ಪುತ್ತೂರಿನ ರೋಟರಿ ಕ್ಲಬ್‌ಗಳಿಂದ ಜಿಲ್ಲಾ ಯೋಜನೆ ‘ಸಿ.ಪಿ.ಆರ್’ ಬಗ್ಗೆ ವಿಚಾರ ಸಂಕಿರಣ ತರಬೇತಿ-“ಜೀವ-2024” ಉದ್ಘಾಟನೆ

0

ಜೀವ ಉಳಿಸುವ ಕಾರ್ಯ ಅದು ಪುಣ್ಯದ ಕಾರ್ಯ-ವಿಕ್ರಂದತ್ತ

ಪುತ್ತೂರು: ಪ್ರಸ್ತುತ ವಿದ್ಯಾಮಾನದಲ್ಲಿ ಯುವಸಮೂಹ ಹೃದಯಾಘಾತಕ್ಕೊಳಗಾಗಿ ಜೀವ ಕಳೆದುಕೊಂಡ ಉದಾಹರಣೆ ನಮ್ಮ ಕಣ್ಣೆದುರಲ್ಲೇ ಇದೆ. ವ್ಯಕ್ತಿ ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಆ ಕ್ಷಣಕ್ಕೆ ಬದುಕಿಸುವ ಹೃದಯಸ್ತಂಭನ ಪುಶ್ಚೇತನಗೊಳಿಸುವಿಕೆ ವಿಧಾನವನ್ನು ಅನುಸರಿಸಿದಾಗ ಅದೊಂದು ಜೀವ ಉಳಿಸುವ ಪುಣ್ಯದ ಕಾರ್ಯವಾಗುತ್ತದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ವಿಕ್ರಂದತ್ತರವರು ಹೇಳಿದರು.


ಸೆ.28 ರಂದು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡ ಸಭಾ ಭವನದಲ್ಲಿ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಇವುಗಳ ಜಂಟಿ ಪ್ರಾಯೋಜಕತ್ವದಲ್ಲಿ ನಡೆದ ಜಿಲ್ಲಾ ಯೋಜನೆಯಾದ ಹೃದಯ ಸ್ತಂಭನಕ್ಕೆ ಪುನಶ್ಚೇತನಗೊಳಿಸುವ(ಸಿ.ಪಿ.ಆರ್) ಜಿಲ್ಲಾ ತರಬೇತಿ ವಿಚಾರ ಸಂಕಿರಣ “ಜೀವ-2024” ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಚಿತ್ರ: ಪದ್ಮಾ ಪುತ್ತೂರು

ರೋಟರಿ ಕ್ಲಬ್‌ಗಳು ಹಮ್ಮಿಕೊಂಡ ಇಂತಹ ಕಾರ್ಯಗಳು ಒಂದು ದಿನಕ್ಕೆ ಸೀಮಿತವಾಗದೆ ಇದು ಪ್ರಾಮಾಣಿಕ ಪ್ರಯತ್ನದೊಂದಿಗೆ ನಿರಂತರ ಕಾರ್ಯಕ್ರಮವಾಗಿ ಮೂಡಿ ಬರಲಿ. ಹೃದಯಾಘಾತದ ಸನ್ನಿವೇಶಗಳು ಎದುರಾದಾಗ ಅದರಿಂದ ಪಾರಾಗುವ ಸಂರಕ್ಷಣಾ ವಿಧಾನವಾದ ಸಿ.ಪಿ.ಆರ್ ವಿಧಾನವನ್ನು ನಾವೆಲ್ಲ ಅರಿತುಕೊಳ್ಳುವವರಾಗಬೇಕು ಎಂದರು.


ಜಿಲ್ಲಾ ಯೋಜನೆ ಸಿ.ಪಿ.ಆರ್ ಜಿಲ್ಲಾ ಚೇರ್ಮನ್ ಡಾ.ಶಶಿಧರ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ವಿದ್ಯಾಮಾನದಲ್ಲಿ ಹೃದಯಸ್ತಂಭನದ ಕುರಿತು ಅನೇಕ ವರದಿಗಳು ಭಿತ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಸ್ತಂಭನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಸಬೇಕೆನ್ನುವುದು ರೋಟರಿ ಜಿಲ್ಲಾ ಗವರ್ನರ್ ರವರ ಕನಸಾಗಿದೆ. ಈ ತರಬೇತಿ ಕಾರ್ಯಕ್ರಮದ ಮುಖೇನ ಮುಂದಿನ ದಿನಗಳಲ್ಲಿ ನಮ್ಮಿಂದ ಕನಿಷ್ಟ ಒಂದು ಜೀವವನ್ನಾದರೂ ಉಳಿಸಬೇಕು ಎನ್ನುವ ಮಹಾತ್ಕಾರ್ಯ ಮಾಡಿದಾಗ ನಮ್ಮ ಸೇವೆ ಸಾರ್ಥಕವೆನಿಸಲಿದೆ ಎಂದರು.


ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಪಿಡಿಜಿ ಡಾ.ಭಾಸ್ಕರ್ ಎಸ್, ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್‌ಗಳಾದ ಡಾ.ಹರ್ಷಕುಮಾರ್ ರೈ, ವಿನಯ ಕುಮಾರ್, ಸೂರ್ಯನಾಥ ಆಳ್ವ, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಜಯರಾಮ ರೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಪಿ.ಎಂ ಅಶ್ರಫ್, ರೋಟರಿ ಕ್ಲಬ್ ಪುತ್ತೂರು ಎಲೈಟ್ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.


