ಜಿಲ್ಲೆಯಲ್ಲಿ 3.50 ಲಕ್ಷ, ಪುತ್ತೂರಿನಲ್ಲಿ 50 ಸಾವಿರಕ್ಕೂ ಮಿಕ್ಕಿ ಸದಸ್ಯತನ ಸಂಕಲ್ಪ

0

ಪುತ್ತೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು:ಬಿಜೆಪಿ ವಿಶೇಷವಾಗಿ ಆರು ವರ್ಷಕ್ಕೊಮ್ಮೆ ಸದಸ್ಯತನ ಮಾಡುವ ಕಾರ್ಯಪದ್ಧತಿಯನ್ನು ಪ್ರಾರಂಭದಿಂದಲೇ ಮಾಡಿಕೊಂಡು ಬರಲಾಗಿದ್ದು ಸದಸ್ಯತ್ವ ಆಂದೋಲನ ಪಕ್ಷದಲ್ಲಿ ದೊಡ್ಡ ಪರ್ವ.ಅದನ್ನು ಅಟಲ್ ಸದಸ್ಯತನ ಅಭಿಯಾನ ಅನ್ನುವ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮಡಲಾಗುತ್ತಿದೆ.ಈಗಾಗಲೇ ಜಿಲ್ಲೆಯಲ್ಲಿ ಮೂರರಿಂದ ಮೂರುವರೆ ಲಕ್ಷ ಸದಸ್ಯತನ ಗುರಿಯನ್ನು ಹೊಂದಿದ್ದೇವೆ.ಅದೇ ರೀತಿ ಪುತ್ತೂರಿನಲ್ಲಿ 50 ಸಾವಿರಕ್ಕೂ ಮಿಕ್ಕಿ ಸದಸ್ಯತನ ಮಾಡುವ ಕುರಿತು ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಹೇಳಿದರು.


ಪುತ್ತೂರಿನಲ್ಲಿ ಸದಸ್ಯತ್ವ ಅಭಿಯಾನದ ಕುರಿತು ಹಲವು ಕಡೆ ಪಕ್ಷದ ಪ್ರಮುಖರೊಂದಿಗೆ ತೆರಳಿ ಅಭಿಯಾನದಲ್ಲಿ ಪಾಲ್ಗೊಂಡು ಮಧ್ಯಾಹ್ನ ವೇಳೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರ ಮನೆಯಲ್ಲಿ ನಡೆದ ಪ್ರಮುಖರ ಸಭೆಯ ಸಂದರ್ಭ ಸತೀಶ್ ಕುಂಪಲ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.


