ಭವಿಷ್ಯದ ಬಗ್ಗೆ ಯೋಚಿಸುವ ಸಾಹಿತ್ಯವನ್ನು ತೇಜಸ್ವಿ ಕಟ್ಟಿಕೊಡುತ್ತಿದ್ದಾರೆ: ಡಾ| ನರೇಂದ್ರ ರೈ ದೇರ್ಲ
ಪುತ್ತೂರು: ನಮ್ಮ ಭವಿಷ್ಯದ ಬಗ್ಗೆ ಯೋಚಿಸುವ ಸಾಹಿತ್ಯವನ್ನು ತೇಜಸ್ವಿಯವರು ಕಟ್ಟಿಕೊಡುತ್ತಿದ್ದಾರೆ ಎಂಬುದನ್ನು ತೇಜಸ್ವಿಯವರ ಸಾಹಿತ್ಯದಲ್ಲಿ ನಾವು ಯೋಚಿಸಲು ಸಾಧ್ಯವಾಗಿದೆ ಎಂದು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ, ಸಾಹಿತಿ ಡಾ| ನರೇಂದ್ರ ರೈ ದೇರ್ಲ ಹೇಳಿದರು.
ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ಸೆ.29ರಂದು ಪುತ್ತೂರು ರಾಧಾಕೃಷ್ಣ ಮಂದಿರ ರಸ್ತೆಯ ರೋಟರಿ ಬ್ಲಡ್ ಬ್ಯಾಂಕ್ ಬಳಿಯ ಅನುರಾಗ ವಠಾರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿ-ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ತೇಜಸ್ವಿ ನುಡಿ ಚಿತ್ರಣವನ್ನು ಬಿಚ್ಚಿಟ್ಟ ಅವರು ಪರಿಸರವಾದಿ ತೇಜಸ್ವಿಯವರ ಕುರಿತು ಮಾತನಾಡಿದರು. ಆರಂಭದ ದಿನದಲ್ಲಿ ಕಾವ್ಯ, ನಾಟಕ, ಕಾದಂಬರಿ, ಕಥೆಗಳನ್ನು ಬರೆದ ತೇಜಸ್ವಿಯವರು ಕೊನೆಯಲ್ಲಿ ಪರಿಸರದ ಬಗ್ಗೆ ಬರೆದರು. ಅವರು ಹೇಳಿದಂತೆ ಕಲೆಯ ಕನೆ ಪದಗಳಿಂದ ಹೊರ ಬಂದು ಪರಿಸರದ ಬಗ್ಗೆ ಆಲೋಚನೆ ಮಾಡುವುದು ಬಹಳ ಮುಖ್ಯ. ನಾವು ತಿನ್ನುವ ಅನ್ನ, ಕುಡಿಯುವ ನೀರು, ಗಾಳಿ ವಿಷವಾದಾಗ ಭೂಮಿ ಸಾಯುತ್ತದೆ. ಭೂಮಿ ಸಾಯುವಾಗ ಮನುಷ್ಯ ಸಾಯುತ್ತಾನೆ. ಮನುಷ್ಯ ಸಾಯುವಾಗ ಯಾವುದು ಉಳಿಯುತ್ತದೆ ಎಂದು ಅವರಲ್ಲಿ ಪ್ರಶ್ನೆ ಮೂಡಿತ್ತು ಎಂದರು.
ನಾವು ತರಗತಿಯೊಳಗೆ ಕುಳಿತು ಪರಿಸರ ಹಾಳಾಗುತ್ತಿದೆ ಎಂದು ಯೋಚನೆ ಮಾಡಿದರೆ ತೇಜಸ್ವಿಯವರು ಪರಿಸರದ ಒಳಗಡೆ ಕುಳಿತು ಪರಿಸರ ಹಾಳಾಗುತ್ತಿದೆ ಎಂದು ಯೋಚನೆ ಮಾಡಿದವರು. ಪರಿಸರದ ನಾಶವನ್ನು ತೇಜಸ್ವಿಯವರ ಹಾಗೆ ಅತ್ತ ವಿಜ್ಞಾನವೂ ಅಲ್ಲ. ಇತ್ತ ಸಾಹಿತ್ಯವೂ ಅಲ್ಲದ ಒಂದು ಸಮೀಕರಣದ ಮಾದರಿಯಲ್ಲಿ ತೆರೆದು ತೋರಿಸಿದ ಬೇರೊಬ್ಬ ಲೇಖಕ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಲ್ಲ. ಈ ಅರಿವು ಹೊಸ ತಲೆಮಾರಿಗೆ ಇರುವುದರಿಂದ ಯುವಕರೂ ತೇಜಸ್ವಿಯವರನ್ನು ಬೆಂಬಲಿಸುತ್ತಿದ್ದಾರೆ. ತೇಜಸ್ವಿಯವರು ವಿಶ್ವವಿದ್ಯಾನಿಲಯದಲ್ಲಿ ಓದದ ಲೋಕ ವಿಶ್ವವಿದ್ಯಾನಿಲಯ ಅರಿತವರ ಅನುಭವಗಳನ್ನು ತೋರಿಸಿದರು. ಇಂತಹ ತೇಜಸ್ವಿ ಅವರ ಕೃತಿ ಓದಿದವರು ಕೋಮುವಾದಿ, ಪರಿಸರ ವಿರೋಽಗಳಾಗಲು ಸಾಧ್ಯವಿಲ್ಲ. ತೇಜಸ್ವಿಯವರ ಸಾಹಿತ್ಯಕ್ಕೆ ನಾವು ಹೋಗುವ ಮೂಲಕ ನಮ್ಮ ಒಳಗಿನ ನಾಶ ಆಗುವ ಸತ್ಯಗಳನ್ನು ಆ ಹಾದಿಗೆ ಮತ್ತೆ ತುಂಬಿಸಿಕೊಳ್ಳಲು ಸಾಧ್ಯವಿದೆ ಎಂದರು.
