕಪತ್ರಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಅಲ್ಲದೆ 2023-24ನೇ ಸಾಲಿನ ಆಡಳಿತ ಮಂಡಳಿ ವರದಿ ಮತ್ತು ಅಂಕಿ-ಅಂಶಗಳನ್ನು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ 2023-24ನೇ ಸಾಲಿನ ಲೆಕ್ಕಪರಿಶೋಧಕನ್ನು ಸದಸ್ಯರ ಒಪ್ಪಿಗೆಯ ಮೇರೆಗೆ ನಡೆಸಲಾಯಿತು.
ಸಂಘದ ಮಾಜಿ ನಿರ್ದೇಶಕಿ ಇಂದಿರಾ ವಿ.ರಾವ್, ನಿರ್ದೇಶಕಿ ಗಾಯತ್ರಿ(ಲಕ್ಷ್ಮೀ), ಸದಸ್ಯೆ ಪ್ರಸನ್ನ ಮೋಹನರವರು ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲಕೃಷ್ಣ ಹೇರಳೆಯವರು ಸ್ವಾಗತಿಸಿ, ಉಪಾಧ್ಯಕ್ಷ ಶಿವಪ್ರಸಾದ್ ಎ ವಂದಿಸಿದರು. ಸಂಘದ ನಿರ್ದೇಶಕರಾದ ವಿ.ರಾಮಚಂದ್ರ ರಾವ್, ಶಿವಪ್ರಸಾದ ಡಿ, ಬಿ.ಸದಾಶಿವ ಹೊಳ್ಳ, ಎಂ.ವೆಂಕಟೇಶ್, ಸುಧಾ ನಾಗೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾ ಮಯ್ಯರವರು ಕಾರ್ಯಕ್ರಮ ನಿರೂಪಿಸಿದರು.