ರಾಷ್ಟ್ರದಲ್ಲಿ ಸೆ.2ರಂದು ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಸದಸ್ಯತನ ಅಭಿಯಾನ ಪ್ರಾರಂಭ ಆಗಿ ಇವತ್ತಿಗೆ 18 ದಿನ ಆಗಿದೆ.ಜಿಲ್ಲೆಯಲ್ಲಿ 75 ಸಾವಿರಕ್ಕಿಂತ ಜಾಸ್ತಿ ಸದಸ್ಯತನ ಮಾಡುವ ಮೂಲಕ ರಾಜ್ಯದಲ್ಲಿ 2ನೇ ಸ್ಥಾನದಲ್ಲಿ ದ.ಕ.ಜಿಲ್ಲೆ ಇದೆ.ಈ ಸದಸ್ಯತನದಲ್ಲಿ ಪ್ರತಿ ಬೂತ್‌ನಲ್ಲಿ 20ಕ್ಕಿಂತ ಜಾಸ್ತಿ ಸದಸ್ಯತನ ಮಾಡಬೇಕೆಂಬ ಸಂಕಲ್ಪವನ್ನು ಜಿಲ್ಲೆಯಲ್ಲಿ ಮಾಡಿದ್ದೇವೆ.ಆದರೆ ಕಾರ್ಯಕರ್ತರು ಬೂತ್‌ನಲ್ಲಿ 300 ಸದಸ್ಯತ್ವ ಮಾಡುವ ಸಂಕಲ್ಪ ಮಾಡಿದ್ದಾರೆ.ಒಟ್ಟು ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಮಾಡುವ ಬಗ್ಗೆ ಯೋಚನೆ ಮಾಡಿದೆ.ಸಕ್ರಿಯ ಕಾರ್ಯಕರ್ತರಾಗಬೇಕಾದರೆ ನೂರು ಸದಸ್ಯತನ ಮಾಡುವ ಜವಾಬ್ದಾರಿ ಬೂತ್ ಕಾರ್ಯಕರ್ತನಿಗಿದೆ. ಬೂತ್ ಅಧ್ಯಕ್ಷರಿಂದ ಹಿಡಿದು ಜಿಲ್ಲಾ ಮಟ್ಟದ ನಾಯಕರ ತನಕ ಪ್ರತಿಯೊಬ್ಬರು ಈ ಸದಸ್ಯತನ ಅಭಿಯಾನದಲ್ಲಿ ಭಾಗವಹಿಸುವ ಕಾರ್ಯಕ್ರಮವಾಗಿದೆ.ನಮ್ಮ ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಮತ್ತು ನಿಕಟಪೂರ್ವ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಸದಸ್ಯತನ ಅಭಿಯಾನ 6ಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸೆ.25ಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಸಂದರ್ಭ ಪ್ರಥಮ ಹಂತದ ಸದಸ್ಯತ್ವ ಅಭಿಯಾನ ಪೂರ್ಣಗೊಳ್ಳುತ್ತದೆ.ಆ ಸಂದರ್ಭದಲ್ಲಿ ಪುತ್ತೂರು ಯಾವ ರೀತಿ ಗುರಿ ತಲುಪಬೇಕೋ ಅದನ್ನೆಲ್ಲ ಪೂರ್ತಿ ಮಾಡುವ ಕೆಲಸ ಪುತ್ತೂರಿನ ಕಾರ್ಯಕರ್ತರು ಮಾಡುತ್ತಾರೆ. ಈಗಾಗಲೇ ಹೊಸ ಹುರುಪಿನೊಂದಿಗೆ ಪದಾಧಿಕಾರಿಗಳ ಆಯ್ಕೆಯಾಗಿದೆ.ಪುತ್ತೂರಿನಲ್ಲಿ ಒಟ್ಟು ಅಭಿಯಾನದ ಜೊತೆಗೆ ಸೇವಾ ಪಾಕ್ಷಿಕ ಎಂಬ ರಾಷ್ಟ್ರಮಟ್ಟದ ಕಾರ್ಯಕ್ರಮ ನಡೆಯುತ್ತಿದೆ. ಮೋದಿ ಜನ್ಮದಿನದಂದು ಪ್ರಾರಂಭಗೊಂಡ ಈ ಕಾರ್ಯಕ್ರಮ ಅ.2ರ ಗಾಂಧಿ ಜಯಂತಿ ತನಕ ನಡೆಯಲಿದೆ.ಎಲ್ಲಾ ಕಡೆಯಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ವಿಶೇಷ ಚೇತನರಿಗೆ ಸಹಾಯ.ಹಿರಿಯರಿಗೆ ಗೌರವ ಸಹಿತ ಸಾಮಾಜಿಕ ಕಾಳಜಿಯುಳ್ಳ ಅನೇಕ ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಕೊಟ್ಟಿದ್ದಾರೆ.ಅದನ್ನು ಅನುಷ್ಟಾನ ಮಾಡುವ ಕೆಲಸ ಮಾಡುತ್ತೇವೆ.ಅ.2 ಗಾಂಧಿ ಜಯಂತಿ ಯಂದು ಬೇರೆ ಬೇರೆ ಸ್ಥಳಗಳಲ್ಲಿ ಖಾದಿಯನ್ನು ಖರೀದಿಸುವ ಮತ್ತು ತೊಡುವ ಮೂಲಕ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಜೊತೆ ಸೇರಲಿದ್ದಾರೆ.ಸಂಘಟನಾ ಪರ್ವ, ಸದಸ್ಯತನ ಅಭಿಯಾನ, ಸೇವಾ ಪಾಕ್ಷಿಕ ಒಟ್ಟು ಪಕ್ಷದ ಕೆಲಸ ಕಾರ್ಯ ಪುತ್ತೂರಿನಲ್ಲಿ ನಡೆಯುತ್ತಿದೆ ಎಂದು ಸತೀಶ್ ಕುಂಪಲ ತಿಳಿಸಿದರು.


ಬೆಳ್ತಂಗಡಿ ಪ್ರಥಮ:
ಸದಸ್ಯತ್ವ ಅಭಿಯಾನದಲ್ಲಿ ಈಗಿನ ಅಂಕಿ ಅಂಶಗಳ ಪ್ರಕಾರ ಬೆಳ್ತಂಗಡಿ ಪ್ರಥಮ ಸ್ಥಾನದಲ್ಲಿದೆ.ಮಂಗಳೂರು ಉತ್ತರ ವಿಧಾನಸಭಾಕ್ಷೇತ್ರ 2ನೇ ಸ್ಥಾನದಲ್ಲಿ ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ 3ನೇ ಸ್ಥಾನದಲ್ಲಿದೆ.ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತನ ಅಭಿಯಾನದಲ್ಲಿ ಉದಾಸೀನತೆ ಮಾಡಿರುವ ಕಾರಣ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತನ ಅಭಿಯನ ಮಾಡುವ ಕುರಿತು ಸಭೆ ಮಾಡುತ್ತಿದ್ದೇವೆ.ಹಾಗೆಂದು ಪುತ್ತೂರು ಹಿನ್ನಡೆಯಲ್ಲಿಲ್ಲ.ಇಲ್ಲಿ ಸದಸ್ಯತನ ಅಭಿಯಾನಕ್ಕೂ ಮುಂದೆ ವಿಧಾನಸಭಾ ಕ್ಷೇತ್ರದ ಸಮಿತಿ ಮಾಡುವಾಗ ಸ್ವಲ್ಪ ತಡವಾಗಿದೆ. ಹಾಗಾಗಿ ನಮ್ಮ ಸಂಘಟನೆಯ ಪರ್ವ ಕೆಲಸ ಮುಂದೆ ಹೋಗಿತ್ತು. ಇವತ್ತು ಪೂರ್ಣ ಪ್ರಮಾಣದಲ್ಲಿ ಆಗಿದೆ. ಹಾಗಾಗಿ ಎಲ್ಲಾ ಪದಾಧಿಕಾರಿಗಳು ಸೇರಿ ಸಂಕಲ್ಪ ಮಾಡಿದ್ದಾರೆ.ಸೆ.22ರಂದು ಮನೆ ಮನೆ ಸದಸ್ಯತ್ವ ಅಭಿಯಾನ ದೊಡ್ಡ ಆಂದೋಲನ ರೀತಿಯಲ್ಲಿ ನಡೆಯಲಿದೆ.ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕಿಂತ ಜಾಸ್ತಿ ಸದಸ್ಯತನ ಮಾಡುವ ಸಂಕಲ್ಪ ಮಾಡಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.


