ಎಚ್ಚೆತ್ತುಕೊಳ್ಳದಿದ್ದರೆ ಅಡಿಕೆ ಬೆಳೆಗಾರರ ಆರ್ಥಿಕ ಪರಿಸ್ಥಿತಿ ನೆಲಕಚ್ಚಲಿದೆ – ಅಶೋಕ್ ರೈ
ರಸ್ತೆ ಹೊಂಡ ಸಮಸ್ಯೆ ಸ್ವಲ್ಪ ತಡೆದುಕೊಳ್ಳಿ
ಅತಿಥಿ ಶಿಕ್ಷಕರ ವೇತನ ವಿಳಂಬದ ಬಗ್ಗೆ ಸರಕಾರದ ಗಮನ ಸೆಳೆಯಲಿದ್ದೇನೆ
ಪುತ್ತೂರು: ಕೇಂದ್ರ ಸರಕಾರದ ಶುಲ್ಕ ರಹಿತ ಅಡಿಕೆ ಆಮದು ಕ್ರಮದಿಂದಾಗಿ ನಮ್ಮ ಭಾಗದಲ್ಲಿ ಅಡಿಕೆ ಬೆಲೆ 250-200 ಕ್ಕೆ ಇಳಿದರೆ ಅಡಿಕೆ ಕೃಷಿಕರ ಆರ್ಥಿಕ ಪರಿಸ್ಥಿತಿ ನೆಲಕಚ್ಚಿಹೋಗುವುದು ಖಂಡಿತ. ಈಗಿಂದೀಗಲೇ ನಾವು ಎಚ್ಚೆತ್ತುಕೊಂಡು ಪಕ್ಷಾತೀತವಾಗಿ ಹೋರಾಟ ಮಾಡಿ ಕೇಂದ್ರ ಸರಕಾರಕ್ಕೆ ಈ ಕುರಿತು ಮನವರಿಕೆ ಮಾಡುವ ಕೆಲಸ ಆಗಬೇಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
‘ಸುದ್ದಿ’ಯೊಂದಿಗೆ ಮಾತನಾಡಿದ ಶಾಸಕರು, ಭೂತಾನ್‌ನಿಂದ ಶುಲ್ಕ ರಹಿತವಾಗಿ ಅಡಿಕೆ ಆಮದುಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿದೆ. ಶುಲ್ಕ ರಹಿತ ಅಡಿಕೆ ಆಮದು ನೀತಿ ತುಂಬಾ ಗಂಭೀರ ವಿಷಯ. ಕೇಂದ್ರ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯಿಲ್ಲ. ದಲ್ಲಾಳಿಗಳು ಹೋಗಿ ಆಮದು ಮಾಡಿಕೊಳ್ಳಲು ಪರವಾನಿಗೆ ಹಿಡಿದುಕೊಂಡು ಬರುತ್ತಾರೆ. ಕಾಂಗ್ರೆಸ್ ಪಕ್ಷದವನಾದರೂ ನಾನು ಕೇಂದ್ರ ಸರಕಾರವನ್ನು ದೂರಲು ಹೋಗುವುದಿಲ್ಲ. ಗೊತ್ತಿಲ್ಲದೇ ಆದೇಶ ಮಾಡಿರಬಹುದು. ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸರಿಯಾದ ಮಾಹಿತಿ ನೀಡಿ ಸರಕಾರದ ತಪ್ಪನ್ನು ಸರಿಪಡಿಸಬೇಕಿದೆ. ಇಲ್ಲಿ ಕ್ಯಾಂಪ್ಕೋ ಇದೆ. ಅವರು ನಿದ್ದೆ ಮಾಡುವುದಲ್ಲ, ಕೇವಲ ವ್ಯಾಪಾರ ಮಾಡಿದರೆ ಸಾಲದು. ತಕ್ಷಣ ಸರಕಾರದ ಮಂತ್ರಿಗಳನ್ನು ಭೇಟಿ ಮಾಡಿ ಗಮನ ಸೆಳೆಯುವ ಕೆಲಸ ಆಗಬೇಕು. ಈ ಹಿಂದೆ ಇದೇ ರೀತಿ ಆದಾಗ ನಾನು ಡೆಲ್ಲಿಗೆ ಹೋಗಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿದ್ದೇನೆ. ಕಾಮರ್ಸ್ ಮಿನಿಸ್ಟರ್ ಗೆ ಅಡಿಕೆ ಬೆಳೆ ಮತ್ತು ಬೆಳೆಗಾರರ ಬಗ್ಗೆ ಇನ್‌ಪುಟ್ ಕೊಡುವ ಕೆಲಸ ಆಗಬೇಕು. ನಾನು ನಮ್ಮ ಕೃಷಿ ಮಂತ್ರಿ ಮತ್ತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜ್ಯದಿಂದ ಕೇಂದ್ರಕ್ಕೆ ಮನವಿ ಹೋಗುವಂತೆ ಮಾಡುತ್ತೇನೆ. ಇದಕ್ಕೆ ಪಕ್ಷಾತೀತವಾದ ಹೋರಾಟದ ಅವಶ್ಯಕತೆಯಿದೆ. ಕಳೆದ ವರ್ಷವೂ ಇದೇ ರೀತಿಯಾದಾಗ ಅಡಿಕೆಗೆ 30 ರೂ. ಬೆಲೆ ಇಳಿಕೆಯಾಗಿತ್ತು. ಶುಲ್ಕ ರಹಿತವಾಗಿ ಸತತ ಆಮದಿಗೆ ಒಪ್ಪಿಗೆ ಕೊಟ್ಟಲ್ಲಿ ಅಡಿಕೆ ಬೆಲೆ 150-200 ಕ್ಕೆ ತಲುಪಲಿದೆ. ಕೇಂದ್ರಕ್ಕೆ ಮನವರಿಕೆ ಮಾಡದಿದ್ದಲ್ಲಿ ಕೃಷಿಕರಿಗೆ ಭಾರೀ ಹೊಡೆತ ಬೀಳಲಿದೆ. ಅಡಿಕೆ ಬೆಳೆಗಾರರು ನನ್ನನ್ನೂ ಸೇರಿಸಿ ಜನಪ್ರತಿನಿಽಗಳಿಗೆ ಬಿಸಿ ಮುಟ್ಟಿಸಬೇಕು. ನನ್ನ ಕಡೆಯಿಂದ ಸ್ಪಂದನೆ ಕೊಡುವ ಕೆಲಸ ಮಾಡಲಿದ್ದೇನೆ. ಕ್ಯಾಂಪ್ಕೋದವರು ಸಂಸದರನ್ನು ಕರೆದುಕೊಂಡು ನಿಯೋಗ ತಕ್ಷಣ ಕೇಂದ್ರದ ಬಳಿ ಹೋಗಬೇಕು. ಈ ಹಿಂದೆ ಅಡಿಕೆಯಲ್ಲಿ ನಿಕೊಟಿನ್ ಇದೆ ಎಂದು ಹೇಳಿದಾಗಲೂ ಸಚಿವರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದೇನೆ? ಎಂದರು.
ರಸ್ತೆ ಸಮಸ್ಯೆ ಸ್ವಲ್ಪ ತಡೆದುಕೊಳ್ಳಿ:
ಪುತ್ತೂರು ನಗರ ಭಾಗಗಳಲ್ಲಿ ರಸ್ತೆ ಹೊಂಡ ಗುಂಡಿಗಳಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕರಲ್ಲಿ ಕೇಳಿದಾಗ ಉತ್ತರಿಸಿದ ಶಾಸಕರು, ಪುತ್ತೂರಿನಲ್ಲಿ ಹುಟ್ಟಿ ಬೆಳೆದವನು ನಾನು. ಯಾವ ರಸ್ತೆ ಮೊದಲು ಹೇಗಿತ್ತು ಎಂದು ನನಗೂ ಗೊತ್ತಿದೆ. ಮಳೆ ಬರುವ ಟೈಮ್‌ನಲ್ಲಿ ರಸ್ತೆ ರಿಪೇರಿ ಯಾರಾದರೂ ಮಾಡ್ತಾರಾ ? ಸ್ವಲ್ಪ ತಡೆದುಕೊಳ್ಳಿ. ಮಳೆ ಬಿಟ್ಟು ಬಿಸಿಲು ಬಂದೊಡನೆ ಫಸ್ಟ್‌ಕ್ಲಾಸ್ ರಿಪೇರಿ ಮಾಡಿಕೊಡ್ತೇವೆ. ದುಡ್ಡಿನ ಸಮಸ್ಯೆಯಿಲ್ಲ, ಅಧಿಕಾರಿಗಳ ತೊಂದರೆಯಿಲ್ಲ, ಇದ್ದರೂ ಸರಿಮಾಡಿಕೊಡುವ ಕೆಲಸ ಮಾಡ್ತೇವೆ ಎಂದರು.
