ಪುರುಷರಕಟ್ಟೆ: ಆಕ್ಟಿವಾಗೆ ಕಾರು ಡಿಕ್ಕಿ ಸವಾರ ಹೋಳಿಗೆ ವ್ಯಾಪಾರಿ ಗಣೇಶ್ ಪ್ರಭು ಮೃತ್ಯು

0

ಪುತ್ತೂರು: ಕಾರು ಮತ್ತು ಆ್ಯಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಮೃತಪಟ್ಟ ಘಟನೆ ಪುರುಷರಕಟ್ಟೆಯಲ್ಲಿ ಸೆ.21 ರಂದು ರಾತ್ರಿ ನಡೆದಿದೆ. ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೀರು ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಅವಾಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆ್ಯಕ್ಟಿವಾ ಸವಾರ, ಹೋಳಿಗೆ ವ್ಯಾಪಾರಿಯಾಗಿದ್ದ ಬಂಟ್ವಾಳ ಪಂಜಿಕಲ್ಲು (ಪಂಜಳ) ನಿವಾಸಿ ಗಣೇಶ್ ಪ್ರಭು (53 ವ) ಮೃತಪಟ್ಟಿದ್ದಾರೆ.

ಅಪಘಾತದಿಂದ ಅವರ ತಲೆ, ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತರಾಗಿದ್ದಾರೆ.

ಘಟನೆಯಿಂದ ಆ್ಯಕ್ಟಿವಾ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನ ಮುಂಭಾಗಕ್ಕೂ ಹಾನಿ ಉಂಟಾಗಿದೆ. ಈ ಹಿಂದೆ ಪುರುಷರಕಟ್ಟೆಯ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಗಣೇಶ್ ಪ್ರಭುರವರು ಬಳಿಕ ಕಾಲು ನೋವಿನ ಕಾರಣಕ್ಕಾಗಿ ಹೊಟೇಲ್ ಕೆಲಸ ಬಿಟ್ಟು ಹೋಳಿಗೆ ವ್ಯಾಪಾರ ಆರಂಭಿಸಿದ್ದರು. ಬಂಟ್ವಾಳದಿಂದ ಪುರುಷರಕಟ್ಟೆ ಬಂದು ಹೋಳಿಗೆ ಪಡೆದುಕೊಂಡು ಸ್ಕೂಟರ್‌ನಲ್ಲಿ ಮಾರಾಟ ಮಾಡಿಕೊಂಡು ಹೋಗುತ್ತಿದ್ದರು. ಸಾಧು ಸ್ವಭಾವದವರಾಗಿದ್ದ ಇವರು ಹೋಳಿಗೆ ವ್ಯಾಪಾರ ಮೂಲಕ ಚಿರಪರಿಚಿತರಾಗಿದ್ದರು.

ಆ್ಯಕ್ಟಿವಾ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟ ಸವಾರ:
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಆಕ್ಟಿವಾ ಸವಾರ ಗಣೇಶ್ ಅವರು ಆ್ಯಕ್ಟಿವಾ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದರು. ಚರಂಡಿಯ ಇನ್ನೊಂದು ಬದಿಯಲ್ಲಿ ಕಂಪೌಂಡ್ ಇದೆ. ಘಟನೆ ಬಳಿಕ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರು.

ಗಾಯಾಳುವನ್ನು ಸ್ಥಳೀಯರಾದ ಸಲೀಂ ಮಾಯಂಗಳ, ಅನ್ಸಾರ್ ಪುರುಷರಕಟ್ಟೆ, ಪ್ರಶಾಂತ್, ಜಕ್ಕಿ ಮುಕ್ವೆ ಮೊದಲಾದವರು ಚರಂಡಿಯಿಂದ ಮೇಲೆತ್ತಿ ಆಸ್ಪತ್ರೆಗೆ ಕಳುಹಿಸಿದ್ದರು. ಮೃತರ ಬಾವ ಬಾಲಕೃಷ್ಣ, ಹೋಳಿಗೆ ಮನೆ ಮಾಲಕ ನವೀನ್ ಪ್ರಭುರವರು ಆಸ್ಪತ್ರೆಗೆ ತೆರಳಿದ್ದರು. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರು ಪತ್ನಿ ಮೀನಾಕ್ಷಿ ಹಾಗೂ ಪುತ್ತೂರಿನಲ್ಲಿ ಪೊಪ್ಯುಲರ್ ಸ್ವೀಟ್ಸ್ ಉದ್ಯೋಗಿಯಾಗಿರುವ ಪುತ್ರ ವರುಣ್, ವಿದ್ಯಾರ್ಥಿನಿಯಾಗಿರುವ ಪುತ್ರಿ ವಂದನಾ ಅವರನ್ನು ಆಗಲಿದ್ದಾರೆ.

ರಾಂಗ್ ಸೈಡಿಗೆ ಹೋಗಿ ಡಿಕ್ಕಿ:
ಬ್ರಿಝಾ ಕಾರು ರಸ್ತೆಯ ಇನ್ನೊಂದು ಬದಿಗೆ ಹೋಗಿ ಆಕ್ಟಿವಾಗೆ ಡಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಪುರುಷರಕಟ್ಟೆ ಸಮೀಪ ರಿಂಗ್ ಕೆಲಸ ಮಾಡುವವರು ಪುತ್ತೂರಿಗೆ ಹೋಗುವ ವೇಳೆ ಪುರುಷರಕಟ್ಟೆ ಇಳಿಜಾರು ರಸ್ತೆ ಬಳಿ ಕಾರು ನಿಯಂತ್ರಣ ತಪ್ಪಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಬಂದಿದ್ದರು.
ಕಳೆದ ಹಲವು ವರ್ಷಗಳಿಂದ ಪುರುಷರಕಟ್ಟೆ ಉದಯಭಾಗ್ಯ ಹೋಳಿಗೆ ಮನೆಯಿಂದ ಹೋಳಿಗೆ ಪಡೆದುಕೊಂಡು ಲೈನ್ ಸೇಲ್ ಮಾಡುತ್ತಿದ್ದ ಗಣೇಶ್ ಪ್ರಭುರವರು ಸೆ.21ರಂದು ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಬಂದಿದ್ದರು.ಹೊಸ ಬಟ್ಟೆ ಧರಿಸಿದ ಸಂಭ್ರಮದ ಕುರಿತು ಹೋಳಿಗೆ ಮನೆ ಸಿಬ್ಬಂದಿಗಳು ಅವರಲ್ಲಿ ಕೇಳಿದ್ದರು. ಇವತ್ತು ಹೊಸ ಬಟ್ಟೆ ಧರಿಸಿಕೊಂಡು ಹೋಗಲು ಪತ್ನಿ ಹೇಳಿದ್ದಾಗಿ ಅವರು ನಗುತ್ತಾ ಪ್ರತಿಕ್ರಿಯಿಸಿದ್ದರು.ಆದರೆ ಬೆಳಿಗ್ಗೆ ಮನೆಯಿಂದ ಹೊಸ ಬಟ್ಟೆ ಧರಿಸಿ ಬಂದಿದ್ದ ಅವರು ವಾಪಸ್ ಮನೆಗೆ ಹೋಗದೆ ವಿಧಿ ಲೀಲೆಗೆ ಬಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here