ಚುನಾವಣೆ ಗೆಲ್ಲುವುದು ಮುಖ್ಯ-ಅಭ್ಯರ್ಥಿ ಮುಖ್ಯವಲ್ಲ:
ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಮಾಜಿ ಸಿ.ಎಂ.ಬಸವರಾಜ ಬೊಮ್ಮಾಯಿ ಮತ್ತು ಪ್ರೀತಂ ಗೌಡ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಣೆ ಆಗಿದೆ.ಒಟ್ಟು ಸಂಘಟನಾತ್ಮಕವಾಗಿ ಯಾವ ರೀತಿ ಚುನಾವಣೆಯಲ್ಲಿ ಗೆಲ್ಲಲು ಕೆಲಸ ಕಾರ್ಯ ಮಾಡಬಹುದು ಎನ್ನುವ ರೀತಿಯಲ್ಲಿ ಹಿರಿಯರನ್ನು, ಪ್ರಮುಖರನ್ನು ಕರೆದು ಧನಾತ್ಮಕ ಚರ್ಚೆ ಮಾಡಲಾಗಿದೆ. ನಮ್ಮ ಗುರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದಕ್ಕಿಂತ ಚುನಾವಣೆಯನ್ನು ಗೆಲ್ಲುವುದು ಮುಖ್ಯ.ಯಾರನ್ನು ಅಭ್ಯರ್ಥಿಯನ್ನಾಗಿಸಿದರೂ ನಾವು ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದು ಸತೀಶ್ ಕುಂಪಲ ತಿಳಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ಸುನಿಲ್ ಆಳ್ವ, ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ವಸಂತಲಕ್ಷ್ಮೀ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಭಟ್, ಉಮೇಶ್ ಆಚಾರ್ಯ, ದರ್ಬೆ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಸುನಿಲ್ ದಡ್ಡು, ಮೋಹನ್, ರಮೇಶ್ ಸಂಪ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತಿಲ ನ್ಯಾಯಯುತವಾಗಿ ಹೊರಗೆ ಬರುತ್ತಾರೆಂಬ ವಿಶ್ವಾಸವಿದೆ
ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕರು.ಅವರ ಮೇಲೆ ಆರೋಪ ಬಂದ ಸಂದರ್ಭದಲ್ಲಿ ಯಾವುದೇ ರೀತಿ ಧೃತಿಗೆಡದೆ ಸವಾಲನ್ನು ಸ್ವೀಕರಿಸಿ ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡಿದ್ದಾರೆ.ಈಗಾಗಲೇ ಅವರಿಗೆ ಜಾಮೀನು ಸಿಕ್ಕಿದೆ.ಪ್ರಕರಣದ ಸತ್ಯಾಸತ್ಯತೆ ನ್ಯಾಯಾಲಯದ ಮೂಲಕ ತೀರ್ಮಾನ ಆಗುತ್ತದೆ.ಕೋರ್ಟ್‌ನ ವ್ಯಾಪ್ತಿಯಲ್ಲಿರುವ ಸಂದರ್ಭ, ಅವರು ಮಾಡಿದ್ದಾರೆ-ಇವರು ಮಾಡಿದ್ದಾರೆಂಬ ಹೇಳಿಕೆಯನ್ನು ಕೊಡುವಂಥದ್ದು ಸರಿಯೂ ಅಲ್ಲ.ಆರೋಪ ಪ್ರತ್ಯಾರೋಪ ರಾಜಕೀಯ ವ್ಯವಸ್ಥೆಯಲ್ಲಿ ಇದ್ದದ್ದೆ.ಹಾಗಾಗಿ ಅವರು ಯಾವುದೇ ತಪ್ಪು ಮಾಡದ ರೀತಿಯಲ್ಲಿ ನ್ಯಾಯಯುತವಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಸತೀಶ್ ಕುಂಪಲ ಅಧ್ಯಕ್ಷರು ಜಿಲ್ಲಾ ಬಿಜೆಪಿ

LEAVE A REPLY

Please enter your comment!
Please enter your name here