ರೋಟರಿ ಸೆಂಟ್ರಲ್ ಕಾರ್ಯದರ್ಶಿ ವಸಂತ್ ಶಂಕರ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಹಾಗೂ ಇವೆಂಟ್ ಚೇರ್ಮನ್ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ಇವೆಂಟ್ ಕಾರ್ಯದರ್ಶಿ ರಾಮಚಂದ್ರ ವಂದಿಸಿದರು. ರೋಟರಿ ಯುವ ಕಾರ್ಯದರ್ಶಿ ವಚನ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಂಟು ರೋಟರಿ ಕ್ಲಬ್‌ಗಳ ಸದಸ್ಯರು, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು, ವಿವಿಧ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪ್ರಾತ್ಯಕ್ಷಿಕೆ..
ಸಭಾ ಕಾರ್ಯಕ್ರಮದ ಬಳಿಕ ಗೌರವ ಅತಿಥಿ, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಜೀದು ರಾಧಾಕೃಷ್ಣನ್‌ರವರ ನೇತೃತ್ವದಲ್ಲಿ ಮಾತನಾಡಿ, ಹೃದಯಾಘಾತಕ್ಕೆ ಒಳಗಾಗುವ ಮನುಷ್ಯನನ್ನು ಪ್ರಾಥಮಿಕ ಚಿಕಿತ್ಸೆಯಿಂದ ಹೇಗೆ ಬದುಕಿಸಬೇಕೆನ್ನುವ ಕುರಿತು ಪ್ರಾತ್ಯಕ್ಷಿಕೆ ನಡೆಯಿತು

ಏನಿದು ಹೃದಯ ಪುನಶ್ಚೇತನಗೊಳಿಸುವ ಸಿಪಿಆರ್ ವಿಧಾನ?
ಹೃದಯ ತನ್ನ ಬಡಿತವನ್ನು ನಿಲ್ಲಿಸುವುದನ್ನು ಹೃದಯ ಸ್ತಂಭನ ಎನ್ನುತ್ತಾರೆ. ತಕ್ಷಣವೇ ಹೃದಯವನ್ನು ಪುನಶ್ವೇತನಗೊಳಿಸುವ ಪ್ರಕ್ರಿಯೆಯೇ ಸಿ.ಪಿ.ಆರ್ ಅಥವಾ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್. ಹೃದಯ ಸ್ತಂಭನವುಂಟಾದಾಗ ಹೃದಯ ಸ್ತಂಭನವನ್ನು ತಕ್ಷಣವೇ ಗುರುತಿಸಿ ಕೃತಕ ಉಸಿರಾಟ ಮತ್ತು ಹೃದಯ ಒತ್ತುವಿಕೆ(ಸಿಪಿಆರ್) ಕಾರ್ಯಗತ ಮಾಡಿದಲ್ಲಿ ಹೃದಯ ಪುನಃ ಸ್ಪಂದಿಸುವಂತೆ ಮಾಡಲು ಸಾಧ್ಯವಿದೆ. ಆದರೆ ಒಂದೆರಡು ನಿಮಿಷಗಳಲ್ಲಿ ಇದು ಕಾರ್ಯಪ್ರವೃತ್ತರಾಗಬೇಕು. ಇದೊಂದು ಸರಳ ಪ್ರಾಣರಕ್ಷಣಾ ವಿಧಾನವಾಗಿದ್ದು, ಜನಸಾಮಾನ್ಯರೂ ಇದನ್ನು ಅರಿತು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಸಿಪಿಆರ್ ಜೀವರಕ್ಷಕ ಪ್ರಕ್ರಿಯೆ ಆಗಿರುತ್ತದೆ. ಹೃದಯ ಸ್ತಂಭನ ಆದ ವ್ಯಕ್ತಿಯ ಎದೆಯ ಭಾಗದಲ್ಲಿ ನಮ್ಮ ಎರಡೂ ಹಸ್ತಗಳ ಮೂಲಕ ಎದೆಯ ಹಂದರದಲ್ಲಿ ಪುಪ್ಪುಸದ ನಡುವೆ ಇರುವ ಹೃದಯವನ್ನು ನಿಯಮಿತವಾಗಿ ಒತ್ತುತ್ತಾ, ರಕ್ತವು ದೇಹದಾದ್ಯಂತ ಚಲಿಸುವಂತೆ ನೋಡಿಕೊಳ್ಳುವ ಒಂದು ಸರಳ ವಿಧಾನ. ಜೊತೆಯಲ್ಲಿ ಬಾಯಿಯಿಂದ ಬಾಯಿಗೆ ಕೃತಕ ಉಸಿರಾಟವನ್ನು ನೀಡಬೇಕಾಗಿರುತ್ತದೆ. ಆಗ ನಿಂತು ಹೋಗಿದ್ದ ನಾಡಿ ಬಡಿತವು ಮರುಚಾಲನೆಗೊಂಡಲ್ಲಿ ಸಿ.ಪಿ.ಆರ್. ಯಶಸ್ವಿಯಾಗಿ ಹೃದಯದ ಪುನಶ್ವೇತನ ಪ್ರಕ್ರಿಯೆಯು ಸಂಪೂರ್ಣವಾಯಿತೆಂದೆನ್ನಬಹುದು.

LEAVE A REPLY

Please enter your comment!
Please enter your name here