





‘ಪತ್ರಿಕಾ ಬರವಣಿಗೆಯೂ ಸಾಹಿತ್ಯದ ಒಂದು ಪ್ರಕಾರ’ : ರಾಕೇಶ ಕುಮಾರ್ ಕಮ್ಮಜೆ


ಪುತ್ತೂರು: ಸಾಹಿತ್ಯ ಮತ್ತು ಪತ್ರಿಕೋದ್ಯಮ ಭಿನ್ನ ಸಂಗತಿಗಳಲ್ಲ. ಸಾಹಿತ್ಯದಲ್ಲಿನ ವಿವಿಧ ಪ್ರಕಾರಗಳಂತೆ ಪತ್ರಿಕಾ ಸಾಹಿತ್ಯವೂ ಒಂದು ಪ್ರಕಾರ. ಆದರೆ ಪತ್ರಿಕಾ ಸಾಹಿತ್ಯ ಇತರ ಸಾಹಿತ್ಯಕ್ಕಿಂತ ವೇಗವಾಗಿ ಸೃಷ್ಟಿಯಾಗುವುದರಿಂದ ಅವಸರದ ಸಾಹಿತ್ಯ ಎಂದೂ ಕರೆಯುತ್ತಾರೆ. ಸಾಹಿತ್ಯದ ಆಸಕ್ತಿ ಇಲ್ಲದ ವ್ಯಕ್ತಿ ಪತ್ರಕರ್ತನಾಗಿ ಯಶಸ್ಸು ಪಡೆಯುವುದಕ್ಕೆ ಸಾಧ್ಯವಿಲ್ಲ, ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹೇಳಿದರು.





ಅವರು ಕಾಲೇಜಿನ ಕನ್ನಡ ವಿಭಾಗದ ಅಭಿಜ್ಞಾನ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಎಂಬ ವಿಷಯದ ಬಗೆಗೆ ಶುಕ್ರವಾರ ಉಪನ್ಯಾಸ ನೀಡಿದರು.
ಎಷ್ಟೋ ಜನ ಸಾಹಿತಿಗಳು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಸಾಕಷ್ಟು ಉದಾಹರಣೆಗಳಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜೀವನ ಅನ್ನುವ ಪತ್ರಿಕೆಯನ್ನು ನಡೆಸುತ್ತಿದ್ದರು. ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಸಾಹಿತಿ ಡಿ.ವಿ. ಗುಂಡಪ್ಪನವರೂ ಪತ್ರಿಕೆಗಳನ್ನು ನಡೆಸಿದವರು. ಲಂಕೇಶ್ ಅವರು ಸಾಹಿತಿಯಾಗಿ, ಪತ್ರಕರ್ತನಾಗಿ ಗುರುತಿಸಿಕೊಂಡವರು. ಹೀಗೆ ಆ ಕಾಲದಿಂದ ತೊಡಗಿ ಈ ಕಾಲದವರೆಗೂ ಸಾಹಿತ್ಯದ ಭಾಗವಾಗಿ ಪತ್ರಿಕೋದ್ಯಮ ಬೆಳೆದುಬಂದಿದೆ ಎಂದರು.
ಭಾಷೆಗೆ ಸಹಜ ಸೌಂದರ್ಯ ಇಲ್ಲ. ಉಪಯೋಗಿಸುವವನ ಯೋಗ್ಯತೆಯ ಮೇಲೆ ಅದು ಸೌಂದರ್ಯವನ್ನು ಆವಾಹಿಸಿಕೊಳ್ಳುತ್ತದೆ. ಆದ್ದರಿಂದ ಭಾಷಾ ಜ್ಞಾನ ಇಲ್ಲದ ವ್ಯಕ್ತಿ ಪತ್ರಿಕೋದ್ಯಮಕ್ಕೆ ಅಡಿಯಿಟ್ಟರೆ ಪತ್ರಿಕೋದ್ಯಮದ ಘನತೆಗೆ ಕುಂದುಂಟಾಗುತ್ತದೆ. ಅಲ್ಪವಿರಾಮ, ಪೂರ್ಣ ವಿರಾಮಗಳ ತಪ್ಪಾದ ಬಳಕೆಗಳೂ ಕೆಲವೊಮ್ಮ ಅಪಾರ್ಥ, ಅನ್ಯಾರ್ಥಕ್ಕೆ ದಾರಿ ಮಾಡಿಕೊಡುತ್ತವೆ. ಭಾಷೆಯನ್ನು ನಮ್ಮದಾಗಿಸುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿರಬೇಕು. ಜೈಮಿನಿ ಭಾರತ, ಕುಮಾರ ವ್ಯಾಸ ಭಾರತದಂತಹ ನಡುಗನ್ನಡ ಸಾಹಿತ್ಯ ಕೃತಿಗಳು ನಮ್ಮ ಭಾಷೆಯ ಮೇಲೆ ಗಾಢ ಪರಿಣಾಮ ಬೀರುತ್ತವೆಯಲ್ಲದೆ ಉಚ್ಚಾರ ದೋಷವನ್ನೂ ಸರಿಪಡಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ ಮಾತನಾಡಿ ಆಧುನಿಕ ದಿನಮಾನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕುಸಿಯುತ್ತಿದೆ. ಆದರೆ ಪ್ರತಿದಿನ ಪತ್ರಿಕೆಗಳನ್ನಾದರೂ ಓದುತ್ತಿದ್ದರೆ ನಮ್ಮ ಭಾಷೆ ಉತ್ಕೃಷ್ಟತೆಯೆಡೆಗೆ ಸಾಗುತ್ತದೆ. ನಾವು ಮಾಡುವ ತಪ್ಪುಗಳೇನು ಅನ್ನುವುದನ್ನು ಪತ್ರಿಕೆಗಳನ್ನು ಓದುವುದರಿಂದ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಉಪನ್ಯಾಸಕ ಗಿರೀಶ ಭಟ್ ಕುವೆತ್ತಂಡ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ, ಉಪನ್ಯಾಸಕಿ ಶ್ರೀಕೀರ್ತನಾ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ, ಪತ್ರಿಕೋದ್ಯಮ ಉಪನ್ಯಾಸ ಹರ್ಷಿತ್ ಪಿಂಡಿವನ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ತೃಪ್ತಿ ಎಂ ಪ್ರಾರ್ಥಿಸಿದರು. ವಿದ್ಯಾರ್ಥಿ ಅನ್ವಿತ್ ಸ್ವಾಗತಿಸಿ, ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು. ವಿದ್ಯಾರ್ಥಿನಿ ದೀಪಾ ಕಾರ್ಯಕ್ರಮ ನಿರ್ವಹಿಸಿದರು.