ಸಾಹಿತ್ಯದ ಕೂಟ, ಅಧ್ಯಯನಗೋಷ್ಠಿಗಳು ನಮ್ಮೂರಿನಲ್ಲಿ ಆಗಾಗೆ ನಡೆಯಬೇಕು: ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ.ವಿ.ಬಿ ಅರ್ತಿಕಜೆ ಅವರು ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುತ್ತೂರಿನ ಡಾ.ಶಿವರಾಮ ಕಾರಂತರಿಂದ ಆರಂಭವಾಗಿ ಅನೇಕ ಮಂದಿ ಸಾಹಿತಿಗಳಿದ್ದಾರೆ. ಅದರಲ್ಲಿ ಕುವೆಂಪು ಅವರು ಮತ್ತು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಮಾಡಿದಷ್ಟು ಉತ್ಕೃಷ್ಟವಾದ ಕೊಡುಗೆ ಹೆಚ್ಚಿನವರು ಮಾಡಿದ್ದು ಕಾಣಿಸುವುದಿಲ್ಲ. ಅವರ ಸಾಹಿತ್ಯವನ್ನು ಅಧ್ಯಯನ ಮಾಡಿ ಡಾ| ನರೇಂದ್ರ ರೈ ದೇರ್ಲ ಅವರು ಉತ್ತಮವಾಗಿ ವಿಶ್ಲೇಷಣೆ ಮಾಡಿದ್ದಾರೆ. ಸಾಹಿತ್ಯದ ಕೂಟ, ಅಧ್ಯಯನ ಗೋಷ್ಟಿಗಳು ನಮ್ಮೂರಿನಲ್ಲಿ ಆಗಾಗ ನಡೆಯಬೇಕು ಎಂದರು.
ರಂಗಕರ್ಮಿ ಐ.ಕೆ. ಬೊಳುವಾರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಪದ್ಮಾವತಿ, ಎಸ್.ಆರ್.ನಾಯಕ್ ಅವರು ಪುಷ್ಪಗುಚ್ಛ, ಪುಸ್ತಕ ಸ್ಮರಣಿಕೆ ನೀಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಸ್ವಾಗತಿಸಿದರು. ಸಾಹಿತಿ ಶಂಕರಿ ಶರ್ಮ ವಂದಿಸಿದರು. ಡಾ.ಮೈತ್ರಿ ಕಾರ್ಯಕ್ರಮ ನಿರೂಪಿಸಿದರು.
1949ರಲ್ಲಿ ಜಾನ್ ಅಗಸ್ಟಿನ್ ಎಂಬ ರಾಯಭಾರಿ ಭಾರತಕ್ಕೆ ಬಂದು ದೇಶದಲ್ಲಿನ ಬರಗಾಲ, ಆಹಾರದ ಸಮಸ್ಯೆ ದೂರ ಮಾಡಲು ರಾಸಾಯನಿಕ ಗೊಬ್ಬರ ನೀಡುತ್ತಾರೆ. ಅದರ ಬಳಕೆಯಿಂದ ಆಹಾರ ಉತ್ಪಾದನೆ ಜಾಸ್ತಿ ಆಗುತ್ತದೆ. ಆಗ ಆದ ರಾಸಾಯನಿಕದ ಪ್ರವೇಶ ಇವತ್ತಿನ ತನಕವೂ ನಿಂತಿಲ್ಲ. ಇದನ್ನು ನಾವು ಬಹಳ ಸೂಕ್ಷ್ಮವಾಗಿ ಯೋಚನೆ ಮಾಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಮೌನವ ಸಂತೆ ಅನ್ನುವ ಪುಸ್ತಕದಲ್ಲಿ ಈ ಭೂಮಿ ನಿನ್ನದಲ್ಲ, ನಿನ್ನ ಅಪ್ಪನದೂ ಅಲ್ಲ ಮುಂದೆ ಹುಟ್ಟಬೇಕಾದ ಮಕ್ಕಳದ್ದು ಎಂಬ ಶ್ಲೋಗನ್ ಜಾಗತಿಕವಾಗಿ ಕಂಪನ ಸೃಷ್ಟಿಸುತ್ತದೆ. ಅದು ತೇಜಸ್ವಿಯವರಿಗೆ ಪರಿಣಾಮ ಬೀರುತ್ತದೆ.
ಡಾ| ನರೇಂದ್ರ ರೈ ದೇರ್ಲ