ಅತಿಥಿ ಶಿಕ್ಷಕರ ವೇತನ ವಿಳಂಬ:
ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಮೂರು ತಿಂಗಳಿನಿಂದ ವೇತನ ಆಗದಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ನನ್ನ ಗಮನಕ್ಕೆ ಬಂದಿತ್ತು, ಒಮ್ಮೆ ರಿಲೀಸ್ ಮಾಡುವ ಕೆಲಸ ಆಗಿದೆ. ಮತ್ತೆ ಯಾಕೆ ವಿಳಂಬ ಆಗ್ತಿದೆ ಎಂದು ಗೊತ್ತಾಗ್ತಿಲ್ಲ. ಉತ್ತರ ಕರ್ನಾಟಕ ಮತ್ತು ಇಲ್ಲಿನ ಶಾಲೆಗಳ ಆರಂಭಕ್ಕೆ 3 ತಿಂಗಳ ವ್ಯತ್ಯಾಸವಿದೆ. ಹಾಗಾಗಿ ಇಲ್ಲಿ ವೇತನ ಕೊಡುವಾಗ ವ್ಯತ್ಯಾಸವುಂಟಾಗುತ್ತಿದೆ. ಇದಕ್ಕೆ ರಾಜ್ಯಮಟ್ಟದಲ್ಲಿ ನಿರ್ಣಯ ಕೈಗೊಳ್ಳಬೇಕಾಗಿದೆ. ಈ ಕುರಿತು ಸರಕಾರದ ಗಮನ ಸೆಳೆಯುವ ಕೆಲಸ ಮಾಡಲಿದ್ದೇನೆ. ’ಇದು ಸಿಲ್ಲಿ ಮ್ಯಾಟರ್, ವಿ ಕೇನ್ ಸೋಲ್ವ್ ವಿದಿನ್ ಟೆನ್ ಮಿನಿಟ್’ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರು ಚಪ್ಪಾಳೆ ಗಿಟ್ಟಿಸಿ ಕೊಂಡಿದ್ದಕ್ಕೆ ಅನುದಾನ ಬರುವುದಿಲ್ಲ
ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ ಸೇರಿದಂತೆ ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನಗಳನ್ನು ಸರ್ಕಾರ ತಡೆಹಿಡಿಯುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಬಿಜೆಪಿ ಸರಕಾರವಿದ್ದಾಗ ಬಿಡುಗಡೆಯಾಗಿದ್ದ ಅನುದಾನಗಳನ್ನು ಈಗಿನ ಸರಕಾರ ತಡೆಹಿಡಿಯುತ್ತಿದೆ ಎಂದು ಬಿಜೆಪಿ ನಾಯಕರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕರು ’ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. 2023-24 ನೇ ಬಜೆಟ್ ನಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 242 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಪಸಂಖ್ಯಾತರ ಧರ್ಮದವರಿಗೆ ಪುತ್ತೂರು ಕ್ಷೇತ್ರಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದೆ. ಹಿಂದು ಧಾರ್ಮಿಕ ಕ್ಷೇತ್ರಗಳಿಗೆ 2.5 ಕೋಟಿ ರೂ. ಬಿಡುಗಡೆಯಾಗಿದೆ. ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ ತಡೆ ಹಿಡಿಯುವ ವಿಚಾರವಿಲ್ಲ. ಅರ್ಧಾಂಶ ಬಿಡುಗಡೆಯಾಗಿದ್ದಲ್ಲಿ ಪೂರ್ತಿ ಬಿಡುಗಡೆಗೊಳಿಸುವ ಕೆಲಸ ಸರಕಾರ ಮಾಡಲಿದೆ. ಬಿಜೆಪಿಯವರು ಶಾಲು ಹಾಕಿಸಿಕೊಂಡು, ಚಪ್ಪಾಳೆ ಗಿಟ್ಟಿಸಿಕೊಂಡು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಅವರು ಕೇವಲ ಭರವಸೆ ಕೊಟ್ಟುಕೊಂಡು ಹೋಗಿದ್ದರೆ ಅದು ಬರಲು ಸಾಧ್ಯವಿಲ್ಲ. ಪುತ್ತೂರು ದೇವಾಲಯದ ವಸತಿ ವ್ಯವಸ್ಥೆಗೆ ರೂ. 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಹೋಗಿ ಹಣಕಾಸು ಇಲಾಖೆಯಲ್ಲಿದೆ ಎಂದಿರುವ ಶಾಸಕರು ’ನೀರಲ್ಲಿ ಬಿಕ್ಕೆ ಹಾಕಿದರೆ ಒಮ್ಮೆ ಕೆಳಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿ ಮೇಲೆ ಬರುತ್ತದೆ’ ಸುಳ್ಳು ಹೇಳುತ್ತಿರುವ ಬಿಜೆಪಿಯವರ ಕತೆ ಹಾಗಾಗಿದೆ ಎಂದು ವ್ಯಂಗ್ಯವಾಡಿದರು.