ಹಬ್ಬಗಳು ನಮ್ಮ ಸಂಭ್ರಮವನ್ನು ಹೆಚ್ಚಿಸುತ್ತವೆ.: ಗಣೇಶ ಪ್ರಸಾದ್
ಪುತ್ತೂರು: ಹಬ್ಬಗಳು ನಮ್ಮ ಸಂಭ್ರಮವನ್ನು ಹೆಚ್ಚಿಸುವ ಸಂದರ್ಭಗಳನ್ನು ಸೃಷ್ಟಿಸುತ್ತವೆ. ಓಣಂ ಹಬ್ಬ ಕೇರಳ ಮೂಲದ್ದಾದರೂ ಎಲ್ಲೆಡೆಯೂ ಆಚರಿಸಲ್ಪಡುತ್ತಿದೆ. ಬೆಳೆಗಳನ್ನು ದೇವರಿಗೆ ಸಮರ್ಪಿಸುವ ಈ ಹಬ್ಬ ಮಲೆಯಾಳಿಗಳ ಅವಿಭಾಜ್ಯ ಅಂಗವಾಗಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ಓಣಂ ಹಬ್ಬದ ಆಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಓಣಂ ಅನ್ನು ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಪೂಕಳಂ ಅರ್ಥಾತ್ ಹೂವಿನ ರಂಗೋಲಿ ಈ ಹಬ್ಬದ ಸಂಕೇತಗಳಲ್ಲೊಂದು. ಪ್ರತಿ ದಿನ ಹಿಂದಿನ ದಿನಕ್ಕಿಂತ ದೊಡ್ಡದಾದ ಪೂಕಳಂ ಅನ್ನು ರಚಿಸುವುದು ವಿಶೇಷವಾದದ್ದು. ಓಣಂ ಹಬ್ಬದ ಸಂದರ್ಭದಲ್ಲಿ ವಿಶೇಷವಾದ ಉಡುಗೆ ತೊಡುಗೆಗಳನ್ನು ತೊಡುವುದೂ ಗಮನಾರ್ಹ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಕೇರಳಕ್ಕೆ ಸೀಮಿತವಾಗಿರುವ ಓಣಂ ಇದೀಗ ದೇಶಾದ್ಯಂತ, ಪ್ರಪಂಚದಾದ್ಯಂತ ವಿಸ್ತಾರವಾಗುತ್ತಿದೆ. ಜಗತ್ತಿನ ಎಲ್ಲೆಡೆಗಳಲ್ಲೂ ಕೇರಳಿಗರಿರುವುದೇ ಈ ಹಬ್ಬಕ್ಕೆ ವ್ಯಾಪಕತೆ ದೊರಕುವುದಕ್ಕೆ ಕಾರಣ. ಕೇರಳಿಗರು ಓಣಂ ಅನ್ನು ಜಾಗತಿಕವಾಗಿ ವಿಸ್ತರಿಸಿದಂತೆ ಪ್ರತಿಯೊಂದು ರಾಜ್ಯದವರೂ ತಮ್ಮ ತಮ್ಮ ವಿಶೇಷತೆಗಳಿಗೆ ಜಾಗತಿಕ ಮನ್ನಣೆ ಪಡೆಯುವ ಪ್ರಯತ್ನ ಮಾಡಬೇಕು ಎಂದರು.
ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರಾವ್ಯಾ ಪ್ರಾರ್ಥಿಸಿ, ವಿದ್ಯಾರ್ಥಿ ಗುರುಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿನಿ ನವ್ಯ ವಂದಿಸಿದರು. ವಿದ್ಯಾರ್ಥಿನಿ ತೃಪ್ತಿ ಎಂ ಕಾರ್ಯಕ್ರಮ ನಿರ್ವಹಿಸಿದರು.